ಚಿಕ್ಕಮಗಳೂರು: ಆ ಭಾಗದ ಲಕ್ಷಾಂತರ ರೈತರು ನಮ್ಮೂರ ಕೆರೆಗಳು ಇಂದಲ್ಲ ನಾಳೆ ತುಂಬುತ್ತೆ ಅಂತಾ ಕಾದಿದ್ದೇ ಬಂತು. ಮಳೆಯೂ ಬರ್ಲಿಲ್ಲ, ಕೆರೆಯೂ ತುಂಬಲಿಲ್ಲ. ದಶಕಗಳಿಂದಲೂ ವರುಣನ ಅವಕೃಪೆಗೆ ಪಾತ್ರರಾದ ರೈತರು, ಭವಿಷ್ಯದ ಆಸೆಯನ್ನ ಕೈ ಬಿಟ್ಟಿದ್ರು. ಆದ್ರೆ ಭರವಸೆ ಕಳೆದುಕೊಂಡಿದ್ದ ಅನ್ನದಾತರ ಬಾಳಲ್ಲಿ ಹೊಸ ಉತ್ಸಾಹ ಮೂಡಿದೆ. ಜನಪ್ರತಿನಿಧಿಗಳು, ಸರ್ಕಾರ ಅಂದ್ರೆ ಕೆಂಡಕಾರುತ್ತಿದ್ದ ರೈತ, ಇದೀಗ ಸಂಪೂರ್ಣ ಕೂಲ್ ಕೂಲ್ ಆಗಿದ್ದಾನೆ.
ಬತ್ತಿದ ಕೆರೆಗಳಿಗೆ 1281 ಕೋಟಿ ರೂ..
ಚಿಕ್ಕಮಗಳೂರು ಅಂದ್ರೆ ನೆನಪಾಗೋದು ಹಚ್ಚ ಹಸಿರಿನಿಂದ ನಳನಳಿಸೋ ಕಾಫಿ ತೋಟಗಳು.! ಇಂಪಾದ ವಾತಾವರಣ, ತುಂಬಿ ಹರಿಯುತ್ತಿರೋ ನದಿ, ಕೆರೆ, ಫಾಲ್ಸ್ ಗಳು.! ಸುಂದರ, ರಮಣೀಯ ಪ್ರಕೃತಿ..! ಪ್ರವಾಸಿಗರ ಹಾಟ್ ಸ್ಪಾಟ್ ಅಂತಾ ಕರೆಯಿಸಿಕೊಳ್ಳೋ ಕಾಫಿನಾಡಿಗೆ ಇನ್ನೊಂದು ಮಗ್ಗುಲು ಕೂಡ ಇದೆ. ಅದೇ ಬರದ ಬೀಡಿನ ರೈತರ ನೋವಿನ ಕಥೆ-ವ್ಯಥೆ. ಶಾಶ್ವತ ಬರದ ಬೀಡು ಅಂತಾ ಕರೆಯಿಸಿಕೊಳ್ಳೋ ಕಡೂರು ತಾಲೂಕು ಮಳೆ ಕಾಣೋದೇ ಅಪರೂಪ.
ಹಾಗಾಗಿ ಈ ಭಾಗದ ಕೆರೆಗಳೆಲ್ಲಾ ಒಣಗಿ ಹೋಗಿದ್ದವು. ಒಣಗಿ ಹೋಗೋದು ಏನು, ಕೆಲವೆಡೆ ಕೆರೆಗಳೇ ಕಾಣೆಯಾಗಿದ್ದವು. ಯಾಕಂದ್ರೆ ಮಳೆ ಇಲ್ಲದ ಹಿನ್ನೆಲೆ, ನೀರಿಲ್ಲದೇ ಕೆರೆ ಪ್ರದೇಶಗಳೇ ಮಾಯವಾಗಿದ್ದವು. ಈ ಕೆರೆಗಳನ್ನೇ ನಂಬಿಕೊಂಡು ಕೃಷಿ ಮಾಡ್ತಿದ್ದ ರೈತರ ಬದುಕಂತೂ ಮೂರಾ ಬಟ್ಟೆಯಾಗಿತ್ತು. ಇನ್ನೇನು ಭವಿಷ್ಯದ ಆಸೆಯನ್ನೇ ಬಿಟ್ಟಿದ್ದ ಅನ್ನದಾತರ ಬಾಳಲ್ಲಿ ಇದೀಗ ಭರವಸೆಯ ಕಿರಣ ಮೂಡಿದೆ. ಒಟ್ಟು 197 ಕೆರೆಗಳನ್ನು ತುಂಬಿಸಲು 1,281 ಕೋಟಿ ರೂಪಾಯಿ ಒದಗಿಸಲು ಅನುಮೋದನೆ ನೀಡಿದೆ.
ಕಡೂರು ತಾಲೂಕಿಗೆ ಸಿಂಹಪಾಲು.. ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಕೆರೆಗಳು ಬತ್ತಿ ಹೋಗಿರೋದು ಕಡೂರು ತಾಲೂಕಿನಲ್ಲಿ. ಹೀಗಾಗಿ ಕಡೂರು ತಾಲೂಕಿನ ಬತ್ತಿಹೋದ 114 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ತೀರ್ಮಾನಿಸಿದೆ. ಕಡೂರು ತಾಲೂಕಿನ 114 ಕೆರೆಗಳು ಸೇರಿದಂತೆ, ಚಿಕ್ಕಮಗಳೂರು ತಾಲೂಕಿನ 48, ತರೀಕೆರೆ ತಾಲೂಕಿನ 31 ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿದೆ.
ಇದಿಷ್ಟೇ ಅಲ್ಲದೇ ಪಕ್ಕದ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 4 ಕೆರೆಗಳಿಗೂ ನೀರು ತುಂಬಿಸಲು ಸರ್ಕಾರ ಮನಸ್ಸು ಮಾಡಿದೆ. ಒಟ್ಟು 197 ಕೆರೆಗಳಿಗೆ 1281 ಕೋಟಿ ವೆಚ್ಚದಲ್ಲಿ ನೀರು ತುಂಬಿಸಲು ಸರ್ಕಾರ ಅನುಮೋದನೆ ಹೊರಡಿಸಿದ್ದು, ಈ ಭಾಗದ ರೈತರ ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
4 ಹಂತಗಳಲ್ಲಿ ನೀರು ತುಂಬಿಸುವ ಕಾರ್ಯ..
ಕೆರೆಯ ಶೇಖರಣಾ ಸಾಮರ್ಥ್ಯದ ಶೇಕಡಾ 50 ರಷ್ಟು ನೀರು ತುಂಬಿಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಅಂತರ್ಜಲ ಅಭಿವೃಧಿಯಾಗುದಲ್ಲದೇ ಕೃಷಿ ಚಟುವಟಿಕೆಗಳಿಗೂ ಕೂಡ ಸಹಾಯವಾಗಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದ್ದು, ಮೊದಲ ಹಂತದಲ್ಲಿ 32 ಕೆರೆಗಳನ್ನ ತುಂಬಿಸಲು 406 ಕೋಟಿ, ಎರಡನೇ ಹಂತದಲ್ಲಿ 66 ಕೆರೆಗಳನ್ನ ತುಂಬಿಸಲು 299 ಕೋಟಿ, 3ನೇ ಹಂತದಲ್ಲಿ 99 ಕೆರೆಗಳನ್ನ ತುಂಬಿಸಲು 477 ಕೋಟಿ, 4ನೇ ಹಂತದಲ್ಲಿ 100 ಕೋಟಿ ವೆಚ್ಚದಲ್ಲಿ ಕೆರೆಗಳನ್ನ ತುಂಬಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ.
ಸದ್ಯದಲ್ಲೇ ತುಂಬಲಿವೆ ಕೆರೆಗಳು, ರೈತರು ಫುಲ್ ಖುಷ್.. ಹತ್ತಾರು ವರ್ಷಗಳಿಂದ ನಮ್ಮೂರ ಕೆರೆಗಳನ್ನ ತುಂಬಿಸಿ ಅಂತಾ ರೈತರು ಜನಪ್ರತಿನಿಧಿಗಳು, ಅಧಿಕಾರಿಗಳು, ಸರ್ಕಾರದ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ರು. ಆದ್ರೆ ಅದೆಲ್ಲಾ ಕೇವಲ ಭರವಸೆಯಾಗಿಯೇ ಉಳಿಯಿತೇ ಹೊರತು, ಈಡೇರಲಿಲ್ಲ. ಸದ್ಯ ನಮ್ಮೂರ ಕೆರೆಗಳು ತುಂಬುತ್ತೆ ಅನ್ನೋ ಸುದ್ದಿ ಕೇಳಿ ಅನ್ನದಾತ ಫುಲ್ ಖುಷ್ ಆಗಿದ್ದಾನೆ. ಸದ್ಯ ಕಡೂರಿನ ಶಾಸಕರಾಗಿರುವ ಬೆಳ್ಳಿ ಪ್ರಕಾಶ್ ಕಾರ್ಯವೈಖರಿಯನ್ನ ರೈತರು ಶ್ಲಾಘಿಸಿದ್ದಾರೆ.
ಬರದ ನಾಡಿನ ಕೆರೆಗಳಿಗೆ ನೀರು ತುಂಬಿಸಲು ಶ್ರಮಿಸಿದ “ಭಗೀರಥ” ಶಾಸಕನಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕೆರಗಳಿಗೆ ಭದ್ರಾ ಕಣಿವೆಯಿಂದ ನೀರು ತುಂಬಿಸಲು ಯೋಜನೆ ಸಿದ್ದಪಡಿಸಲಾಗಿದ್ದು, 2025ರ ಒಳಗಡೆ ಕೆರೆ ತುಂಬಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಕೃಷಿ ಮಾಡಲು ನೀರಿಲ್ಲದೇ ಭರವಸೆಯನ್ನೇ ಕಳೆದುಕೊಂಡಿದ್ದ ರೈತರಿಗಂತೂ ಹೋದ ಜೀವನೇ ಬಂದಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಮರೀಚಿಕೆಯಾಗಿದ್ದ ಮಳೆರಾಯ.. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾದ್ರೂ ಬಯಲು ಸೀಮೆಯ ಪ್ರದೇಶವಾದ ಕಡೂರು ತಾಲೂಕು ಸೇರಿದಂತೆ ತರೀಕೆರೆ ಹಾಗೂ ಚಿಕ್ಕಮಗಳೂರು ತಾಲೂಕಿನ ಕೆಲ ಭಾಗಗಳಲ್ಲಿ ಮಳೆ ಅನ್ನೋದು ಮರೀಚಿಕೆಯಾಗಿತ್ತು. ಹಾಗಾಗೀ ಈ ಭಾಗದ ರೈತರು ಮಳೆಗಾಗಿ ದೇವರ ಬಳಿ ಕೇಳದ ದಿನಗಳಿಲ್ಲ, ಸರ್ಕಾರಗಳ ಬಳಿ ಮಾಡದ ಮನವಿಗಳಿಲ್ಲ.
ಕೊನೆಗೂ ದೇವರು ಕರುಣೆ ತೋರಿಸಿದ್ದಾನೋ..? ಜನಪ್ರತಿನಿಧಿಗಳೇ ಎಚ್ಚೆತ್ತುಕೊಂಡಿದ್ದಾರೋ..? ಗೊತ್ತಿಲ್ಲ. ಒಟ್ನಲ್ಲಿ ಬತ್ತಿ ಹೋದ ಕೆರೆಗಳಿಗೆ ಸದ್ಯದಲ್ಲೇ ನೀರು ಬರೋದಂತೂ ಪಕ್ಕಾ ಆಗಿದೆ. -ಪ್ರಶಾಂತ್