ವರ್ಕ್ ಫ್ರಮ್ ಪಾರ್ಕ್; ಆರಂಭವಾಗಲಿದೆ ಉದ್ಯಾನವನದಲ್ಲಿ ಕುಳಿತು ಆಫೀಸ್ ಕೆಲಸ ಮಾಡುವ ಸ್ಪೆಷಲ್ ಸೌಲಭ್ಯ
ಐಟಿ ಉದ್ಯೋಗಿಗಳು ಮತ್ತು ಕಂಪೆನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗಾಗಿ ದುಬೈನಲ್ಲಿ ವರ್ಕ್ ಫ್ರಮ್ ಪಾರ್ಕ್ ಸೌಲಭ್ಯವನ್ನು ಶುರು ಮಾಡಲಾಯಿತು. ಅದೇ ರೀತಿ ತೆಲಂಗಾಣದ ಸೈಬರಾಬಾದ್‌ನಲ್ಲೂ ಪಾರ್ಕ್‌ನಲ್ಲಿ ಕುಳಿತು ಕೆಲಸ ಮಾಡುವಂತಹ ವಿಶಿಷ್ಟ ಸೌಲಭ್ಯ ಪ್ರಾರಂಭವಾಗಲಿದೆ. 30 ರಿಂದ 40 ಉದ್ಯಾನವನಗಳನ್ನು ವರ್ಕ್ ಫ್ರಮ್ ಪಾರ್ಕ್ ಕಾರ್ಯಕ್ಷೇತ್ರಗಳಾಗಿ ಪರಿವರ್ತಿಸುವ ಯೋಜನೆ ಇದ್ದು, ಈ ಉದ್ಯಾನವನಗಳು ಉಚಿತ ವೈ-ಫೈ, ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು, ಆರಾಮದಾಯಕ ಆಸನಗಳು, ಕೆಫೆಟೇರಿಯಾ ಮತ್ತು ಸಿಸಿಟಿವಿಗಳಂತಹ ಸೌಲಭ್ಯಗಳಂತ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿವೆ.

ಕೊರೋನಾ ಸಮಯದಲ್ಲಿ ವರ್ಕ್ ಫ್ರಮ್ ಹೋಮ್ (Work from home) ಪರಿಕಲ್ಪನೆ ಪ್ರಾರಂಭವಾಯಿತು. ಅದಾಗಿನಿಂದ ಇಂದಿಗೂ ಅನೇಕರು ಮನೆಯಿಂದಲೇ ಆಫೀಸ್ ಕೆಲಸಗಳನ್ನು ಮಾಡುತ್ತಿದ್ದಾರೆ. ಹೀಗೆ ನಾಲ್ಕು ಗೋಡೆಗಳ ನಡುವೆ ಕುಳಿತು ಪ್ರತಿದಿನ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದರಿಂದ ಮಾನಸಿಕ ಒತ್ತಡ ಮತ್ತು ಏಕಾಗ್ರತೆಯ ಕೊರತೆಯಂತಹ ಸಮಸ್ಯೆಗಳು ಉಂಟಾಗುತ್ತವೆ, ಇದಲ್ಲದೆ ಕೆಲವು ಉದ್ಯೋಗಿಗಳಿಗೆ ಪ್ರತಿನಿತ್ಯ ಆಫೀಸ್‌ಗೆ ಹೋಗಿ ಕೆಲಸ ಮಾಡಲು ಬೇಜಾರಾಗುತ್ತದೆ. ಇಂತಹ ಉದ್ಯೋಗಿಗಳಿಗಾಗಿಯೇ ತೆಲಂಗಾಣದ ಸೈಬರಾಬಾದ್‌ನಲ್ಲಿ “ವರ್ಕ್ ಫ್ರಮ್ ಪಾರ್ಕ್” ಉಪಕ್ರಮವನ್ನು ತರಲಾಗುತ್ತಿದೆ. ಮನೆಯಲ್ಲಿ ಮತ್ತು ಆಫೀಸ್‌ನಲ್ಲಿ ಕುಳಿತು ಕೆಲಸ ಮಾಡಲು ಬೋರ್ ಆಗುತ್ತೆ ಎನ್ನುವವರು ಇನ್ನು ಮುಂದೆ ಈ ಪಾರ್ಕ್‌ನಲ್ಲಿ ಹೋಗಿ ಹಚ್ಚ ಹಸಿರಿನ ವಾತಾವರಣದಲ್ಲಿ ಕುಳಿತು ಆರಾಮವಾಗಿ ತಮ್ಮ ಕೆಲಸ ಮಾಡಬಹುದು. ಇಂಟರ್ನೆಟ್‌ನಿಂದ ಹಿಡುದು ಆಸನದವರೆಗೆ ಎಲ್ಲಾ ರೀತಿಯ ಸೌಲಭ್ಯಗಳಿರಲಿದ್ದು, ಇದು ಯಾವಾಗ ಆರಂಭವಾಗಲಿದೆ ಎಂಬ ಪೂರ್ಣ ವಿವರ ತಿಳಿಯಿರಿ.
30 ರಿಂದ 40 ಉದ್ಯಾನವನಗಳಲ್ಲಿ ವರ್ಕ್ ಫ್ರಮ್ ಪಾರ್ಕ್ ಸೌಲಭ್ಯ ಆರಂಭವಾಗಲಿದೆ:
ತೆಲಂಗಾಣದ ಸೈಬರಾಬಾದ್‌ನಲ್ಲಿ, ಸೈಬರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಸಿಎಮ್‌ಸಿ) “ವರ್ಕ್ ಫ್ರಮ್ ಪಾರ್ಕ್” ಎಂಬ ಹೊಸ ಉಪಕ್ರಮವನ್ನು ಪ್ರಾರಂಭಿಸಲು ಸಿದ್ಧತೆ ನಡೆಸುತ್ತಿದೆ. ನಗರದಲ್ಲಿ 30 ರಿಂದ 40 ಉದ್ಯಾನವನಗಳನ್ನು ಜನರು ಕಚೇರಿಯಿಂದ ಕೆಲಸ ಮಾಡಬಹುದಾದ ಸ್ಥಳಗಳಾಗಿ ಪರಿವರ್ತಿಸಲು ಯೋಜಿಸಿದೆ. ಐಟಿ ಕಂಪನಿಗಳು ಹೆಚ್ಚಿರುವ ಪ್ರದೇಶಗಳನ್ನು ನಿರ್ದಿಷ್ಟವಾಗಿ ಆಯ್ಕೆ ಮಾಡಲಾಗುತ್ತದೆ. ಈ ಕಲ್ಪನೆಯು ದುಬೈನಲ್ಲಿ ಪ್ರಾರಂಭಿಸಲಾದ ವರ್ಕ್ ಫ್ರಮ್ ಪಾರ್ಕ್ ಸೌಲಭ್ಯದಿಂದ ಪ್ರೇರಿತವಾಗಿದೆ.
ವರ್ಕ್ ಫ್ರಮ್ ಪಾರ್ಕ್ ಸೌಲಭ್ಯ ಮೊದಲು ಈ ಎರಡು ಸ್ಥಳಗಳಲ್ಲಿ ಪ್ರಾರಂಭವಾಗಲಿದೆ:
ಪರಿಸರ ಸ್ನೇಹಿ ನೀತಿಗಳೊಂದಿಗೆ ಸ್ಥಳೀಯ ಜನರಿಗೆ ಅತ್ಯಾಧುನಿಕ ಜೀವನ ಮಟ್ಟವನ್ನು ಒದಗಿಸುವ ಗುರಿಯೊಂದಿಗೆ ಈ ಒಂದು ಅದ್ಭುತ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಸೈಬರಾಬಾದ್ ಮಹಾನಗರ ಪಾಲಿಕೆ ಆಯುಕ್ತೆ ಸೃಜನ ಹೇಳಿದರು. ಸಿಎಂಸಿ ಆಯುಕ್ತೆ ಜಿ. ಸೃಜನ ಅವರ ಪ್ರಕಾರ, ಈ ಯೋಜನೆಗೆ ಸ್ಥಳಗಳನ್ನು ಗುರುತಿಸಲಾಗಿದ್ದು, ಮಹಾನಗರ ಪಾಲಿಕೆಯೊಳಗೆ ಒಟ್ಟು 30 ರಿಂದ 40 ಉದ್ಯಾನವನಗಳನ್ನು ಈ ರೀತಿ ಅಭಿವೃದ್ಧಿಪಡಿಸುವ ಗುರಿ ಇದೆ. ಆರಂಭದಲ್ಲಿ, ಎರಡು ಪೈಲಟ್ ಯೋಜನೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಉದ್ಯಾನವನವನ್ನು ಸೆರಿಲಿಂಗಂಪಲ್ಲಿ ವಲಯದ ಮಜೀದ್‌ಬಂಡ ಮಾಧವ್ ಹಿಲ್ಸ್ ಕಾಲೋನಿಯಲ್ಲಿ ನಿರ್ಮಿಸಲಾಗುತ್ತಿದೆ. ಎರಡನೇ ಉದ್ಯಾನವನವನ್ನು ಕುಕತ್ಪಲ್ಲಿ ವಲಯದ ಮಾಧಾಪುರದಲ್ಲಿ ನಿರ್ಮಿಸಲಾಗುವುದು. ಈ ಸೌಲಭ್ಯವು ಜನವರಿ 1, 2027 ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
1.5 ಎಕರೆ ಉದ್ಯಾನವನದಲ್ಲಿ ಕಾರ್ಯಕ್ಷೇತ್ರವನ್ನು ನಿರ್ಮಿಸಲಾಗುತ್ತಿದೆ:
ಮಾಧವ ಹಿಲ್ಸ್ ಕಾಲೋನಿಯಲ್ಲಿರುವ ಈ ಉದ್ಯಾನವನವು ಸುಮಾರು 1.5 ಎಕರೆ ವಿಸ್ತೀರ್ಣದಲ್ಲಿದೆ. ಇದರ ಒಂದು ಭಾಗವನ್ನು ಕೆಲಸ ಮಾಡುವ ಜನರಿಗೆ ಮೀಸಲಿಡಲಾಗುವುದು, ಅವರು ತಮ್ಮ ಲ್ಯಾಪ್‌ಟಾಪ್‌ಗಳಲ್ಲಿ ಹಚ್ಚ ಹಸಿರಿನ ತೆರೆದ ವಾತಾವರಣದಲ್ಲಿ ಕುಳಿತು ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗುತ್ತಿದೆ. ಮಾಧಾಪುರದಲ್ಲಿಯೂ ಇದೇ ರೀತಿಯ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಉಚಿತ ವೈ-ಫೈ ನಿಂದ ಚಾರ್ಜಿಂಗ್ ವರಗೆ ಎಲ್ಲಾ ರೀತಿಯ ಸೌಲಭ್ಯಗಳು ಇರಲಿದೆ:
ಈ ವಿಶೇಷ ಪಾರ್ಕ್‌ಗಳು ಸಾಮಾನ್ಯ ಕಚೇರಿಗಳನ್ನು ಹೋಲುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹೊಂದಿವೆ. ಈ ಉದ್ಯಾನವನಗಳು ಉಚಿತ ಹೈ-ಸ್ಪೀಡ್ ವೈ-ಫೈ, ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್‌ಗಳು, ಆರಾಮದಾಯಕ ಆಸನಗಳು, ಕಾರ್ಯಸ್ಥಳಗಳು, ಸಭೆ ಸಭಾಂಗಣಗಳು, ಆಂಫಿಥಿಯೇಟರ್, ಆಯಾಸ ನಿವಾರಿಸಲು ವಿಶೇಷ ವಾಕಿಂಗ್ ಟ್ರ್ಯಾಕ್‌ಗಳು ಮತ್ತು ಅತ್ಯಾಧುನಿಕ ಶೌಚಾಲಯ ಸೌಲಭ್ಯಗಳು ಇರಲಿವೆ. ಅಲ್ಲದೆ ಕೆಲಸದ ನಡುವೆ ಉದ್ಯೋಗಿಗಳಿಗೆ ರಿಫ್ರೆಶ್ ಆಗಲು ಕಾಫಿ, ಟೀ ಮತ್ತು ತಿಂಡಿಗಳನ್ನು ನೀಡುವ ಕಿಯೋಸ್ಕ್‌ಗಳು ಅಥವಾ ಕೆಫೆಟೇರಿಯಾ ಸೌಲಭ್ಯಗಳೂ ಇರಲಿವೆ. ಇದಲ್ಲದೆ ಪಾರ್ಕಿಂಗ್ ಮತ್ತು ಭದ್ರತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಸ್ಥಾಪಿಸಲಾಗುತ್ತದೆ.
ಉದ್ಯಾನವನದಲ್ಲಿ ಕೆಲಸ ಮಾಡಲು ಹಣ ಪಾವತಿ ಮಾಡಬೇಕೇ?
ಈ ಸೌಲಭ್ಯವನ್ನು ಬಳಸುವುದಕ್ಕಾಗಿ ಸಿಎಂಸಿ ನಾಮಮಾತ್ರ ಶುಲ್ಕ ವಿಧಿಸುವ ಬಗ್ಗೆಯೂ ಯೋಚಿಸುತ್ತಿದೆ. ವರದಿಗಳ ಪ್ರಕಾರ ಪ್ರತಿ ವ್ಯಕ್ತಿಗೆ 50 ರಿಂದ 100 ರೂಪಾಯಿಗಳವರೆಗೆ ಶುಲ್ಕ ವಿಧಿಸಬಹುದು. ಈ ಹಣವನ್ನು ಉದ್ಯಾನವನಗಳನ್ನು ನಿರ್ವಹಿಸಲು ಮತ್ತು ಇತರ ಸೌಲಭ್ಯಗಳನ್ನು ಮುನ್ನಡೆಸಲು ಬಳಸಲಾಗುತ್ತದೆ.
ಇದನ್ನೂ ಓದಿ: ಸಾರ್ವಜನಿಕ ಸಾರಿಗೆಯನ್ನು ಬಳಸುವುದರಿಂದ ಈ ಎಲ್ಲಾ ಪ್ರಯೋಜನಗಳು ಲಭಿಸುತ್ತವೆ
ಈ ಉಪಕ್ರಮದಿಂದ ಯಾರಿಗೆಲ್ಲಾ ಉಪಯೋಗವಾಗಲಿದೆ?
ಯಾಂತ್ರಿಕ ಜೀವನವನ್ನು ನಡೆಸುವ ಐಟಿ ವೃತ್ತಿಪರರು ಉದ್ಯಾನವನದ ತಂಪಾದ ಮತ್ತು ಆಹ್ಲಾದಕರ ವಾತಾವರಣದಲ್ಲಿ ಕುಳಿತು ಕೆಲಸ ಮಾಡಲು ಈ ಉದ್ಯಾನವನವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ಉಪಕ್ರಮವು ಐಟಿ ವೃತ್ತಿಪರರು, ಫ್ರೀಲ್ಯಾನ್ಸರ್‌ಗಳು, ವಿದ್ಯಾರ್ಥಿಗಳು, ನವೋದ್ಯಮ ಸಂಸ್ಥಾಪಕರು ಮತ್ತು ಮನೆಯಿಂದ ಕೆಲಸ ಮಾಡುವವರಿಗೆ ಪ್ರಯೋಜನವನ್ನು ನೀಡಲಿದೆ. ಮನೆ ಅಥವಾ ಕಚೇರಿಗಿಂತ ಶಾಂತ ಸ್ಥಳದಲ್ಲಿ ಕೆಲಸ ಮಾಡಲು ಇಷ್ಟಪಡುವವರಿಗೆ, ಇದು ಉತ್ತಮ ಆಯ್ಕೆಯಾಗಿದೆ. ಇದು ಜನರು ಹಸಿರಿನಿಂದ ಸುತ್ತುವರೆದಿರುವ ಹೆಚ್ಚಿನ ಸಮಯವನ್ನು ಕಳೆಯಲು ಅನುವು ಮಾಡಿಕೊಡುತ್ತದೆ. ಹಸಿರು ಪ್ರಕೃತಿಯ ಮಡಿಲಲ್ಲಿ ಕೆಲಸ ಮಾಡುವ ಮೂಲಕ ಕೆಲಸದ ಜೀವನವನ್ನು ಹೆಚ್ಚು ಆಹ್ಲಾದಕರಗೊಳಿಸಲು ಈ ʼವರ್ಕ್ ಫ್ರಮ್ ಆಫೀಸ್ʼ ಉಪಕ್ರಮ ಉದ್ಯೋಗಿಗಳಿಗೆ ಅನುಕೂಲಕರವಾಗಲಿದೆ.
300 ಹೊಸ ಉದ್ಯಾನವನಗಳನ್ನು ನಿರ್ಮಿಸಲು ಸಿದ್ಧತೆಗಳು ನಡೆಯುತ್ತಿವೆ:
ಸೈಬರಾಬಾದ್‌ನಲ್ಲಿ ಹಸಿರು ವಾತಾವರಣವನ್ನು ಹೆಚ್ಚಿಸುವ ದೊಡ್ಡ ಯೋಜನೆಯ ಭಾಗವಾಗಿ ವರ್ಕ್ ಫ್ರಮ್ ಪಾರ್ಕ್ ಕಾರ್ಯನಿರ್ವಹಿಸಲಿದೆ. ನಗರ ಪಾಲಿಕೆಯು 300 ಹೊಸ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಮತ್ತು ಅಸ್ತಿತ್ವದಲ್ಲಿರುವ ಉದ್ಯಾನವನಗಳನ್ನು ಸುಧಾರಿಸಲು ಸಹ ಕೆಲಸ ಮಾಡುತ್ತಿದೆ. ಇದೀಗ, ಮೊದಲ ಎರಡು ಉದ್ಯಾನವನಗಳನ್ನು ನಿರ್ಮಿಸುವ ಪ್ರಕ್ರಿಯೆ ಆರಂಭವಾಗಿದ್ದು, ಈ ಪ್ರಯೋಗ ಯಶಸ್ವಿಯಾದರೆ, ಈ ಸೌಲಭ್ಯವನ್ನು ಇತರ ಉದ್ಯಾನವನಗಳಿಗೂ ವಿಸ್ತರಿಸಲಾಗುವುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




