ಅಂಕೋಲ: ಉಪ್ಪು ನೀರು ನುಗ್ಗಿ ಬಂಜರು ಭೂಮಿಯಂತಾದ ಫಲವತ್ತಾದ ಹಾರವಾಡ ಗ್ರಾಮದ ಜಮೀನು

ಅಂಕೋಲ ತಾಲೂಕಿನ ಗಾಬೀತವಾಡ ಗ್ರಾಮಸ್ಥರು ನೂರಾರು ಎಕರೆ ಫಲವತ್ತಾದ ಜಮೀನಿನಲ್ಲಿ ಉತ್ತಮ ಕೃಷಿ ಮಾಡಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದರು. ಆದರೆ ಈಗ ಆ ಜಮೀನಿನಲ್ಲಿ ಕೃಷಿ ಮಾಡಲು ಆಗುತ್ತಿಲ್ಲ. ಜೊತೆಗೆ ಆ ಗ್ರಾಮದಲ್ಲಿ ವಾಸಮಾಡಲು ಸಹ ಅವರಿಗೆ ಕಷ್ಟಸಾಧ್ಯವಾಗುತ್ತಿದೆ.

ಅಂಕೋಲ: ಉಪ್ಪು ನೀರು ನುಗ್ಗಿ ಬಂಜರು ಭೂಮಿಯಂತಾದ ಫಲವತ್ತಾದ ಹಾರವಾಡ ಗ್ರಾಮದ ಜಮೀನು
ಅಂಕೋಲ ತಾಲೂಕಿನಲ್ಲಿ ಜಮೀನಿಗೆ ನುಗ್ಗಿದ ಉಪ್ಪು ನೀರು; ಕೃಷಿ ಮಾಡಲು ಸಾಧ್ಯವಾಗದೆ ಪರದಾಡುತ್ತಿರುವ ರೈತರು
Follow us
TV9 Web
| Updated By: Rakesh Nayak Manchi

Updated on:Nov 28, 2022 | 4:27 PM

ಉತ್ತರ ಕನ್ನಡ: ಕಳೆದ ಏಳೆಂಟು ವರ್ಷಗಳ ಹಿಂದಯಷ್ಟೇ ಜಿಲ್ಲೆಯ ಅಂಕೋಲ (Ankola) ತಾಲೂಕಿನ ಹಾರವಾಡ ಗ್ರಾಮ ಪಂಚಾಯತಿಯ ಗಾಬೀತವಾಡ ಗ್ರಾಮದ ಹೊರವಲಯದಲ್ಲಿ ಅಂದಾಜು 100 ಎಕರೆ ಜಮೀನಿಗೆ ಅರಬ್ಬೀ ಸಮುದ್ರ (Arabian Sea)ದ ಉಪ್ಪು ನೀರು (Salt water) ನುಗ್ಗಿ ಕೃಷಿಗೆ ಯೋಗ್ಯವಾದ ಫಲವತ್ತಾದ ಜಮೀನು ಬಂಜರು ಭೂವಿಯಾಗುವಂತಾಗಿದೆ. ನೂರಾರು ವರ್ಷಗಳಿಂದ ಈ ಜಮೀನಿನಲ್ಲಿ ಕೃಷಿಕರು ಉತ್ತಮವಾಗಿ ಭತ್ತ, ತೆಂಗು, ಈರುಳ್ಳಿ ಇತರೆ ಬೆಳೆಗಳನ್ನು ಬೆಳೆದು ತಮ್ಮ ಜೀವನ ಸಾಗಿಸುತ್ತಿದ್ದರು. ಆದರೆ ಇತ್ತಿಚಿನ ವರ್ಷಗಳ ಹಿಂದೆ ಕರ್ಲ್ಯಾಂಡ್ ಒಡೆದು ಹೋಗಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಮತ್ತು ಮಳೆಗಾಲದಲ್ಲಿ ಊರಿಗೆ ನೀರು ನುಗ್ಗಿತ್ತದೆ ಅಂತಾ ಚಿಕ್ಕ ಕಾಲುವೆ ಮಾಡಿದ್ದಾರೆ. ಆದರೆ ಈ ಕೃಷಿ ಭೂಮಿಗೆ ಉಪ್ಪು ನೀರು ನುಗ್ಗಿದೆ. ಈ ಸಮಸ್ಯೆಯನ್ನ ಬಗೆಹರಿಸಿ ಎಂದು ಗ್ರಾಮಸ್ಥರು ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಸಾಕಷ್ಟು ಭಾರಿ ಮನವಿ ಮಾಡಿದರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ಹೀಗಾಗಿ ಗ್ರಾಮಸ್ಥರು ಮುಂಬರುವ ಚುನಾವಣೆಯನ್ನ ಬಹಿಷ್ಕಾರ ಮಾಡುತ್ತೇವೆ ಎಂದು ಎಚ್ಚರಿಕೆ ನೀಡುತ್ತಿದ್ದಾರೆ‌.

“ಜಮೀನುಗಳಿಗೆ ಉಪ್ಪು ನೀರು ನುಗ್ಗಿ ಹಾಳಾಗಿದೆ. ಕೆಲವು ವರ್ಷಗಳಿಂದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಉಪ್ಪು ನೀರು ಬಂದ ನಂತರ ತೆಂಗು ಮರಗಳು ನಾಶವಾಗಿವೆ. ಸಮಸ್ಯೆ ಬಗ್ಗೆ ದೂರು ಕೊಟ್ಟಿದ್ದೇವೆ. ಅಧಿಕಾರಿಗಳು ಬಂದು ನೋಡುವುದು ಬಿಟ್ಟರೆ ಬೇರೆ ಏನೂ ಮಾಡುತ್ತಿಲ್ಲ.”– ಮಾಲಿನಿ, ಗ್ರಾಮಸ್ಥರು

ಇದನ್ನೂ ಓದಿ: Tumakuru: ರೈತರ ಕನಸಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಅಡ್ಡಗಾಲು

ಗಾಬೀತವಾಡ ಗ್ರಾಮದಲ್ಲಿ ಅಂದಾಜು 100 ಕುಟುಂಬಗಳು ಈ ಜಮೀನಿನಲ್ಲಿ ಕೃಷಿಯನ್ನ ನಂಬಿಕೊಂಡು ಜೀವನ ನಡೆಸುವಂತವರಾಗಿದ್ದರು. ಆದರೆ ಕಳೆದ ಏಳೆಂಟು ವರ್ಷಗಳಿಂದ ಸಮುದ್ರದ ನೀರು ಬಂದು ಈ ರೀತಿ ಅವಾಂತರ ಆಗಿದ್ದರಿಂದ ಕೃಷಿ ಮಾಡಲು ಆಗುತ್ತಿಲ್ಲ. ಜೊತೆಗೆ ಇದರಿಂದ ಮತ್ತಷ್ಟು ಸಮಸ್ಯೆಗಳು ಉಲ್ಬಣ ಆಗುತ್ತಿದೆ. ಮನೆ ಪಕ್ಕಕ್ಕೆ ನೀರು ಬಂದು ನಿಲ್ಲುತ್ತಿರುವುದರಿಂದ ದುರ್ವಾಸನೆ ಬೀರುವುದಲ್ಲದೆ, ಮರಗಳು ಒಣಗುತ್ತಿವೆ. ಜೊತೆಗೆ ಜನರಿಗೆ ನಾನಾ ಸಂಕ್ರಾಮಿಕ ರೋಗಗಳು ಅಂಟಿಕೊಳ್ಳುತ್ತಿವೆ. ಇದರಿಂದಾಗಿ ಜನರು ಈ ಗ್ರಾಮದಲ್ಲಿ ವಾಸ ಮಾಡಲು ಸಹ ಅಸಾಧ್ಯವಾಗುತ್ತಿದೆ.

ಗ್ರಾಮದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ಸಚಿವರಿಗೆ ಸಾಕಷ್ಟು ಭಾರಿ ಮನವಿ ಮಾಡಿದರೂ ಉಪಯೋಗವಾಗುತ್ತಿಲ್ಲ. ಹೀಗಾಗಿ ಮುಂಬರುವ ಚುನಾವಣೆಯನ್ನ ಬಹಿಷ್ಕಾರ ಮಾಡುತ್ತೆವೆ ಅಂತಾ ಜನರು ಎಚ್ಚರಿಕೆ ನೀಡುತ್ತಿದ್ದಾರೆ. ಇನ್ನು ಉಪ್ಪು ನೀರು ನಿಲ್ಲುವ ಸ್ಥಳದಲ್ಲಿ ಕೇವಲ 25 ಲಕ್ಷ ಅನುದಾನ ಖರ್ಚು ಮಾಡಿದರೆ ಒಂದು ಬ್ರಿಡ್ಜ್ ಆಗುತ್ತದೆ. ಆದರೆ ಸಂಬಂಧ ಪಟ್ಟವರು ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ.

“ನಾವು ಸಣ್ಣವರಿದ್ದಾಗ ಈ ಭಾಗದ ಜಮೀನಿನಲ್ಲಿ ಉತ್ತಮ ಫಸಲು ಬರುತ್ತಿತ್ತು. ಆದರೆ ಕಳೆದ ಏಳೆಂಟು ವರ್ಷಗಳ ಹಿಂದೆ ಜಮೀನುಗಳಿಗೆ ಉಪ್ಪು ನೀರು ನುಗ್ಗಿದ ಪರಿಣಾಮ ಕೃಷಿ ಕಷ್ಟಸಾಧ್ಯವಾಗಿದೆ. 25 ಲಕ್ಷ ವೆಚ್ಚದಲ್ಲಿ ಸಣ್ಣ ಸೇತುವೆ ನಿರ್ಮಾಣ ಮಾಡಿದರೆ ನೂರಾರು ಕುಟುಂಬಗಳಿಗೆ ಅನುಕೂಲವಾಗಲಿದೆ.” -ಮಂಜುನಾಥ ನಾಯ್ಕ, ಗ್ರಾಮ ಪಂಚಾಯತಿ ಅಧ್ಯಕ್ಷ

ಒಟ್ಟಿನಲ್ಲಿ ನೂರಾರು ಎಕರೆ ಫಲವತ್ತಾದ ಜಮೀನು ಉಪ್ಪು ನೀರು ನಿಲ್ಲುತ್ತಿರುವುದರಿಂದ ಪಾಳು ಬಿದ್ದಿದೆ. ಈ ಜಮೀನನ್ನೇ ನಂಬಿಕೊಂಡು ಬದಕುತ್ತಿದ್ದವರಿಗೆ ಅನ್ಯಾಯವಾಗಿದೆ. ಜೊತೆಗೆ ಈ ಗ್ರಾಮದಲ್ಲಿ ಜನ ವಾಸಿಸಲು ಸಾಧ್ಯವಾಗದ ಪರಿಸ್ಥಿತಿ ಬಂದಿದೆ. ಇಷ್ಟಾದರೂ ಸಂಬಂಧಪಟ್ಟವರು ಮಾತ್ರ ಕ್ಯಾರೇ ಎನ್ನುತ್ತಿಲ್ಲ.

ವರದಿ: ವಿನಾಯಕ ಬಡಿಗೇರ, ಟಿವಿ9 ಕಾರವಾರ

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:27 pm, Mon, 28 November 22