ನಿಮಗೆ ಇಲ್ಲಿ ಪೂಜೆ ಮಾಡಲ್ಲ, ದೇವಸ್ಥಾನಕ್ಕೆ ಬಂದ ದಲಿತ ಕುಟುಂಬವನ್ನು ಹೊರಕಳಿಸಿದ ಅರ್ಚಕ
ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಅಪಮಾನ ಮಾಡಿರುವ ಘಟನೆ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ತುಮಕೂರು: 21ನೇ ಶತಮಾನದಲ್ಲಿದ್ದರೂ, ದಲಿತರ (Dalit) ಮೇಲಿನ ದೌರ್ಜನ್ಯ ಇನ್ನೂ ನಿಂತಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ದಲಿತ ಬಾಲಕನ ಮೇಲೆ ಹಲ್ಲೆ ನಡೆದಿತ್ತು. ಈಗ ಮತ್ತೆ ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಅಪಮಾನ ಮಾಡಿರುವ ಘಟನೆ ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಅನಿತ್ ರಾಜು ದಲಿತ ಕುಟುಂಬ ನಿಟ್ಟೂರು ಗ್ರಾಮದ ಮುಳಕಟ್ಟಮ್ಮ ದೇವಾಲಯಕ್ಕೆ ಪೂಜೆ ಮಾಡಿಸಲು ಹೋಗಿದ್ದರು. ಈ ವೇಳೆ ದೇವಸ್ಥಾನದ ಅರ್ಚಕ ನಿಮ್ಮನ್ನು ಯಾರು ಬರುವಂತೆ ಹೇಳಿದ್ದು, ನಿಮಗೆ ಇಲ್ಲಿ ಪೂಜೆ ಮಾಡಲ್ಲ ಹೊರಹೋಗಿ ಎಂದು ಅರ್ಚಕ ಆವಾಜ್ ಹಾಕಿ, ಹೊರಕಳಿಸಿದ್ದಾನೆ.
ದಲಿತ ಬಾಲಕ ದೇವರನ್ನು ಮುಟ್ಟಿದಕ್ಕೆ ಬಹಿಷ್ಕಾರ, ದಂಡ
ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ಗ್ರಾಮದ ಭೂತಮ್ಮ ದೇವರ ಉತ್ಸವ ಆಯೋಜನೆ ಮಾಡಲಾಗಿತ್ತು. ಈ ವೇಳೆ ಉತ್ಸವದ ಮೂರ್ತಿ ಹೊತ್ತು ತರುವ ವೇಳೆ ಕೈಜಾರಿ ಬಿದ್ದ ಉತ್ಸವ ಮೂರ್ತಿಯ ಗುಜ್ಜುಕೋಲ ಅಥವಾ ಊರುಗೋಲನ್ನು ಅದೇ ಗ್ರಾಮದ ದಲಿತ ಬಾಲಕ ಚೇತನ್ ಎಂಬಾತ ಮುಟ್ಟಿ ಎತ್ತಿಕೊಟ್ಟಿದ್ದ. ಇದೇ ಕಾರಣಕ್ಕೆ ಗ್ರಾಮದ ಕೆಲವು ಹಿರಿಯರು ಆ ಬಾಲಕನನ್ನು ನಿಂದಿಸಿ ದಲಿತ ಜನಾಂಗಕ್ಕೆ ಸೇರಿದ ನೀನು ದೇವರ ಊರುಗೋಲು ಮುಟ್ಟಿ ಅಪಚಾರ ಮಾಡಿದ್ಯಾ ಎಂದು ಹೀಯಾಳಿಸಿದ್ದರು. ಜೊತೆಗೆ ಆ ಬಾಲಕ ತಂದೆ ರಮೇಶ್ ಹಾಗೂ ತಾಯಿ ಶೋಭಾರನ್ನು ಕರೆಸಿ ಜಾತಿನಿಂದನೆ ಮಾಡಿ ಬೆದರಿಸಿದ್ದರು.
ಊರಿನಲ್ಲಿ ನ್ಯಾಯ ಪಂಚಾಯ್ತಿ 60 ಸಾವಿರ ದಂಡ, ಬಹಿಷ್ಕಾರದ ಬೆದರಿಕೆ..!
ಘಟನೆ ನಡೆದ ನಂತರ ಊರಿನ ಕೆಲವು ಹಿರಿಯರೆಲ್ಲಾ ಸೇರಿ ಇದೇ ವಿಚಾರವಾಗಿ ನ್ಯಾಯ ಪಂಚಾಯ್ತಿ ಸೇರಿದ್ದಾರೆ. ಇತ್ತೀಚೆಗಷ್ಟೇ ಗ್ರಾಮದ ಭೂತಮ್ಮ ದೇವಿಯ ದೇವಾಲಯಕ್ಕೆ ಸುಣ್ಣ ಬಣ್ಣ ಬಳಿಯಲಾಗಿತ್ತು. ಜೊತೆಗೆ 60 ಸಾವಿರ ಖರ್ಚು ಮಾಡಿ ಉತ್ಸವ ಮೂರ್ತಿಯನ್ನು ಮಾಡಿಸಲಾಗಿತ್ತು. ಇಷ್ಟೆಲ್ಲಾ ಮಾಡಿಯಾದ ಮೇಲೆ ಗ್ರಾಮದಲ್ಲಿ ಉತ್ಸವ ಮಾಡಲಾಗಿತ್ತು. ಈ ವೇಳೆ ದಲಿತ ಜನಾಂಗಕ್ಕೆ ಸೇರಿದ ಬಾಲಕ ದೇವರ ಉತ್ಸವ ಮೂರ್ತಿಯ ಊರುಕೋಲು ಮುಟ್ಟಿದ ಅನ್ನೋ ಕಾರಣಕ್ಕೆ ಆ ಕುಟುಂಬಕ್ಕೆ 60 ಸಾವಿರ ರೂಪಾಯಿ ದಂಡ ಹಾಕಿದ್ದು ಒಂದು ವೇಳೆ ದಂಡ ಕಟ್ಟದಿದ್ದರೆ ಊರು ಬಿಟ್ಟು ಹೋಗುವಂತೆ ತಿಳಿಸಿದ್ದರು. ಕೊನೆಗೆ ಗ್ರಾಮಕ್ಕೆ ಅಧಿಕಾರಿಗಳು, ಶಾಸಕರು, ಸಂಸದರು ಮತ್ತು ಸಂಘಟನೆಯವರು ರಾಜಿ ಸಂಧಾನ ಮಾಡಿ ಪ್ರಕರಣಕ್ಕೆ ಸುಖ್ಯಾಂತ್ಯ ಹಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Wed, 12 October 22