ಶಿವಮೊಗ್ಗ ಕಲ್ಲು ತೂರಾಟ: ಸಿಎಂ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಉಸ್ತುವಾರಿ ಸಚಿವರ ಪಸ್ಟ್ ರಿಯಾಕ್ಷನ್
ಶಿವಮೊಗ್ಗದ ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ಸಂಜೆ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪಸ್ಟ್ ರಿಯಾಕ್ಷನ್
ಶಿವಮೊಗ್ಗ ಅ.02: ಶಿವಮೊಗ್ಗ (Shivamogga) ನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ (Eid Milad) ಮೆರವಣಿಗೆ ವೇಳೆ ಕಲ್ಲು ತೂರಾಟ (Stone Pelting) ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 40ಕ್ಕೂ ಹೆಚ್ಚು ಜನರನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮೆರವಣಿಗೆ ವೇಳೆ ಯಾರೋ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ ಎಂದು ಹೇಳಿದರು.
ಪೊಲೀಸರು, ಮನೆಗಳ ಮೇಲೆ ಕಲ್ಲು ತೂರಿದ್ದವರನ್ನು ಬಂಧಿಸಲಾಗಿದೆ. ಒಂದು ಧರ್ಮದವರ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ಲಾಠಿಚಾರ್ಜ್ ಮಾಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ನಮ್ಮ ಸರ್ಕಾರ ದೇವರು ಧರ್ಮದ ವಿಚಾರದಲ್ಲಿ ಇಂತಹ ಕೃತ್ಯ ಎಸಗುವವರನ್ನ ಸಹಿಸುವುದಿಲ್ಲ. ಹೀಗಾಗಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿಕೊಂಡರು.
ಪೊಲೀಸರು ದೊಡ್ಡ ಪ್ರಮಾಣದಲ್ಲಿ ಆಗಬೇಕಿದ್ದ ಗಲಾಟೆ ತಪ್ಪಿಸಿದ್ದಾರೆ: ಪರಮೇಶ್ವರ್
ಇದೆಲ್ಲ ಏನ್ ಹೊಸದಾಗಿ ನಡೆಯುತ್ತಿದೆಯಾ? ಪೊಲೀಸರು ದೊಡ್ಡ ಪ್ರಮಾಣದಲ್ಲಿ ಆಗಬೇಕಿದ್ದ ಗಲಾಟೆ ತಪ್ಪಿಸಿದ್ದಾರೆ. ಹಬ್ಬ ಮತ್ತಿತರೆ ಸಂದರ್ಭದಲ್ಲಿ ಬ್ಯಾನರ್ ಕಟ್ಟುತ್ತಾರೆ, ಪೋಸ್ಟರ್ ಹಾಕುತ್ತಾರೆ. ಇದನ್ನೇ ಕೆಲವರು ಅಡ್ವಾಂಟೇಜ್ ಆಗಿ ತೆಗೆದುಕೊಳ್ಳುತ್ತಾರೆ. ಶಿವಮೊಗ್ಗ ಘಟನೆಗೆ ಕಾರಣ ಏನೆಂದು ಬಹಿರಂಗಗೊಳಿಸಲು ಸಾಧ್ಯವಿಲ್ಲ. ರಾಜ್ಯದಲ್ಲಿ ಎಲ್ಲೂ ಅಹಿತಕರ ಘಟನೆ ಸಂಭವಿಸಲು ಬಿಡುವುದಿಲ್ಲ ಎಂದು ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮೆರವಣಿಗೆ ವೇಳೆ ಕತ್ತಿ ಬಳಕೆ ಬಗ್ಗೆ ನನಗೆ ಮಾಹಿತಿ ಬಂದಿಲ್ಲ. ಶಿವಮೊಗ್ಗ ಘಟನೆಗೆ ಯಾರನ್ನೂ ಹೊರಗಿನಿಂದ ಬರಲು ಬಿಟ್ಟಿಲ್ಲ. ಏನಾಗಿದೆ ಎಂದು ಗೊತ್ತಿದೆ, ಹೇಳಿಕೆ ಕೊಡುವವರು ಕೊಡುತ್ತಾರೆ. ಶಿವಮೊಗ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ ಕಟ್ಟೆಚ್ಚರ ವಹಿಸಿದ್ದೇವು. ಆರೋಪಿಗಳ ಹೆಸರು ಬಹಿರಂಗಗೊಳಿಸುವುದಿಲ್ಲ, ನಿಮಗೂ ಹೇಳಲ್ಲ. ಅನುಮತಿ ಇಲ್ಲದೆ ಆಗಿದೆ. ಇಂತಹದ್ದಕ್ಕೆಲ್ಲ ಪ್ರಚೋಚನೆ ನೀಡುವುದಿಲ್ಲ ಎಂದರು.
ಇದನ್ನೂ ಓದಿ: 4 ವರ್ಷದ ಮಗು ಕೂದಲೆಳೆ ಅಂತರದಲ್ಲಿ ಪಾರು ! ರಾಗಿಗುಡ್ಡದ ಕಲ್ಲು ತೂರಾಟದ ಕರಾಳತೆ ಬಿಚ್ಚಿಟ್ಟ ಹಿಂದೂಗಳು
12 ಜನರಿಗೆ ಸಣ್ಣಪುಟ್ಟ ಗಾಯ
ಈದ್ ಮಿಲಾದ್ ಹಬ್ಬ, ಗಣೇಶ ವಿಸರ್ಜನೆ ಎರಡೂ ಒಟ್ಟಿಗೆ ಬಂದಿತ್ತು. ಎರಡು ಸಮುದಾಯದ ಮುಖಂಡರನ್ನು ಕರೆದು ಶಾಂತಿ ಸಭೆ ಮಾಡಿದ್ದೇವು. ಅ.1ಕ್ಕೆ ಈದ್ ಮಿಲಾದ್ ಮೆರವಣಿಗೆ ಮಾಡುತ್ತೇವೆ ಎಂದು ಹೇಳಿದ್ದರು. ಶಿವಮೊಗ್ಗದಲ್ಲಿ ಗಣೇಶ ಹಬ್ಬವನ್ನೂ ಅದ್ಧೂರಿಯಾಗಿ ಆಚರಣೆ ಮಾಡಿದರು. ಯಾರೋ ಒಂದಿಷ್ಟು ಕಿಡಿಗೇಡಿಗಳು ಕಲ್ಲುತೂರಾಟ ಮಾಡಿದ್ದಾರೆ. ಕಲ್ಲು ತೂರಾಟ ವೇಳೆ ಸುಮಾರು 12 ಜನರಿಗೆ ಸಣ್ಣಪುಟ್ಟ ಗಾಯವಾಗಿದೆ. ಕಿಡಿಗೇಡಿಗಳನ್ನು ವಶಕ್ಕೆ ಪಡೆಯಲಾಗಿದೆ, ಎಲ್ಲವನ್ನೂ ಈಗಲೇ ಹೇಳಲಾಗಲ್ಲ ಎಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:00 am, Mon, 2 October 23