National Statistics Day 2024 : ಪ್ರೊ. ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಜನ್ಮದಿನದಂದು ರಾಷ್ಟ್ರೀಯ ಅಂಕಿ ಅಂಶ ದಿನವನ್ನು ಆಚರಿಸುವುದು ಏಕೆ? ಇಲ್ಲಿದೆ ಮಾಹಿತಿ
ಪ್ರತಿ ವರ್ಷ ಜೂನ್ 29 ರಂದು ರಾಷ್ಟ್ರೀಯ ಅಂಕಿ ಅಂಶ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಭಾರತದ ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊ. ಪ್ರಶಾಂತ ಚಂದ್ರ ಮಹಲನೋಬಿಸ್ ಅವರ ಜನ್ಮದಿನವಾಗಿದೆ. ಅದಲ್ಲದೇ, ಅಂಕಿ ಅಂಶಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಹಾಗಾದ್ರೆ ಈ ದಿನದ ಇತಿಹಾಸ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.
ದಿನನಿತ್ಯದ ಬದುಕಿನಲ್ಲಿ ನಾವು ಅಂಕಿ ಅಂಶಗಳನ್ನು ಬಳಕೆ ಮಾಡುತ್ತೇವೆ. ಅದಲ್ಲದೇ ದೇಶದ ಪ್ರಗತಿಯಲ್ಲಿ ಮಾಹಿತಿಯನ್ನು ಪಡೆಯಲು ಹಾಗೂ ಸರಕಾರಿ ಯೋಜನೆಗಳನ್ನು ರೂಪಿಸುವಲ್ಲಿ ಅಂಕಿ ಸಂಖ್ಯೆಗಳ ಪಾತ್ರವು ಅಗಾಧವಾಗಿದೆ. ಈ ನಿಟ್ಟಿನಲ್ಲಿ ಈ ಅಂಕಿ ಅಂಶಗಳ ಬಳಕೆಯನ್ನು ಮತ್ತಷ್ಟು ಜನಪ್ರಿಯಗೊಳಿಸಲು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಜೂನ್ 29 ರಂದು ರಾಷ್ಟ್ರೀಯ ಅಂಕಿ ಅಂಶ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನವಾಗಿದ್ದು, ಮಹಲನೋಬಿಸ್ ಅವರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗೆ ಗೌರವ ಸಲ್ಲಿಸಲಾಗುತ್ತದೆ.
ರಾಷ್ಟ್ರೀಯ ಅಂಕಿ ಅಂಶ ದಿನದ ಇತಿಹಾಸ:
ಸ್ಟ್ಯಾಟಿಸ್ಟಿಕ್ಸ್ ಅಥವಾ ಸಂಖ್ಯಾಶಾಸ್ತ್ರಕ್ಕೆ ಪ್ರಶಾಂತ ಚಂದ್ರ ಮಹಲನೋಬಿಸ್ ಅವರು ನೀಡಿದ ಕೊಡುಗೆಯನ್ನು ಗೌರವಿಸುವ ಉದ್ದೇಶದಿಂದ 2006ರಲ್ಲಿ ಭಾರತವು ಸರ್ಕಾರವು ಅವರ ಜನ್ಮದಿನವನ್ನು ರಾಷ್ಟ್ರೀಯ ಅಂಕಿ-ಅಂಶ ದಿನವೆಂದು ಫೋಷಿಸಲು ನಿರ್ಧಾರ ಮಾಡಿತು. ಜೂನ್ 5, 2007 ರಂದು ಭಾರತೀಯ ಗಜೆಟ್‌ನಲ್ಲಿ ಈ ದಿನವನ್ನು ಅಧಿಕೃತವಾಗಿ ಘೋಷಣೆ ಮಾಡುವ ಮೂಲಕ ಪ್ರಕಟಿಸಲಾಯಿತು. ಜೂನ್ 29, 2007 ರಂದು ಮೊದಲ ಬಾರಿ ರಾಷ್ಟ್ರೀಯ ಅಂಕಿ-ಅಂಶ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ರಾಷ್ಟ್ರೀಯ ಅಂಕಿಅಂಶ ದಿನವನ್ನು ಆಚರಿಸುತ್ತ ಬರಲಾಗುತ್ತಿದೆ.
ಇದನ್ನೂ ಓದಿ: ನಿಮ್ಮ ಮಗ ಹುಡುಗಿಯ ಹಿಂದೆ ಬಿದ್ದಿದ್ದಾನೆ ಎಂದು ಪತ್ತೆ ಮಾಡುವುದು ಹೇಗೆ?
ರಾಷ್ಟ್ರೀಯ ಅಂಕಿ ಅಂಶದ ದಿನದ ಮಹತ್ವ ಹಾಗೂ ಆಚರಣೆ:
ದೇಶದ ಪ್ರಗತಿಯನ್ನು ತಿಳಿಯಲು ಅಂಕಿ ಅಂಶಗಳ ಮಾಹಿತಿಯು ಅಗತ್ಯವಾಗಿದೆ. ಹೀಗಾಗಿ ಆರ್ಥಿಕ ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಮತ್ತು ಪ್ರಾಮುಖ್ಯತೆ ಬಗ್ಗೆ ತಿಳಿಸಿಕೊಡಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶವಾಗಿದೆ. ಅದಲ್ಲದೇ ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಪ್ರೊಫೆಸರ್ ಮಹಲನೋಬಿಸ್ ಅವರು ನೀಡಿದ ಕೊಡುಗೆಗಳನ್ನು ಜನರಿಗೆ ತಿಳಿಸುವುದು ಮುಖ್ಯವಾಗಿದೆ. ಸರ್ಕಾರದ ಅಂಕಿ-ಅಂಶ ವ್ಯವಸ್ಥೆಗೆ ಕೊಡುಗೆ ನೀಡಿದವರನ್ನು ಗೌರವಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ದೇಶದ ಪ್ರಗತಿಗೆ ಅಂಕಿ ಅಂಶಗಳ ಪಾತ್ರವೇನು ಎನ್ನುವುದನ್ನು ತಿಳಿಸಲು ಸೆಮಿನಾರ್ ಗಳು, ಸಮ್ಮೇಳನಗಳು ಹಾಗೂ ಚರ್ಚಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ