ಈ 7 ದೇಶಗಳಲ್ಲಿ ವಾರಕ್ಕೆ ನಾಲ್ಕೇ ದಿನ ಕೆಲಸ!
ಫೆಬ್ರವರಿ 1ರಿಂದ ಪ್ರಾರಂಭವಾಗುವ 6 ತಿಂಗಳ ಕಾಲ ವಾರದಲ್ಲಿ 4 ದಿನದ ಕೆಲಸದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿರುವುದರಿಂದ ಜರ್ಮನಿಯು ಈಗ ಭಾರೀ ಸುದ್ದಿಯಲ್ಲಿದೆ. ವಾರದಲ್ಲಿ ಕೇವಲ 4 ದಿನ ಕೆಲಸ ಮಾಡಲು ಅವಕಾಶ ಇರುವ 7 ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ.
ಐಟಿ ಕಂಪನಿಗಳು ಸೇರಿದಂತೆ ಅನೇಕ ಕಂಪನಿಗಳಲ್ಲಿ ಶನಿವಾರ ಮತ್ತು ಭಾನುವಾರ ಉದ್ಯೋಗಿಗಳಿಗೆ ರಜೆ ಇರುತ್ತದೆ. ಇನ್ನು ಕೆಲವು ಕಂಪನಿಗಳಲ್ಲಿ ಭಾನುವಾರದ ಜೊತೆ ತಿಂಗಳಿನ 2 ಶನಿವಾರ ಮಾತ್ರ ರಜೆ ನೀಡಲಾಗುತ್ತದೆ. ಆದರೆ, ಹಲವೆಡೆ ವಾರದಲ್ಲಿ ಒಂದು ದಿನ ಮಾತ್ರ ರಜೆ ನೀಡಲಾಗುತ್ತದೆ. ಕೊವಿಡ್-19 ಸೋಂಕು ಕಾಣಿಸಿಕೊಂಡಾಗಿನಿಂದ ಬಹುತೇಕ ಸಂಸ್ಥೆಗಳಲ್ಲಿ ವರ್ಕ್ ಫ್ರಮ್ ಹೋಂ ಆಯ್ಕೆ ನೀಡಲಾಗಿದೆ. ಈಗೀಗ ಕೆಲವು ಕಂಪನಿಗಳು ಆಫೀಸಿಗೆ ಬಂದು ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಆದೇಶಿಸಿದ್ದರೂ ವಾರದಲ್ಲಿ 2 ದಿನ ಮಾತ್ರ ಆಫೀಸಿಗೆ ಹೋದರೆ ಸಾಕು ಎಂದು ಸೂಚನೆ ನೀಡಿದೆ.
ಕೋವಿಡ್-19 ಸಾಂಕ್ರಾಮಿಕದ ನಂತರ ಉದ್ಯೋಗಿಗಳ ಜೀವನಶೈಲಿಯಲ್ಲೂ ಬದಲಾವಣೆಯಾಗಿದೆ. ಮನೆಯಿಂದ ಕೆಲಸ ಮಾಡುವಾಗ ಆಫೀಸ್ ಕೆಲಸ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಿಕೊಂಡು ಕೆಲಸ ಮಾಡುತ್ತಿದ್ದುದನ್ನು ಗಮನಿಸಿದ ಹಲವು ಅಭಿವೃದ್ಧಿ ಹೊಂದಿದ ದೇಶಗಳ ಕಂಪನಿಗಳು ವಾರದಲ್ಲಿ 2 ದಿನದ ಬದಲು 3 ದಿನ ಉದ್ಯೋಗಿಗಳಿಗೆ ರಜೆ ನೀಡುತ್ತಿವೆ. ವಾರದಲ್ಲಿ ಕೇವಲ 4 ದಿನ ಕೆಲಸ ಮಾಡಲು ಅವಕಾಶ ಇರುವ 7 ದೇಶಗಳ ಬಗ್ಗೆ ಮಾಹಿತಿ ಇಲ್ಲಿದೆ.
2024ರ ಫೆಬ್ರವರಿ 1ರಿಂದ ಪ್ರಾರಂಭವಾಗುವ 6 ತಿಂಗಳ ಕಾಲ ವಾರದಲ್ಲಿ 4 ದಿನದ ಕೆಲಸದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿರುವುದರಿಂದ ಜರ್ಮನಿಯು ಈಗ ಭಾರೀ ಸುದ್ದಿಯಲ್ಲಿದೆ. 6 ತಿಂಗಳ ಕಾಲ ಪ್ರಾಯೋಗಿಕವಾಗಿ ಈ 4 ದಿನದ ಕೆಲಸದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಲು ನಿರ್ಧರಿಸಿರುವ ಜರ್ಮನಿ ಇದರಿಂದ ಏನೆಲ್ಲ ಬದಲಾವಣೆಯಾಗಲಿದೆ? ಉದ್ಯೋಗಿಗಳ ಕಾರ್ಯಕ್ಷಮತೆ ಹೆಚ್ಚಾಗಲಿದೆಯೇ? ಎಂಬುದನ್ನು ಅವಲೋಕಿಸಲಿದೆ.
ಇದನ್ನೂ ಓದಿ: ನಿದ್ರೆ ಮಾಡಲು ಪರದಾಡುತ್ತೀರಾ?; ನಿದ್ರಾಹೀನತೆ ಕ್ಯಾನ್ಸರ್ಗೂ ಕಾರಣವಾದೀತು ಎಚ್ಚರ!
ಹಾಗಂತ ವಾರದಲ್ಲಿ 4 ದಿನಗಳ ಕೆಲಸದ ಸಂಸ್ಕೃತಿಯನ್ನು ಆಯ್ಕೆ ಮಾಡಿದ ಏಕೈಕ ದೇಶ ಜರ್ಮನಿಯಲ್ಲ. ಇದನ್ನು ಅಳವಡಿಸಿಕೊಂಡ ಕೆಲವು ಅಭಿವೃದ್ಧಿ ಹೊಂದಿದ ದೇಶಗಳ ಮಾಹಿತಿ ಇಲ್ಲಿದೆ.
ಬೆಲ್ಜಿಯಂ:
2022ರಲ್ಲಿ ಬೆಲ್ಜಿಯಂ ಯುರೋಪಿಯನ್ ಯೂನಿಯನ್ (EU) 4 ದಿನದ ಕೆಲಸದ ಸಂಸ್ಕೃತಿಯನ್ನು ಐಚ್ಛಿಕವಾಗಿ ಮಾಡಿದ ಮೊದಲ ದೇಶವಾಯಿತು. ಆದರೆ, ಇಲ್ಲಿ ಈ ಮೊದಲು 5 ದಿನ ಕೆಲಸ ಮಾಡುತ್ತಿದ್ದಾಗ ವಾರಕ್ಕೆ ಎಷ್ಟು ಗಂಟೆ ಕೆಲಸ ಮಾಡಬೇಕಾಗಿತ್ತೋ ಅಷ್ಟೇ ಸಮಯ ವಾರದ 4 ದಿನದಲ್ಲಿ ಮಾಡಿ ಮುಗಿಸಬೇಕಾಗುತ್ತದೆ. ಅಂದರೆ, 4 ದಿನ ಕೆಲಸ ಮಾಡುವವರಿಗೆ ಕೆಲಸದ ಸಮಯದ ಅವಧಿಯನ್ನು ಹೆಚ್ಚು ಮಾಡಲಾಗಿದೆ. ಇಲ್ಲಿ ವಾರಕ್ಕೆ ಒಟ್ಟು ಕೆಲಸದ ಸಮಯ 40 ಗಂಟೆ.
ನೆದರ್ಲೆಂಡ್:
ಸರ್ಕಾರದ ಅಂಕಿಅಂಶಗಳ ಪ್ರಕಾರ, ನೆದರ್ಲೆಂಡ್ ಪ್ರಪಂಚದಲ್ಲಿ ಸರಾಸರಿ ಕಡಿಮೆ ಕೆಲಸದ ವಾರಗಳನ್ನು ಹೊಂದಿದೆ. ಅಲ್ಲಿನ ಜನರು ವಾರಕ್ಕೆ 29 ಗಂಟೆ ಮಾತ್ರ ಕೆಲಸ ಮಾಡುತ್ತಾರೆ. ವರದಿಗಳ ಪ್ರಕಾರ, ನೆದರ್ಲೆಂಡ್ ಯಾವುದೇ ಅಧಿಕೃತ ನಿಯಮಗಳನ್ನು ಹೊಂದಿಲ್ಲವಾದರೂ, ಅಲ್ಲಿನ ಜನರು ವಾರಕ್ಕೆ 4 ದಿನಗಳು ಮಾತ್ರ ಕೆಲಸ ಮಾಡುತ್ತಾರೆ.
ಡೆನ್ಮಾರ್ಕ್:
OECDಯ ವರದಿಯ ಪ್ರಕಾರ, ಡೆನ್ಮಾರ್ಕ್ ವಾರಕ್ಕೆ 33 ಗಂಟೆಗಳಷ್ಟು ಕಡಿಮೆ ಕೆಲಸದ ಸಮಯವನ್ನು ಹೊಂದಿದೆ. ಡೆನ್ಮಾರ್ಕ್ ಅಧಿಕೃತ 4 ದಿನದ ಕೆಲಸದ ವಾರದ ಆದೇಶವನ್ನು ಹೊಂದಿಲ್ಲದಿದ್ದರೂ ಅಲ್ಲಿನ ಜನರು ಸಾಮಾನ್ಯವಾಗಿ ವಾರಕ್ಕೆ 4 ದಿನಗಳು ಮಾತ್ರ ಕೆಲಸ ಮಾಡುತ್ತಾರೆ.
ಆಸ್ಟ್ರೇಲಿಯಾ:
ಆಸ್ಟ್ರೇಲಿಯಾದ 20 ಕಂಪನಿಗಳು ಪ್ರಾಯೋಗಿಕವಾಗಿ ವಾರದಲ್ಲಿ 4 ದಿನಗಳ ಕೆಲಸವನ್ನು ಅಭ್ಯಾಸ ಮಾಡುತ್ತಿವೆ. ಅದರ ಪ್ರಕಾರ, ಆಸ್ಟ್ರೇಲಿಯಾದಲ್ಲಿ ಉದ್ಯೋಗದಾತರು ತಮ್ಮ ಉದ್ಯೋಗಿಗಳು ವಾರಕ್ಕೆ 38 ಗಂಟೆಗಳ ಕಾಲ ಕೆಲಸ ಮಾಡಿಸುತ್ತಾರೆ. 100:80:100 ಮಾಡೆಲ್ ಎಂದು ಇದನ್ನು ಕರೆಯಲಾಗುತ್ತದೆ.
ಇದನ್ನೂ ಓದಿ: Curd Rice Benefits: ಚಳಿಗಾಲದಲ್ಲೂ ಮೊಸರನ್ನ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಾ?
ಜಪಾನ್:
ಜಪಾನ್‌ನ ತೀವ್ರವಾದ ಕೆಲಸದ ಸಂಸ್ಕೃತಿಗೆ ವಿರುದ್ಧವಾಗಿ 2021ರಲ್ಲಿ ಬಿಡುಗಡೆಯಾದ ವಾರ್ಷಿಕ ಆರ್ಥಿಕ ನೀತಿಯಲ್ಲಿ ಸರ್ಕಾರವು ದೇಶದಲ್ಲಿ ವಾರದಲ್ಲಿ 4 ದಿನದ ಕೆಲಸವನ್ನು ಆಯ್ಕೆ ಮಾಡಲು ಕಂಪನಿಗಳನ್ನು ಪ್ರೋತ್ಸಾಹಿಸುತ್ತಿದೆ. “ಅತಿಯಾದ ಕೆಲಸದಿಂದ ಸಾವು” ಎಂದು ಹೇಳಲಾಗುವ ಜಪಾನ್‌ನ ‘ಕರೋಶಿ’ ಸಂಸ್ಕೃತಿಯನ್ನು ತಡೆಗಟ್ಟುವುದು ಇದರ ಉದ್ದೇಶ. ಜನರು ಕೆಲಸದ ಹೊರಗೆ ಸಮಯ ಕಳೆಯಲು ಅವಕಾಶ ನೀಡುವುದು ಸಹ ಇದರ ಉದ್ದೇಶವಾಗಿದೆ. ಇದು ಆರ್ಥಿಕತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಏಕೆಂದರೆ ಆಗ ಜನರು ಹೆಚ್ಚು ಹಣವನ್ನು ಖರ್ಚು ಮಾಡುತ್ತಾರೆ ಮತ್ತು ತಮ್ಮ ಕುಟುಂಬದೊಂದಿಗೆ ಸಮಯ ಕಳೆಯುತ್ತಾರೆ. ಇದು ದೇಶದಲ್ಲಿ ಹೆಚ್ಚು ಮಕ್ಕಳ ಜನನಕ್ಕೆ ಕೊಡುಗೆ ನೀಡುತ್ತದೆ. ಜಪಾನ್ ಜನಸಂಖ್ಯೆ ಹೆಚ್ಚಳದ ಬಗ್ಗೆಯೂ ಆದ್ಯತೆ ನೀಡುತ್ತಿದೆ.
ಸ್ಪೇನ್:
ವರದಿಗಳ ಪ್ರಕಾರ, ಸ್ಪ್ಯಾನಿಷ್ ಸರ್ಕಾರವು 50 ಮಿಲಿಯನ್ ಯುರೋಗಳನ್ನು ವಾರದ 4 ದಿನಗಳ ಕೆಲಸದ ಪ್ರಯೋಗಕ್ಕಾಗಿ ಹೂಡಿಕೆ ಮಾಡಲು ಯೋಜಿಸಿದೆ. 3 ವರ್ಷಗಳವರೆಗೆ ಈ ಪ್ರಯೋಗ ನಡೆಯುತ್ತದೆ. ಸ್ಪೇನ್‌ನಲ್ಲಿ ಸುಮಾರು 200 ಕಂಪನಿಗಳು ಇದನ್ನು ಅಳವಡಿಸಿಕೊಳ್ಳುವ ಸಾಧ್ಯತೆಯಿದೆ.
ಇಂಗ್ಲೆಂಡ್:
2022ರಲ್ಲಿ ಯುನೈಟೆಡ್ ಕಿಂಗ್‌ಡಮ್ (ಇಂಗ್ಲೆಂಡ್) ವಾರದ 4 ದಿನಗಳ ಕೆಲಸವನ್ನು ಅನುಸರಿಸಿತು. ಪ್ರಾಯೋಗಿಕ ರನ್‌ನಲ್ಲಿ 61 ಕಂಪನಿಗಳು ಮತ್ತು 300ಕ್ಕೂ ಹೆಚ್ಚು ಉದ್ಯೋಗಿಗಳು ಇದರಲ್ಲಿ ಭಾಗವಹಿಸಿದ್ದರು. ಆದರೆ, 4 ದಿನದಲ್ಲಿ ಇಲ್ಲಿನ ಉದ್ಯೋಗಿಗಳು ಗರಿಷ್ಠ 48 ಗಂಟೆಗಳವರೆಗೆ ಕೆಲಸ ಮಾಡುತ್ತಿದ್ದರು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ