ಯೋಗ ನರಸಿಂಹನಿಗೆ ಈ ಒಂದು ಸೇವೆ ಮಾಡಿಸಿ, ಕಂಕಣ, ಸಂತಾನ ಭಾಗ್ಯ ಖಂಡಿತ
ಒಂದು ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮತ್ತೊಂದು ಕಡೆ ಕೊಂಕಣ ರೈಲ್ವೆ ಮಾರ್ಗ ಇದರ ಮಧ್ಯ ಸುಂದರವಾದ ಪ್ರದೇಶದಲ್ಲಿ ಶಾಂತವಾಗಿ ಕುಳಿತ ಯೋಗ ನರಸಿಂಹ. ಈ ಸುಂದರ ದೃಶ್ಯವನ್ನು ಹೊಗಳುವುದಕ್ಕಿಂತ ನೋಡುವುದು ಬಲು ಚೆಂದ. ಈ ಕ್ಷೇತ್ರ ಪ್ರವಾಸಿಗರಿಗೆ ಅಷ್ಟು ಪರಿಚಿತವಲ್ಲದಿದ್ದರೂ ಕೂಡ ಇಲ್ಲಿ ಭಕ್ತಿಯಿಂದ ನಡೆದುಕೊಳ್ಳುವವರು ದೇಶ ವಿದೇಶಗಳಲ್ಲಿದ್ದಾರೆ. ಇಲ್ಲಿ ನೆಲಿಸಿರುವ ನರಸಿಂಹ ಬೇಡಿ ಬಂದವರನ್ನು ಬರಿಗೈಯಲ್ಲಿ ಕಳಿಸಿದ್ದೇ ಇಲ್ಲ. ಅಂತಹ ಶಕ್ತಿ ಇಲ್ಲಿನ ದೇವರಿಗಿದೆ. ಅದರಂತೆ ಈ ನರಸಿಂಹನ ಪರಿವಾರ ದೇವತೆಗಳು ಕೂಡ ಬಹಳ ಶಕ್ತಿಶಾಲಿಯಾಗಿದೆ. ಎಲ್ಲಕಿಂತ ಮಿಗಿಲಾಗಿ ಇಲ್ಲಿನ ದೇವರಿಗೆ ಮಾಡುವ ನೈವೇದ್ಯವೇ ಈ ಸ್ಥಳದ ವಿಶೇಷತೆ. ಹಾಗಾದರೆ ಯಾವ ರೀತಿಯ ಪ್ರಸಾದ ಇಲ್ಲಿನ ದೇವರಿಗೆ ಪ್ರೀಯವಾದದ್ದು? ಈ ದೇವಸ್ಥಾನದ ಹಿನ್ನೆಲೆಯೇನು? ಈ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ಜೀವನದಲ್ಲಿ ಬರುವ ಸಮಸ್ಯೆಗಳನ್ನು ನಾವಾಗಿಯೇ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲದಿದ್ದಾಗ ದೇವರ ಮೊರೆ ಹೋಗುವುದು ಸಹಜ. ಈ ಸ್ಥಳದಲ್ಲಿಯೂ ಹಾಗೆಯೇ ಜನ ತಮ್ಮ ಕಷ್ಟಗಳನ್ನು ಹೇಳಿಕೊಳ್ಳಲು ಯೋಗ ಮಾಡುತ್ತಾ ಕುಳಿತ ನರಸಿಂಹನ ಬಳಿ ಓಡೋಡಿ ಬರುತ್ತಾರೆ. ಉಗ್ರರೂಪಿಯಾದ ನರಸಿಂಹ ಯೋಗದ ಭಂಗಿಯಲ್ಲಿ (Yoga Narasimha Swamy Temple) ಶಾಂತವಾಗಿ ಕುಳಿತಿರುವುದನ್ನು ನೋಡುವುದೇ ಚೆಂದ. ಅಂದಹಾಗೆ ಈ ದೇವಸ್ಥಾನವಿರುವುದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ (Honnavar) ತಾಲೂಕಿನ ಗುಣವಂತೆಯ ಹತ್ತಿರವಿರುವ ಹಕ್ಕಲಕೇರಿ (Hakkalakeri) ಎಂಬ ಚಿಕ್ಕ ಗ್ರಾಮದಲ್ಲಿ. ಈ ದೇವರಿರುವ ಊರು ಬಹಳ ಚಿಕ್ಕದಾದರೂ ಕೂಡ ಈತನನ್ನು ನಂಬಿರುವ ಜನ ದೇಶದಾದ್ಯಂತ ಇದ್ದಾರೆ. ಈ ಸ್ಥಳದ ಮಹಿಮೆಯೇ ಅಂತದ್ದು, ಇಲ್ಲಿನ ವಿಶೇಷತೆಗಳ ತಿಳಿಯ ಹೊರಟವರಿಗೆ ಕುತೂಹಲದ ಮಳೆಯೇ ಸುರಿಯುವಷ್ಟು ಸಂಗತಿಗಳು ಇಲ್ಲಿವೆ. ಈ ಸ್ಥಳಕ್ಕೆ ಮಕ್ಕಳ ಭಾಗ್ಯವನ್ನು ಬಯಸಿ ಬರುವವರು ಹೆಚ್ಚಾಗಿದ್ದು, ಉಪ್ಪು ಹಾಕದೆಯೇ ಮಾಡುವ ಕಡುಬಿನ ಸೇವೆಯೇ ಈ ಸ್ಥಳದ ವಿಶೇಷ. ಹಾಗಾದರೆ ಈ ದೇವಸ್ಥಾನದ ಇತಿಹಾಸವೇನು? ಇಲ್ಲಿಗೆ ಬರುವುದು ಹೇಗೆ? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Narasimha Temple
ದೇವಸ್ಥಾನದ ಇತಿಹಾಸ ಬಲು ಸುಂದರ
ರಾಷ್ಟ್ರೀಯ ಹೆದ್ದಾರಿ -66 ಮತ್ತು ಕೊಂಕಣ ರೈಲ್ವೆ ಮಾರ್ಗ ಮಧ್ಯ ಇರುವ ಶ್ರೀ ಯೋಗ ನರಸಿಂಹ ದೇವಸ್ಥಾನ್ಕಕೆ ಸುಮಾರು ಐದು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸವಿದೆ. ಹಿಂದೆ ಈ ದೇವಸ್ಥಾನದ ಹಿಂದಿರುವ ಗುಹೆಯಲ್ಲಿ ನರಸಿಂಹ ಸ್ವಾಮಿ ತಪಸ್ಸು ಮಾಡಿದ್ದು ಅದಕ್ಕಾಗಿಯೇ ಈ ದೇವಸ್ಥಾನಕ್ಕೆ ಈ ಹೆಸರು ಬಂದಿದೆ ಎಂಬ ನಂಬಿಕೆ ಇದೆ. ಒಂದು ತಿಂಗಳ ಹಿಂದೆಯಷ್ಟೇ ಈ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ನಡೆದಿದ್ದು ಬರುವ ಭಕ್ತಾದಿಗಳಿಗೆ ಪ್ರತಿಯೊಂದು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಇಲ್ಲಿರುವ ಯೋಗ ನರಸಿಂಹನ ಮೂರ್ತಿ ತುಂಬಾ ವಿಶೇಷವಾಗಿದ್ದು ಭಾರತದಲ್ಲಿ ಎಲ್ಲಿಯೂ ಈ ರೀತಿಯ ಮೂರ್ತಿ ಕಂಡು ಬರುವುದಿಲ್ಲ. ಅಲ್ಲದೆ ಯೋಗ ಮಾಡುವ ಭಂಗಿಯಲ್ಲಿ ನರಸಿಂಹನ ದೇವಾಲಯವಿರುವುದು ವಿಶೇಷ. ಇನ್ನು ಈ ದೇವರಿಗೆ ಬೆಳ್ಳಿ ಕಟ್ಟಿನ ಚೌಡಮ್ಮ, ಜಟಕಾ ನಾಗ, ಹುಲಿಯಪ್ಪ, ಯಕ್ಷಿ ಎಂಬ ಪರಿವಾರ ದೇವತೆಗಳಿದ್ದು ಮೂರ್ತಿಯ ಹತ್ತು ಪಟ್ಟು ಶಕ್ತಿ ಈ ದೇವತೆಗಳಿಗಿದೆ ಎಂದು ನಂಬಲಾಗಿದೆ. ಇಲ್ಲಿರುವ ಕೆರೆ ಎಷ್ಟೇ ಬಿರು ಬೇಸಗೆಯಲ್ಲಿಯೂ ಬತ್ತದೆ ವರ್ಷ ಪೂರ್ತಿ ನೀರಿನಿಂದ ತುಂಬಿರುತ್ತದೆ. ಇನ್ನು ಕೆರೆಯ ಒಂದು ಭಾಗದಲ್ಲಿ ನೀರು ತಾನಾಗಿಯೇ ಉದ್ಭವವಾಗುತ್ತಿದ್ದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ. ಇನ್ನು ಯೋಗ ಮಾಡುತ್ತಾ ಕುಳಿತಿರುವ ಈ ನರಸಿಂಹನಿಗೆ ಮಳೆಗಾಲದಲ್ಲಿ ಮಾತ್ರ ಸುತ್ತು ಮೂರು ದಿಕ್ಕುಗಳಲ್ಲಿಯೂ ತೊರೆಗಳು ಹರಿದು ಹೋಗಿ ತಂಪು ನೀಡುತ್ತದೆ.
ಐತಿಹ್ಯದ ಪ್ರಕಾರ, ಹಿಂದೆ ಈ ಊರಲ್ಲಿ ದನಗಳು ಒಂದಾದ ಬಳಿಕ ಒಂದು, ಹುಲಿಯ ಬಾಯಿಗೆ ಸಿಕ್ಕಿ ಸಾಯುತ್ತಿತ್ತಂತೆ. ಗ್ರಾಮದ ಜನ ಇದಕ್ಕೆ ಬೇಸತ್ತು ನರಸಿಂಹನ ಬಳಿ ಬಂದು ನಮ್ಮ ಹಸುಗಳನ್ನು ರಕ್ಷಿಸುವಂತೆ ಕೇಳಿಕೊಂಡರಂತೆ. ಅದಾದ ಬಳಿಕ ಇಲ್ಲಿ ಹುಲಿ ಮತ್ತು ದನ ಎರಡು ಕೂಡ ಅನ್ಯೋನ್ಯವಾಗಿ ಇದ್ದು, ಒಟ್ಟಿಗೆ ದೇವರ ಕೆರೆಗೆ ಬಂದು ನೀರು ಕುಡಿಯುತ್ತಿತ್ತು ಎಂದು ಹೇಳಲಾಗುತ್ತದೆ. ಇಲ್ಲಿ ಎನಾದರೂ ತಪ್ಪುಗಳು ಆದಾಗ ಅಥವಾ ಅಪ್ಪಿತಪ್ಪಿ ನೈವೇದ್ಯಕ್ಕೆ ಉಪ್ಪು ಹಾಕಿದರೆ ಈ ಸ್ಥಳದಲ್ಲಿ ಹುಲಿ ಬಂದು ಕೂಗುತ್ತದೆ ಎನ್ನುವ ನಂಬಿಕೆ ಇದೆ.
ಈ ದೇವಸ್ಥಾನದ ವಿಶೇಷತೆ ಏನು?
ಯೋಗ ನರಸಿಂಹನ ಸನ್ನಿಧಾನದಲ್ಲಿ ಕಡುಬಿನ ಸೇವೇಯೇ ಬಹಳ ವಿಶೇಷ. ಏಕೆಂದರೆ ಹಲಸಿನ ಎಲೆಯಲ್ಲಿ ಕಡುಬು ಮಾಡಿ ಅದಕ್ಕೆ ಉಪ್ಪನ್ನು ಹಾಕದೆಯೇ ದೇವರಿಗೆ ನೈವೇದ್ಯ ಮಾಡಲಾಗುತ್ತದೆ. ಎಷ್ಟೋ ವರ್ಷಗಳಿಂದ ಸಂತಾನ ಭಾಗ್ಯವಿಲ್ಲದೆಯೇ ಕೊರಗುತ್ತಿದ್ದವರು ಈ ದೇವರ ಮೊರೆ ಹೋಗುತ್ತಾರೆ. ಇನ್ನು ಕಂಕಣ ಭಾಗ್ಯ ಕೂಡಿ ಬರದಿರುವವರು ಕೂಡ ಇಲ್ಲಿಗೆ ಬರುತ್ತಾರೆ. ಇದು ಕರಾವಳಿ ಭಾಗದಲ್ಲಿರುವುದರಿಂದ ಮೀನುಗಾರರು ಈ ದೇವರನ್ನು ಹೆಚ್ಚು ನಂಬುತ್ತಾರೆ. ತಾವು ಸಮುದ್ರಕ್ಕೆ ಇಳಿಯುವ ಮೊದಲು ಈ ದೇವರ ಬಳಿ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಇಲ್ಲಿಗೆ ಬಂದವರು ಯಾರೂ ಕೂಡ ಕೆಲಸ ಆಗಿಲ್ಲ ಎಂದು ಹೇಳುವುದೇ ಇಲ್ಲ. ಮಕ್ಕಳ ಭಾಗ್ಯವೇ ಇಲ್ಲ ಎಂದುಕೊಂಡವರಿಗೂ ಈ ಸ್ಥಳಕ್ಕೆ ಬಂದು ಹೋದ ಮೇಲೆ ಮಕ್ಕಳಾಗಿರುವ ಎಷ್ಟೋ ನಿದರ್ಶನಗಳಿವೆ. ಅಷ್ಟು ಮಾತ್ರವಲ್ಲ ದನ- ಕರುಗಳಿಗೆ ಹುಷಾರಿಲ್ಲದೆ ಇನ್ನೇನು ಸಾಯುವ ಹಂತದ್ಲಲಿದ್ದರೂ ಕೂಡ ಈ ದೇವರ ಪ್ರಸಾದ ಹಾಕಿದ ಮೇಲೆ ಅದು ಬದುಕುಳಿದ ಎಷ್ಟೋ ಸನ್ನಿವೇಶಗಳನ್ನು ನೀವಿಲ್ಲಿ ನೋಡಬಹುದು. ಈ ಗ್ರಾಮದಲ್ಲಿ ದನ ಕಾಣೆಯಾದರೆ ಜನ ಮೊದಲು ಬರುವುದು ಇಲ್ಲಿಗೆ. ಈ ದೇವರ ಬಳಿ ಬಂದು ತಮ್ಮ ಸಮಸ್ಯೆ ಹೇಳಿಕೊಂಡ ದಿನವೇ ಅವರ ಸಮಸ್ಯೆ ಬಗೆಹರಿದಿರುತ್ತದೆ. ಅಂತಹ ಶಕ್ತಿ ಈ ನರಸಿಂಹನಿಗಿದೆ. ಮಾತ್ರವಲ್ಲ, ಎಲ್ಲಿ ಬಂದು ತಮ್ಮ ಯಾವುದೇ ರೀತಿಯ ಸಮಸ್ಯೆ ಹೇಳಿಕೊಂಡು, ಇದು ನೆರವೇರಿದರೆ ನಿನ್ನ ಸನ್ನಿಧಿಗೆ ಬಂದು ಕಡುಬಿನ ಸೇವನೆ ಮಾಡುತ್ತೇನೆ ಎಂದು ಭಕ್ತಿಯಿಂದ ಬೇಡಿ ಬಂದರೆ ಯಾವುದೇ ಸಮಸ್ಯೆಯಾಗಲಿ ಅದು ನೆರವೇರುತ್ತದೆ. ಈ ದೇವಸ್ಥಾನದಲ್ಲಿ ಸಿಂಗಾರವಿಟ್ಟು ಪ್ರಸಾದ ಕೇಳಲಾಗುತ್ತದೆ. ಜನರು ಜಾಗ, ನೀರು ಹೀಗೆ ನಾನಾ ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ದೇವರ ಬಳಿ ಪ್ರಶ್ನೆ ಇಟ್ಟು ಉತ್ತರ ಕಂಡುಕೊಳ್ಳುತ್ತಾರೆ.
ಇದನ್ನೂ ಓದಿ: ಈ ದೇವಾಲಯದ ದೇವಿಗೆ ಒಂದೇ ಒಂದು ಹರಕೆ ನೀಡಿ, ಮದುವೆಗೆ ಯಾವುದೇ ಸಂಕಷ್ಟ ಬರಲ್ಲ
ಯಾವ ಪ್ರವಾಸಿ ತಾಣಗಳು ಇಲ್ಲಿಗೆ ಹತ್ತಿರವಿದೆ
ಕಾರವಾರದಿಂದ ದಕ್ಷಿಣ ದಿಕ್ಕಿನಲ್ಲಿ ಸುಮಾರು 90 ಕಿ. ಮೀ ಬಂದರೆ ಈ ದೇವಸ್ಥಾನ ಸಿಗುತ್ತದೆ. ಈ ಸ್ಥಳಕ್ಕೆ ಬಂದವರು ಇಲ್ಲಿಂದ ಕೇವಲ 4 ಕಿ. ಮೀ ದೂರವಿರುವ ಪ್ರಸಿದ್ಧ ಇಡಗುಂಜಿ ಶ್ರೀ ಮಹಾಗಣಪತಿ ದೇವಾಲಯವನ್ನು ನೋಡಬಹುದು. ಈ ದೇವಸ್ಥಾನದಲ್ಲಿ ಗಣಪತಿ ನಿಂತಿರುವ ರೂಪದಲ್ಲಿ ನೋಡಲು ನಿಮಗೆ ಸಿಗುತ್ತಾನೆ. ಇನ್ನು ಪಂಚಕ್ಷೇತ್ರಗಳಲ್ಲಿ ಒಂದಾದ ಗುಣವಂತೆ ಮಹಾಲಿಂಗೇಶ್ವರನ ದೇವಾಲಯ ಇಲ್ಲಿಂದ 3 ಕಿ. ಮೀ ಅಂತರದಲ್ಲಿದೆ. ಇನ್ನು ಪ್ರಸಿದ್ಧ ಮುರುಡೇಶ್ವರನ ದೇವಾಲಯ ಇಲ್ಲಿಂದ 15 ಕಿ. ಮೀ ದೂರದಲ್ಲಿದೆ. ಭಟ್ಕಳದಿಂದ 28 ಕಿಮೀ ದೂರವಿದೆ. ದೇವಸ್ಥಾನಗಳ ಹೊರತಾಗಿ ಈ ಜಾಗದಿಂದ ಅಪ್ಸರಕೊಂಡ ಸಮುದ್ರ, ಕಾಂಡ್ಲ ವನ, ಬೊಟ್ ರೈಡ್ ಗಳಿಗೆ ಹೋಗುವ ಮೂಲಕ ನಿಮ್ಮ ಪ್ರವಾಸದ ದಿನವನ್ನು ಸುಂದರವಾಗಿಸಿಕೊಳ್ಳಬಹುದು.









