ಕನ್ನಡಿಗರಿದ್ದ ಹೆಲಿಕಾಪ್ಟರ್ ಪತನ: 6 ಜನರ ಮೃತದೇಹಗಳು ಪತ್ತೆ, ಸರ್ಕಾರಿಂದ ಅಧಿಕೃತ ಪ್ರಕಟಣೆ
ಉತ್ತರಖಂಡದ ಬದ್ರಿನಾಥದಿಂದ ಡೆಹ್ರಾಡೂನ್‌ಗೆ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ , ಹಥಿ ಪರ್ವತ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದ್ದು, ಹೆಲಿಕಾಪ್ಟರ್ನಲ್ಲಿ ಪೈಲಟ್ ಸೇರಿದಂತೆ ಒಟ್ಟು ಆರು ಜನರು ಮೃತಪಟ್ಟಿದ್ದಾರೆ. ಈ ಪೈಕಿ ಐವರು ಕರ್ನಾಟಕದ ಮೂಲದವರಾಗಿದ್ದಾರೆ. ಇನ್ನು ಗುಡ್ಡಗಾಡು ಪ್ರದೇಶದಲ್ಲಿ ಪತನವಾದ ಹೆಲಿಕಾಪ್ಟರ್ ಅನ್ನು ಕಾರ್ಯಚರಣೆ ನಡೆಸಿ ಪತ್ತೆ ಮಾಡಲಾಗಿದೆ. ಇನ್ನು ಆರು ಜನರ ಮೃತದೇಹಗಳ ಸಹ ಪತ್ತೆಯಾಗಿವೆ ಎಂದು ಅಲ್ಲಿನ ಎಸ್ಪಿ ಖಚಿತಪಡಿಸಿದ್ದಾರೆ. ಇನ್ನು ಈ ಬಗ್ಗೆ ಕರ್ನಾಟಕದ ಸರ್ಕಾರವೂ ಸಹ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ಬೆಂಗಳೂರು, (ಅಕ್ಟೋಬರ್ 30): ದೇವಭೂಮಿ ಉತ್ತರಾಖಂಡದಲ್ಲಿ ಇಂದು ಘನಘೋರ ಘಟನೆಯೇ ನಡೆದು ಹೋಗಿದೆ. ಮೃತ್ಯು ಕರಾಳ ನೃತ್ಯವಾಡಿದೆ. ದೇವರ ದರ್ಶನ ಮುಗಿಸಿ, ಇನ್ನೇನು ನಾಡಿಗೆ ಮರಳಬೇಕು ಎನ್ನುವಷ್ಟರಲ್ಲಿ ಕನ್ನಡಿಗರಿದ್ದ ಹೆಲಿಕಾಪ್ಟರ್ ಭೀಕರವಾಗಿ ಪತನಗೊಂಡಿದೆ. ಚಾರ್‌ಧಾಮ್ ಯಾತ್ರೆಗೆಂದು ಒಟ್ಟಾಗಿ ತೆರಳಿದ್ದ ಐವರು ಆಪ್ತ ಸ್ನೇಹಿತರು, ಮರಳಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಹೌದು..ಚಾರ್ದಾಮ್ ಯಾತ್ರೆಗೆ ತೆರಳಿದ್ದ ಐವರು ಕನ್ನಡಿಗರು ದುರಂತ ಅಂತ್ಯ ಕಂಡಿದ್ದಾರೆ. ಉತ್ತರಾಖಂಡದ ಚಾಯಿ ಗ್ರಾಮದ ಬಳಿ ಹೆಲಿಕಾಪ್ಟರ್ ಪತನವಾಗಿದ್ದು, ಹೆಲಿಕಾಪ್ಟರ್ ಕ್ಯಾಪ್ಟನ್ ಸೇರಿದಂತೆ ಐವರು ಕನ್ನಡಿಗರು ಮೃತಪಟ್ಟಿದ್ದು, ಇದೀಗ ಮೃತದೇಹಗಳು ಪತ್ತೆಯಾಗಿವೆ ಎಂದು ಅಲ್ಲಿನ ಚಮೋಲಿ ಎಸ್ಪಿ ಸುರ್ಜಿತ್ ಸಿಂಗ್ ಪವಾರ್ ಖಚಿತಪಡಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಮಾಧ್ಯಮ ಪ್ರಕಟಣೆ
ಬೆಂಗಳೂರಿನಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಆಗಿರೋ ಅರುಣ್ ಸಾಲಂಕೆ, ವಕೀಲರಾದ ಕೆ.ಸುಧೀರ್, ಹಾಗೂ ಶಂಕರೇಗೌಡ, ಉದ್ಯಮಿಗಳಾದ ಪ್ರತಾಪ್, ಹಾಗೂ ಹೆಚ್.ಎಸ್.ನಟರಾಜ್ ಈ ಐವರು ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟಿದ್ದಾರೆ. ಇನ್ನು ದುರಂತದ ಬಗ್ಗೆ ರಾಜ್ಯ ಸರ್ಕಾರ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಬದ್ರಿನಾಥದಿಂದ ಡೆಹ್ರಾಡೂನ್‌ಗೆ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ,ಹಥಿ ಪರ್ವತ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ ಪೈಲಟ್ ಸೇರಿದಂತೆ ಒಟ್ಟು 6 ಜನರ ಮೃತದೇಹಗಳು ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಜೋಶಿಮಠಕ್ಕೆ ಶವ ಶಿಫ್ಟ್ ಮಾಡಲಾಗುತ್ತಿದೆ. ಮೃತದೇಹಗಳನ್ನ ಕರ್ನಾಟಕಕ್ಕೆ ತರಲು ಉತ್ತರಾಖಂಡ್ ಸರ್ಕಾರದ ಜತೆ ಸಮನ್ವಯದ ಕೆಲಸ ಆಗುತ್ತಿದೆ ಎಂದು ತಿಳಿಸಿದೆ.
ಇದನ್ನೂ ನೋಡಿ: ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿದ CCB ಇನ್ಸ್‌ಪೆಕ್ಟರ್ ಅರುಣ್ ಸಾಲಂಕೆ ಯಾರು? ಇಲ್ಲಿದೆ ವಿವರ
ಮೃತ ಇನ್ಸ್‌ಪೆಕ್ಟರ್ ಅರುಣ್ ಕುಟುಂಬ ಸದಸ್ಯರಿಗೆ ಕರೆ
ಹೆಲಿಕಾಪ್ಟರ್ ದುರಂತದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾವನ್ನಪ್ಪಿರುವುದು ದೃಢವಾಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಅವರ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿಯಲ್ಲಿರುವ ಅರುಣ್ ತಂದೆ, ಸಹೋದರ, ಮಾವನಿಗೆ ಅಧಿಕಾರಿಗಳು ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬರುವಂತೆ ಹೇಳಿದ್ದಾರೆ.ಹಿರಿಯ ಅಧಿಕಾರಿಗಳ ಕರೆ ಬೆನ್ನಲ್ಲೇ ಅರುಣ್ ಸಂಬಂಧಿಗಳು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅರಟಾಳದಿಂದ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇನ್ನು ಅರುಣ್ ಸಾಲಂಕಿ ಪತ್ನಿ, ಮಕ್ಕಳು ಬೆಂಗಳೂರಿನಲ್ಲೇ ಇದ್ದಾರೆ.
ಮೃತರ ವಿವರ
- ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲಂಕೆ 2007ನೇ ಬ್ಯಾಚ್‌ನ ಖಡಕ್ ಅಧಿಕಾರಿ. ಮೂಲತಃ ಬೆಳಗಾವಿಯ ಅಥಣಿ ತಾಲೂಕಿನ ಅರಟಾಳ ಗ್ರಾಮದವರಾದ ಅರುಣ್, ಬೆಂಗಳೂರಿನ ರಾಮಮೂರ್ತಿನಗರದಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಿದ್ದರು.
- ಹಾಸನ ಜಿಲ್ಲೆ ಸಕಲೇಶಪುರದ ಬಾಚಿಹಳ್ಳಿ ಮೂಲದ ಪ್ರತಾಪ್, ಉದ್ಯಮಿಯಾಗಿದ್ದು, ಸಾಮಾಜಿಕ ಕೆಲಸಗಳ ಮೂಲಕ ರಾಜಕೀಯದಲ್ಲೂ ಗುರುತಿಸಿಕೊಂಡಿದ್ರು. ಯಸಳೂರು ಜಿಲ್ಲಾ ಪಂಚಾಯ್ತಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಜೆಡಿಎಸ್ ತೊರೆದು ಡಿಕೆ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ್ರು. ಆದ್ರೆ ಹೆಲಿಕಾಪ್ಟರ್ ದುರಂತ ಇವರ ಕನಸುಗಳನ್ನ ಕಮರಿಹಾಕುವಂತೆ ಮಾಡಿದೆ.
- ಇನ್ನು ನಟರಾಜ್ ಹಾಗೂ ಶಂಕರೇಗೌಡ, ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗದವರು. ಇವರಿಬ್ಬರೂ ಸಿಸಿಬಿ ಇನ್ಸ್‌ಪೆಕ್ಟರ್ ಅರುಣ್ ಸಾಲುಂಕೆ ಅವರ ಹಳೆಯ ಒಡನಾಡಿಗಳು. ಅರುಣ್ ಈ ಹಿಂದೆ ಅಮೃತೂರು ಠಾಣೆಯಲ್ಲಿ ಕರ್ತವ್ಯ ಮಾಡ್ತಿದ್ದಾಗ ಸ್ನೇಹಿತರಾದವರು. ಶಂಕರೇಗೌಡ ವಕೀಲರಾದ್ರೆ, ನಟರಾಜ್ ಉದ್ಯಮಿಯಾಗಿದ್ದರು. ಇನ್ನು ವಕೀಲರಾದ ಸುಧೀರ್ ಕೂಡಾ ಈ ಸ್ನೇಹಿತರ ಬಳಗದಲ್ಲಿದ್ರು.
ಸಿಎಂ ಡಿಕೆ ಶಿವಕುಮಾರ್ ಸಂತಾಪ
ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಹೆಲಿಕಾಪ್ಟರ್ ಪತನಕ್ಕೆ ಸಿಎಂ ಡಿಕೆ ಶಿವಕುಮಾರ್ ದುರಂತಕ್ಕೆ ತೀವ್ರ ಆಘಾತ, ದುಃಖ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದು, ಕ್ಯಾಪ್ಟನ್ ಹಿಮಾಂಶು, ಅರುಣ್ ಸಾಲಂಕೆ ಸೇರಿ ಆರು ಮಂದಿಯ ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಮೃತದೇಹಗಳನ್ನು ಶೀಘ್ರ ಕರ್ನಾಟಕಕ್ಕೆ ತರಲು ಉತ್ತರಾಖಂಡ ಅಧಿಕಾರಿಗಳ ಜೊತೆ ಮಾತುಕತೆ ನಡೆದಿದೆ. ಈ ದುಃಖದ ಸಮಯದಲ್ಲಿ ಮೃತರ ಕುಟುಂಬಗಳ ಜೊತೆ ರಾಜ್ಯ ಸರ್ಕಾರ ನಿಂತಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:30 pm, Fri, 30 October 26




