ವಾಷಿಂಗ್ಟನ್: ವಿಶ್ವದ ಪ್ರಮುಖ ಇಲೆಕ್ಟ್ರಾನಿಕ್ ಕಾರು ತಯಾರಿಕಾ ಕಂಪೆನಿ ಟೆಸ್ಲಾ ಇನ್ಕ್ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಯ ಮುಖ್ಯಸ್ಥ ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ಟೆಸ್ಲಾ ಕಂಪೆನಿಯ ಷೇರು ಮೌಲ್ಯ ಏರಿದ್ದೇ ಇದಕ್ಕೆ ಕಾರಣ.
ವಿಶ್ವದ ಸಿರವಂತರ ಪಟ್ಟಿಯಲ್ಲಿ ಅಮೆಜಾನ್ ಸಂಸ್ಥೆಯ ಸಂಸ್ಥಾಪಕ ಜೆಫ್ ಬಿಜೋಸ್ ಹಲವು ತಿಂಗಳಿಂದ ಮೊದಲ ಸ್ಥಾನದಲ್ಲಿದ್ದರು. ಇವರನ್ನು ಎಲೋನ್ ಮಸ್ಕ್ ಹಿಂದಿಕ್ಕುವ ಮೂಲಕ ಮೊದಲ ಸ್ಥಾನಕ್ಕೇರಿದ್ದಾರೆ.
ಈ ಮೊದಲು ಸಿರಿವಂತರ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಎರಡನೇ ಸ್ಥಾನದಲ್ಲಿದ್ದರು. ಮೊದಲ ಸ್ಥಾನದಲ್ಲಿರುವ ಜೆಫ್ ಬಿಜೋಸ್ ಅವರನ್ನು ಹಿಂದಿಕ್ಕಲು ಯಾರಿಂದಲೂ ಸಾಧ್ಯವಿಲ್ಲ ಎನ್ನಲಾಗಿತ್ತು. ಆದರೆ, ಗುರುವಾರ ಟೆಸ್ಲಾ ಸಂಸ್ಥೆಯ ಷೇರು ಮೌಲ್ಯ ಶೇ. 4.8 ಏರಿಕೆ ಆಗಿದೆ. ಈ ಮೂಲಕ ಅವರ ಆಸ್ತಿ ಮೌಲ್ಯ 13.84 ಲಕ್ಷ ಕೋಟಿ ರೂಪಾಯಿಗೆ ಏರಿಕೆ ಆಗಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಜೆಫ್ ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ಟೆಸ್ಲಾ
ಇಲ್ಲೊಂದು ಅಚ್ಚರಿಯ ವಿಚಾರ ಇದೆ. 2020ರ ಆರಂಭದಲ್ಲಿ ಜಾಗತಿಕ ಸಿರಿವಂತರ ಪಟ್ಟಿಯಲ್ಲಿ ಎಲೋನ್ ಮಸ್ಕ್ 35ನೇ ಸ್ಥಾನದಲ್ಲಿದ್ದರು. ಕೇವಲ ಒಂದೇ ವರ್ಷದಲ್ಲಿ ಅವರ ಆಸ್ತಿ ಗಣನೀಯವಾಗಿ ಏರಿಕೆ ಕಂಡಿದೆ. 12 ತಿಂಗಳಲ್ಲಿ ನೂರಾರು ಬಿಲಿಯನ್ ಸಂಪಾದನೆ ಮಾಡಿದ್ದಾರೆ.
.@elonmusk is now the richest person in the world at $190 billion.
— Tesla Owners of Silicon Valley (@teslaownersSV) January 7, 2021
ಇನ್ನು, ಈ ಬಗ್ಗೆ ಟೆಸ್ಲಾ ಓನರ್ ಆಫ್ ಸಿಲಿಕಾನ್ ವ್ಯಾಲಿ ಟ್ವೀಟ್ ಮಾಡಿತ್ತು. ಎಲೋನ್ ಮಸ್ಕ್ ವಿಶ್ವದ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ ಎಂದು ಬರೆದುಕೊಂಡಿತ್ತು. ಇದಕ್ಕೆ ಉತ್ತರಿಸಿದ್ದ ಎಲೋನ್ ಎಂಥಾ ವಿಚಿತ್ರ ಎಂದಿದ್ದಾರೆ.
ಟೆಸ್ಲಾ ಹಿನ್ನೆಲೆ
ಜುಲೈ 1, 2003ರಲ್ಲಿ ಟೆಸ್ಲಾ ಕಾರು ಸಂಸ್ಥೆ ಸ್ಥಾಪನೆಗೊಂಡಿತ್ತು. ಮಾರ್ಟಿನ್ ಎಬರ್ಹಾರ್ಡ್ ಮತ್ತು ಮಾರ್ಕ್ ಟಾರ್ಪೆನ್ನಿಂಗ್ ಇದರ ಸ್ಥಾಪಕರು. ಇಯಾನ್ ರೈಟ್ ಮೂರನೇ ವ್ಯಕ್ತಿಯಾಗಿ ಟೆಸ್ಲಾ ಸೇರ್ಪಡೆಯಾದರು. ನಾಲ್ಕನೇ ವ್ಯಕ್ತಿಯಾಗಿ ಎಲೋನ್ ಕಂಪೆನಿ ಸೇರಿದರು. ಜೆ. ಬಿ. ಸ್ಟ್ರಾಬೆಲ್ ಐದನೆಯವರಾಗಿ ಟೆಸ್ಲಾಗೆ ಸೇರಿಸಿದರು. 2009ರಲ್ಲಿ ಈ ಐದು ಮಂದಿ ಟೆಸ್ಲಾದ ಕೋ ಫೌಂಡರ್ ಎಂದು ಘೋಷಣೆ ಆಗಿತ್ತು. ನಂತರ ಎಲೋನ್ ಟೆಸ್ಲಾದ ಸಿಇಒ ಆದರು.
ಭಾರತಕ್ಕೆ ಬರಲಿದೆ ಟೆಸ್ಲಾ
ಭಾರತದಲ್ಲಿ ಈ ತಿಂಗಳು ಟೆಸ್ಲಾ ಬುಕಿಂಗ್ ಆರಂಭಗೊಳ್ಳಲಿದ್ದು, ನಂತರದ ಮೂರು ತಿಂಗಳ ಒಳಗಾಗಿ ಕಾರು ಡೆಲಿವರಿ ಸಿಗುವ ಸಾಧ್ಯತೆ ಇದೆ. ಮಾಡೆಲ್ 3 ಟೆಸ್ಲಾದ ಪ್ರಾಥಮಿಕ ಮಾದರಿಯಾಗಿದೆ. ಈ ಕಾರಿನ ಬ್ಯಾಟರಿ ಸಾಮರ್ಥ್ಯ 50 kWh ನಿಂದ 75 kWh ಇದೆ.
ಈ ಕಾರು ಸದ್ಯ ಸ್ಟ್ಯಾಂಡರ್ಡ್ ರೇಂಜ್ (RWD), ಸ್ಟ್ಯಾಂಡರ್ಡ್ ರೇಂಜ್ ಪ್ಲಸ್ (RWD), ಲಾಂಗ್ ರೇಂಜ್ (AWD) ಮತ್ತು ಲಾಂಗ್ ರೇಂಜ್ ಪರ್ಫಾರ್ಮೆನ್ಸ್ (AWD) ವಿಧದಲ್ಲಿ ಲಭ್ಯವಿದೆ. ಒಮ್ಮೆ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆದರೆ, 381-580 ಕಿ.ಮೀವರೆಗೆ ಚಲಿಸಬಹುದಾಗಿದೆ. ಈ ಲಕ್ಸುರಿ ಕಾರಿನ ಬೆಲೆ ಭಾರತದ ಮಾರುಕಟ್ಟೆಯಲ್ಲಿ 55 ಲಕ್ಷ ರೂಪಾಯಿ.
ಭಾರತಕ್ಕೆ ಕಾಲಿಡೋಕೆ ಸಿದ್ಧವಾಯ್ತು ಟೆಸ್ಲಾ ಕಾರು: ಇದರ ಬೆಲೆ ಎಷ್ಟು ಗೊತ್ತಾ?