IPL 2022: ಈ ಬಾರಿಯ ಐಪಿಎಲ್ನಲ್ಲಿ KKR ತಂಡ ಎಡವಿದ್ದೆಲ್ಲಿ?
KKR in IPL 2022: ಕೆಕೆಆರ್ ಪರ ಆರಂಭದಲ್ಲಿ ಉಮೇಶ್ ಯಾದವ್ ಉತ್ತಮ ಬೌಲಿಂಗ್ ನಡೆಸಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು.
IPL 2022: ಪ್ರತಿ ಸೀಸನ್ ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಕ್ತಾಯದ ವೇಳೆ ಸನ್ರೈಸರ್ಸ್ ಹೈದರಾಬಾದ್ (SRH) ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳ ಹೆಸರು ಹೆಚ್ಚು ಚರ್ಚೆಯಲ್ಲಿರುತ್ತದೆ. ಇದಕ್ಕೆ ಮುಖ್ಯ ಕಾರಣ ಈ ಎರಡೂ ತಂಡಗಳು ಐಪಿಎಲ್ನ ದ್ವಿತಿಯಾರ್ಧದಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಾ ಬಂದಿರುವುದು. ಅಷ್ಟೇ ಅಲ್ಲದೆ ಅಂತಿಮ ಹಂತದಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಕೆಕೆಆರ್ ನೆಟ್ ರನ್ ರೇಟ್ಗಳ ಮೂಲಕ ಸದಾ ಪ್ಲೇಆಫ್ ಪ್ರವೇಶಿಸುವಲ್ಲಿ ನಿಸ್ಸೀಮರು ಎಂದರೆ ತಪ್ಪಾಗಲಾರದು. ಆದರೆ ಈ ಬಾರಿ ಈ ಪ್ಲೇಆಫ್ ಪ್ರವೇಶಿಸುವ ಸಣ್ಣ ಅವಕಾಶವೂ ದೊರೆತಿಲ್ಲ. ಇದಕ್ಕೆ ಒಂದು ಕಾರಣ ಹೊಸ ತಂಡ ಎನ್ನಬಹುದು. ಆದರೆ ಇಲ್ಲಿ ಹೊಸ ತಂಡಗಳೇ ಆಗಿರುವ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಪ್ಲೇಆಫ್ಗೆ ಎಂಟ್ರಿ ಕೊಟ್ಟಿರುವುದನ್ನು ಕೂಡ ಉಲ್ಲೇಖಾರ್ಹ. ಹಾಗಿದ್ರೆ ಕೆಕೆಆರ್ ಎಡವಿದೆಲ್ಲಿ ನೋಡೋಣ…
ಕೊಲ್ಕತ್ತಾ ನೈಟ್ ರೈಡರ್ಸ್ (KKR): ಈ ಬಾರಿ ಐಪಿಎಲ್ನಲ್ಲಿ ಬಲಿಷ್ಠ ತಂಡಗಳಲ್ಲಿ ಕೆಕೆಆರ್ ಕೂಡ ಗುರುತಿಸಿಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಕೆಕೆಆರ್ ಉಳಿಸಿಕೊಂಡಿದ್ದ ಸ್ಟಾರ್ ಆಟಗಾರರು. ಅಂದರೆ ಆಂಡ್ರೆ ರಸೆಲ್, ಸುನಿಲ್ ನರೈನ್, ವೆಂಕಟೇಶ್ ಅಯ್ಯರ್ ಹಾಗೂ ವರುಣ್ ಚಕ್ರವರ್ತಿಯನ್ನು ಈ ಬಾರಿ ಹರಾಜಿಗೂ ಮುನ್ನ ರಿಟೈನ್ ಮಾಡಿಕೊಂಡಿತ್ತು. ಈ ನಾಲ್ಕರು ಕಳೆದ ಸೀಸನ್ನಲ್ಲಿ ಪ್ಲೇಯಿಂಗ್ ಇಲೆವೆನ್ನ ಭಾಗವಾಗಿದ್ದರು. ಆದರೆ ಈ ಬಾರಿ ವೆಂಕಟೇಶ್ ಅಯ್ಯರ್ ಹಾಗೂ ವರುಣ್ ಚಕ್ರವರ್ತಿ ಪೂರ್ತಿ ಪಂದ್ಯಗಳನ್ನು ಆಡಿರಲಿಲ್ಲ ಎಂಬುದು ವಿಶೇಷ. ಅಂದರೆ ರಿಟೈನ್ ಮಾಡಿಕೊಂಡಿದ್ದ ಇಬ್ಬರು ಆಟಗಾರರು ಕಳಪೆ ಪ್ರದರ್ಶನದ ಮೂಲಕ ಕೈಕೊಟ್ಟಿದ್ದರು. ಇದುವೇ ತಂಡದ ಹಿನ್ನೆಡೆಗೆ ಮುಖ್ಯ ಕಾರಣವಾಯಿತು.
ಅಬ್ಬರಿಸದ ಬ್ಯಾಟ್ಸ್ಮನ್ಗಳು: ಈ ಬಾರಿ ಕೆಕೆಆರ್ ಪರ ಅದ್ಭುತ ಪ್ರದರ್ಶನ ನೀಡಿದ ಒಬ್ಬರೇ ಒಬ್ಬರು ಬ್ಯಾಟ್ಸ್ಮನ್ಗಳು ಕಾಣ ಸಿಗುವುದಿಲ್ಲ. ಏಕೆಂದರೆ ಯಾವುದೇ ಬ್ಯಾಟ್ಸ್ಮನ್ ಸ್ಥಿರ ಪ್ರದರ್ಶನ ನೀಡಿಲ್ಲ. ಅದರಲ್ಲೂ ಕೊಂಚ ಉತ್ತಮವಾಗಿ ಆಡಿದ್ದು ನಾಯಕ ಶ್ರೇಯಸ್ ಅಯ್ಯರ್. ಏಕೆಂದರೆ ಶ್ರೇಯಸ್ ಅಯ್ಯರ್ ಹೊರತುಪಡಿಸಿ ಯಾವುದೇ ಬ್ಯಾಟ್ಸ್ಮನ್ನ ವೈಯುಕ್ತಿಕ ಸ್ಕೋರ್ 400 ರನ್ ದಾಟಿಲ್ಲ. 14 ಪಂದ್ಯಗಳನ್ನು ಆಡಿದ್ದ ಅಯ್ಯರ್ 401 ರನ್ಗಳಿಸಿದರೆ, ನಿತೀಶ್ ರಾಣಾ 361 ರನ್ ಕಲೆಹಾಕಿದ್ದರು. ಇದರ ಹೊರತಾಗಿ ಯಾವುದೇ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ನೀಡಿಲ್ಲ.
ಹಳಿ ತಪ್ಪಿದ ಬೌಲಿಂಗ್ ಲೈನಪ್: ಕೆಕೆಆರ್ ಪರ ಆರಂಭದಲ್ಲಿ ಉಮೇಶ್ ಯಾದವ್ ಉತ್ತಮ ಬೌಲಿಂಗ್ ನಡೆಸಿದ್ದರು. ಆದರೆ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಆರಂಭಿಕ ಪಂದ್ಯಗಳಲ್ಲಿ ಉಮೇಶ್ ಯಾದವ್ ಉತ್ತಮ ಬೌಲಿಂಗ್ ಸಂಘಟಿಸಿದರೂ ಇತರೆ ಬೌಲರ್ಗಳಿಂದ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಇತ್ತ ದ್ವಿತಿಯಾರ್ಧದಲ್ಲಿ ಆಂಡ್ರೆ ರಸೆಲ್ ಉತ್ತಮವಾಗಿ ಬೌಲಿಂಗ್ ಮಾಡಿದ್ದರು. ಆದರೆ ಈ ವೇಳೆ ಉಮೇಶ್ ಯಾದವ್ ಲಯ ತಪ್ಪಿದ್ದರು. ಅಂದರೆ ಸುನಿಲ್ ನರೈನ್, ವರುಣ್ ಚಕ್ರವರ್ತಿ, ಟಿಮ್ ಸೌಥಿ ಅಂತಹ ವಿಕೆಟ್ ಟೇಕರ್ ಬೌಲರ್ಗಳಿದ್ದರೂ ವಿಕೆಟ್ ಪಡೆಯುವಲ್ಲಿ ಎಡವಿದ್ದರು. ಅದರಲ್ಲೂ ರಿಟೈನ್ ಮಾಡಲಾದ ವರುಣ್ ಚಕ್ರವರ್ತಿ 11 ಪಂದ್ಯಗಳಲ್ಲಿ ಪಡೆದಿದ್ದು ಕೇವಲ 6 ವಿಕೆಟ್ ಮಾತ್ರ. ಅತ್ತ ಕೆಕೆಆರ್ ಪರ ರಸೆಲ್ 17 ಹಾಗೂ ಉಮೇಶ್ ಯಾದವ್ 16 ವಿಕೆಟ್ ಪಡೆದಿದ್ದರೂ ಇಬ್ಬರಿಂದ ಒಂದೇ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ಮೂಡಿಬಂದಿಲ್ಲ. ಇವರಿಬ್ಬರೂ ಮಿಂಚಿದಾಗ ಉಳಿದ ಬೌಲರ್ಗಳಿಂದ ಸಾಥ್ ಸಿಕ್ಕಿರಲಿಲ್ಲ.
ಕೈಕೊಟ್ಟ ಆಲ್ರೌಂಡರ್ಗಳು: ಕೆಕೆಆರ್ ತಂಡದ ಟ್ರಂಪ್ ಕಾರ್ಡ್ ಎಂದರೆ ಸುನಿಲ್ ನರೈನ್. ಏಕೆಂದರೆ ಈ ಬಾರಿ ಕೆಕೆಆರ್ ನರೈನ್ ಅವರನ್ನು ಉಳಿಸಿಕೊಂಡಿತ್ತು. ಇದಾಗ್ಯೂ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ವಿಫಲರಾಗುವ ಮೂಲಕ ನರೈನ್ ನಿರಾಸೆ ಮೂಡಿಸಿದರು. ಏಕೆಂದರೆ ಅನುಭವಿ ಸ್ಪಿನ್ ಮಾಂತ್ರಿಕನಾಗಿದ್ದ ನರೈನ್ 14 ಪಂದ್ಯಗಳಲ್ಲಿ ಗಳಿಸಿದ್ದು ಕೇವಲ 9 ವಿಕೆಟ್ ಮಾತ್ರ. ಇನ್ನು ಬ್ಯಾಟ್ನಿಂದ ಬಂದಿದ್ದು 74 ರನ್ಗಳು. ಹಾಗೆಯೇ ಪ್ಯಾಟ್ ಕಮಿನ್ಸ್ ಪ್ರಮುಖ ಆಲ್ರೌಂಡರ್ ಆಗಿದ್ದರೂ ಆಡಿದ್ದು ಕೇವಲ 5 ಪಂದ್ಯ ಮಾತ್ರ. ಈ ವೇಳೆ 7 ವಿಕೆಟ್ ಪಡೆದಿದ್ದರು. ಇದಾದ ಬಳಿಕ ಗಾಯಗೊಂಡು ಹೊರಗುಳಿದಿದ್ದರು.
ತಂಡದಲ್ಲಿ ನಿರಂತರ ಬದಲಾವಣೆ: ಈ ಬಾರಿ ಕೆಕೆಆರ್ ಪರ 20 ಮಂದಿ ಆಡಿದ್ದರು. ಅಂದರೆ ಸತತವಾಗಿ ತಂಡದಲ್ಲಿ ಬದಲಾವಣೆ ತಂದಿದ್ದು ಪರಿಣಾಮ ಬೀರಿತು. ಏಕೆಂದರೆ ಗೆದ್ದ ತಂಡವನ್ನೇ ಮುಂದುವರೆಸದಿರುವುದು ತಂಡದ ಮೇಲೆ ಪರಿಣಾಮ ಬೀರಿತು. ಏಕೆಂದರೆ ಮೊದಲ 4 ಪಂದ್ಯಗಳಲ್ಲಿ 3 ರಲ್ಲಿ ಜಯ ಸಾಧಿಸಿತ್ತು. ಆದರೆ ಬಳಿಕ ಮೂರು ಪಂದ್ಯಗಳಲ್ಲಿ ಸೋಲನುಭವಿಸಿತು. ಇನ್ನು ದ್ವಿತಿಯಾರ್ಧದಲ್ಲೂ ತಂಡದಲ್ಲಿ ಬದಲಾವಣೆ ಮಾಡಲಾಯಿತು. ಇದು ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡರೂ ಕೆಕೆಆರ್ ತಂಡ 14 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತು.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:06 pm, Sun, 22 May 22