ತಾಯಿಯ ಹಲ್ಲಿನ ಸೆಟ್ ಮುರಿದಿದ್ದಕ್ಕೆ ವಿಜಯಪುರದಲ್ಲಿ ಬಾಲಕಿ ಹತ್ಯೆ; ಆರೋಪಿ ಬಂಧನ
ಆಗಸ್ಟ್ 9ಕ್ಕೆ ಗ್ರಾಮದ ಆಂಜನೇಯನ ದೇವಸ್ಥಾನದ ಎದುರು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರು ಆಟವಾಡುತ್ತಿದ್ದರು. ಬಳಿಕ ಇಬ್ಬರಲ್ಲಿ ಓರ್ವ ಬಾಲಕಿ ಮಾತ್ರ ಮನೆಗೆ ವಾಪಸ್ ಹೋಗಿದ್ದಾಳೆ.
ವಿಜಯಪುರ: ತಾಯಿಯ ಹಲ್ಲು ಮುರಿದಿದ್ದಕ್ಕೆ 6 ವರ್ಷದ ಬಾಲಕಿಯನ್ನು ಕೊಲೆ (Murder) ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇಂಡಿ ತಾಲೂಕಿನ ಬೋಳೆಗಾಂವ್ ಗ್ರಾಮದ ದೇವಸ್ಥಾನದ ಬಳಿ ಆಗಸ್ಟ್ 9ಕ್ಕೆ ಇದ್ದಕ್ಕಿಂದಂತೆ 6 ವರ್ಷದ ಬಾಲಕಿ ಕಾಣೆಯಾಗಿದ್ದಳು. ಎರಡು ದಿನಗಳ ಬಳಿಕ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ ಶಂಕೆ ವ್ಯಕ್ತವಾಗಿತ್ತು. ಸೂಕ್ಷ್ಮವಾಗಿ ಪ್ರಕರಣವನ್ನು ಬೇಧಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಆಗಸ್ಟ್ 9ಕ್ಕೆ ಗ್ರಾಮದ ಆಂಜನೇಯನ ದೇವಸ್ಥಾನದ ಎದುರು ಇಬ್ಬರು ಅಪ್ರಾಪ್ತ ವಯಸ್ಸಿನ ಸಹೋದರಿಯರು ಆಟವಾಡುತ್ತಿದ್ದರು. ಬಳಿಕ ಇಬ್ಬರಲ್ಲಿ ಓರ್ವ ಬಾಲಕಿ ಮಾತ್ರ ಮನೆಗೆ ವಾಪಸ್ ಹೋಗಿದ್ದಾಳೆ. ನಿನ್ನ ತಂಗಿ ಎಲ್ಲಿ ಮನೆಗೆ ಬರಲಿಲ್ವಾ ಎಂದು ಮನೆಯವರು ಪ್ರಶ್ನೆ ಮಾಡಿ, ವಾಪಸ್ ಹೋಗಿ ಆಕೆಯನ್ನು ಕರೆದುಕೊಂಡು ಬಾ ಅಂತ ಹೇಳುತ್ತಾರೆ. ತಂಗಿಯನ್ನು ಕರೆಯಲು ಅಪ್ರಾಪ್ತ ವಯಸ್ಸಿನ ಅಕ್ಕ ವಾಪಸ್ ದೇವಸ್ಥಾನದ ಬಳಿ ಹೋದಾಗ ಅಲ್ಲಿ ತಂಗಿ ಇರಲಿಲ್ಲ. ತಂಗಿ ಅಲ್ಲಿಲ್ಲಾ ಎಂದು ಮನೆಯಲ್ಲಿ ಬಾಲಕಿ ಹೇಳಿದಾಗ ಮನೆ ಮಂದಿಯೆಲ್ಲಾ 6 ವರ್ಷದ ಅಪ್ರಾಪ್ತೆಯನ್ನು ಹುಡುಕಾಡಿದ್ದಾರೆ. ಎಲ್ಲಿಯೂ ಬಾಲಕಿ ಕಾಣದಿದ್ದಾಗ ಹೊರ್ತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು.
ಪೊಲೀಸರು ತನಿಖೆ ನಡೆಸಿ ಅಪ್ರಾಪ್ತೆಗಾಗಿ ಶೋಧ ಕಾರ್ಯ ನಡೆಸಿದ್ದರು. ಕಾಣೆಯಾಗಿ ಎರಡು ದಿನಗಳ ಬಳಿಕ ಗ್ರಾಮದ ಹೊರ ಭಾಗದ ಹಳ್ಳದಲ್ಲಿ ಬಾಲಕಿ ಶವ ಪತ್ತೆಯಾಗಿದ್ದಳು. ಹಗ್ಗದಿಂದ ಕೈ ಕಾಲು ಕಟ್ಟಿ ಹಾಕಿ, ಬಾಯಿಗೆ ಬಟ್ಟೆ ಹಾಕಿರುವ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಶವವನ್ನು ಗೋಣಿ ಚೀಲದಲ್ಲಿ ಸಾಗಿಸಿರುವುದು ಕಂಡು ಬಂದಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವಾಗಿದೆ. ಅತ್ಯಾಚಾರಗೈದು ಪ್ರಕರಣ ಹೊರ ಬರಬಾರದೆಂದು ಆರೋಪಿ ಕೊಲೆ ಮಾಡಿದ್ದಾನೆ ಎಂಬ ಆರೋಪವೂ ಕೇಳಿ ಬಂತು. ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ ಇಂಡಿ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಿ ಆರೋಪಿಯ ಬಂಧನಕ್ಕೆ ಜಾಲ ಬೀಸಿತ್ತು.
ಸಿಕ್ಕ ಮಾಹಿತಿಯ ಆಧಾರದ ಮೇಲೆ ಗ್ರಾಮದ ಸಂಗನಗೌಡ ಬಿರಾದಾರ್ (24 ವರ್ಷ) ಎಂಬ ಯುವಕನ ಮೇಲೆ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿತ್ತು. ಕಾರಣ ಅಪ್ರಾಪ್ತ ಬಾಲಕಿಯ ಶವ ಪತ್ತೆಯಾದ ನಂತರ ಸಂಗನಗೌಡನ ಮನೆಯವರು ಗ್ರಾಮವನ್ನು ತೊರೆದು ಹೋಗಿದ್ದರು. ಇದೇ ಸಂಶಯದ ಮೇಲೆ ಸಂಗನಗೌಡನನ್ನು ವಶಕ್ಕೆ ಪಡೆದ ಖಾಕಿ ಪಡೆ ತನ್ನದೇ ಸ್ಟೈಲ್ನಲ್ಲಿ ವಿಚಾರಿಸಿದಾಗ ಸತ್ಯವನ್ನು ಬಾಯಿ ಬಿಟ್ಟಿದ್ದಾನೆ.
ಕೊಲೆಗೆ ಕಾರಣವೇನು? ಆರೋಪಿ ಸಂಗನಗೌಡ ತಾಯಿ ತನ್ನ ಹಲ್ಲಿನ ಸೆಟ್ ಮನೆಯ ಕಟ್ಟೆಯ ಮೇಲೆ ಇಟ್ಟಿದ್ದಳಂತೆ. ಆಗ ಅಲ್ಲಿಗೆ ಆಟವಾಡುತ್ತ ಬಂದ ಬಾಲಕಿ ಅದರ ಮೇಲೆ ಕಲ್ಲು ಎತ್ತಿ ಹಾಕಿ ಮುರಿದು ಹಾಕಿದ್ದಳಂತೆ. ಇದೇ ವಿಚಾರವಾಗಿ ಆರೋಪಿ ಹಾಗೂ ಅಪ್ರಾಪ್ತ ಬಾಲಕಿಯ ಮನೆಯವರ ಮಧ್ಯೆ ಜಗಳ ಆಗಿತ್ತಂತೆ. ಈ ಕಾರಣಕ್ಕೆ ಬಾಲಕಿಯನ್ನು ಕೊಲೆ ಆರೋಪಿ ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಈ ಘಟನೆ ನಡೆದಿರುವುದು ಎರಡು ತಿಂಗಳ ಹಿಂದೆ.
ಬಾಲಕಿಯನ್ನು ಜಮೀನಿಗೆ ಕರೆದುಕೊಂಡು ಹೋಗಿದ್ದ ಆರೋಪಿ ಆರೋಪಿ ಸಂಗನಗೌಡ ಬಾಲಕಿಯನ್ನು ಪುಸಲಾಯಿಸಿ ತನ್ನ ಜಮೀನಿಗೆ ಕರೆದುಕೊಂಡು ಹೋಗಿದ್ದನಂತೆ. ಅಲ್ಲಿ ಬಟ್ಟೆಯಿಂದ ಬಾಯಿ ಮೂಗು ಒತ್ತಿ ಹಿಡಿದು ಪ್ರಜ್ಞೆ ತಪ್ಪಿಸಿದ್ದಾನೆ. ನಂತರ ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿದ್ದಾನೆ. ಜಮೀನಿನ ಪಕ್ಕದ ಹಳ್ಳಕ್ಕೆ ತೆಗೆದುಕೊಂಡು ಹೋಗಿ ಬಿದಿರು ಬಡಿಗೆಯಿಂದ ಅಪ್ರಾಪ್ತೆಯ ತಲೆಗೆ ಹೊಡೆದಿದ್ದಾನೆ.
ಇದನ್ನೂ ಓದಿ
ರಾಮನಗರ: ಏಕಾಏಕಿ ಸ್ಫೋಟಗೊಂಡ ಕಾರು; ವ್ಯಕ್ತಿ ಸಜೀವ ದಹನ
(Police have arrested a man accused of murdering the girl at Vijayapur)