ಗೃಹಲಕ್ಷ್ಮಿ ಹಣದಿಂದ ಸರ್ಕಾರಿ ಶಾಲೆಯ ಅಡುಗೆ ಕೋಣೆ ನವೀಕರಣ!
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬುಕೋಣ ಗ್ರಾಮದ ಮಹಿಳೆಯರು ತಮ್ಮ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಒಟ್ಟುಗೂಡಿಸಿ ಸ್ಥಳೀಯ ಸರ್ಕಾರಿ ಶಾಲೆಯ ಅಡುಗೆ ಕೋಣೆಯನ್ನು ನವೀಕರಿಸುವ ಮೂಲಕ ಮಾದರಿಯಾಗಿದ್ದಾರೆ. ಅನುದಾನದ ಕೊರತೆಯಿಂದ ಹಾಳಾಗಿದ್ದ ಕೋಣೆಯನ್ನು ದುರಸ್ತಿ ಮಾಡಲು 49 ಮನೆಗಳ ಗೃಹಲಕ್ಷ್ಮಿಯರು ಒಟ್ಟು 98 ಸಾವಿರ ರೂಪಾಯಿ ಹಣ ಮೀಸಲಿಟ್ಟು, ತಮ್ಮೂರಿನ ಶಾಲೆಯ ಅಸ್ತಿತ್ವ ಮತ್ತು ಮಕ್ಕಳ ಭವಿಷ್ಯವನ್ನು ಉಳಿಸಿದ್ದಾರೆ.

ಕಾರವಾರ, ಜೂನ್ 13: ಗೃಹಿಣಿಯರನ್ನು ಆರ್ಥಿಕವಾಗಿ ಸದೃಢವಾಗಿಸಲು ಸರ್ಕಾರ ನೀಡಿದ ಗೃಹಲಕ್ಷ್ಮಿ (Gruhalakshmi) ಯೋಜನೆಯ ಹಣವನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುವ ಬದಲು, ಇಡೀ ಗ್ರಾಮದ ಮಕ್ಕಳ ಭವಿಷ್ಯಕ್ಕಾಗಿ ಮೀಸಲಿಡುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ಮಹಿಳೆಯರು ರಾಜ್ಯಕ್ಕೇ ಮಾದರಿಯಾಗಿದ್ದಾರೆ. ಜಿಲ್ಲೆಯ ಅಂಕೋಲಾ ತಾಲೂಕಿನ ಅಂಬುಕೋಣ ಎಂಬ ಕುಗ್ರಾಮದ ಗೃಹಲಕ್ಷ್ಮಿಯರು ಒಟ್ಟಾಗಿ ಸೇರಿ, ತಮ್ಮೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಅಡುಗೆ ಕೋಣೆಯನ್ನು ನವೀಕರಿಸುವ ಮೂಲಕ ಹೊಸ ಕಾಯಕಕ್ಕೆ ನಾಂದಿ ಹಾಡಿದ್ದಾರೆ.
ಮುಖ್ಯಾಂಶಗಳು
- ಅಂಕೋಲಾದ ಅಂಬುಕೋಣ ಗ್ರಾಮದ ಗೃಹಲಕ್ಷ್ಮಿಯರು ಸರ್ಕಾರಿ ಶಾಲೆಗೆ ಆಸರೆಯಾಗಿ ನಿಂತಿದ್ದಾರೆ.
- ಮಾಸಿಕ ಗೃಹಲಕ್ಷ್ಮಿ ಹಣ ಒಟ್ಟುಗೂಡಿಸಿ ಶಾಲೆಯ ಅಡುಗೆ ಕೋಣೆ ನವೀಕರಿಸಿದ್ದಾರೆ.
- ಒಟ್ಟು 98 ಸಾವಿರ ರೂಪಾಯಿ ವೆಚ್ಚದಲ್ಲಿ ಮಕ್ಕಳಿಗೆ ಸುಸಜ್ಜಿತ ಕೋಣೆ ನಿರ್ಮಿಸಿದ್ದಾರೆ.
ಗ್ರಾಮದ ಏಕೈಕ ಶಾಲೆ ಮುಚ್ಚಿಹೋಗಬಹುದೆಂಬ ಆತಂಕ
ಅಂಬುಕೋಣ ಗ್ರಾಮದಲ್ಲಿ ಕೇವಲ 49 ಮನೆಗಳಿದ್ದು, ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಸದ್ಯ 30 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಸರ್ಕಾರದಿಂದ ಸೂಕ್ತ ಅನುದಾನ ಬರುತ್ತಿರಲಿಲ್ಲ. ಇದರಿಂದಾಗಿ ಶಾಲೆಯ ಅಡುಗೆ ಕೋಣೆ ಸಂಪೂರ್ಣ ಹಾಳಾಗಿ ಹೋಗಿತ್ತು. ದಿನನಿತ್ಯ ಮಕ್ಕಳು ಕುಳಿತು ಊಟ ಮಾಡುವ ಕೋಣೆಯೂ ಸುಸಜ್ಜಿತವಾಗಿರಲಿಲ್ಲ. ಇದರಿಂದಾಗಿ ಮುಂದೊಂದು ದಿನ ಅನುದಾನದ ಕೊರತೆಯಿಂದ ತಮ್ಮೂರಿನ ಏಕೈಕ ಶಾಲೆ ಮುಚ್ಚಿಹೋಗಬಹುದು ಎಂಬ ಭೀತಿ ಗ್ರಾಮಸ್ಥರನ್ನು ಕಾಡತೊಡಗಿತ್ತು.
98 ಸಾವಿರ ರೂಪಾಯಿಯಲ್ಲಿ ಸುಂದರವಾಗಿ ನಿರ್ಮಾಣವಾದ ಅಡುಗೆ ಕೋಣೆ
ಈ ವೇಳೆ ಗ್ರಾಮದ ಮಹಿಳೆಯರು ಸ್ವಯಂಪ್ರೇರಿತರಾಗಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಲು ನಿರ್ಧರಿಸಿದರು. ತಮಗೆ ಸರ್ಕಾರದಿಂದ ಬರುವ ಒಂದು ತಿಂಗಳ ‘ಗೃಹಲಕ್ಷ್ಮಿ’ ಯೋಜನೆಯ 2,000 ರೂಪಾಯಿ ಹಣವನ್ನು ಶಾಲೆಗೆ ನೀಡಲು ಒಮ್ಮತದ ತೀರ್ಮಾನ ಕೈಗೊಂಡರು. ಹೀಗೆ ಎಲ್ಲ ಮಹಿಳೆಯರು ಒಟ್ಟುಗೂಡಿಸಿದ ಒಟ್ಟು 98 ಸಾವಿರ ರೂಪಾಯಿ ಹಣದಲ್ಲಿ ಶಾಲೆಯ ಅಡುಗೆ ಕೋಣೆಯನ್ನು ಸುಂದರವಾಗಿ ನವೀಕರಿಸಲಾಗಿದೆ. ಸರ್ಕಾರದ ಹಣವನ್ನು ಸಮಾಜದ ಹಿತಕ್ಕಾಗಿ ಬಳಸಿ, ಶಾಲೆಯ ಅಸ್ತಿತ್ವವನ್ನು ಉಳಿಸಿದ ಅಂಬುಕೋಣ ಗ್ರಾಮದ ಗೃಹಲಕ್ಷ್ಮಿಯರ ಈ ಕಾರ್ಯಕ್ಕೆ ಈಗ ಎಲ್ಲೆಡೆ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



