Israel-Hamas war: ಯುದ್ಧ ಭೂಮಿಯಲ್ಲಿ ಸಿಲುಕಿದ ಉತ್ತರ ಕನ್ನಡ ಜಿಲ್ಲೆಯ 40 ಯುವಕರು
Israel-Hamas war: ಇಸ್ರೇಲ್ಗೆ ಕೆಲಸಕ್ಕೆಂದು ನೂರಾರು ಜನ ಕನ್ನಡಿಗರು ಹೋಗಿದ್ದು, ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯದ ಯಾವೆಲ್ಲ ಜಿಲ್ಲೆಯವರು ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದಾರೆ ಇಲ್ಲಿದೆ ಮಾಹಿತಿ.
ಬೆಂಗಳೂರು ಅ.10: ಇಸ್ರೇಲ್-ಪ್ಯಾಲೆಸ್ತೀನ್ನ ಹಮಾಸ್ (Israel-Hamas war) ಉಗ್ರರ ನಡುವಿನ ಕದನ ಭೀಕರ ಸ್ವರೂಪ ಪಡೆದುಕೊಂಡಿದ್ದು, ಎರಡೂ ಕಡೆ ದಾಳಿ-ಪ್ರತಿದಾಳಿಗಳು ತೀರ್ವಗೊಂಡಿವೆ. ಈ ವರೆಗೂ 1000 ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಇಸ್ರೇಲ್ಗೆ (Israel) ಕೆಲಸಕ್ಕೆಂದು ನೂರಾರು ಜನ ಕನ್ನಡಿಗರು (Kannadigas) ಹೋಗಿದ್ದು, ಯುದ್ಧ ಭೂಮಿಯಲ್ಲಿ ಸಿಲುಕಿಕೊಂಡಿದ್ದಾರೆ. ರಾಜ್ಯದ ಯಾವೆಲ್ಲ ಜಿಲ್ಲೆಯವರು ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದಾರೆ ಇಲ್ಲಿದೆ ಮಾಹಿತಿ…..
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ನಿವಾಸಿ ಜೇಮ್ಸ್ ಮಿರಾಂದ (29) ಎಂಬುವರು ಇಸ್ರೇಲ್‌ನ ತೆಲವಿಯ ರಶೀದ್ ಕೋಕ್ಮಾ ಸ್ಟ್ರೀಟ್ನಲ್ಲಿ ವಾಸವಾಗಿದ್ದಾರೆ. ಇವರು ಯುದ್ಧ ಪ್ರದೇಶದಿಂದ ಸುಮಾರು 70 ಕಿಮೀ ದೂರದಲ್ಲಿದ್ದಾರೆ. ಜೇಮ್ಸ್ ಕಳೆದ ಒಂದು ವರ್ಷದಿಂದ ಇಸ್ರೇಲ್ನಲ್ಲಿ ಕೇರ್ ಗಿವರ್ ಆಗಿ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದಾರೆ. ಅ.7ರಂದು ಇವರು ನೆಲೆಸಿರುವ ಪ್ರದೇಶದಿಂದ ಅಣತಿ ದೂರದಲ್ಲೇ ರಾಕೆಟ್ ಬಿದ್ದಿತ್ತು.
ಇನ್ನು ಶಿರಸಿ ನಿವಾಸಿ ಕ್ರಿಜೊಸ್ಟ ಮ್ ಪೌಲ್ ವಾಜ್, ಯುದ್ಧ ನಡೆಯುತ್ತಿರುವ ಸ್ಥಳದಿಂದ 150 ಕಿಮೀ ದೂರ ಇರುವ ಹೈಪಾ ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಇವರು ಕಳೆದ ನಾಲ್ಕು ವರ್ಷದಿಂದ ಹೋಮ್ ನರ್ಸ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಜೊಸ್ಟ ಮ್ ಪೌಲ್ ವಾಜ್ ಶಿವಮೊಗ್ಗ, ಮಡಕೇರಿ ಜಿಲ್ಲೆಯ ಯುವಕರೊಂದಿಗೆ ವಾಸವಾಗಿದ್ದಾರೆ. ಇಸ್ರೇಲ್ನಲ್ಲಿ ಭಟ್ಕಳದ 12, ಮುರ್ಡೇಶ್ವರದ 29, ಶಿರಸಿ 2, ಹೊನ್ನಾವರ ಓರ್ವ ಯುವಕ ಸೇರಿದಂತೆ ಒಟ್ಟು 40 ಜನ ಯುವಕರು ವಾಸವಾಗಿದ್ದಾರೆ.
ಇದನ್ನೂ ಓದಿ: ಇಸ್ರೇಲ್-ಹಮಾಸ್ ಯುದ್ಧ: ಕದನದ ಭೀಕರ ದೃಶ್ಯಗಳನ್ನು ಹಂಚಿಕೊಂಡ ಉಡುಪಿ ನರ್ಸ್
ಕಾರವಾರದ ಬೈತ್‌ಕೋಲ ನಿವಾಸಿಯಾಗಿರುವ ಆಟೋ ಚಾಲಕ ರೋಝಾರ್ ಲೂಪಿಜ್ ಅವರ ಪತ್ನಿ ಕ್ರಿಸ್ತ್‌ಮಾ ಇಸ್ರೇಲ್‌ನ ತೆಲವಿಯಲ್ಲಿ ಕಳೆದ 7 ವರ್ಷಗಳಿಂದ ಹೋಂ ನರ್ಸಿಂಗ್ ಕೆಲಸ ಮಾಡುತ್ತಿದ್ದಾರೆ. “ನಾವು ಸೇಫಾಗಿದ್ದು, ಸೈರನ್ ಆದಂತೆ ಬಂಕರ್ ಕಡೆ ತೆರಳುತ್ತೇವೆ. ಆಹಾರ ಹಾಗೂ ಸುರಕ್ಷತೆಗೆ ಯಾವುದೇ ಸಮಸ್ಯೆಯಿಲ್ಲ. ಭಾರತೀಯ ರಾಯಭಾರಿ ಕಚೇರಿಯಿಂದ ಸಂಪರ್ಕಿಸುತ್ತಿದ್ದಾರೆ” ಅಂತ ಕ್ರಿಸ್ತ್‌ಮಾ ಹೇಳಿದರು ಎಂದು ಪತಿ ರೋಝಾರ್ ಲೂಪಿಜ್ ತಿಳಿಸಿದರು.
ಕಾರವಾರ ಜಿಲ್ಲೆ ಸಹಾಯವಾಣಿ ಸಂಖ್ಯೆ 1077/08382-229857 ಅಥವಾ ಮೊಬೈಲ್ ಸಂಖ್ಯೆ 9483511015 ಸಂಪರ್ಕಿಸಲು ಮನವಿ ಮಾಡಿದೆ.
ಕೋಲಾರ ಜಿಲ್ಲೆಯ ಮಾಲೂರು ಮೂಲದ ಶಾಂತಿ ಆಲ್ಮೇಡಾ
ಕೋಲಾರ ಜಿಲ್ಲೆಯ ಮಾಲೂರು ಮೂಲದ ಶಾಂತಿ ಆಲ್ಮೇಡಾ ಇಸ್ರೇಲ್‌ನ ರಾಬ್ಸದಲ್ಲಿ ವಾಸವಾಗಿದ್ದಾರೆ. ಕಳೆದ 10 ವರ್ಷಗಳಿಂದ ಹೋಂ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಸ್ರೇಲ್ ಸರ್ಕಾರದಿಂದ ತುರ್ತು ಸೈರನ್ ಮೊಳಗಿದ ಹಿನ್ನೆಲೆಯಲ್ಲಿ ಸದ್ಯ ಬಂಕರ್ನಲ್ಲಿ ಆಶ್ರಯ ಪಡೆದಿದ್ದಾರೆ.
ಪತಿ ಗ್ರೇಶನ್ ಆಲ್ಮೇಡಾ ಮಾಲೂರಿನಲ್ಲೇ ಕೆಲಸ ಮಾಡುತ್ತಿದ್ದು, ಪತ್ನಿ ಶಾಂತಿ ಆಲ್ಮೇಡಾ ಒಬ್ಬರೇ ಇಸ್ರೇಲ್ನಲ್ಲಿ ವಾಸವಾಗಿದ್ದಾರೆ. ಇವರು ವಾಸಿಸುತ್ತಿರುವ ಪ್ರದೇಶದಲ್ಲಿ ಯಾವುದೇ ಅಪಾಯವಿಲ್ಲ. ಕೇವಲ ಬಾಂಬ್ ಹಾಗೂ ರಾಕೇಟ್ ಸದ್ದು ಮಾತ್ರ ಕೇಳಿಸುತ್ತಿದೆ. ಸುರಕ್ಷಿತವಾಗಿ ಇದ್ದೇವೆ ಎಂದು ಶಾಂತಿ ಆಲ್ಮೇಡಾ ತಿಳಿಸಿದ್ದಾರೆ.
ಬೈಂದೂರು ಮೂಲದ 20 ಕ್ಕೂ ಹೆಚ್ಚು ಜನರು ಇಸ್ರೇಲ್ನಲ್ಲಿ
ಉಡುಪಿ ಜಿಲ್ಲೆಯ ಬೈಂದೂರು ಮೂಲದ 20 ಕ್ಕೂ ಹೆಚ್ಚು ಜನರು ಇಸ್ರೇಲ್ನಲ್ಲಿ ಸಿಲುಕಿಕೊಂಡಿದ್ದಾರೆ. ನಿಮಗೆ ಸರಕಾರದ ಮೂಲಕ ಅಗತ್ಯ ಸೇವೆ ನೀಡುತ್ತೇವೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗುರುರಾಜ್ ಗಂಟಿಹೊಳೆ ದೈರ್ಯ ಹೇಳಿದರು. ಶಾಸಕ ಗುರುರಾಜ್ ಗಂಟಿಹೊಳೆ ಅವರು ಇಸ್ರೇಲ್ನಲ್ಲಿರುವ ಬೈಂದೂರು ಮೂಲದ ಕ್ಲಾರೆನ್ಸ್ ಉಪ್ಪುಂದವರಿಗೆ ವಿಡಿಯೋ ಕರೆ ಮಾಡಿ, ಅಲ್ಲಿನ ಸ್ಥಿತಿ-ಗತಿ ಬಗ್ಗೆ ಮಾಹಿತಿ ಪಡೆದರು.
ಇಸ್ರೇಲ್ನಲ್ಲಿ ಸಿಲುಕಿರುವ ಮಾಹಿತಿ ಸಿಕ್ಕಿಲ್ಲ: ಡಿಸಿ ಕೆ.ವಿ.ರಾಜೇಂದ್ರ
ಈವರಗೆ ಯಾವೊಬ್ಬ ವ್ಯಕ್ತಿ ಇಸ್ರೇಲ್ನಲ್ಲಿ ಸಿಲುಕಿರುವ ಮಾಹಿತಿ ಸಿಕ್ಕಿಲ್ಲ. ಈ ಕುರಿತು ರಾಯಭಾರ ಕಚೇ ರಿಜೊತೆ ಸಂಹವನ ನಡೆಯುತ್ತಿದೆ. ಯಾರಾದರೂ ತಮ್ಮವರು ಇಸ್ರೇಲ್ನಲ್ಲಿ ಸಿಲುಕಿದ್ದರೇ, ಸಾರ್ವಜನಿಕರು 1128 ಗೆ ಮಾಹಿತಿ ನೀಡಬಹುದು. ನಂಜನಗೂಡು ಮೂಲದ ಕುಟುಂಬ ಸಿಲುಕಿರುವ ವಿಚಾರವಾಗಿ ಮಾತನಾಡಿದ ಅವರು ಈ ಕುರಿತು ಯಾವುದೇ ಮಾಹಿತಿ ಈವರಗೆ ಇಲ್ಲ. ಕುಟುಂಬದವರನ್ನು ಸಂಪರ್ಕಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಮೈಸೂರಲ್ಲಿ ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು.
ಇಸ್ರೇಲ್ನಲ್ಲಿ ಸಿಲುಕಿರುವ ಕನ್ನಡಿಗರು ಯಾವುದೇ ನೆರವಿಗಾಗಿ ರಾಜ್ಯ ಸರ್ಕಾರದ ತುರ್ತು ಸಹಾಯವಾಣಿ 080 22340676, 080 22253707 ಸಂಪರ್ಕಿಸಬಹುದು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ +97235226748 ಸಂಖ್ಯೆಗೆ ಕರೆ ಮಾಡಬಹುದು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:21 pm, Tue, 10 October 23