ಕರ್ನಾಟಕದಲ್ಲಿ ಯುಗಾದಿಯಂದೇ ದುರಂತಗಳ ಸಾಲು: 8 ಜನರು ದುರ್ಮರಣ, ಕಣ್ಣೀರಿಟ್ಟ ಸಂಬಂಧಿಕರು
ನಿನ್ನೆಯ ಯುಗಾದಿ ಹಬ್ಬದ ಸಂಭ್ರಮದ ನಡುವೆಯೇ ಕರ್ನಾಟಕದಲ್ಲಿ ಭೀಕರ ದುರಂತಗಳು ಸಂಭವಿಸಿವೆ. ನದಿಗಳಲ್ಲಿ ಮುಳುಗಿ ಮೂವರು ಬಾಲಕರು ಸೇರಿದಂತೆ ಒಟ್ಟು ಎಂಟು ಜನರು ಸಾವನ್ನಪ್ಪಿದ್ದಾರೆ. ರಸ್ತೆ ಅಪಘಾತಗಳಲ್ಲಿಯೂ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸದ್ಯ ಹಬ್ಬದ ಸಂಭ್ರಮದಲ್ಲಿದ್ದ ಜಾಗದಲ್ಲಿ ಸೂತಕ ಛಾಯೆ ಆವರಿಸಿದೆ.

ಬೆಂಗಳೂರು, ಮಾರ್ಚ್ 31: ಕರ್ನಾಟಕದಲ್ಲಿ ನಿನ್ನೆ ಯುಗಾದಿ ಹಬ್ಬದ (Ugadi) ಸಂಭ್ರಮ ಜೋರಾಗಿತ್ತು. ಹೊಸ ಬಟ್ಟೆ ಧರಿಸಿ, ಬೇವು-ಬೆಲ್ಲ ತಿಂದು ಜನರು ಸಂತಸಪಟ್ಟರು. ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬಂದಿತ್ತು. ಈ ಹೊಸ ವರ್ಷದ ದಿನವೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕಹಿ ಘಟನೆಗಳು ಕೂಡ ಸಂಭವಿಸಿವೆ. ಜವರಾಯನ ಅಟ್ಟಹಾಸಕ್ಕೆ 8 ಮಂದಿ ದುರ್ಮರಣ (death) ಹೊಂದಿದ್ದಾರೆ. ಸಂಭ್ರಮ, ಸಡಗರಗಳ ಮಧ್ಯೆ ಸೂತಕದ ಛಾಯೆ ಕೂಡ ಆವರಿಸಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ಮೂವರು ಬಾಲಕರು ಜಲಸಮಾಧಿ
ಬಾಗಲಕೋಟೆ ಜಿಲ್ಲೆಯ ಸೀತಮನಿ ಗ್ರಾಮದಲ್ಲಿ ಯುಗಾದಿ ಹಬ್ಬದ ದಿನವೇ ಘನಘೋರ ನಡೆದೋಗಿದೆ. ಕೃಷ್ಣಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಬಾಲಕರು ಜಲಸಮಾಧಿಯಾಗಿದ್ದಾರೆ. ಸೋಮಶೇಖರ್, ಪರನಗೌಡ ಬೀಳಗಿ ಹಾಗೂ ಮಲ್ಲಪ್ಪ ಬಗಲಿ ನೀರುಪಾಲಾಗಿದ್ದಾರೆ. ಮೂವರ ಪೈಕಿ ಬಾಲಕ ಸೋಮಶೇಖರ್ ಶವ ಪತ್ತೆಯಾಗಿದೆ. ಉಳಿದ ಇಬ್ಬರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸ್ತಿದ್ದಾರೆ.
ಇದನ್ನೂ ಓದಿ: ಯುಗಾದಿ ಹಬ್ಬದಂದು ಕರ್ನಾಟಕದಲ್ಲಿ ಜಲ ಗಂಡಾಂತರ: ಐವರು ನೀರುಪಾಲು
ಜಿಲ್ಲೆಯ ಬಾದಾಮಿ ತಾಲೂಕಿನ ಹೂಲಗೇರಿಯಲ್ಲಿ ಅಪಘಾತ ಸಂಭವಿಸಿದೆ. ಟ್ಯಾಂಕರ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವಿನ ಮನೆ ಸೇರಿದ್ದಾರೆ. ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಅಪಘಾತವಾಗಿದ್ದು, ಕೆರೂರು ಪಟ್ಟಣದ ಪ್ರದೀಪ ಗದಗಿನಮಠ ಹಾಗೂ ಶಬ್ಬೀರ ವಠಾರದ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.
ಇತ್ತ, ಮೈಸೂರು ಮತ್ತು ಹುಣಸೂರು ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ವೇಗವಾಗಿ ಬಂದ ಸ್ಕಾರ್ಪಿಯೋ ಕಾರು ಅಪ್ಪಳಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಶೇಚಾಚಾರಿ ಎಂಬಾತ ಮೇಲೆಗರಿ ಬಿದ್ದಿದ್ದು ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ತಾತ, ಮೊಮ್ಮಕ್ಕಳು ನೀರುಪಾಲಾದ ಜಾಗದಲ್ಲೇ ಯುವಕ ಸಾವು
ಮೈಸೂರು ಜಿಲ್ಲೆಯ ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ತೆರಳಿದ್ದ ಬಾಲಕ ಸಾವನ್ನಪ್ಪಿದ್ದಾನೆ. ಕಳೆದ ವಾರ ತಾತ, ಮೊಮ್ಮಕ್ಕಳು ಬಲಿಯಾಗಿದ್ದರು. ಇದೇ ಜಾಗದಲ್ಲಿ ಶರಣ್ ಮೃತಪಟ್ಟಿದ್ದಾನೆ. ಸೂಚನಾ ಫಲಕವನ್ನ ಅಳವಡಿಸದ್ದಕ್ಕೆ ದುರಂತ ನಡೆದ ಆರೋಪ ಕೇಳಿ ಬಂದಿದೆ. ಇತ್ತ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತುಂಗಾನದಿಯಲ್ಲಿ ಸ್ನೇಹಿತರೊಂದಿಗೆ ನದಿಯಲ್ಲಿ ಈಜಲು ತೆರಳಿದ್ದ ಕಿರಣ್ ಎಂಬಾತ ನೀರುಪಾಲಾಗಿದ್ದಾನೆ.
ಇನ್ನೊಂದ್ಕಡೆ ಓವರ್ಟೇಕ್ ಮಾಡುವಾಗ ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿಯಾಗಿ ಓರ್ವ ಮಹಿಳೆ ಸಾವನ್ನಪ್ಪಿರುವಂತಹ ಘಟನೆ ಹಾಸನ ತಾಲೂಕಿನ ಕಾರೇಕೆರೆ ಗ್ರಾಮದ ಕೃಷಿ ಕಾಲೇಜು ಬಳಿ ಘಟನೆ ನಡೆದಿದೆ. ಶಾಂತಮ್ಮ ಮೃತಪಟ್ಟಿದ್ದು ಇನ್ನೂ ಮೂವರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಎಣ್ಣೆ ಪಾರ್ಟಿ ಮಾಡ್ತಿದ್ದಾಗಲೇ ಕೊಚ್ಚಿ ಕೊಂದ ಹಂತಕರು: ಯುಗಾದಿಯಂದೇ ಹೆಣವಾದ ಕುಖ್ಯಾತ ರೌಡಿಶೀಟರ್
ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಜಾಗದಲ್ಲಿ ಸೂತಕ ಆವರಿಸಿದೆ. ಜವರಾಯ ಅಟ್ಟಹಾಸಕ್ಕೆ ಪ್ರತ್ಯೇಕ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ತಮ್ಮವರನ್ನ ಕಳೆದುಕೊಂಡು ಸಂಬಂಧಿಕರು ಕಣ್ಣೀರು ಹರಿಸಿದ್ದಾರೆ.
ವರದಿ: ಬ್ಯುರೋ ರಿಪೋರ್ಟ್, ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.