ಹವಾಮಾನ ಇಲಾಖೆ ಹೇಗೆ ಕೆಲಸ ಮಾಡುತ್ತದೆ? ಮಳೆ ಮುನ್ಸೂಚನೆಗೆ ಈಗ ಬಳಸುತ್ತಿರುವ ತಂತ್ರಜ್ಞಾನ ಯಾವುದು?

ಹವಾಮಾನ ಇಲಾಖೆ ನೀಡುವ ಮಳೆ ಮುನ್ಸೂಚನೆಗಳು ಬಹುತೇಕ ಸಮಯದಲ್ಲಿ ಸುಳ್ಳಾಗುತ್ತವೆ ಈ ಬಗ್ಗೆ ಹಲವು ಜೋಕುಗಳೆ ಚಾಲ್ತಿಯಲ್ಲಿವೆ. ಹಾಗಿದ್ದರೆ ಈ ಇಲಾಖೆ ಹವಾಮಾನ ಮುನ್ಸೂಚನೆ ನೀಡಲು ಬಳಸುವ ತಂತ್ರಜ್ಞಾನ ಯಾವುದು? ಮಳೆ ಮುನ್ಸೂಚನೆಗಳು ಸುಳ್ಳಾಗುವುದೇಕೆ? ಈ ಬಗ್ಗೆ ವಿವರವಾಗಿ ವಿಜ್ಞಾನಿ ಕುವಿ ಅರಸನ್ ಮಾತನಾಡಿದ್ದಾರೆ.

Follow us
ಮಂಜುನಾಥ ಸಿ.
| Updated By: ಸಾಧು ಶ್ರೀನಾಥ್​

Updated on:Apr 27, 2024 | 5:13 PM

‘ಹವಾಮಾನ ಇಲಾಖೆ ಕೊಡುವ ಮಳೆ ಮುನ್ಸೂಚನೆ ನಿಜವಾಗುತ್ತದೆ ಎಂದರೆ ನಂಬಬಹುದೇನೋ, ಆರ್​ಸಿಬಿ ಕಪ್ ಗೆಲ್ಲುತ್ತದೆ ಎಂದರೆ ನಂಬಲಾಗದು’ ಸಾಮಾಜಿಕ ಜಾಲತಾಣದಲ್ಲಿಈ ರೀತಿಯ ಜೋಕ್​ಗಳು ಆಗಾಗ್ಗೆ ಹರಿದಾಡುತ್ತಿರುತ್ತವೆ. ಈ ಜೋಕ್​ನಲ್ಲಿ ಆರ್​ಸಿಬಿ ಭಾಗವನ್ನು ಬಿಟ್ಟು ಗಮನಿಸಿದರೆ ಹವಾಮಾನ ಇಲಾಖೆ ಬಗ್ಗೆ ಜನರಿಗೆ ಇರುವ ಅಪನಂಬಿಕೆ, ತಾತ್ಸಾರದ ಅರಿವಾಗುತ್ತದೆ. ಇದು ಮಾತ್ರವಲ್ಲ ಹವಾಮಾನ ಇಲಾಖೆ ನೀಡುವ ಮುನ್ಸೂಚನೆಗಳು ಸುಳ್ಳಾಗುವ ಬಗ್ಗೆ ಹಲವು ಜೋಕ್​ಗಳು ಚಾಲ್ತಿಯಲ್ಲಿವೆ. ಹವಾಮಾನ ಇಲಾಖೆಯ ಮುನ್ಸೂಚನೆಗಳು ಸುಳ್ಳಾಗುವುದೇಕೆ? ಇಲಾಖೆಯ ಅಧಿಕಾರಿಗಳು ಸುಮ್ಮನೆ ಆಕಾಶ ನೋಡಿ ಮುನ್ಸೂಚನಾ ವರದಿ ನೀಡುತ್ತಾರೆಯೇ? ವರದಿ ನೀಡಲು ಇಲಾಖೆ ಬಳಸುವ ತಂತ್ರಜ್ಞಾನಗಳು ಯಾವುವು? ಹವಾಮಾನದ ಗುಣ ಅಳೆಯುವ ಮಾಪನಗಳು ಯಾವುವು? ಮುನ್ಸೂಚನೆಗಳು ವಿಫಲವಾಗುವುದು ಏಕೆ? ಎಲ್ಲ ವಿಷಯಗಳ ಬಗ್ಗೆ ಬೆಂಗಳೂರಿನ ಹವಾಮಾನ ಇಲಾಖೆ ಮುಖ್ಯಸ್ಥ ವಿಜ್ಞಾನಿ ಕುವಿ ಅರಸನ್ ವಿವರವಾಗಿ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಭೂ ವಿಜ್ಞಾನ ಇಲಾಖೆಯ ಅಡಿಯಲ್ಲಿ ಕೆಲಸ ಮಾಡುವ ಮೆಟ್ರೊಲೊಜಿ ಅಥವಾ ಹವಾಮಾನ ಮುನ್ಸೂಚನೆ ಮತ್ತು ಮಾಪನ ವಿಭಾಗವು ಕೇವಲ ಮಳೆ ಮುನ್ಸೂಚನೆಗಳನ್ನು ಮಾತ್ರವೇ ನೀಡುವುದಿಲ್ಲ. ಈ ವಿಭಾಗವು ರೈತರಿಗೆ ಮಳೆ ಮುನ್ಸೂಚನೆ ನೀಡುವ ಜೊತೆಗೆ ದೇಶದ ಪ್ರತಿಯೊಂದು ವಿಮಾನ ನಿಲ್ದಾಣದಲ್ಲಿ ಪ್ರತಿ ಅರ್ಧಗಂಟೆಗೊಮ್ಮೆ ಹವಾಮಾನ ಮಾಹಿತಿ ನೀಡುತ್ತದೆ. ದೇಶದ ಎಲ್ಲ ವಿಮಾನ ನಿಲ್ದಾಣದಲ್ಲಿ ಹವಾಮಾನ ಇಲಾಖೆಯ ಕಚೇರಿ ಇದೆ. ಅಣೆಕಟ್ಟೆ ನೀರಿನ ಮಟ್ಟ ನಿಗಾ, ಸ್ಯಾಟಲೈಟ್ ಮಾಪನ, ಅಂತರ್ಜಲದ ಅಧ್ಯಯನ, ಭೂಕಂಪನ ಮಾಪನ ಇನ್ನೂ ಕೆಲವು ಕಾರ್ಯಗಳು ಈ ಸಂಸ್ಥೆಯ ಕಾರ್ಯಮಿತಿಯಲ್ಲಿ ಬರುತ್ತವೆ. ಈ ಇಲಾಖೆ ನೀಡುವ ಹವಾಮಾನ ಮುನ್ಸೂಚನೆಯನ್ನು ದೇಶದ ಹಲವು ಇಲಾಖೆಗಳು, ಕೈಗಾರಿಕೆಗಳು, ಉದ್ಯಮಗಳು ಬಳಸಿಕೊಳ್ಳುತ್ತವೆ. ವಿಮಾನ ಹಾರಾಟದಲ್ಲಿ ಹವಾಮಾನ ಇಲಾಖೆ ನೀಡುವ ವರದಿ ಅತ್ಯಂತ ಮಹತ್ವದ್ದಾಗಿರುತ್ತದೆ. ಗಾಳಿಯ ವೇಗ, ವಾತಾವರಣದ ಒತ್ತಡ, ಗಾಳಿಯ ಶಾಖ ಇತ್ಯಾದಿ ಮಾಹಿತಿಗಳನ್ನು ಹವಾಮಾನ ಇಲಾಖೆ ವಿಮಾನ ನಿಲ್ದಾಣಗಳಿಗೆ ಒದಗಿಸುತ್ತದೆ. ಮೀನುಗಾರರು, ಬೃಹತ್ ಹಡುಗುಗಳಿಗೂ ಸಹ ಸಮುದ್ರದ ವರ್ತನೆ ಬಗೆಗಿನ ಹಲವು ಮಾಹಿತಿಗಳನ್ನು ಒದಗಿಸುತ್ತದೆ. ಅಲೆಗಳ ಚಲನೆ, ಗಾಳಿಯ ಚಲನೆ ಇತ್ಯಾದಿ ಮಾಹಿತಿಗಳನ್ನು ನೀಡುತ್ತದೆ. ವಿಐಪಿಗಳಿಗೆ ವಾತಾವರಣ ಮುನ್ಸೂಚನೆ ನೀಡುತ್ತದೆ. ಪ್ರವಾಸೋದ್ಯಮ ಇಲಾಖೆಗೆ ಮಾಹಿತಿ ನೀಡುತ್ತದೆ. ವಿದ್ಯುತ್ ಉತ್ಪಾದಿಸುವ ವಿಂಡ್ ಮಿಲ್​ ಬಳಕೆಯಲ್ಲಿಯೂ ಹವಾಮಾನ ಇಲಾಖೆ ನೀಡುವ ಮಾಹಿತಿ ಮುಖ್ಯ ಪಾತ್ರ ವಹಿಸುತ್ತದೆ.

ವಿಜ್ಞಾನಿ ಎನ್ ಕುವಿ ಅರಸನ್ ವಿವರಿಸುವಂತೆ ಹವಾಮಾನ ಮುನ್ಸೂಚನೆ ನೀಡಲು ನಾಲ್ಕು ಪ್ರಮುಖವಾದ ವಿಧಾನಗಳನ್ನು ಬಳಸಲಾಗುತ್ತದೆ. ಸ್ಪೇಸ್ ಅಬಸರ್ವೇಷನ್ (ಅಂತರಿಕ್ಷ), ಗ್ರೌಂಡ್ ಅಬ್ಸರ್ವೇಷನ್ (ನೆಲದ ಮೇಲೆ), ಅಪ್ಪರ್ ಏರ್ (ನೆಲದಿಂದ ಮೇಲ್ಭಾಗ), ಸರ್ಫೇಸ್ ಲೆವೆಲ್ ಅಬ್ಸರ್ವೇಷನ್ (ನೆಲಮಟ್ಟ). ಇಷ್ಟೂ ಮಾದರಿಯಿಂದ ಪಡೆಯಲಾದ ಮಾಹಿತಿಯನ್ನು ಒಟ್ಟುಗೂಡಿಸಿ ಅದರಿಂದ ಬರುವ ಫಲಿತಾಂಶದ ಆಧಾರದ ಮೇಲೆ ಹವಾಮಾನ ಮುನ್ಸೂಚನೆ ನೀಡಲಾಗುತ್ತದೆ. ಸ್ಪೇಸ್ ಅಬ್ಸರ್ವೇಷನ್​ನಲ್ಲಿ ಸ್ಯಾಟಲೈಟ್​ಗಳು ನೀಡುವ ಮಾಹಿತಿಯನ್ನು ಪಡೆಯಲಾಗುತ್ತದೆ. ಭಾರತದ್ದೇ ಆದ ಇನ್​ಸ್ಯಾಟ್ ಸೀರೀಸ್ ಸ್ಯಾಟಲೈಟ್​ಗಳು ಅಂತರಿಕ್ಷದಲ್ಲಿದ್ದು ಅವುಗಳ ಮೂಲಕ ಮಾಹಿತಿ ರವಾನೆ ಆಗುತ್ತದೆ. ಪ್ರಸ್ತುತ ಇನ್​ಸ್ಯಾಟ್ 3ಡಿ, ಇನ್​ಸ್ಯಾಟ್ 3ಡಿಆರ್ ಸ್ಯಾಟಲೈಟ್​ನಿಂದ ಮಾಹಿತಿ ತರಿಸಿಕೊಳ್ಳಲಾಗುತ್ತಿದೆ. ಇನ್​ಸ್ಯಾಟ್ 3ಡಿಎಕ್ಸ್ ಸ್ಯಾಟಲೈಟ್​ ಕೆಲ ತಿಂಗಳ ಹಿಂದಷ್ಟೆ ಉಡಾವಣೆ ಮಾಡಲಾಗಿದ್ದು ಅದಿನ್ನೂ ಪರೀಕ್ಷಾ ಹಂತದಲ್ಲಿದೆ. ಸ್ಯಾಟಲೈಟ್​ಗಳು ಕಳಿಸುವ ಚಿತ್ರ ಇನ್ನಿತರೆ ಮಾಹಿತಿಗಳನ್ನು ದೆಹಲಿ ಹಾಗೂ ಅಹ್ಮದಾಬಾದ್ ಕೇಂದ್ರಗಳು ಪಡೆದುಕೊಂಡು ಅವನ್ನು ಸಂಸ್ಕರಿಸಿ ಇತರೆ ಭಾಗಗಳಿಗೆ ಹಂಚಿಕೆ ಮಾಡುತ್ತದೆ.

ಗ್ರೌಂಡ್ ಲೆವೆಲ್ ಅಬ್ಸರ್ವೇಷನ್​ ನಲ್ಲಿ ಅತ್ಯಾಧುನಿಕ ರಡಾರ್​ಗಳನ್ನು ಬಳಸಿ ಹವಾಮಾನದ ಮಾಪನ ಮಾಡಲಾಗುತ್ತದೆ. ಸ್ಪೇಸ್ ಅಬ್ಸರ್ವೇಷನ್​ಗಿಂತಲೂ ಗ್ರೌಂಡ್ ಲೆವೆಲ್ ಅಬ್ಸರ್ವೇಷನ್ ಪರಿಣಾಮಕಾರಿ ಎನ್ನುತ್ತಾರೆ ವಿಜ್ಞಾನಿ ಕುವಿ ಅರಸನ್. ಸ್ಯಾಟಲೈಟ್ ಕಳಿಸುವ ಚಿತ್ರ ಹಾಗೂ ಮಾಹಿತಿಗಳಲ್ಲಿ ಕೆಲವು ಕೊರತೆಗಳಿರುತ್ತವೆ. ನಿಖರವಾದ ಮಾಹಿತಿಯನ್ನು ಸ್ಯಾಟಲೈಟ್​ ನೀಡಲಾರವು. ಅದಕ್ಕೆ ಅದರದ್ದೇ ಆದ ಕೆಲವು ಮಿತಿಗಳಿವೆ. ಆದರೆ ರಡಾರ್​ಗಳು ಉತ್ತಮವಾದ, ನಿಖರವಾದ ಮಾಹಿತಿಯನ್ನು ಪಡೆದು ರವಾನಿಸಬಲ್ಲವು. ಭಾರತದಲ್ಲಿ ಡ್ಯೂಯಲ್ ಪೋಲ್ ಡಾಪ್ಲರ್ ವೆದರ್ ರಡಾರ್ ಗಳನ್ನು ಹವಾಮಾನ ಮಾಹಿಗಾಗಿ ಬಳಸಲಾಗುತ್ತಿದ್ದು, ಭಾರತದಾದ್ಯಂತ ಸದ್ಯಕ್ಕೆ 39 ಡಾಪ್ಲರ್ ರಡಾರ್​ಗಳು ಕೆಲಸ ಮಾಡುತ್ತಿವೆ. ಕರ್ನಾಟಕಕ್ಕೆ ಹತ್ತಿರದಲ್ಲಿರುವ ಮಹಾರಾಷ್ಟ್ರದ ಸೊಲ್ಲಾಪುರ, ಗೋವಾ ಹಾಗೂ ಹೈದರಾಬಾದ್​ನಲ್ಲಿ ಡಾಪ್ಲರ್​ ರಡಾರ್​ಗಳು ಕಾರ್ಯ ನಿರ್ವಹಿಸುತ್ತಿವೆ. 8000 ಕೆಜಿ ತೂಗುವ ಈ ರಡಾರ್​ಗಳು ತಮ್ಮ ಸಾಮರ್ಥ್ಯಕ್ಕೆ ಅನುಸಾರವಾಗಿ ಸುಮಾರು 400 ಚದರ ಕಿ.ಮೀ ವರೆಗೆ ವಾತಾವರಣದ ನಿಖರ ಮಾಹಿತಿ ಒದಗಿಸಬಲ್ಲದು. ಎಸ್ ಬ್ಯಾಂಡ್, ಸಿ ಬ್ಯಾಂಡ್, ಎಕ್ಸ್ ಬ್ಯಾಂಡ್ ಮಾದರಿಯ ರಡಾರ್​ಗಳು ಕಾರ್ಯನಿರ್ವಹಿಸುತ್ತಿದ್ದು ಕೆಲವು ರಡಾರ್​ಗಳ ವ್ಯಾಪ್ತಿ ಕಿರಿದಾಗಿರುತ್ತದೆ.

ಅಪ್ಪರ್ ಏರ್ ಅಬ್ಸರ್ ವೇಷನ್ ಅಥವಾ ನೆಲದಿಂದ ಮೇಲ್ಭಾಗದ ಅಧ್ಯಯನ ಮತ್ತು ಮಾಹಿತಿ ಸಂಗ್ರಹಕ್ಕೆ ಬಲೂನ್ ಮಾದರಿಯನ್ನು ಬಳಸಲಾಗುತ್ತದೆ. ಹೈಡ್ರೋಜನ್ ಬಲೂನಿಗೆ ಹಗುರವಾದ ಹಾಗೂ ಚಿಕ್ಕದಾದ ಯಂತ್ರವೊಂದನ್ನು ಕಟ್ಟಿ ಹಾರಿಬಿಡಲಾಗುತ್ತದೆ. ಅದು ಭೂಮಿಯಿಂದ ಎತ್ತರಕ್ಕೆ ಹೋಗುವ ಪ್ರತಿ ಹಂತದಲ್ಲಿಯೂ ಗಾಳಿಯ ವೇಗ, ವಾತಾವರಣದಲ್ಲಿನ ತೇವಾಂಶ, ಗಾಳಿ ಬೀಸುತ್ತಿರುವ ದಿಕ್ಕು, ಮೋಡಗಳ ರಚನೆ, ಮೋಡಗಳ ಸಾಂದ್ರತೆ ಇನ್ನೂ ಹಲವು ಅಂಶಗಳ ಬಗ್ಗೆ ಮಾಹಿತಿ ಪಡೆದು ರವಾನಿಸುತ್ತದೆ. ಇನ್ನು ನೆಲಮಟ್ಟದ ಅಥವಾ ಸರ್ಪೇಸ್ ಅಬ್ಸರ್ವೇಶನ್​ನಲ್ಲಿ ಮಣ್ಣು ತೆಗೆದು ಅದರಲ್ಲಿನ ತೇವಾಂಶ ಇನ್ನಿತರೆ ಅಂಶಗಳ ಅಧ್ಯಯನ ಮಾಡಲಾಗುತ್ತದೆ. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯ (ಜಿಕೆವಿಕೆ)ಯಲ್ಲಿ ಪ್ರತಿದಿನವೂ ಈ ಕ್ರಿಯೆ ನಡೆಯುತ್ತದೆ. ಅದರ ಮಾಹಿತಿಯನ್ನು ಮೆಟ್ರಾಲಜಿ ಕಚೇರಿಗೆ ರವಾನಿಸಲಾಗುತ್ತದೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಬೇರೆ ಬೇರೆ ತಂತ್ರಜ್ಞಾನಗಳ ಮೂಲಕ ಪಡೆದ ಮಾಹಿತಿಯನ್ನು ಕಂಪ್ಯೂಟರ್​ನ ನ್ಯೂಮರಿಕಲ್ ಮಾಡೆಲ್​ಗೆ ಒಳಪಡಿಸಲಾಗುತ್ತದೆ. ಎಲ್ಲವನ್ನೂ ಅಳೆದು ತೂಗಿ ಒಂದು ನಿರ್ದಿಷ್ಟ ಫಲಿತಾಂಶವನ್ನು ಕಂಪ್ಯೂಟರ್ ನೀಡುತ್ತದೆ. ಹಾಗೆ ಬಂದ ಫಲಿತಾಂಶದ ಆಧಾರದ ಮೇಲೆ ಹವಾಮಾನ ಮುನ್ಸೂಚನೆಯನ್ನು ವಿಜ್ಞಾನಿಗಳು ನೀಡುತ್ತಾರೆ.

ವರ್ಷದಿಂದ ವರ್ಷಕ್ಕೆ ಹವಾಮಾನ ಇಲಾಖೆ ಹೆಚ್ಚು ಸುಧಾರಣೆಗೊಳ್ಳುತ್ತಿದೆ. ತಂತ್ರಜ್ಞಾನ ಬೆಳೆದಂತೆ ಹವಾಮಾನ ಮುನ್ಸೂಚನೆ ನೀಡಲು ಹೊಸ ಟೂಲ್​ಗಳು ದೊರಕುತ್ತಿವೆ. ಹೆಚ್ಚು ಹೆಚ್ಚು ನಿಖರತೆ ಸಾಧ್ಯವಾಗುತ್ತಿದೆ. ಆದರೂ ನಾವು ಹೆಚ್ಚಿನ ನಿಖರತೆ ಸಾಧಿಸಲು ಇನ್ನೂ ಸಾಕಷ್ಟು ಸಮಯ ಬೇಕು ಎನ್ನುತ್ತಾರೆ ಕುವಿ ಅರಸನ್. ‘ನಾವು ಹೆಚ್ಚು ಹೆಚ್ಚು ಮಾಹಿತಿಯನ್ನು ಸಂಗ್ರಹಿಸಿ ನ್ಯೂಮರಿಕಲ್ ಮಾಡೆಲ್​ಗೆ ಒಳಪಡಿಸಿದಷ್ಟೂ, ನಿಖರತೆ ಹೆಚ್ಚುತ್ತಾ ಹೋಗುತ್ತದೆ. ಈಗಿನ ವರದಿಗಳ ಜೊತೆಗೆ ಹಿಂದಿನ ಮಾಹಿತಿಗಳನ್ನು ತಾಳೆ ಮಾಡಿ ನ್ಯೂಮರಿಕಲ್ ಮಾಡೆಲ್ ಫಲಿತಾಂಶ ನೀಡುತ್ತದೆ. ಆದರೆ ಈ ಡಾಟಾ ಕ್ರೂಡೀಕರಣವನ್ನು ನಾವು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡಬೇಕಿದೆ. ನಾವು ನೀಡಿರುವ ಮುನ್ಸೂಚನೆ ಸರಿ ಆಗಿದೆಯೇ ಇಲ್ಲವೇ ಎಂಬ ಮಾಹಿತಿ ನಮಗೆ ಹಿಂದಿರುಗಿ ಬರುತ್ತಿಲ್ಲ. ಈ ಸಮಸ್ಯೆಯನ್ನು ನಾವು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕಿದೆ. ಯಾವುದೋ ಒಂದು ಪ್ರದೇಶದಲ್ಲಿ ಮಳೆಯಾಗುತ್ತದೆ ಎಂದಿರುತ್ತೇವೆ. ಅಲ್ಲಿ ಮಳೆ ಆಗಿದೆಯೇ? ಆಗಿದ್ದರೆ ಎಷ್ಟು ಪ್ರಮಾಣದಲ್ಲಿ, ಎಷ್ಟು ಸೆಂಟಿಮೀಟರ್ ಇನ್ನಿತರೆ ಮಾಹಿತಿಗಳನ್ನು ಕ್ರೂಡೀಕರಿಸಲು ಸಾಧನಗಳು ಕಡಿಮೆ ಇವೆ. ಕರ್ನಾಟಕ ರಾಜ್ಯ ಸರ್ಕಾರ ಈ ವಿಷಯದಲ್ಲಿ ನಮಗೆ ಸಹಾಯ ಮಾಡುತ್ತಿದೆ. ರಾಜ್ಯ ಸರ್ಕಾರ ವಿಪತ್ತು ನಿರ್ವಹಣೆ ಇಲಾಖೆಯು ಮಳೆ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದೆ. ನಾವು ಈ ವಿಷಯದಲ್ಲಿ ಸ್ವಾಲಂಬಿಗಳಾಗಬೇಕಿದೆ’ ಎನ್ನುತ್ತಾರೆ.

ಹವಾಮಾನ ಮುನ್ಸೂಚನೆಗಳು ಬಹುತೇಕ ಸುಳ್ಳಾಗುತ್ತವೆ ಎಂಬ ಆರೋಪದ ಬಗ್ಗೆ ವಿವರವಾದ ಸ್ಪಷ್ಟನೆ ನೀಡಿದ ಕುವಿ ಅರಸನ್, ‘ಮಳೆ ಮೋಡ ಸೃಷ್ಟಿಯಾಗಿ ಅದರಿಂದ ಮಳೆ ಬೀಳಲು ಹಲವಾರು ಅಂಶಗಳು ಕಾರಣವಾಗಿರುತ್ತವೆ. ಮತ್ತು ಈ ಅಂಶಗಳು ನಿಮಿಷ-ನಿಮಿಷಕ್ಕೂ ಬದಲಾಗುತ್ತಿರುತ್ತವೆ. ಹಾಗಾಗಿ ಮಳೆ ಮುನ್ಸೂಚನೆ ನಿಖರವಾಗಿರುತ್ತದೆ ಎಂದು ಎಲ್ಲ ಸಮಯದಲ್ಲಿಯೂ ಹೇಳಲಾಗದು. ಈಗ ನಾವು ನೀಡುತ್ತಿರುವ ನೌ ಕಾಸ್ಟ್ (ಪ್ರಸ್ತುತ ಹವಾಮಾನ) ವರದಿ 80% ನಿಖರವಾಗಿರುತ್ತದೆ. ಆದರೆ 24 ಗಂಟೆಗಳ ಮುನ್ಸೂಚನೆ ಸುಮಾರು 60-70% ನಿಖರವಾಗಿರುತ್ತದೆ. ಅದಕ್ಕೂ ಹೆಚ್ಚು ದಿನದ ಮುನ್ಸೂಚನೆ 40 % ಅಷ್ಟೆ ನಿಖರವಾಗಿರುತ್ತದೆ. ಮಳೆ ಮೋಡ ಸೃಷ್ಟಿಯಾಗಬೇಕೆಂದರೆ ವಾತಾವರಣದಲ್ಲಿ ತೇವಾಂಶ ಇರಬೇಕಾಗುತ್ತದೆ. ಆ ತೇವಾಂಶವನ್ನು ಭೂಮಿಯ ಶಾಖ, ಗಾಳಿ, ಬಿಸಿ ಗಾಳಿ ಮೇಲಕ್ಕೊಯ್ಯಬೇಕಾಗುತ್ತದೆ. ಅದು ಅಲ್ಲಿ ಮೋಡವಾದ ಮೇಲೆ ಅದು ಚದರದಂತೆ ಒಂದು ಹದದಲ್ಲಿ ಮಾತ್ರವೇ ಗಾಳಿ ಬೀಸಬೇಕಾಗುತ್ತದೆ. ಒಂದು ನಿಯಮಿತ ಒತ್ತಡ ಸೃಷ್ಟಿಯಾದ ಬಳಿಕವಷ್ಟೆ ಮಳೆಯಾಗುತ್ತದೆ. ಮೇಲೆ ತಿಳಿಸಿದ ಎಲ್ಲ ಅಂಶಗಳು ಒಂದಕ್ಕೊಂದು ಸರಿಯಾಗಿ ಬೆರೆತಾಗಲಷ್ಟೆ ಮಳೆಯಾಗುತ್ತದೆ. ಈ ಅಂಶಗಳಲ್ಲಿ ಒಂದು ತಪ್ಪಿಹೋದರು ಮಳೆ ಆಗದು, ಅಲ್ಲದೆ ಈ ಅಂಶಗಳು ತಪ್ಪಿಹೋಗಲು ಸಾಕಷ್ಟು ಅವಕಾಶಗಳು ಪ್ರತಿ ನಿಮಿಷಕ್ಕೂ ವಾತಾವರಣದಲ್ಲಿ ಸೃಷ್ಟಿಯಾಗುತ್ತಲೇ ಇರುತ್ತದೆ. ಹಾಗಾಗಿ ಮಳೆ ಮುನ್ಸೂಚನೆ ಎಂಬುದು ಬಹುತೇಕ ಸಮಯದಲ್ಲಿ ತಪ್ಪಾಗುತ್ತದೆ. ಮೊಬೈಲ್​ ಸ್ಕ್ರೀನ್ ಮೇಲೆ ಕಾಣುವ ಹವಾಮಾನ ವರದಿಯನ್ನು ಸಹ ನಾವು ಬಳಸುವ ಸ್ಯಾಟಲೈಟ್​ಗಳ ಮೂಲಕವೇ ನೀಡಲಾಗುತ್ತದೆ. ಮೊಬೈಲ್ ಗಳಲ್ಲಿ ಕಾಣುವ ಹವಾಮಾನ ವರದಿ ಹೆಚ್ಚು ನಿಖರ ಎಂದು ಖಚಿತವಾಗಿ ಹೇಳಲಾಗದು’ ಎಂದಿದ್ದಾರೆ ಕುವಿ ಅರಸನ್.

Published On - 12:31 pm, Thu, 25 April 24

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ