Tv9 Kannada News Live: ಮಳೆಗೆ ಮಂತ್ರಾಲಯದಲ್ಲಿ ಭಕ್ತರ ಪರದಾಟ, ಶ್ರೀಗಳಿಂದಲೇ ಖುದ್ದು ವಸತಿ ವ್ಯವಸ್ಥೆ; ಇಲ್ಲಿವೆ ಈ ಹೊತ್ತಿನ ಟಾಪ್ ಸುದ್ದಿಗಳು
ಮಂತ್ರಾಲಯದಲ್ಲಿ ಭಾರಿ ಮಳೆಗೆ ಸಿಲುಕಿದ ಭಕ್ತರಿಗೆ ಶ್ರೀಗಳೇ ಖುದ್ದು ವಸತಿ ವ್ಯವಸ್ಥೆ ಕಲ್ಪಿಸಿದ್ದಾರೆ. ರಾಜ್ಯದ 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಬೆಂಗಳೂರಿನಲ್ಲಿ ಇಂದು ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಅತ್ತ ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದ್ದು, ಅಟ್ಯಾಕ್ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ಇವೆಲ್ಲ ಸೇರಿ ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ.

ಬೆಂಗಳೂರು, ಮೇ 24: ರಾಯಚೂರಿನ ಹಲವೆಡೆ ನಿನ್ನೆ ವರುಣ ಅಬ್ಬರಿಸಿದ್ದು, ತಡರಾತ್ರಿ ಸುರಿದ ಮಳೆ ಹಿನ್ನೆಲೆ ತೊಂದರೆಗೆ ಸಿಲುಕಿದ್ದ ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಕ್ತರಿಗೆ ಸ್ವತಃ ಸ್ವಾಮೀಜಿಯೇ ಆಗಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದ ಪ್ರಸಂಗ ನಡೆದಿದೆ. ಮಂತ್ರಾಲಯ ಮಠದ ಪ್ರಾಂಗಣದಲ್ಲಿ ರಾತ್ರಿ ಮಲಗಿದ್ದ ಭಕ್ತರು ಮಳೆ ಹಿನ್ನೆಲೆ ಕಂಗಾಲಾಗಿದ್ದಾರೆ. ಭಕ್ತರು ನೆನೆದು ಪರದಾಡಿದ್ದು, ಮಾಹಿತಿ ತಿಳಿದು ಪ್ರಾಂಗಣಕ್ಕೆ ಭೇಟಿ ನೀಡಿದ ಮಂತ್ರಾಲಯದ ಶ್ರೀಗಳಾದ ಸುಬುಧೇಂದ್ರ ತೀರ್ಥರು ಭಕ್ತರಿಗೆ ಶ್ರೀಮಠದ ಕಲ್ಯಾಣ ಮಂಟಪಗಳಲ್ಲಿ ವಸತಿ ವ್ಯವಸ್ಥೆ ಮಾಡಿದ್ದಾರೆ.
17 ಜಿಲ್ಲೆಗಳಲ್ಲಿ ಇಂದು ಯೆಲ್ಲೋ ಅಲರ್ಟ್
ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಇಂದು ಮಳೆಯಾಗುವ ಮುನ್ಸೂಚನೆ ಇದ್ದು, 17 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಮತ್ತು 2 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ನ ಹವಾಮಾನ ಇಲಾಖೆ ಘೋಷಣೆ ಮಾಡಿದೆ. ಕೊಪ್ಪಳ ಹಾಗೂ ಗದಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದರೆ, ಬೆಂಗಳೂರಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಮುಂದಿನ 48 ಗಂಟೆ ಕಾಲ ಬೆಂಗಳೂರಲ್ಲಿ ಸಾಧಾರಣ ಮಳೆ ಸಾಧ್ಯತೆ ಇದ್ದು, ಯಾದಗಿರಿ, ರಾಯಚೂರು, ಬಾಗಲಕೋಟೆ, ಬಳ್ಳಾರಿ, ದಾವಣಗೆರೆ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 48 ಗಂಟೆಗಳ ಕಾಲ ಭಾರೀ ಮಳೆ! ಬೆಂಗಳೂರು ಸೇರಿ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಮುಖ್ಯಾಂಶಗಳು
ಇಂದು ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ
ಬೆಂಗಳೂರು ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಬಿನ್ ಇಂದು ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಬಿಎಸ್ವೈ ನಿವಾಸದಲ್ಲಿ ಉಪಾಹಾರ ಸೇವಿಸಲಿರುವ ನಿತಿನ್ ನಬಿನ್, ನಂತರ ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನಕ್ಕೆ ತೆರಳಲಿದ್ದಾರೆ. ಆ ಬಳಿಕ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಬಿಜೆಪಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ನಂತರ ನಿತಿನ್ ನಬಿನ್ ನೇತೃತ್ವದಲ್ಲಿ ರಾಜ್ಯ ಕೋರ್ ಕಮಿಟಿ ಸಭೆಯೂ ನಡೆಯಲಿದೆ.
ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ
ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ ನಡೆದಿದ್ದು, ಪೆನ್ಸಿಲ್ವೇನಿಯಾ ಅವೆನ್ಯೂ NW ಬಳಿ ಫೈರಿಂಗ್ ನಡೆದಿದೆ. ಗುಂಡಿನ ದಾಳಿ ನಡೆದಾಗ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ವೇತಭವನದಲ್ಲೇ ಇದ್ದರು ಎನ್ನಲಾಗಿದೆ. ಇನ್ನು ದಾಳಿಯ ವೇಳೆ ಅದಕ್ಕೆ ಪ್ರತಿಯಾಗಿ ಅಧಿಕಾರಿಗಳು ಗುಂಡು ಹಾರಿಸಿದ್ದು, ಶಂಕಿತನಿಗೆ ಗುಂಡು ತಗುಲಿತ್ತು. ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ಸೀಕ್ರೆಟ್ ಸರ್ವಿಸ್ ತಿಳಿಸಿದೆ. ಘಟನೆಯಲ್ಲಿ ಓರ್ವ ಪಾದಚಾರಿಗೂ ಗಾಯಗಳಾಗಿವೆ.
ಇದನ್ನೂ ಓದಿ: ಅಮೆರಿಕದ ಶ್ವೇತಭವನ ಸಂಕೀರ್ಣದ ಬಳಿ ಗುಂಡಿನ ದಾಳಿ; ಪ್ರತಿದಾಳಿಗೆ ಆಗಂತುಕ ಸಾವು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:42 am, Sun, 24 May 26





