AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಉದ್ಯಮಿಯೊಬ್ಬರು ಒಂದು ತಿಂಗಳ ಹಿಂದಷ್ಟೇ ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ನನ್ನು ಮದುವೆಯಾಗಿದ್ದರು. ಆದ್ರೆ, ದುರಂತ ಅಂದ್ರೆ ವಿವಾಹವಾದ ಒಂದೇ ತಿಂಗಳಲ್ಲಿ ಇನ್ನೂ ಹನಿಮೂನ್ ಹೊಸ್ತಿಲಲ್ಲೇ ಉದ್ಯಮಿ ಸಾವಿನ ಮನೆ ಸೇರಿದ್ದಾರೆ. ಇದೀಗ ಉದ್ಯಮಿ ಸಾವಿನ ಸುತ್ತ ಹತ್ತಾರು ಅನುಮಾನಗಳು ಹುಟ್ಟಿಕೊಂಡಿವೆ. ಅಷ್ಟಕ್ಕೂ ದಂಪತಿ ನಡುವೆ ಆಗಿದ್ದೇನು? ಉದ್ಯಮಿಗೆ ಏನಾಗಿತ್ತು ಎನ್ನುವ ವಿವರ ಈ ಕೆಳಗಿನಂತಿದೆ.

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ:ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು
Sandeep Shetty
ಪ್ರಜ್ವಲ್ ಅಮೀನ್​, ಉಡುಪಿ
| Edited By: |

Updated on:Mar 30, 2026 | 9:45 PM

Share

ಉಡುಪಿ, (ಮಾರ್ಚ್ 30): ಮದುವೆಯಾದ (Marriage)  ಒಂದೇ ತಿಂಗಳಿಗೆ ಉದ್ಯಮಿ (Businessman)  ಆತ್ಮಹತ್ಯೆ  ಮಾಡಿಕೊಂಡಿರುವ ಘಟನೆ  ಉಡುಪಿ (Udupi) ಜಿಲ್ಲೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಮೂಲತಃ ನೆಲ್ಯಾಡಿ ನಿವಾಸಿಯಾಗಿರುವ ಸುದೀಪ್​ ಶೆಟ್ಟಿ ಎಂಬುವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಳೆದ ತಿಂಗಳು ಮದುವೆಯಾಗಿದ್ದ ವಿವಾಹಿತ ಉದ್ಯಮಿ ಸುದೀಪ್​ ಶೆಟ್ಟಿ, ಮಾರ್ಚ್ 17ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ, ಕೂಡಲೇ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದ್ರೆ, ಹತ್ತಾರು ದಿನ ಜೀವನ್ಮರಣ ಹೋರಾಟ ನಡೆಸಿ ಕೊನೆಗೆ ಚಿಕಿತ್ಸೆ ಫಲಿಸದೆ ಮಾರ್ಚ್ 29ರಂದು ಕೊನೆಯುಸಿರೆಳೆದಿದ್ದಾರೆ.ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸುದೀಪ್‌ನ ತಂದೆ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಸುದೀಪ್‌ನ ಪತ್ನಿ ಸೌಮ್ಯ ಶೆಟ್ಟಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ದೂರು ದಾಖಲಿಸಿದ್ದಾರೆ.

ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ

ಸುದೀಪ್ ಹಾಗೂ ಸೌಮ್ಯ ಶೆಟ್ಟಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಮೂಲತಃ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿಯಾಗಿರುವ ಸೌಮ್ಯ ಶೆಟ್ಟಿ, ಜೊತೆ ಸುದೀಪ್​ ಕಳೆದ ತಿಂಗಳು ಫೆಬ್ರವರಿ 17ರಂದು ಪುತ್ತೂರು ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದರು. ನಾಟಕ ಕಲಾವಿದೆ ಹಾಗೂ ಮೇಕಪ್ ಆರ್ಟಿಸ್ಟ್ ಆಗಿರುವ ಸೌಮ್ಯ ಶೆಟ್ಟಿ ಈ ಹಿಂದೆ ಒಂದು ಮದುವೆಯಾಗಿ ಪತಿಗೆ ಡಿವೋರ್ಸ್ ನೀಡಿ ಸುದೀಪ್​ ಜೊತೆ ವಿವಾಹವಾಗಿದ್ದರು. ಆದರೆ, ಸೌಮ್ಯ ಜೊತೆ ವಿವಾಹದ ಬಗ್ಗೆ ಸುದೀಪ್ ಕುಟುಂಬ ಆಕ್ಷೇಪ ವ್ಯಕ್ತಪಡಿಸಿತ್ತು.

ಸೌಮ್ಯ ಶೆಟ್ಟಿ ಜೊತೆ ಮದುವೆಯಾಗಿದ್ದಕ್ಕೆ ಸುದೀಪ್ ಕುಟುಂಬದವರು ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆ ಒಂದೇ ತಿಂಗಳಲ್ಲಿ ಸಂಬಂಧ ಬಿಗಡಾಯಿಸಿತ್ತು. ಬಳಿಕ ಸುದೀಪ್ ಕಳೆದ ಮಾರ್ಚ್ 17 ರಂದು ಕಡಬ ತಾಲೂಕಿನ ನೆಲ್ಯಾಡಿಯಲ್ಲಿದ್ದ ವೇಳೆ ಅಲ್ಲಿಗೆ ಬಂದಿದ್ದ ಸೌಮ್ಯ ಬೆದರಿಕೆ ಹಾಕಿರುವುದಾಗಿ ಆರೋಪ ಕೇಳಿಬಂದಿದೆ. ಇದಾದ ಬಳಿಕ ಮಾರ್ಚ್ 22 ರಂದು ಸುದೀಪ್ ವಿಷ ಸೇವಿಸಿರುವ ಬಗ್ಗೆ ಸೌಮ್ಯ ಸಂಬಂಧಿಕರು ಮಾಹಿತಿ ನೀಡಿದ್ದರು. ಮಾ.23 ರಂದು ವಿಷ ಸೇವಿಸಿದ ಸುದೀಪ್​ನನ್ನು ಸೌಮ್ಯ ನಿಟ್ಟೆಯ ಗಜಾರಿಯ ಆಸ್ಪತ್ರೆಗೆ ಸೇರಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ರವಾನಿಸಲಾಗಿತ್ತು. ನಂತರ ಮಾರ್ಚ್ 24ರಂದು ಸುದೀಪ್ ತಂದೆ ಮಂಗಳೂರಿನ ಏನಪೋಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ದುರಾದೃಷ್ಟವಶಾತ್ ಸುದೀಪ್​ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 29ರಂದು ಸಾವನ್ನಪ್ಪಿದ್ದಾರೆ.

ಮಗ ಸಾವನ್ನಪ್ಪಿದ ಬೆನ್ನಲ್ಲೇ ಸೊಸೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಳೆ ಎಂದು ಮೃತ ಸುದೀಪ್​ ತಂದೆ ದಾಮೋದರ್ ಆರೋಪ ಮಾಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕಾರ್ಕಳ ನಗರ ಪೊಲೀಸರು, ಮರಣೋತ್ತರ ಪರೀಕ್ಷೆ ವರದಿ ಆಧರಿಸಿ ಮುಂದಿನ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.

ಪತ್ನಿ ಸೌಮ್ಯ ಶೆಟ್ಟಿ ಹೇಳಿದ್ದೇನು?

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹೊತ್ತಿರುವ ಸೌಮ್ಯ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸುದೀಪ್ ಸಾವಿಗೆ ನಾನು ಕಾರಣವಲ್ಲ. ಸುದೀಪ್ ಸ್ವತಃ ವಿಷ ಸೇವಿಸಿರುವ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ವಿಷ ಸೇವಿಸಿದ ನಂತರವೂ 4-5 ದಿನ ಆರಾಮಾಗಿದ್ದರು. ಬಳಿಕ ಫುಡ್ ಪಾಯಿಸನ್ ಆಗಿದೆ ಎಂಬ ಕಾರಣಕ್ಕೆ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ಜಾಂಡಿಸ್ ಆಗಿರಬಹುದು ಎಂದು ಚಿಕಿತ್ಸೆ ನೀಡಿದರು. ಯಾವ ಕಾರಣಕ್ಕೆ ವಿಷ ಸೇವಿಸಿದ್ದಾರೆ ತಿಳಿದಿಲ್ಲ ಎಂದು ತಮ್ಮ ಮೇಲಿನ ಆರೋಪವನ್ನು ಅಲ್ಲಗಳೆದಿದ್ದಾರೆ.

ಸುದೀಪ್ ಗೆ ಲಕ್ಷಾಂತರ ರೂಪಾಯಿ ಸಾಲ ಇತ್ತು. ಅದು ಗೊತ್ತಿದ್ದು ನಾನು ಮದುವೆಗೆ ಒಪ್ಪಿದ್ದೇನೆ. ಸಾಲಗಾರರು ಕರೆ ಮಾಡಿದರೆ ಸುದೀಪ್ ತಂದೆ ನನ್ನ ನಂಬರ್ ನೀಡಿದರು. ಸುದೀಪ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ನಾನು ಕೂಡ ಸೈಟ್ಗಳಿಗೆ ಭೇಟಿ ನೀಡುತ್ತಿದ್ದೆ. ಮನೆಯವರು ಮದುವೆಗೆ ಒಪ್ಪುವುದಿಲ್ಲ ನಾವು ಬೆಂಗಳೂರಿಗೆ ಹೋಗೋಣ ಎಂದಿದ್ದರು. ಇದೇ ಕಾರಣಕ್ಕೆ ರಿಜಿಸ್ಟರ್ ಮದುವೆ ಆಗಿ ನಂತರ ಕುಕ್ಕುಂದೂರು ದೇವಸ್ಥಾನದಲ್ಲಿ ಮದುವೆಯಾದೆವು ಎಂದು ಹೇಳಿದ್ದಾರೆ.

ನಾಟಕ ತಂಡದಲ್ಲಿ ಓರ್ವ ನನ್ನನ್ನು ಇಷ್ಟಪಟ್ಟಿದ್ದ

ನಾನು ನಾಟಕಗಳಲ್ಲಿ ಅಭಿನಯಿಸುವುದು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಬೆಂಗಳೂರಿಗೆ ಹೋಗಿ ಜೀವನ ನಡೆಸಲು ನಿರ್ಧರಿಸಿದ್ದೆವು. ಈ ನಡುವೆ ಸುದೀಪ್ ಯಾಕೆ ವಿಷ ಸೇವಿಸಿದರು ಗೊತ್ತಿಲ್ಲ. ನಾನು ಸುದೀಪ್ ಜೊತೆ ಜೀವನ ನಡೆಸಲು ಬಯಸಿದ್ದೆ. ನಾನು ನಾಲ್ಕೈದು ಮದುವೆಯಾಗಿದ್ದೇನೆ ಎಂಬ ಆರೋಪ ಸುಳ್ಳು. 9 ವರ್ಷದ ಹಿಂದೆ ನಾನು ಮದುವೆಯಾಗಿದ್ದು ನಿಜ. ಆತನ ಕಿರುಕುಳ ತಾಳಲಾರದೆ ನಾನೇ ವಿಚ್ಛೇದನ ಪಡೆದಿದ್ದೇನೆ. ವಿಚ್ಚೇದನದ ವೇಳೆ ಸ್ನೇಹಿತನೊಬ್ಬ ನನಗೆ ಸಹಾಯ ಮಾಡಿದ್ದ. ಬಳಿಕ ಆತ ಸಹಾಯಮಾಡುವ ನೆಪದಲ್ಲಿ ಚಿನ್ನ ಪಡೆದಿದ್ದ. ಮದುವೆಯಾಗುವುದಾಗಿ ಪೀಡಿಸಲು ಪ್ರಾರಂಭಿಸಿದ್ದ. ಪಡೆದ ಚಿನ್ನ ವಾಪಸು ಕೊಟ್ಟಿರಲಿಲ್ಲ. ಈ ಬಗ್ಗೆ ನಾನು ಪೊಲೀಸ್ ದೂರು ನೀಡಿದ್ದೆ. ನಾಟಕ ತಂಡದಲ್ಲಿ ಓರ್ವ ನನ್ನನ್ನು ಇಷ್ಟಪಟ್ಟಿದ್ದ. ಆದರೆ ನಮ್ಮ ಸಂಬಂಧ ಕೂಡಿಬಂದಿರಲಿಲ್ಲ ಎಂದಿದ್ದಾರೆ.

ಫೇಸ್ಬುಕ್ ಮೂಲಕ ಪರಿಚಯ

ಸುದೀಪ್ ಸ್ವತಹ ಫೇಸ್ಬುಕ್ ಮೂಲಕ ನನ್ನನ್ನು ಅಪ್ರೋಚ್ ಆಗಿದ್ದರು. ಕಳೆದ ವರ್ಷ ಫೆಬ್ರವರಿಯಿಂದ ಮೆಸೇಜ್ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ನಾನು ಅವರಿಗೆ ವಾಪಸ್ ಮೆಸೇಜ್ ಮಾಡಿದ್ದೆ. ಬಳಿಕ ಅವರು ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದರು. ನನ್ನ ಮನೆಯವರಿಗೆ ಹೇಳಿ ಎಂದು ತಿಳಿಸಿದ್ದೆ. ಒಂದು ವರ್ಷದಿಂದ ನಿಮ್ಮ ಬಗ್ಗೆ ನೋಡಿ ನಾನು ಮದುವೆಯಾಗಲು ನಿರ್ಧರಿಸಿದ್ದೇನೆ ಎಂದು ಸುದೀಪ್ ಹೇಳಿದ್ದರು.ನಾನು ಸಹ ಮನೆಯವರು ಒಪ್ಪಿದರೆ ಮದುವೆಯಾಗುತ್ತೇನೆ ಎಂದು ಹೇಳಿದೆ. ಅವರು ಮನೆಯವರನ್ನು ಒಪ್ಪಿಸಿ ಮದುವೆಯ ತೀರ್ಮಾನಕ್ಕೆ ಬಂದರು. ನನ್ನ ತಮ್ಮನನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಿ ಅವನ ಜೊತೆ ಮಾತನಾಡಿ ಮದುವೆ ತೀರ್ಮಾನಕ್ಕೆ ಬಂದರು. ನನ್ನ ಹಿಂದಿನ ಜೀವನದ ಬಗ್ಗೆ ಎಲ್ಲಾ ವಿಚಾರ ಅವರಿಗೆ ತಿಳಿಸಿದೆ. ಆ ಬಗ್ಗೆ ಏನು ತಲೆಕೆಡಿಸಿಕೊಂಡಿರಲಿಲ್ಲ. ಮದುವೆ ನೋಂದಣಿಯಾದ ನಂತರ ನನ್ನ ಮನೆಯಲ್ಲಿ ಎಲ್ಲರ ಜೊತೆ ಸಂತೋಷವಾಗಿದ್ದರು. ಈಗ ಆತ್ಮಹತ್ಯೆ ಯಾಕೆ ಮಾಡಿಕೊಂಡರು ಗೊತ್ತಿಲ್ಲ. ನಮ್ಮ ಮದುವೆಗೆ ಅವರ ಮನೆಯವರು ಒಪ್ಪದೇ ಇರುವ ಕಾರಣ ಇರಬಹುದು. ಈ ಬಗ್ಗೆ ಪೊಲೀಸರು ತನಿಖೆ ಮಾಡಲಿ. ನಾನು ಕೂಡ ದೂರು ನೀಡುತ್ತೇನೆ ಎಂದು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Mon, 30 March 26

Follow Us