ಪ್ರಧಾನಿ ಕಾರ್ಯಕ್ರಮಕ್ಕೆ ಬರುವವರಿಗೆ ಕೊವಿಡ್ ಟೆಸ್ಟ್ ಕಡ್ಡಾಯ; ಕೊರೊನಾ ಪರೀಕ್ಷೆ ಮಾಡಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
ಮೋದಿ ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ.
ಬೆಂಗಳೂರು: ಪ್ರಧಾನಿ ಕಾರ್ಯಕ್ರಮಕ್ಕೆ ಭಾಗಿಯಾಗುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ (Covid Test) ಮಾಡಿಸಿಕೊಳ್ಳಬೇಕೆಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಈಗಾಗಲೇ ತಿಳಿಸಿದ್ದಾರೆ. ಈ ಹಿನ್ನೆಲೆ ಪ್ರಧಾನಿ ಮೋದಿ (PM Modi) ಜೊತೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಇಂದು ಕೊವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆರ್.ಟಿ.ನಗರದ ನಿವಾಸದಲ್ಲಿ ಬೊಮ್ಮಾಯಿಗೆ ಕೊವಿಡ್ ಟೆಸ್ಟ್ ಮಾಡಲಾಗಿದೆ.
ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದ ಸಿಎಂ: ಅಗ್ನಿಪಥ್ ಯೋಜನೆಗೆ ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಭಟನೆ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಎಂದು ಹೇಳಿಕೆ ನೀಡಿದ ಸಿಎಂ, ಖಾನಾಪುರ ಶಾಸಕರು ನಡೆಸುತ್ತಿರುವ ಪ್ರತಿಭಟನೆಯೇ ಸಾಕ್ಷಿ. ಇದುವರೆಗೂ ಆ ರೀತಿಯ ಯೋಜನೆ ಬಂದಿಲ್ಲ. ಕಾಂಗ್ರೆಸ್ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಈ ಯೋಜನೆ ಮೂಲಕ ಸಶಕ್ತ ಯುವಶಕ್ತಿ ರೂಪಿಸಲಾಗುತ್ತೆ. ಈಗಾಗಲೇ ಪರೀಕ್ಷೆ ಬರೆದ ಕೆಲವರಿಗೆ ಆತಂಕ ಇರಬಹುದು. ಅದನ್ನೆಲ್ಲ ಕೇಂದ್ರ ಸರ್ಕಾರ ಗಮನಿಸಿ ನಿರ್ಧಾರ ಕೈಗೊಳ್ಳುತ್ತೆ. ಆದ್ರೆ ಈ ನೆಪದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದರು.
ಇದನ್ನೂ ಓದಿ: ಅಗ್ನಿಪಥ್ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳ ಹಿಂದೆ ಕೋಚಿಂಗ್ ಸೆಂಟರ್ಗಳ ಕೈವಾಡ ಶಂಕೆ: ನಿವೃತ್ತ ಸೈನಿಕನ ಬಂಧನ
ಲೋಪ ಇದ್ರೆ ತಿಳಿಸಬಹುದು: ಇನ್ನು ಪಠ್ಯ ಪರಿಷ್ಕರಣೆ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅಸಮಾಧಾನ ಹೊರಹಾಕಿರುವ ಬಗ್ಗೆ ಮಾತನಾಡಿದ ಬೊಮ್ಮಾಯಿ, ಪಠ್ಯ ಪರಿಷ್ಕರಣೆ ವಿಚಾರ ನಾವು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ. ನಮ್ಮ ಸರ್ಕಾರ ಸಾಹಿತಿಗಳಿಗೆ ಗೌರವ ತರುವ ಕೆಲಸ ಮಾಡುತ್ತೆ. ಪಠ್ಯ ಪರಿಷ್ಕರಣೆ ಸಾರ್ವಜನಿಕ ವಲಯದಲ್ಲಿದೆ. ನಾವು ಜನಾಭಿಪ್ರಾಯಕ್ಕೆ ಮುಂದಾಗಿದ್ದೇವೆ, ಲೋಪ ಇದ್ರೆ ತಿಳಿಸಬಹುದು ಎಂದು ತಿಳಿಸಿದರು.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:49 pm, Sun, 19 June 22