ಕೋಲಾರ: ಮಳೆ ಬಂದರೂ ಜಗ್ಗದೆ ದಿಟ್ಟತನದಿಂದ ನಿಂತು ಶಾಸಕಿಯೊಬ್ಬರು ಏಕಾಂಗಿಯಾಗಿ ಮೌನ ಪ್ರತಿಭಟನೆ ನಡೆಸಿರುವ ಘಟನೆ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನಡೆದಿದೆ. ಮಳೆ ಬಂದರೂ ಶಾಸಕಿ ರೂಪಕಲಾ ಏಕಾಂಗಿಯಾಗಿ ನಿಂತುಕೊಂಡು ಪ್ರತಿಭಟನೆ ನಡೆಸಿದರು.
ಜಿಲ್ಲೆಯ KGF ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿರುವ ರೂಪಕಲಾ KGF ನಗರದ ಅಶೋಕ ರಸ್ತೆಯ ಕಾಮಗಾರಿ ವಿಳಂಬವಾಗಿರುವುದನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ.
ಶಾಸಕಿ ಮೂರು ಗಂಟೆಗಳಿಂದ ಏಕಾಂಗಿಯಾಗಿ ನಿಂತುಕೊಂಡು ಪ್ರತಿಭಟನೆ ನಡೆಸಿದರೂ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಕಚೇರಿಗೆ ಬಾರದೆ ಬೇರೆಡೆ ಅಧಿಕಾರಿಗಳ ಸಭೆ ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗಿದೆ.