ಹಳ್ಳಿಗಳಲ್ಲೀಗ ಹೋರಿ ಹಬ್ಬದ ಸಂಭ್ರಮ : ಹೋರಿ ಓಟ ಹೇಗಿರುತ್ತೆ ಗೊತ್ತಾ? ಒಮ್ಮೆ ಇಲ್ಲಿ ನೋಡಿ

ಹಳ್ಳಿಗಳಲ್ಲೀಗ ಹೋರಿ ಹಬ್ಬದ ಸಂಭ್ರಮ : ಹೋರಿ ಓಟ ಹೇಗಿರುತ್ತೆ ಗೊತ್ತಾ? ಒಮ್ಮೆ ಇಲ್ಲಿ ನೋಡಿ

ಹಾವೇರಿ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಹಾವೇರಿ ಜಿಲ್ಲೆಯ ಹಳ್ಳಿಗಳಲ್ಲಿ ಹೋರಿ ಓಟದ ಗಮ್ಮತ್ತು ಶುರುವಾಗಿ ಬಿಡುತ್ತದೆ. ದೀಪಾವಳಿ ಪಾಡ್ಯದ ದಿನದಂದು ಸಾಂಕೇತಿಕವಾಗಿ ಶುರುವಾಗುವ ಹೋರಿ ಹಬ್ಬ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ. ಪ್ರತಿದಿನ ಒಂದಲ್ಲ ಒಂದು ಹಳ್ಳಿಗಳಲ್ಲಿ ಹೋರಿಗಳ ಮಿಂಚಿನ ಓಟ ಇರುತ್ತದೆ. ಗ್ರಾಮದ ಇಕ್ಕಟ್ಟಾದ ರಸ್ತೆಗಳಲ್ಲಿ ಹೋರಿಗಳು ಕಾಲು ಕೆದರಿ ಮಿಂಚಿನ ಓಟ ಓಡುತ್ತವೆ. ಕೊಬ್ಬರಿ ಹೋರಿ ಎಂತಲೇ ಫೇಮಸ್.. ಜಿಲ್ಲೆಯಲ್ಲಿ ದೀಪಾವಳಿ ಪಾಡ್ಯದ ದಿನದಿಂದ ಮೂರು ತಿಂಗಳುಗಳ ಕಾಲ ನಡೆಯುವ ಹೋರಿ ಓಟ, ಕೊಬ್ಬರಿ […]

pruthvi Shankar

| Edited By: sadhu srinath

Nov 18, 2020 | 11:10 AM

ಹಾವೇರಿ: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಹಾವೇರಿ ಜಿಲ್ಲೆಯ ಹಳ್ಳಿಗಳಲ್ಲಿ ಹೋರಿ ಓಟದ ಗಮ್ಮತ್ತು ಶುರುವಾಗಿ ಬಿಡುತ್ತದೆ. ದೀಪಾವಳಿ ಪಾಡ್ಯದ ದಿನದಂದು ಸಾಂಕೇತಿಕವಾಗಿ ಶುರುವಾಗುವ ಹೋರಿ ಹಬ್ಬ ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತದೆ. ಪ್ರತಿದಿನ ಒಂದಲ್ಲ ಒಂದು ಹಳ್ಳಿಗಳಲ್ಲಿ ಹೋರಿಗಳ ಮಿಂಚಿನ ಓಟ ಇರುತ್ತದೆ. ಗ್ರಾಮದ ಇಕ್ಕಟ್ಟಾದ ರಸ್ತೆಗಳಲ್ಲಿ ಹೋರಿಗಳು ಕಾಲು ಕೆದರಿ ಮಿಂಚಿನ ಓಟ ಓಡುತ್ತವೆ.

ಕೊಬ್ಬರಿ ಹೋರಿ ಎಂತಲೇ ಫೇಮಸ್.. ಜಿಲ್ಲೆಯಲ್ಲಿ ದೀಪಾವಳಿ ಪಾಡ್ಯದ ದಿನದಿಂದ ಮೂರು ತಿಂಗಳುಗಳ ಕಾಲ ನಡೆಯುವ ಹೋರಿ ಓಟ, ಕೊಬ್ಬರಿ ಹೋರಿ ಓಟ ಎಂತಲೇ ಫೇಮಸ್‌. ಹೋರಿಗಳ ಮಾಲೀಕರು ಹೋರಿಗಳಿಗೆ ಹುರುಳಿ, ಹಿಂಡಿ ಸೇರಿದಂತೆ ಪೋಷಕಾಂಶಭರಿತ ಪದಾರ್ಥಗಳನ್ನು ತಿನ್ನಿಸಿ ಭರ್ಜರಿಯಾಗಿ ತಯಾರು ಮಾಡಿರುತ್ತಾರೆ. ಹೀಗೆ ತಯಾರು ಮಾಡಿದ ಹೋರಿಗಳಿಗೆ ಒಣ ಕೊಬ್ಬರಿಯಿಂದ ತಯಾರಿಸಿದ ಹಾರಗಳನ್ನು ಕೊರಳಲ್ಲಿ ಹಾಕಿ ಓಡಿಸುತ್ತಾರೆ. ಹೀಗಾಗಿ ಹೋರಿ ಓಟಕ್ಕೆ ಕೊಬ್ಬರಿ ಹೋರಿ ಹಬ್ಬ ಎಂದೇ ಕರೆಯುತ್ತಾರೆ.

ಭರ್ಜರಿ ಅಲಂಕಾರ ಮಾಡುವ ಅಭಿಮಾನಿಗಳು.. ಹೋರಿ ಓಟದ ದಿನ ಹೋರಿಗಳ ಮಾಲೀಕರು ಹೋರಿಗಳನ್ನು ಭರ್ಜರಿಯಾಗಿ ತಯಾರು ಮಾಡುತ್ತಾರೆ. ಒಂದು ಹೋರಿ ಓಟದ ವೇಳೆ..ಮಾಲೀಕರು ಹೋರಿ ಅಲಂಕಾರಕ್ಕೆಂದು ಕನಿಷ್ಠ ಹತ್ತು ಸಾವಿರ ರುಪಾಯಿಯಿಂದ ಇಪ್ಪತ್ತು ಸಾವಿರ ರೂಪಾಯಿವರೆಗೆ ಖರ್ಚು ಮಾಡುತ್ತಾರೆ. ಆಗಸಕ್ಕೆ ಮುತ್ತಿಡುವ ರೀತಿಯಲ್ಲಿ ಬಲೂನ್​ಗಳನ್ನು ಹೋರಿಯ ಕೋಡುಗಳಿಗೆ ಕಟ್ಟಿರುತ್ತಾರೆ. ಬಲೂನ್ ಕಟ್ಟಿರುವ ಹೋರಿಗಳಿಗೆ ಪೀಪಿ ಹೋರಿ ಎಂದು ಕರೆಯುತ್ತಾರೆ.

ಚಿತ್ರನಟರು, ಚಿತ್ರದ ಹೆಸರುಗಳ ಝಲಕ್.. ಹೋರಿ ಓಟಕ್ಕೆ ತಯಾರು ಮಾಡಿ ತಂದಿರುವ ಹೋರಿಗಳಿಗೆ ಒಂದೊಂದು ಹೆಸರುಗಳನ್ನು ಇಟ್ಟಿರುತ್ತಾರೆ. ಕೆಲವರು ಚಲನಚಿತ್ರದ ಹೆಸರುಗಳನ್ನಿಟ್ಟಿದ್ದರೆ, ಮತ್ತೆ ಕೆಲವು ಹೋರಿಗಳಿಗೆ ಚಿತ್ರನಟರ ಹೆಸರುಗಳನ್ನು ಇಟ್ಟಿರುತ್ತಾರೆ. ಹೋರಿಗಳ ಹೆಸರುಗಳನ್ನು ಸಂಘಟಕರು ಕೂಗಿ ಕರೆಯುತ್ತಿದ್ದಂತೆ ಹೋರಿಗಳ ಮಾಲೀಕರು ಹೋರಿಗಳನ್ನು ಅಖಾಡಕ್ಕೆ ತಂದು ಓಡಿಸಲು ಬಿಡುತ್ತಾರೆ. ಹೋರಿಗಳು ಅಖಾಡದಲ್ಲಿ ಧೂಳೆಬ್ಬಿಸಿಕೊಂಡು ಓಡುವಾಗ ಅಭಿಮಾನಿಗಳು ಕೇಕೆ, ಸಿಳ್ಳೆಗಳ‌ ಸುರಿಮಳೆಗೈಯ್ಯುತ್ತಾರೆ.

ಹೋರಿ ಹಿಡಿಯಲು ಹರಸಾಹಸ.. ಕೊಬ್ಬರಿ ಹೋರಿಗಳನ್ನು ಗ್ರಾಮದ ಇಕ್ಕಟ್ಟಾದ ರಸ್ತೆಗಳಲ್ಲಿ ಓಡಿಸಲಾಗುತ್ತದೆ. ಹೀಗೆ ಮಿಂಚಿನ ಓಟ ಓಡುವ ಹೋರಿಗಳನ್ನು ಹಿಡಿಯಲು ಪೈಲ್ವಾನರು ಹರಸಾಹಸ ಮಾಡುತ್ತಾರೆ. ಹೋರಿ ಪೈಲ್ವಾನರ ಕೈಗೆ ಸಿಗದಂತೆ ಓಡಿದರೆ ಸಂಘಟಕರು ಅಂತಹ ಹೋರಿಗಳನ್ನು ವಿಜಯಿ ಹೋರಿ ಎಂದು ಘೋಷಿಸುತ್ತಾರೆ. ಒಂದು ವೇಳೆ ಅಖಾಡದಲ್ಲಿ ಹೋರಿ ಪೈಲ್ವಾನರ ಕೈಗೆ ಸಿಕ್ಕು ಓಡದೆ ನಿಂತರೆ ಅಂತಹ ಹೋರಿಗಳನ್ನು ಸ್ಪರ್ಧೆಯಿಂದ ಔಟ್ ಮಾಡಲಾಗುತ್ತದೆ. ಹಳ್ಳಿ ಹಳ್ಳಿಗಳಲ್ಲಿ ನಡೆಯುವ ಹೋರಿ ಓಟಕ್ಕೆ ಸಂಘಟಕರು ಬೈಕ್, ಟ್ರಿಜ್ಯುರಿ, ಟಿವಿ, ಚಿನ್ನದ ಉಂಗುರ ಹೀಗೆ ಬಗೆಬಗೆಯ ಪ್ರಶಸ್ತಿಗಳನ್ನು ಇಟ್ಟಿರುತ್ತಾರೆ.

ಕಳೆದ ವರ್ಷ ನಡೆದ ಹೋರಿ ಓಟದ ಸಂದರ್ಭದಲ್ಲಿ ಕೆಲವೊಂದು ಅವಘಡಗಳು ನಡೆದಿದ್ದವು. ಹೋರಿ ತಿವಿದು ಇಬ್ಬರು ಮೃತಪಟ್ಟ ಪ್ರಕರಣಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದವು. ಕೆಲವೊಂದು ಪ್ರಕರಣಗಳು ಪೊಲೀಸ್ ಠಾಣೆಗೆ ಬಾರದೆ ಸಂಧಾನದ ಮೂಲಕ ಬಗೆಹರಿದಿವೆ. ಹೀಗಾಗಿ ಈಗ ಜಿಲ್ಲೆಯಲ್ಲಿ ಹೋರಿ ಓಟಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ.

ಆದರೂ ಹಳ್ಳಿ ಹಳ್ಳಿಗಳಲ್ಲಿ ಹೋರಿ ಹಬ್ಬ ನಡೆಯುತ್ತಿವೆ. ಹೋರಿ ಓಟದ ವೇಳೆ ಈಗಲೂ ಅಲ್ಲಲ್ಲಿ ಅವಘಡಗಳು ನಡೆಯುತ್ತಿವೆ. ಆದರೆ ಹೋರಿ ಅಭಿಮಾನಿಗಳು ಮಾತ್ರ ಕೊರೊನಾ ಭೀತಿಯ ನಡುವೆಯೂ ಮಾಸ್ಕ್ ಧರಿಸದೆ, ದೈಹಿಕ ಅಂತರ ಮರೆತು ಹೋರಿಗಳನ್ನು ಓಡಿಸಿ ಸಂಭ್ರಮ ಆಚರಿಸುತ್ತಿದ್ದಾರೆ. -ಪ್ರಭುಗೌಡ ಎನ್. ಪಾಟೀಲ

Follow us on

Related Stories

Most Read Stories

Click on your DTH Provider to Add TV9 Kannada