Vishnu Memorial: ವಿಷ್ಣು ಸ್ಮಾರಕ ಉದ್ಘಾಟನೆ ಇಂದು, ಬೆಂಗಳೂರಿನಿಂದ ನೂರಾರು ಅಭಿಮಾನಿಗಳಿಂದ ಜಾಥಾ
Dr. Vishnuvardhan Smaraka at Mysore: ಮೈಸೂರು ತಾಲೂಕು ಹೆಚ್ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 3 ಎಕರೆ ಜಾಗದಲ್ಲಿ 11 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಗ್ಯಾಲರಿ ಆಡಿಟೋರಿಯ, ವಿಷ್ಣು ಪುತ್ಥಳಿ, ವಿಷ್ಣು ಬಳೆ, ಕ್ಲಾಸ್ ರೂಮ್, ಕ್ಯಾಂಟೀನ್ ಇತ್ಯಾದಿ ಹತ್ತು ಹಲವು ವಿಶೇಷತೆಗಳು ಈ ಕಟ್ಟಡದಲ್ಲಿವೆ.
ಮೈಸೂರು: ಸ್ಯಾಂಡಲ್ವುಡ್ನ ಸೂಪರ್ ಸ್ಟಾರ್ ಆಗಿದ್ದ ಡಾ|| ವಿಷ್ಣುವರ್ಧನ್ ಅವರ ಸ್ಮಾರಕ (Dr. Vishnuvardhan Memorial) ಉದ್ಘಾಟನೆಗೆ ಕ್ಷಣಗಣನೆ ನಡೆದಿದೆ. ಮೈಸೂರಿನಲ್ಲಿರುವ ವಿಷ್ಣುವರ್ಧನ್ ಅವರ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಾಣವಾಗಿದ್ದು, ಇಂದು ಭಾನುವಾರ ಸಿಎಂ ಬಸವರಾಜ ಬೊಮ್ಮಾಯಿ (CM Basavaraja Bommai) ಲೋಕಾರ್ಪಣೆ ಮಾಡಲಿದ್ದಾರೆ.
ಮೈಸೂರು ತಾಲೂಕು ಹೆಚ್ಡಿ ಕೋಟೆ ರಸ್ತೆಯ ಹಾಲಾಳು ಗ್ರಾಮದ ಬಳಿ 3 ಎಕರೆ ಜಾಗದಲ್ಲಿ 11 ಕೋಟಿ ರೂ ವೆಚ್ಚದಲ್ಲಿ ಸ್ಮಾರಕ ನಿರ್ಮಿಸಲಾಗಿದೆ. ವಿಷ್ಣುವರ್ಧನ್ ಗ್ಯಾಲರಿ ಆಡಿಟೋರಿಯ, ವಿಷ್ಣು ಪುತ್ಥಳಿ, ವಿಷ್ಣು ಬಳೆ, ಕ್ಲಾಸ್ ರೂಮ್, ಕ್ಯಾಂಟೀನ್ ಇತ್ಯಾದಿ ಹತ್ತು ಹಲವು ವಿಶೇಷತೆಗಳು ಈ ಕಟ್ಟಡದಲ್ಲಿವೆ. ಆಡಿಟೋರಿಯಂನಲ್ಲಿ ಸಿನಿಮಾ ಮತ್ತು ನಾಟಕಗಳ ಪ್ರದರ್ಶನಕ್ಕೆ ಅವಕಾಶ ಇರುತ್ತದೆ.
ಸ್ಮಾರಕ ಟೈಮ್ಲೈನ್
ಡಾ|| ವಿಷ್ಣುವರ್ಧನ್ 2009 ಡಿಸೆಂಬರ್ 30ರಂದು ಇಹಲೋಕ ತ್ಯಜಿಸಿದ್ದರು. ಅದಾಗಿ 13 ವರ್ಷಗಳ ಹೊಯ್ದಾಟಗಳ ಬಳಿಕ ಸ್ಮಾರಕ ನಿರ್ಮಾಣವಾಗಿರುವುದು ಗಮನಾರ್ಹ. ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಮೊದಲು ಯೋಜಿಸಲಾಗಿತ್ತು. ಆದರೆ, ಭೂಮಿ ವಿವಾದದ ಸಮಸ್ಯೆ ತಲೆದೋರಿ ಅದು ಸಾಧ್ಯವಾಗಲಿಲ್ಲ. 2016ರಲ್ಲಿ ಭಾರತಿ ವಿಷ್ಣುವರ್ಧನ್ ಅವರು ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಮನವಿ ಮಾಡಿದರು. ವಿಷ್ಣುವಿನ ಹುಟ್ಟೂರಿನಲ್ಲಿ ಸ್ಮಾರಕಕ್ಕೆ ಭೂಮಿ ಮಂಜೂರಾಯಿತಾದರೂ, ರೈತರು ಇದಕ್ಕೆ ಆಕ್ಷೇಪಿಸಿದರು. ನ್ಯಾಯಾಲಯದಲ್ಲಿ ರೈತರ ಮನವಿ ತಿರಸ್ಕೃತಗೊಂಡಿತು. 2020 ಸೆಪ್ಟೆಂಬರ್ 15ರಂದು ಬಿಎಸ್ ಯಡಿಯೂರಪ್ಪ ಅವರು ಸ್ಮಾರಕಕ್ಕೆ ಶಂಕು ಸ್ಥಾಪನೆ ಮಾಡಿದರು. ಆಗಲೂ ರೈತರು ಪ್ರತಿಭಟನೆ ಮಾಡಿದ್ದರು. ಆ ಎಲ್ಲಾ ಅಡೆತಡೆಗಳನ್ನು ದಾಟಿ ಇಂದು ವಿಷ್ಣು ಸ್ಮಾರಕ ಲೋಕಾರ್ಪಣೆ ಆಗುತ್ತಿದೆ.
ಇದನ್ನೂ ಓದಿ: Vishnuvardhan Smaraka: ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆಗೂ ಮುನ್ನ ಸರ್ಕಾರದ ನಡೆ ಬಗ್ಗೆ ವಿಷ್ಣು ಸೇನಾ ಸಮಿತಿ ಅಸಮಾಧಾನ
ಅಭಿಮಾನಗಳ ಇಚ್ಛೆ
ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಬೆಂಗಳೂರಿನಲ್ಲೇ ಸ್ಮಾರಕ ನಿರ್ಮಿಸುವುದು ಇಚ್ಛೆಯಾಗಿತ್ತು. ದಾದಾ ಅಂತ್ಯಕ್ರಿಯೆ ನಡೆದ ಅಭಿಮಾನ್ ಸ್ಟುಡಿಯೋದಲ್ಲಿ ಸ್ಮಾರಕ ಆಗಬೇಕೆಂದು ಮೊದಲಿಂದಲೂ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಆದಾಗ್ಯೂ ಈಗ ವಿಷ್ಣು ಹುಟ್ಟೂರಿನಲ್ಲೇ ಸ್ಮಾರಕ ಸಿದ್ಧವಾಗಿದೆ. ಆದರೆ, ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವಿನ ಪುಣ್ಯಭೂಮಿಯನ್ನು ಅಭಿವೃದ್ಧಿ ಮಾಡಬೇಕೆಂಬ ಒತ್ತಾಯ ಈಗಲೂ ಕೇಳಿಬರುತ್ತಿದೆ.
ಇದೇ ವೇಳೆ, ವಿಷ್ಣು ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದ ಆಯೋಜನೆ ರೀತಿ ಬಗ್ಗೆಯೂ ವಿಷ್ಣು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಆಪ್ತ ಗೆಳೆಯರಾಗಿದ್ದ ಅಕ್ಷಯ್ ಕುಮಾರ್, ಚಿರಂಜೀವಿ, ರಜನೀಕಾಂತ್, ಮೋಹನ್ ಲಾಲ್ ಮೊದಲಾದವರನ್ನು ಸರ್ಕಾರ ಈ ಕಾರ್ಯಕ್ರಮಕ್ಕೆ ಆಹ್ವಾನ ಕೊಟ್ಟಿಲ್ಲದಿರುವುದು ಹಲವರಿಗೆ ಬೇಸರ ತರಿಸಿದೆ. ಡಾ. ವಿಷ್ಣು ಸೇನಾ ಸಮಿತಿ ಈ ಬಗ್ಗೆ ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಬೇಸರ ಹೊರಹಾಕಿತ್ತು. ಹಾಗೆಯೇ, ರಾಕಿಂಗ್ ಸ್ಟಾರ್ ಯಶ್ ಅವರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು ಎಂದು ಸಮಿತಿಯ ರಾಜ್ಯಾಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅಳಲು ತೋಡಿಕೊಂಡಿದ್ದಾರೆ.
ಬೆಂಗಳೂರಿಂದ ಜಾಥಾ
ಇಂದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದ ಪುಣ್ಯ ಭೂಮಿಯಿಂದ ಅಭಿಮಾನಿಗಳು ನೂರಾರು ವಾಹನಗಳಲ್ಲಿ ಮೈಸೂರಿನ ವಿಷ್ಣು ಸ್ಮಾರಕದವರೆಗೆ ರ್ಯಾಲಿ ಹೊರಟಿದ್ದಾರೆ. ಸ್ಮಾರಕ ಉದ್ಘಾಟನೆ ವೇಳೆ ಡಾ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಗೌರವ ಘೋಷಿಸಬೇಕೆಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದಾರೆ.
Published On - 10:22 am, Sun, 29 January 23