Halwa Recipe : ಸಿಹಿ ತಿಂಡಿ ಖರೀದಿಸಲು ಅಂಗಡಿಗೆ ಹೋಗಲೇಬೇಡಿ, ಮನೆಯಲ್ಲೆ ಮಾಡಿ ಈ ಟೇಸ್ಟಿ ಹಲ್ವಾ!
ಸಿಹಿ ತಿಂಡಿಯೆಂದರೆ ಎಲ್ಲರಿಗೂ ಇಷ್ಟನೇ. ಮನೆಯಲ್ಲೇ ಸಿಹಿ ತಿಂಡಿಗಳನ್ನು ಮಾಡಿ ತಿನ್ನುವುದಕ್ಕಿಂತ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಸಿಗುವ ಸ್ವೀಟ್ ಗಳನ್ನು ಖರೀದಿಸಿ ಸವಿಯುವವರೇ ಹೆಚ್ಚು. ಆದರೆ ಮನೆಯಲ್ಲಿ ಸುಲಭವಾಗಿ ಹಾಗೂ ಕಡಿಮೆ ಸಾಮಾಗ್ರಿಗಳಲ್ಲಿ ಮಾಡಬಹುದಾದ ತಿನಿಸುಗಳಲ್ಲಿ ಹಲ್ವಾ ಕೂಡ ಒಂದಾಗಿದೆ. ಮನೆಯಲ್ಲಿ ಬಾಳೆಹಣ್ಣು ಹಾಗೂ ಬಾದಾಮಿಯಿದ್ದರೆ ಇದರ ಹಲ್ವಾ ಮಾಡಿ ಸವಿದರೆ ಮನಸ್ಸಿಗೆ ಖುಷಿಯಾಗದೇ ಇರದು.
ಯಾವುದೇ ಹಬ್ಬ, ಸಭೆ ಸಮಾರಂಭವಿರಲಿ ಸಿಹಿ ತಿಂಡಿಗಳು ಇಲ್ಲದೆ ಹೋದರೆ ಪರಿಪೂರ್ಣವಾಗುವುದೇ ಇಲ್ಲ. ಹಬ್ಬ ಹರಿದಿನಗಳಲ್ಲಿ ಸಿಹಿತಿಂಡಿಗಳು ಇದ್ದರೇನೇ ಹಬ್ಬದ ಸಂಭ್ರಮವು ಡಬಲ್ ಆಗುವುದು. ಹೆಚ್ಚಿನವರು ಹಬ್ಬದ ಸಮಯದಲ್ಲಿ ಪಾಯಸ, ಉಂಡೆಗಳನ್ನು ಮಾಡುತ್ತಾರೆ. ಸುಲಭವಾಗಿ ವಿವಿಧ ಬಗೆಯ ಹಲ್ವಾ ಮಾಡಿಯು ಹಬ್ಬವನ್ನು ಸಂಭ್ರಮಿಸಬಹುದು. ಬಾಯಲ್ಲಿಟ್ಟರೆ ಕರಗುವ ಈ ಸಿಹಿಯಾದ ಹಲ್ವಾಕ್ಕೆ ಮಾರು ಹೋಗದವರೇ ಇಲ್ಲ. ಹೀಗಾಗಿ ಮನೆಯಲ್ಲಿ ಸುಲಭವಾಗಿ ಹಲ್ವಾ ತಯಾರಿಸಿ ರುಚಿ ಸವಿಯಬಹುದು.
ಬಾದಾಮಿ ಹಲ್ವಾ ಬೇಕಾಗುವ ಸಾಮಾಗ್ರಿಗಳು:
- ಚಿಟಿಕೆಯಷ್ಟು ಕೇಸರಿ
- ಬಾದಾಮಿ
- ಕೆನೆ ಭರಿತ ಹಾಲು
- ಸಕ್ಕರೆ
- ತುಪ್ಪ
- ಏಲಕ್ಕಿ ಪುಡಿ
ಬಾದಾಮಿ ಹಲ್ವಾ ಮಾಡುವ ವಿಧಾನ:
- ಮೊದಲು ಚಿಟಿಕೆಯಷ್ಟು ಕೇಸರಿಯನ್ನು ಎರಡು ಚಮಚದಷ್ಟು ಹಾಲಿನಲ್ಲಿ ನೆನೆಸಿಡಬೇಕು. ಅದಲ್ಲದೇ, ಈ ಬಾದಾಮಿಯನ್ನು ಬಿಸಿ ನೀರಿನಲ್ಲಿ ನೆನೆಸಿಟ್ಟುಕೊಳ್ಳಬೇಕು.
- ಮಿಕ್ಸಿ ಜಾರಿಗೆ ನೆನೆಸಿಟ್ಟ ಬಾದಾಮಿಯ ಸಿಪ್ಪೆ ತೆಗೆದು ಹಾಕಿ, ಅದಕ್ಕೆ ಅರ್ಧ ಕಪ್ ಹಾಲಿನ ಜೊತೆಗೆ ತರಿತರಿಯಾಗಿ ರುಬ್ಬಿಕೊಳ್ಳಬೇಕು.
- ಒಂದು ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ರುಬ್ಬಿಕೊಂಡಿರುವ ಈ ಮಿಶ್ರಣವನ್ನು ಹಾಕಿ ಕೈಯಾಡಿಸುತ್ತಿರಬೇಕು.
- ಆ ಬಳಿಕ ಅರ್ಧ ಬಟ್ಟಲು ಸಕ್ಕರೆ ಹಾಕಿ ಕೈಯಾಡಿಸುತ್ತ ಇರಿ. ಇದಕ್ಕೆ ನೆನೆಸಿಟ್ಟ ಕೇಸರಿ ಹಾಲನ್ನು ಹಾಕಿಕೊಳ್ಳಿ.
- ಈ ಮಿಶ್ರಣವು ಸ್ವಲ್ಪ ಗಟ್ಟಿಯಾಗುತ್ತಿದ್ದಂತೆ ಮತ್ತೆ ತುಪ್ಪ ಹಾಕಿಕೊಳ್ಳಿ. ಕೊನೆಗೆ ಏಲಕ್ಕಿ ಪುಡಿ ಹಾಗೂ ಗೋಡಂಬಿಯನ್ನು ಬೆರೆಸಿ ಕಲಸಿಕೊಂಡರೆ ರುಚಿ ರುಚಿಯಾದ ಬಾದಾಮಿ ಹಲ್ವಾ ಸವಿಯಲು ಸಿದ್ಧ.
ಬಾಳೆಹಣ್ಣಿನ ಹಲ್ವಾ ಮಾಡಲು ಬೇಕಾಗುವ ಸಾಮಗ್ರಿಗಳು :
- ಬಾಳೆಹಣ್ಣು (ನೇಂದ್ರ ಬಾಳೆಹಣ್ಣು)
- ಹಾಲು
- ಸಕ್ಕರೆ
- ತುಪ್ಪ
- ಏಲಕ್ಕಿ ಪುಡಿ
- ಗೋಡಂಬಿ
ಇದನ್ನೂ ಓದಿ: ಬೇಸಿಗೆಯಲ್ಲಿ ತ್ವಚೆಯ ಆರೈಕೆಗೆ ಈ ಫೇಸ್ ಪ್ಯಾಕ್ಗಳು ಬೆಸ್ಟ್
ಬಾಳೆಹಣ್ಣಿನ ಹಲ್ವಾ ಮಾಡುವ ವಿಧಾನ :
- ಬಾಳೆ ಹಣ್ಣನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಬಾಣಲೆಗೆ ಹಾಕಿ ಅದಕ್ಕೆ ಹಾಲನ್ನು ಬೆರೆಸಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.
- ಹತ್ತು ನಿಮಿಷಗಳ ಬಳಿಕ ಇದಕ್ಕೆ ಸಕ್ಕರೆ ಮತ್ತು ತುಪ್ಪ ಹಾಕಿ ಕೈಯಾಡಿಸಿಕೊಳ್ಳಿ. ಗಟ್ಟಿಯಾಗುತ್ತಾ ಬರುತ್ತಿದ್ದಂತೆ ಈ ಮಿಶ್ರಣವು ತಳ ಬಿಡಲು ಆರಂಭಿಸುತ್ತದೆ.
- ಈ ನಡುವೆ ಗೋಡಂಬಿಯನ್ನು ತುಪ್ಪದಲ್ಲಿ ಕೆಂಪಗೆ ಹುರಿದುಕೊಂಡಿರಿ. ಹಲ್ವಾದ ಮಿಶ್ರಣ ಹುರಿದಿಟ್ಟ ಗೋಡಂಬಿ ಹಾಗೂ ಏಲಕ್ಕಿ ಪುಡಿಯನ್ನು ಸೇರಿಸಿ ಕೈಯಾಡಿಸಿ.
- ತಣ್ಣಗಾದ ಬಳಿಕ ನೋಡಿದರೆ ಘಮ್ ಎನ್ನುವ ಬಾಳೆಹಣ್ಣಿನ ಹಲ್ವಾ ಸವಿಯಲು ಸಿದ್ಧವಾಗಿರುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ