ಹಿಂದೂ ಸಮಾಜ ಹಾಗೂ ದೇಶಕ್ಕಾಗಿ ಉಸಿರು ಇರೋ ತನಕ ಹೋರಾಟ; ಸಚಿವ ಸ್ಥಾನ ಹೋದರೆ ಒಂದು ಗೂಟ ಹೋದಂತೆ ಅಷ್ಟೇ: ಕೆ.ಎಸ್.ಈಶ್ವರಪ್ಪ

ನಾನು ಬಿಜೆಪಿ ಕಾರ್ಯಕರ್ತ. ಹಿಂದೂ ಸಮಾಜ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಿದ್ದೇನೆ. ದೇಶ ಹಾಗೂ ಸಮಾಜದ ಬಗ್ಗೆ ಹಿಂದಿನಿಂದಲೂ ಹೋರಾಡುತ್ತಿದ್ದೇನೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ: ಈಶ್ವರಪ್ಪ

ಹಿಂದೂ ಸಮಾಜ ಹಾಗೂ ದೇಶಕ್ಕಾಗಿ ಉಸಿರು ಇರೋ ತನಕ ಹೋರಾಟ; ಸಚಿವ ಸ್ಥಾನ ಹೋದರೆ ಒಂದು ಗೂಟ ಹೋದಂತೆ ಅಷ್ಟೇ: ಕೆ.ಎಸ್.ಈಶ್ವರಪ್ಪ
ಕೆ.ಎಸ್ .ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel)​ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಿವಮೊಗ್ಗದಲ್ಲಿ ಮಾತನಾಡಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ (K.S Eshwarappa), ಯಾರು ಆಡಿಯೋ ವೈರಲ್ (Audio Viral) ಮಾಡಿದ್ದಾರೆ ಎನ್ನುವ ಬಗ್ಗೆ ತನಿಖೆಯಾಗಲಿದೆ. ನಳಿನ್ ಕುಮಾರ್‌ ವಿರುದ್ಧ ವ್ಯವಸ್ಥಿತ ಸಂಚು ರೂಪಿಸಿ ಅವರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಯಾರೋ ಹುಚ್ಚರು ಆಡಿಯೋವನ್ನು ಸೃಷ್ಟಿ ಮಾಡಿದ್ದಾರೆ. ನಳಿನ್ ಕುಮಾರ್ ಕಟೀಲ್ ಆಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಈ ಬಗ್ಗೆ ತನಿಖೆ ಅಗತ್ಯವಿಲ್ಲ. ಬದಲಾಗಿ ಆಡಿಯೋ ಯಾರು ವೈರಲ್ ಮಾಡಿದ್ದಾರೆ ಎಂಬ ಬಗ್ಗೆ ತನಿಖೆಯಾಗಬೇಕು (Investigation) ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ.

ಹಿಂದೂ ಸಮಾಜ ಹಾಗೂ ದೇಶಕ್ಕಾಗಿ ಉಸಿರಿರುವವರೆಗೆ ಹೋರಾಡುತ್ತೇನೆ. ನನ್ನ ಸಚಿವ ಸ್ಥಾನ ಹೋದರೆ ಹೋಗಲಿ. ಸಚಿವ ಸ್ಥಾನ ಹೋದರೆ ಒಂದು ಗೂಟ ಹೋದಂತೆ. ಯಾರೂ ಸಹ ಅಧಿಕಾರಕ್ಕೆ ಗೂಟ ಹೊಡೆದು ಕುಳಿತಿಲ್ಲ. ಯುವಕರಿಗೆ ಆದ್ಯತೆ ಕೊಡುವುದರಲ್ಲಿ ತಪ್ಪೇನೂ ಇಲ್ಲ. ಹೀಗಾಗಿ ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ಕೆಲಸ ಮಾಡುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದೆಹಲಿಗೆ ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಎನ್ನುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಗ್ರಾಮಪಂಚಾಯತ್ ಸದಸ್ಯನಿಗಿಂತಲೂ ಕೀಳುಮಟ್ಟಕ್ಕೆ ಇಳಿಯುತ್ತಿದ್ದಾರೆ. ಯಡಿಯೂರಪ್ಪ ಅವರು ಕೇಂದ್ರದ ನೂತನ ಸಚಿವರನ್ನು ಅಭಿನಂದಿಸಲು ಬ್ಯಾಗ್​ನಲ್ಲಿ ಹಾರ ತುರಾಯಿ ಒಯ್ದಿದ್ದರು. ಯಡಿಯೂರಪ್ಪ ಯಾರನ್ನೂ ಮೆಚ್ಚಿಸಬೇಕಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರೂ ಬ್ಯಾಗ್ ಪಡೆಯುವಷ್ಟು ಕೀಳುಮಟ್ಟದ ರಾಜಕಾರಣಿಯಲ್ಲ. ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಅವರನ್ನು ಸನ್ಮಾನಿಸಲು ಬ್ಯಾಗ್​ನಲ್ಲಿ ಹಾರ ತುರಾಯಿ ಒಯ್ಯುತ್ತಿದ್ದರು. ಅದರಲ್ಲಿ ಏನಿತ್ತು ಎಂದು ಕೇಳಲಾ. ಕುಮಾರಸ್ವಾಮಿ ಹೀಗೆ ಮಾತನಾಡುತ್ತಿದ್ದರೆ ಜನ ಛೀಮಾರಿ ಹಾಕುತ್ತಾರೆ ಎಂದು ಈಶ್ವರಪ್ಪ ಗುಡುಗಿದ್ದಾರೆ.

ನಾನು ಬಿಜೆಪಿ ಕಾರ್ಯಕರ್ತ. ಹಿಂದೂ ಸಮಾಜ ಹಾಗೂ ದೇಶದ ಅಭಿವೃದ್ಧಿ ಬಗ್ಗೆ ಚಿಂತನೆ ಹೊಂದಿದ್ದೇನೆ. ದೇಶ ಹಾಗೂ ಸಮಾಜದ ಬಗ್ಗೆ ಹಿಂದಿನಿಂದಲೂ ಹೋರಾಡುತ್ತಿದ್ದೇನೆ. ರಾಜಕಾರಣದಲ್ಲಿ ಯಾರೂ ಗೂಟ ಹೊಡೆದುಕೊಂಡು ಕೂರಲು ಸಾಧ್ಯವಿಲ್ಲ. ಮಂತ್ರಿ ಸ್ಥಾನ ಹೋದರೆ ಗೂಟ ಹೋಯಿತು ಎಂದುಕೊಳ್ಳುತ್ತೇನೆ. ನಾನು ಎಂಎಲ್​ಎ ಆಗುವಾಗ ಹಿರಿಯರೇ ಟಿಕೆಟ್ ನೀಡಿದರು. ಇಲಾಖೆ ಸಚಿವನಾದಾಗಲೂ ಪಕ್ಷ ಹಾಗೂ ಸಂಘಟನೆ ಹೇಳಿದಂತೆ ಕೇಳಿದ್ದೇನೆ. ನಾನು ಮಂತ್ರಿ ಸ್ಥಾನವನ್ನು ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ದೇವೇಗೌಡ ವಿರುದ್ಧ ಕನಕಪುರದಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್​ಗೆ ರಾಜೀನಾಮೆ ನೀಡಿದ್ದೆ. ಈಗ ಆಡಳಿತದಲ್ಲಿ ಯುವಕರಿಗೆ ಪ್ರಾಧಾನ್ಯತೆ ನೀಡಲು ಪಕ್ಷ ತೀರ್ಮಾನಿಸಿದೆ. ಅವರ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ.

ಮುಂಬರುವ 26ಕ್ಕೆ ನಡೆಯುವ ಶಾಸಕಾಂಗ ಸಭೆ ಬಗ್ಗೆ ನನಗೆ ಮಾಹಿತಿಯಿಲ್ಲ. ಶಾಸಕಾಂಗ ಸಭೆ ನಡೆದರೆ ಅದರಲ್ಲಿ ವಿಶೇಷವೇನೂ ಇಲ್ಲ. ಎಲ್ಲಿವರೆಗೆ ಸಂಘಟನೆ ಅವಕಾಶ ನೀಡುತ್ತದೆಯೋ ಅಲ್ಲಿಯವರೆಗೆ ನಾನು ಅಧಿಕಾರದಲ್ಲಿರುತ್ತೇನೆ. ಬಳಿಕ ಸಂಘಟನೆ ಯಾವ ಜವಾಬ್ದಾರಿ‌ ನೀಡುತ್ತದೆಯೋ ಅದನ್ನು ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಕಳೆದ ಬಾರಿ ಬಿಜೆಪಿಗೆ ಸಂಪೂರ್ಣ ಬಹುಮತ ಬಂದಿದ್ದರೆ ಇಂದು ಈ ರೀತಿಯ ಗೊಂದಲ ಸೃಷ್ಟಿಯಾಗುತ್ತಿರಲಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತ ಪಡೆಯಲಿದೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಆಡಿಯೋ ವೈರಲ್; ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ ಸುದ್ದಿಗೋಷ್ಠಿ