ಅಣುವಿದ್ಯುತ್ ಸ್ಥಾವರದ ಕಲುಷಿತ ನೀರು ಬೇಡ: ಕಾರವಾರಕ್ಕೆ ಕದ್ರಾ ಜಲಾಶಯದ ನೀರು ಪೂರೈಕೆಗೆ ವಿರೋಧ; PMOಗೆ ದೂರು!
Karwar drinking water: ಕಾರವಾರದಲ್ಲಿ ಜಲಜೀವನ್ ಮಿಷನ್ ಅಡಿಯಲ್ಲಿ ಕದ್ರಾ ಜಲಾಶಯದ ನೀರು ಪೂರೈಸಲು ಸಿದ್ಧತೆ ನಡೆದಿದೆ. ಆದರೆ, ಈ ನೀರನ್ನು ಕೈಗಾ ಅಣು ವಿದ್ಯುತ್ ಸ್ಥಾವರದ ರಿಯಾಕ್ಟರ್ ಕೂಲಿಂಗ್‌ಗೆ ಬಳಸಲಾಗುತ್ತದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ನೀರು ವಿಕಿರಣದಿಂದ ಕಲುಷಿತವಾಗುವ ಆತಂಕ ವ್ಯಕ್ತವಾಗಿದ್ದು, ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.

ಕಾರವಾರ, ಆಗಸ್ಟ್ 26: ಜನರಿಗೆ ಶುದ್ಧ ಕುಡಿಯುವ ನೀರು (drinking water) ಒದಗಿಸುವುದು ಸರ್ಕಾರದ ಕರ್ತವ್ಯ. ಆದರೆ ಕಾರವಾರದಲ್ಲಿ (uttara kannada) ಶುದ್ಧ ಕುಡಿಯುವ ನೀರು ಪೂರೈಕೆ ಹೆಸರಲ್ಲಿ ವಿಕಿರಣದಿಂದ ಕಲುಷಿತವಾದ ನೀರನ್ನು ಪೂರೈಕೆ ಮಾಡಲು ಸಿದ್ದತೆ ನಡೆಸಿರುವ ಆರೋಪ ಕೇಳಿಬಂದಿದೆ. ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಬಳಕೆಯಾದ ನೀರನ್ನು ಜಲಜೀವನ್ ಮಿಷನ್ ಯೋಜನೆಯಡಿ (Jal Jeevan Mission) ಪೂರೈಕೆ ಮಾಡುವ ನಿರ್ಧಾರ ಇದೀಗ ಆತಂಕದ ಜೊತೆಗೆ ವಿವಾದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಈ ಕುರಿತಾಗಿ ಪ್ರಧಾನಮಂತ್ರಿ ಕಚೇರಿಗೂ ಪತ್ರ ಬರೆಯಲಾಗಿದೆ.
ಕದ್ರಾ ಡ್ಯಾಂ ನೀರು ಬಳಕೆ ವಿರೋಧ
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಜನರಿಗೆ ಕುಡಿಯುವ ನೀರು ಪೂರೈಸಲು ಜಲಜೀವನ್ ಮಿಷನ್ ಯೋಜನೆ ಸಿದ್ಧವಾಗುತ್ತಿದೆ. ಆದರೆ ಈ ಯೋಜನೆಗೆ ಕದ್ರಾ ಡ್ಯಾಂ ನೀರು ಬಳಸಲು ಮುಂದಾಗಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಕದ್ರಾ ಜಲಾಶಯದ ನೀರನ್ನು ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ರಿಯಾಕ್ಟರ್ ಕೂಲಿಂಗ್‌ಗೆ ಬಳಸಲಾಗುತ್ತದೆ. ಆದರೆ ಇದೇ ನೀರು ಮತ್ತೆ ಕದ್ರಾ ಜಲಾಶಯಕ್ಕೆ ಹರಿದು ಬರುತ್ತದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ವಿಕಿರಣದಿಂದ ಕಲುಷಿತವಾದ ಈ ನೀರನ್ನು ಕುಡಿಯಲು ಬಳಸಬಾರದು ಅಂತ ಸನಾತನ ಸ್ವರಾಜ್ಯ ಸಂಘ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕುಮಟಾ ತದಡಿ ಬಂದರಿನಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ: ಎರಡೇ ದಿನಗಳಲ್ಲಿ 2ನೇ ಬೋಟ್ ದುರಂತ
ಅಷ್ಟೇ ಅಲ್ಲ ತಮ್ಮ ಆರೋಪಕ್ಕೆ ಮತ್ತೊಂದು ಉದಾಹರಣೆಯನ್ನೂ ಜನ ಮುಂದಿಟ್ಟಿದ್ದಾರೆ. ಕದ್ರಾ ಡ್ಯಾಂನಿಂದ ಕೇವಲ ಅರ್ಧ ಕಿ.ಮೀ ದೂರದಲ್ಲಿರುವ ಮಲ್ಲಾಪುರ ಅಣು ವಿದ್ಯುತ್ ಸ್ಥಾವರದ ವಸತಿ ಪ್ರದೇಶಕ್ಕೆ ಕೊಡಸಳ್ಳಿ ಡ್ಯಾಂನಿಂದ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆಯಂತೆ. ಹೀಗಿರುವಾಗ ಕಾರವಾರದ ಜನರಿಗೆ ಮಾತ್ರ ಕದ್ರಾ ನೀರು ಏಕೆ ಎಂದು ಪ್ರಶ್ನಿಸಿದರು.
ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳ ಭೀತಿ
ಕದ್ರಾ ನೀರಿನಲ್ಲಿ ವಿಕಿರಣದ ಅಪಾಯವಿದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಆದರೆ ನೀರನ್ನು ಫಿಲ್ಟರ್ ಮಾಡಿ ಪೂರೈಸುತ್ತೇವೆ ಎಂಬ ಅಧಿಕಾರಿಗಳ ಹೇಳಿಕೆಗೂ ಆಕ್ಷೇಪ ಕೇಳಿಬಂದಿದೆ. ಈ ನೀರು ಕುಡಿದರೆ ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆಯಿದ್ದು, ಯಾವುದೇ ಕಾರಣಕ್ಕೂ ಈ ನೀರು ಕಾರವಾರಕ್ಕೆ ಬೇಡ ಎಂದು ಜನರು ಒತ್ತಾಯಿಸಿದ್ದಾರೆ.
ಪ್ರಧಾನಮಂತ್ರಿ ಕಚೇರಿಗೂ ಪತ್ರ
ಇನ್ನು ಈ ವಿಚಾರ ಚಿತ್ತಾಕುಲ ಗ್ರಾಮಸಭೆಯಲ್ಲೂ ಚರ್ಚೆಯಾಗಿದ್ದು, ಕದ್ರಾ ಬದಲಿಗೆ ಕೊಡಸಳ್ಳಿ ಡ್ಯಾಂನಿಂದ ಕುಡಿಯುವ ನೀರು ಪೂರೈಸಬೇಕು ಎಂಬ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಜಲಜೀವನ್ ಮಿಷನ್ ಅಧಿಕಾರಿಗಳಿಗೆ, ಪ್ರಧಾನಮಂತ್ರಿ ಕಚೇರಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಒಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯ ನೀರಿನ ಮೂಲವೇ ಇದೀಗ ಕಾರವಾರದಲ್ಲಿ ದೊಡ್ಡ ಚರ್ಚೆ, ಆತಂಕಕ್ಕೆ ಕಾರಣವಾಗಿದ್ದು, ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:56 pm, Wed, 26 August 26




