ಹಾಸನ: ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಸಚಿವ HD ರೇವಣ್ಣ ಆರೋಪಿಸಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ನೀಡಿ ಬಿಜೆಪಿ ಸದಸ್ಯ ಮೋಹನ್ ಆಯ್ಕೆಯಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ST ಮೀಸಲಾತಿ ಕ್ಷೇತ್ರವಾಗಿರುವ ಹಾಸನ ನಗರಸಭೆ 34ನೇ ವಾರ್ಡ್‌ನಿಂದ ಆಯ್ಕೆಯಾಗಿದ್ದಾರೆ. ಈ ಬಗ್ಗೆ ದೂರು ನೀಡಿ 2 ವರ್ಷವಾದ್ರೂ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಮಾಜಿ ಸಚಿವ HD ರೇವಣ್ಣ ಆರೋಪಿಸಿದ್ದಾರೆ.
ಈಗ ಹಾಸನ ನಗರಸಭೆ ಅಧ್ಯಕ್ಷ ಸ್ಥಾನ STಗೆ ಮೀಸಲು. ಹೀಗಾಗಿ, ಬಿಜೆಪಿ ಸದಸ್ಯ ಮೋಹನ್ ಅಧ್ಯಕ್ಷರಾಗುತ್ತಾರೆ. ಆದರೆ, ಇದರಿಂದ ST ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ರೇವಣ್ಣ ಹೇಳಿದ್ದಾರೆ. ಮೋಹನ್ ತಮ್ಮ ಶಾಲಾ ದಾಖಲೆಗಳನ್ನ ತಿದ್ದಿ ST ಪ್ರಮಾಣಪತ್ರ ಸಲ್ಲಿಸಿ ಆಯ್ಕೆಯಾಗಿದ್ದಾರೆ. ಇವರ ತಂದೆಯ ಶಾಲಾ ದಾಖಲೆಗಳಲ್ಲಿ ಮರಾಠಾ ಎಂದು ಇದ್ದು ಇದು ಪ್ರವರ್ಗ 3 Bಗೆ ಸೇರುತ್ತದೆ. ಆದರೆ ಅವರು ತಮ್ಮ ಜಾತಿ ಕಲಂ ತಿದ್ದಿ ಮಹಾರಾಷ್ಟ್ರ ಗೊಂಡಾ ಸಮುದಾಯ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ ಎಂದು ರೇವಣ್ಣ ಆರೋಪಿಸಿದ್ದಾರೆ.
‘ಎರಡು ವರ್ಷವಾದ್ರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಈ ಬಗ್ಗೆ ಕ್ರಮ ಕೈಗೊಳ್ಳಲು ದೂರು ನೀಡಿ ಎರಡು ವರ್ಷವಾದ್ರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಸದಸ್ಯ ಮೋಹನ್ ವಿರುದ್ಧ FIR ದಾಖಲಾಗಬೇಕಾಗಿತ್ತು. ಆದ್ರೆ ಈ ಕಡತವನ್ನ ಅಧಿಕಾರಿಗಳು ಏಕೆ ಇತ್ಯರ್ಥ ಮಾಡಿಲ್ಲ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಈ ಕೂಡಲೇ ಈ ಅರ್ಜಿಯನ್ನ ಜಿಲ್ಲಾಡಳಿತ ಇತ್ಯರ್ಥ ಮಾಡಬೇಕು. ಸುಳ್ಳು ದಾಖಲೆ ನೀಡಿ ಪಡೆದಿರೋ ಜಾತಿ ಪ್ರಮಾಣ ಪತ್ರ ರದ್ದು ಮಾಡಬೇಕು. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಈ ಪ್ರಕರಣದಲ್ಲಿ ಕ್ರಮ ಆಗೋವರೆಗೂ ಹೋರಾಟ ಮಾಡುತ್ತೇವೆ. ಜೊತೆಗೆ, ನಾಳೆ ನಡೆಯೋ ನಗರಸಭೆ ಅಧ್ಯಕ್ಷರ ಚುನಾವಣೆ ವೇಳೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ HD ರೇವಣ್ಣ ಆಗ್ರಹಿಸಿದ್ದಾರೆ.