ಬೆಳಗಾವಿ ಗಡಿ: ಮಹಾಜನ್​ ವರದಿಯಲ್ಲಿ ಏನಿದೆ? ಅಲ್ಲಿನ ಜನ ಇಂದಿರಾ ಗಾಂಧಿಯನ್ನು ದೂರುವುದಾದರೂ ಯಾಕೆ? ಇಲ್ಲಿದೆ ಗಡಿ ವಿವಾದದ ಸಂಪೂರ್ಣ ಮಾಹಿತಿ

ವಾಸ್ತವವಾಗಿ ಆಯೋಗ ರಚನೆಗೆ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯಿತು. ಈಗಾಗಲೇ ರಾಜ್ಯ ಪುನರ್​ ರಚನಾ ಆಯೋಗ ಬೆಳಗಾವಿ ನಮ್ಮದೆಂದು ವರದಿ ನೀಡಿದೆ ಹಾಗಾಗಿ ಮತ್ತೊಂದು ಆಯೋಗ ಬೇಡವೆಂದು ಕನ್ನಡಿಗರು ಹೋರಾಟಕ್ಕಿಳಿದರು.

ಬೆಳಗಾವಿ ಗಡಿ: ಮಹಾಜನ್​ ವರದಿಯಲ್ಲಿ ಏನಿದೆ? ಅಲ್ಲಿನ ಜನ ಇಂದಿರಾ ಗಾಂಧಿಯನ್ನು ದೂರುವುದಾದರೂ ಯಾಕೆ? ಇಲ್ಲಿದೆ ಗಡಿ ವಿವಾದದ ಸಂಪೂರ್ಣ ಮಾಹಿತಿ
ಕರ್ನಾಟಕ ಸಿಎಂ ಯಡಿಯೂರಪ್ಪ ಹಾಗೂ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ
Follow us
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​

Updated on: Jan 29, 2021 | 4:08 PM

ಬೆಳಗಾವಿ: ಕರ್ನಾಟಕದ ಮುಕುಟ ಮಣಿ ಎನಿಸಿರುವ ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದ ನಡುವೆ ಗಡಿ ವಿವಾದ ಬಹಳ ವರ್ಷಗಳಿಂದಲೂ ಸುದ್ದಿಯಲ್ಲಿದ್ದು, ಈ ಗಡಿ ವಿವಾದ 2 ರಾಜ್ಯಗಳ ನಡುವಿನ ಸಾಮರಸ್ಯವನ್ನು ಹದಗೆಡಿಸಿದೆ. ಹೀಗಾಗಿ ಟಿವಿ9 ಕನ್ನಡ ಡಿಜಿಟಲ್​ ಈ ಎರಡು ರಾಜ್ಯಗಳ ನಡುವೆ ಇರುವ ಗಡಿ ವಿವಾದದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ಓದುಗರ ಮುಂದಿಡುತ್ತಿದೆ.

ಈ ಎರಡು ರಾಜ್ಯಗಳ ನಡುವಿನ ಗಡಿ ವಿವಾದ ಆರಂಭದಿಂದ, ಇಲ್ಲಿಯವರೆಗೂ ಆಗಿರುವ ಬೆಳವಣಿಗೆಗಳ ಬಗ್ಗೆ ಕನ್ನಡಪರ ಹೋರಾಟಗಾರ ಅಶೋಕ್​ ಚಂದರಗಿ ಹೇಳಿದ್ದು ಹೀಗೆ:

ಬೆಳಗಾವಿ ಸೇರಿದಂತೆ 4 ರಾಜ್ಯಗಳು ಮಹಾರಾಷ್ಟ್ರದಲ್ಲಿದ್ದವು..  1953 ರಲ್ಲಿ ರಾಜ್ಯ ಪುನರ್​ ರಚನಾ ಆಯೋಗ ರಚನೆಗೊಳ್ಳುವುದಕ್ಕೂ ಮುನ್ನ ಬೆಳಗಾವಿ ಸೇರಿದಂತೆ 4 ರಾಜ್ಯಗಳು ಮಹಾರಾಷ್ಟ್ರದಲ್ಲಿದ್ದವು. ಹೀಗಾಗಿ 19ನೇ ಶತಮಾನದಿಂದಲೂ ನಡೆಯುತ್ತಿದ್ದ ಕರ್ನಾಟಕ ಏಕೀಕರಣ ಚಳುವಳಿಯಿಂದಾಗಿ ಹರಿದು ಹಂಚಿಹೋಗಿದ್ದ ಕರ್ನಾಟಕವನ್ನು ಭಾಷಾವಾರು ಪ್ರಾಂತ್ಯಗಳನ್ನಾಗಿ ವಿಂಗಡಿಸಲು ನ್ಯಾಯಮೂರ್ತಿ ಫಜಲ್​ ಅಲಿ ಕಮಿಷನ್​ಅನ್ನು 1953 ರಲ್ಲಿ ನೇಮಕ ಮಾಡಲಾಯಿತು. ಈ ಕಮಿಷನ್​ ದೇಶಾದ್ಯಂತ ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸಿತು.

ಇದರ ಫಲವಾಗಿ 1956 ರಲ್ಲಿ ಕರ್ನಾಟಕ ಉದಯವಾಯಿತು. ಅಲ್ಲದೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ರಾಜ್ಯ ಪುನರ್​ ರಚನಾ ಆಯೋಗ ವರದಿ ನೀಡಿತು. ಹೀಗಾಗಿ ಅಂದಿನಿಂದಲೂ ಸಹ ಮಹಾರಾಷ್ಟ್ರ ಪರ ವಾದಿಗಳು ಹಾಗೂ ಎಂ​ಇಎಸ್​ ಪುಂಡರು ಬೆಳಗಾವಿ ನಮಗೆ ಸೇರಬೇಕೆಂದು ಹಿಂಸಾಚಾರ ಶುರು ಮಾಡಿದರು.

ಈ ಹಿಂಸಾಚಾರ ಕಂಡು 1960 ರಲ್ಲಿ ಎರಡು ರಾಜ್ಯಗಳ ನಡುವೆ ಮರುಹೊಂದಾಣಿಕೆ ಮಾಡಿಕೊಂಡು ಒಂದು ತೀರ್ಮಾನಕ್ಕೆ ಬರಬೇಕೆಂದು ಮಹಾರಾಷ್ಟ್ರದಿಂದ ಇಬ್ಬರು ಹಾಗೂ ಕರ್ನಾಟಕದಿಂದ ಇಬ್ಬರನ್ನು ನೇಮಕ ಮಾಡಲಾಯಿತು. ಆದರೆ ಆ ಪ್ರಯತ್ನ ಫಲಕೊಡಲಿಲ್ಲ.

ಮೆಹರ್‌ಚಂದ್ ಮಹಾಜನ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆಯಾಯಿತು.. ಮಹಾರಾಷ್ಟ್ರದವರು ಮತ್ತೊಂದು ಆಯೋಗ ರಚಿಸಿ ಇದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕೆಂದು ಪಟ್ಟು ಹಿಡಿದರು. ಹೀಗಾಗಿ 1966 ರಲ್ಲಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಮರಾಠಿಗರು ಅವರ ಮೇಲೆ ಮತ್ತೊಂದು ಆಯೋಗ ರಚಿಸಬೇಕೆಂದು ಒತ್ತಡ ತಂದರು. ಹೀಗಾಗಿ 1966 ಆಕ್ಟೋಬರ್​ 25 ರಂದು ಸುಪ್ರಿಂ ಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ಮೆಹರ್‌ಚಂದ್ ಮಹಾಜನ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆಯಾಯಿತು.

ಆದರೆ ವಾಸ್ತವವಾಗಿ ಆಯೋಗ ರಚನೆಗೆ ಕರ್ನಾಟಕದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯಿತು. ಈಗಾಗಲೇ ರಾಜ್ಯ ಪುನರ್​ ರಚನಾ ಆಯೋಗ ಬೆಳಗಾವಿ ನಮ್ಮದೆಂದು ವರದಿ ನೀಡಿದೆ ಹಾಗಾಗಿ ಮತ್ತೊಂದು ಆಯೋಗ ಬೇಡವೆಂದು ಕನ್ನಡಿಗರು ಹೋರಾಟಕ್ಕಿಳಿದರು. ಆದರೆ ಇಂದಿರಾ ಗಾಂಧಿಯವರು ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪ ಅವರ ಮೇಲೆ ಒತ್ತಡ ತಂದು ಮತ್ತೊಂದು ಆಯೋಗದ ರಚನೆಗೆ ಒಪ್ಪಿಗೆ ಪಡೆದರು.

ಅಲ್ಲದೆ ಅಂದಿನ ಮಹಾರಾಷ್ಟ್ರ ಸಿಎಂ ವಿಪಿ ಸಿಂಗ್​ ಸಹ ಹೊಸ ಆಯೋಗದ ರಚನೆಗೆ ಒಪ್ಪಿಗೆ ಸೂಚಿಸಿದರು. ಎರಡು ರಾಜ್ಯದ ಮುಖ್ಯಮಂತ್ರಿಗಳು ಸಹ ಆಯೋಗದ ವರದಿ ಏನೇ ಬಂದರು ನಾವು ಅದಕ್ಕೆ ಬದ್ದರಾಗಿರುತ್ತೇವೆ ಎಂದು ಒಪ್ಪಿಗೆ ಸೂಚಿಸಿದ್ದರು.

ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ಉಲ್ಲೇಖಿಸಲಾಗಿತ್ತು.. ಹೀಗಾಗಿ 1966 ರಿಂದ 1967 ಸೆಪ್ಟೆಂಬರ್​​ 25ರ ವರೆಗೆ ಮಹಾಜನ್​ ಅವರು ಒಂದು ವರ್ಷ ಕಾಲ ಇಡೀ ಕರ್ನಾಟಕವನ್ನು ಸುತ್ತಿ ಕೇಂದ್ರಕ್ಕೆ ಒಂದು ವರದಿ ಸಲ್ಲಿಸಿದರು. ವರದಿಯಲ್ಲಿ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕೆಂದು ಉಲ್ಲೇಖಿಸಲಾಗಿತ್ತು. ಅಲ್ಲದೆ ಅದರಲ್ಲಿ ಕರ್ನಾಟಕದ 268 ಹಳ್ಳಿಗಳ ಜೊತೆಗೆ ಖಾನಾಪುರ, ನಂದಗಡ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು. ಬದಲಿಗೆ ಕರ್ನಾಟಕಕ್ಕೆ ದಕ್ಷಿಣ ಸೊಲ್ಹಾಪುರ, ಅಕ್ಕಲ್​ಕೋಟ್​ ಹಾಗೂ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕೆಂದು ವರದಿ ಸಲ್ಲಿಸಲಾಯಿತು.

ಅದರೆ ಆಯೋಗದ ವರದಿ ತಿಳಿದ ಬಳಿಕ ಮರಾಠಿಗರು ವರದಿಯನ್ನು ಒಪ್ಪಿಕೊಳಲಿಲ್ಲ. ಪ್ರಧಾನಿಯವರಿಗೆ ನೀಡಿದ ಮಾತಿನಂತೆ ನಡೆದುಕೊಳ್ಳದೆ ಮಹಾರಾಷ್ಟ್ರದ ಸಿಎಂ ವರದಿಯನ್ನು ಒಪ್ಪಿಕೊಳ್ಳದೆ ಹಿಂದೆ ಸರಿದರು. ಈ ವರದಿ ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಅದರ ಬಗ್ಗೆ ಯಾವುದೇ ಚರ್ಚೆಗಳು ನಡೆಯಲಿಲ್ಲ ಹಾಗೂ ನಿರ್ಣಯಕ್ಕೂ ಬರಲಿಲ್ಲ. ಆದರೆ ಇಂದಿರಾ ಗಾಂಧಿಯವರು ಮನಸ್ಸು ಮಾಡಿದರೆ ಅಂದೇ ಈ ವಿವಾದಕ್ಕೆ ಅಂತಿಮ ತೆರೆ ಎಳೆಯಬಹುದಾಗಿತ್ತು.

1991 ರಲ್ಲಿ ಆದ ರಾಜಕೀಯ ಧ್ರುವೀಕರಣ.. ಕರ್ನಾಟಕದಲ್ಲಿ 1957ರಿಂದ ಮರಾಠಿಗರ ಬೆಂಬಲಿಗರೆ (ಎಂ​ಇಎಸ್​) ಚುನಾವಣೆಯಲ್ಲಿ ಗೆಲುತ್ತಾ ಬರುತ್ತಿದ್ದರು. ಹೀಗಾಗಿ ನಾವು ಅಂದಿನಿಂದಲ್ಲೂ ಬೆಳಗಾವಿಯಿಂದ ಗೆಲ್ಲುತ್ತಾ ಬರುತ್ತಿದ್ದೇವೆ. ಬೆಳಗಾವಿಯಲ್ಲಿ ಮರಾಠಿಗರೇ ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ಆದರಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯ ಮಾಡಿದರು.

ಆದರೆ 1991 ರಲ್ಲಿ ಆದ ರಾಜಕೀಯ ಧ್ರುವೀಕರಣದಿಂದಾಗಿ ಮಹಾರಾಷ್ಟ್ರದ ರಾಜಕೀಯದಿಂದ ಬೇಸತ್ತು ಎಂ​ಇಎಸ್​ ನಲ್ಲಿ ಒಡಕು ಉಂಟಾಗಿ ಮರಾಠಿ ಬೆಂಬಲಿತ ಶಾಸಕರು ಹಾಗೂ ಮರಾಠಿ ಬೆಂಬಲಿಗರು ಕರ್ನಾಟಕದ ಮುಖ್ಯವಾಹಿನಿಗೆ ಸೇರುತ್ತಾ ಬಂದರು. ಇದರ ಫಲವಾಗಿ ಅಂದಿನ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಂಗಾರಪ್ಪನವರ ಪ್ರಯತ್ನದಿಂದ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರ ಪಾರುಪತ್ಯ ಆರಂಭವಾಯಿತು. ನಂತರ 1999 ರ ಚುನಾವಣೆಯಲ್ಲಿ ಎಂ​ಇಎಸ್​ ಬೆಳಗಾವಿಯಲ್ಲಿ ಹೇಳ ಹೆಸರಿಲ್ಲದಂತೆ ನಿರ್ನಾಮವಾಯಿತು. ಗಡಿ ಭಾಗದ ಎಲ್ಲಾ ಕ್ಷೇತ್ರಗಳಲ್ಲೂ ಎಂ​ಇಎಸ್​ ಸೋಲನುಭವಿಸಿತು.

ಇದರಿಂದ ವಿಚಲಿತಗೊಂಡ ಮರಾಠಿಗರ ಒಕ್ಕೂಟ 2004 ರಲ್ಲಿ ಪ್ರಕರಣವನ್ನು ಸುಪ್ರೀಂ ಕೋರ್ಟ್​ನಲ್ಲಿ ಕರ್ನಾಟಕದ ಬೆಳಗಾವಿ ಸೇರಿದಂತೆ ಕರ್ನಾಟಕದ 814 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕೆಂದು ದಾವೆ ಹೂಡಿದರು. ಹೀಗಾಗಿ ಸುಪ್ರೀಂ ಕೋರ್ಟ್​ನಲ್ಲಿ ಈಗಾಗಲೇ ಪ್ರಕರಣದ ತನಿಖೆ ನಡೆಯುತ್ತಿರುವಾಗ ಮಹಾರಾಷ್ಟ್ರದ ಸಿಎಂ ಉದ್ದವ್​ ಠಾಕ್ರೆ ಸಮಾಜದ ಸಾಮರಸ್ಯ ಹಾಳು ಮಾಡುವ ಕೆಲಸ ಮಾಡುವುದು ಸರಿಯಲ್ಲ.

ರಾಜ್ಯ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಗುತ್ತಿಲ್ಲಾ.. ರಾಜ್ಯ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಹಾಗಾಗಿ ಪದೇ ಪದೇ ಮರಾಠಿಗರು ಗಡಿ ಕ್ಯಾತೆ ತೆಗೆಯುತ್ತಿದ್ದಾರೆ. ರಾಜ್ಯ ಸರ್ಕಾರ ಗಡಿ ನಿಯಂತ್ರಣ ಪ್ರಾಧಿಕಾರ ಮಾಡಿದೆ. ಆದರೆ ಆ ಪ್ರಾಧಿಕಾರ ಬೆಂಗಳೂರಿನಲ್ಲಿದೆ. ಹೀಗಾಗಿ ನಾವು ಬೆಂಗಳೂರಿಗೆ ಬಂದು ಇಲ್ಲಿನ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಗುವುದಿಲ್ಲ. ಆದರಿಂದ ಗಡಿ ನಿಯಂತ್ರಣ ಪ್ರಾಧಿಕಾರವನ್ನು ಬೆಳಗಾವಿಯಲ್ಲಿಯೇ ಸ್ಥಾಪಿಸಬೇಕು ಎಂಬುದು ಆ ಭಾಗದ ಜನರ ಅಭಿಪ್ರಾಯವಾಗಿದೆ.

ಮಹಾರಾಷ್ಟ್ರದಲ್ಲಿ ಇಬ್ಬರು ಗಡಿ ಉಸ್ತುವಾರಿ ಮಂತ್ರಿಗಳಿದ್ದಾರೆ ಅಲ್ಲದೇ ಮಹಾರಾಷ್ಟ್ರದಲ್ಲಿ ಇಬ್ಬರು ಗಡಿ ಉಸ್ತುವಾರಿ ಮಂತ್ರಿಗಳಿದ್ದಾರೆ. ಆದರೆ ಕರ್ನಾಟಕದಲ್ಲಿ ಇದುವರೆಗೂ ಯಾರೂ ನೇಮಕಗೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್​ ಕೆ ಪಾಟೀಲ್​ ಅವರನ್ನು ಗಡಿ ಉಸ್ತುವಾರಿ ಮಂತ್ರಿಯನ್ನಾಗಿ ಮಾಡಲಾಗಿತ್ತು.

ಆದರೆ ಈ ಸರ್ಕಾರದಲ್ಲಿ ಈ ಬಗ್ಗೆ ಯಾವುದೇ ಬೆಳವಣಿಗೆಗಳು ಕಂಡುಬಂದಿಲ್ಲ. ಹೀಗಾಗಿ ಗಡಿ ಸಂಬಂಧಿತ ವಿಚಾರಗಳ ಬಗ್ಗೆ ಮಾತಾನಾಡಲು ಯಾರ ಬಳಿ ಹೋಗಬೇಕು? ಮುಖ್ಯಮಂತ್ರಿ ನಮ್ಮ ಕೈಗೆ ಸಿಗುವವರಲ್ಲ. ಹಾಗಾಗಿ ಗಡಿ ಉಸ್ತುವಾರಿ ಮಂತ್ರಿಯನ್ನು ನೇಮಿಸಬೇಕೆಂದು ಒತ್ತಾಯ ಮಾಡಲಾಗುತ್ತಿದೆ.

ಯಾವುದೇ ಕಾರಣಕ್ಕೂ ಬೆಳಗಾವಿ ಜಿಲ್ಲೆಯವರನ್ನು ಗಡಿ ಉಸ್ತುವಾರಿ ಮಂತ್ರಿಗಳನ್ನಾಗಿ ಮಾಡಬೇಡಿ. ಏಕೆಂದರೆ ಇಲ್ಲಿನವರು ಮರಾಠಿಗರ ಪ್ರಭಾವಕ್ಕೆ ಒಳಗಾಗಿ ಇಲ್ಲಿನ ಜನಕ್ಕೆ ಮೋಸ ಮಾಡಬಹುದು. ಹೀಗಾಗಿ ಇಲ್ಲಿನವರನ್ನು ಹೊರತುಪಡಿಸಿ ಬೇರೊಬ್ಬರನ್ನು ನೇಮಿಸಿ ಎಂಬ ಕೂಗು ಕೇಳಿಬರುತ್ತಿದೆ. ಗಡಿ ಸಂರಕ್ಷಣ ಆಯೋಗವನ್ನು ರಚನೆ ಮಾಡಿದ್ದಾರೆ. ಅದಕ್ಕೆ ನಿವೃತ್ತ ಐಎಎಸ್​ ಅಧಿಕಾರಿಯನ್ನ ಮುಖ್ಯಸ್ಥನನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಆ ಅಧಿಕಾರಿಗೆ ಇಲ್ಲಿನ ಸಮಸ್ಯೆಗಳಿಗೆ ಏನು ಗೊತ್ತು. ಹೀಗಾಗಿ ಸರ್ಕಾರ ಈ ವಿಚಾರಗಳ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಬೇಕಿದೆ.

ಪ್ರಾಧಿಕಾರಕ್ಕೆ ನಮ್ಮ ಭಾಗದ ಜನರನ್ನ ಆಯ್ಕೆ ಮಾಡಬೇಕು.. ಪ್ರಕರಣದ ಪರ ವಾದ ಮಾಡಲು ಸುಪ್ರೀಂ ಕೋರ್ಟ್​ನಲ್ಲಿ ಲೀಗಲ್​ ಟೀಂ ಇದೆ. ಆದರೆ ಅವರ ಬಳಿ ನಮ್ಮ ನಾಯಕರು ಹೋಗಿ ಯಾರೊಬ್ಬರು ಈ ವಿಚಾರದ ಬಗ್ಗೆ ಚರ್ಚೆ ನಡೆಸಿಲ್ಲ. ಹೀಗಾಗಿ ಗಡಿ ಸಂರಕ್ಷಣಾ ಪ್ರಾಧಿಕಾರಕ್ಕೆ ನಮ್ಮ ಭಾಗದ ಜನರನ್ನ ಆಯ್ಕೆ ಮಾಡಬೇಕು. ಅದರಲ್ಲೂ ಗಡಿ ಬಗ್ಗೆ ಕಳಕಳಿ ಇರುವವರನ್ನು ಆಯ್ಕೆ ಮಾಡಿದರೆ ಸೂಕ್ತ.

ಮಹಾಜನ್​ ವರದಿಯನ್ನ ಕರ್ನಾಟಕ ಒಪ್ಪಿಕೊಂಡಿದೆ. ಅಲ್ಲದೆ ವರದಿಯಲ್ಲಿರುವಂತೆ ಅಷ್ಟು ಪ್ರದೇಶವನ್ನು ಬಿಟ್ಟುಕೊಡಲು ಸಿದ್ದವಿದೆ. ಆದರೆ ಮರಾಠಿಗರು ಇದಕ್ಕೆ ಸಿದ್ದವಿಲ್ಲ. ಹೀಗಾಗಿ ವರದಿಯಿಂದ ಲಾಭ ನಷ್ಟಗಳೆರಡು ಇರುವುದರಿಂದ ಸದ್ಯ ಈಗ ಹೇಗಿದೆಯೋ ಅದನ್ನೇ ಮುಂದುವರೆಸಿಕೊಂಡು ಹೋಗಬೇಕೆಂಬುದು ಕರ್ನಾಟಕದ ವಾದವಾಗಿದೆ.

ರಾಜಕೀಯ ಅಸ್ಥಿರತೆ ಹೆಚ್ಚಾದಾಗ ಈ ಕ್ಯಾತೆ ತೆಗೆಯುತ್ತಾರೆ.. ಮಹಾರಾಷ್ಟ್ರದ ರಾಜಕೀಯ ಪಕ್ಷಗಳಿಗೆ ಅಲ್ಲಿ ರಾಜಕೀಯ ಅಸ್ಥಿರತೆ ಕಂಡು ಬಂದಾಗ ಗಡಿ ವಿಚಾರವನ್ನು ಕೈಗೆತ್ತಿಕೊಳ್ಳುತ್ತಾರೆ. ತಮ್ಮ ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳಲು ಹೀಗೆ ತಕರಾರು ಮಾಡುತ್ತಿದ್ದಾರೆ. ಗಡಿ ವಿಚಾರ ಮುನ್ನೆಲೆಗೆ ಬಂದ ಕೂಡಲೇ ಅಲ್ಲಿನ ರಾಜಕೀಯ ಪಕ್ಷಗಳು ಮರಾಠಿಗರ ಬೆಂಬಲ ಗಳಿಸುತ್ತವೆ. ಈ ಉದ್ದೇಶದಿಂದ ಪದೇ ಪದೇ ಗಡಿ ಕ್ಯಾತೆ ತೆಗೆಯಲಾಗುತ್ತಿದೆ.

ಮಹಾರಾಷ್ಟ್ರದ ಕೇಸ್​ ಸುಪ್ರೀಂ ಕೋರ್ಟ್​ನಲ್ಲಿ ಆಡ್ಮಿಟ್​​ ಆಗಿಲ್ಲ.. ಮತ್ತೊಂದು ಆಯೋಗವನ್ನು ರಚಿಸಬೇಕೆಂದು 2004 ರಲ್ಲಿ ಸುಪ್ರೀಂ ಮೊರೆ ಹೋಗಿರುವ ಮಹಾರಾಷ್ಟ್ರದ ಕೇಸ್​ ಇನ್ನೂ ಸಹ ಸುಪ್ರೀಂ ಕೋರ್ಟ್​ನಲ್ಲಿ ಆಡ್ಮಿಟ್​​ ಆಗಿಲ್ಲ. ಅಲ್ಲದೆ ಈ ಪ್ರಕರಣ ಸುಪ್ರೀಂ ಕೋರ್ಟ್​ನ ವ್ಯಾಪ್ತಿಗೆ ಬರುವುದಿಲ್ಲ. ಬದಲಿಗೆ ಸಂವಿಧಾನದ 3ನೇ ಪರಿಚ್ಛೇದದ ಪ್ರಕಾರ ಇದು ಪಾರ್ಲಿಮೆಂಟ್​ನಲ್ಲಿ ಮಾತ್ರ ಇತ್ಯಾರ್ಥಗೊಳ್ಳಬೇಕು ಎಂಬುದು ಕರ್ನಾಟಕದ ವಾದವಾಗಿದೆ.

ಹೀಗಾಗಿ ರಾಜ್ಯ ಸರ್ಕಾರ ಆ ಭಾಗದ ಜನರ ಗಡಿ ಸಮಸ್ಯೆಗೆ ಕೂಡಲೇ ಸ್ಪಂದಿಸಬೇಕು. ಅಲ್ಲದೆ ನಮ್ಮ ಲೀಗಲ್​ ಟೀಂ ಭೇಟಿ ಮಾಡಿ ಪ್ರಕರಣದ ಬಗ್ಗೆ ವಿಶೇಷ ಗಮನವಹಿಸಬೇಕು. ಇಲ್ಲದಿದ್ದರೆ ಕನ್ನಡಿಗರು ಕಾಸರಗೋಡನ್ನು ಕಳೆದುಕೊಂಡಂತೆ ಬೆಳಗಾವಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.