ಮಹಿಳೆಯರ ಆರೋಗ್ಯ ಹೆಚ್ಚಿಸುತ್ತವೆ ಈ 7 ಸೂಪರ್ ಫುಡ್ಗಳು
ಸಮೃದ್ಧವಾದ ವಿಟಮಿನ್ ಸಿ ಅಂಶಗಳನ್ನು ಹೊಂದಿರುವ ಬೆರಿ ಹಣ್ಣುಗಳು ಹೆಚ್ಚು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನೂ ಕೂಡ ಹೊಂದಿದೆ. ಇವು ಚರ್ಮದಲ್ಲಿನ ಸುಕ್ಕುಗಟ್ಟಿರುವುದನ್ನು ಕಡಿಮೆ ಮಾಡುತ್ತದೆ
ಆರೋಗ್ಯಯುತವಾಗಿರಲು ಆಹಾರ (Food) ಅತೀ ಮುಖ್ಯವಾಗಿರುತ್ತದೆ. ಅದರಲ್ಲೂ ನ್ಯೂಟ್ರಿಷಿಯನ್ ಇರುವ ಆಹಾರಗಳು ಮಹಿಳೆಯರ ಆರೋಗ್ಯವನ್ನು ಉತ್ತಮ ಪಡಿಸಲು ನೆರವಾಗುತ್ತದೆ. ಎಲ್ಲರಿಗೂ ಅಂದವಾಗಿ ಕಾಣಬೇಕು, ಚರ್ಮ ಕಾಂತಿಯುತವಾಗಿರಬೇಕು ಎನ್ನುವ ಹಂಬಲವಿರುತ್ತದೆ. ಅದಕ್ಕೆ ತಕ್ಕ ಹಾಗೆ ಆಹಾರ ಸೇವನೆ ಕೂಡ ಅಗತ್ಯವಾಗಿರುತ್ತದೆ. ಅದಕ್ಕೆ ಸೂಪರ್ ಫುಡ್ (Super Food) ಗಳು ನಿಮಗೆ ನೆರವಾಗಲಿದೆ. ಪ್ರತಿದಿನ ಸೂಪರ್ ಫುಡ್ಗಳನ್ನು ಸೇವಿಸುವುದರಿಂದ ದೇಹವನ್ನು ಫಿಟ್ ಆಗಿಡಲು ನೆರವಾಗುತ್ತದೆ. ಮಾಸಿಕ ದಿನಗಳಲ್ಲಿ ಆರೋಗ್ಯವಾಗಿರಲು, ಗರ್ಭಿಣಿಯರ ಆರೋಗ್ಯಕ್ಕೂ ಈ ಸೂಪರ್ ಫುಡ್ಗಳು ಒಳ್ಳೆಯದು. ಹಾಗದರೆ ಯಾವೆಲ್ಲಾ ಸೂಪರ್ ಫುಡ್ಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಒಳಿತು ಎನ್ನುವುದನ್ನು ತಿಳಿದುಕೊಳ್ಳಿ.
ಧಾನ್ಯಗಳು: ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ಅಧಿಕ ಪೈಬರ್ ಅಂಶಗಳನ್ನು ಹೊಂದಿರುವ ಧಾನ್ಯಗಳು ದೇಹವನ್ನು ಆರೋಗ್ಯಯುತವಾಗಿಡಲು ಸಹಾಯಕವಾಗಿದೆ. ನವಣೆ, ರಾಗಿ, ಓಟ್ಸ್ನಂತಹ ಆಹಾರಗಳು ದೇಹದ ಸ್ವಾಸ್ಥ್ಯವನ್ನು ಕಾಪಾಡುತ್ತದೆ. ಇವು ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ.
ಡಾರ್ಕ್ ಚಾಕಲೇಟ್: ಡಾರ್ಕ್ ಚಾಕಲೇಟ್ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್ಗಳು ನೆನಪಿನ ಶಕ್ತಿಯನ್ನು ಹೆಚ್ಚಿಸಲು ಸಹಾಯಮಾಡುತ್ತದೆ. ಜತೆಗೆ ಹೃದಯ ಮತ್ತು ಕ್ಯಾನ್ಸರ್ ಬಗೆಗಿನ ಸಮಸ್ಯೆಗಳನ್ನೂ ತಡೆಗಟ್ಟಲು ಸಹಾಯಕವಾಗಿದೆ. ಹೀಗಾಗಿ ಡಾರ್ಕ್ ಚಾಕಲೇಟ್ಗಳನ್ನು ಸೂಪರ್ ಫುಡ್ ಎಂದು ಕರೆಯುತ್ತಾರೆ.
ಬೆರಿ ಹಣ್ಣುಗಳು: ಸಮೃದ್ಧವಾದ ವಿಟಮಿನ್ ಸಿ ಅಂಶಗಳನ್ನು ಹೊಂದಿರುವ ಬೆರಿ ಹಣ್ಣುಗಳು ಹೆಚ್ಚು ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನೂ ಕೂಡ ಹೊಂದಿದೆ. ಚರ್ಮದಲ್ಲಿನ ಸುಕ್ಕುಗಟ್ಟಿದ ಅಂಶವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಮಹಿಳೆಯರ ಮೇಲೆ ಪರಿಣಾಮ ಬೀರುವ ಮೂತ್ರನಾಳದ ಸೋಂಕುಗಳಿಗೆ (UTIs) ಕ್ರ್ಯಾನ್‌ಬೆರಿಗಳು ಪರಿಣಾಮಕಾರಿ ಚಿಕಿತ್ಸೆಯಾಗಿದೆ.
ನವಣೆ: ಸೂಪರ್ ಫುಡ್ಗಳ ಪೈಕಿ ನವಣೆ ಉತ್ತಮ ಆಹಾರವಾಗಿದೆ. ಯಥೇಚ್ಛವಾದ ವಿಟಮಿನ್ ಬಿ, ಇ, ಕ್ಯಾಲ್ಸಿಯಂ ಅಂಶವಿರುವ ನವಣೆ ಜೀರ್ಣಶಕ್ತಿಯನ್ನು ಉತ್ತಮಪಡಿಸುತ್ತದೆ. ದೇಹದ ಅತಿಯಾದ ತೂಕವನ್ನು ಕಡಿಮೆ ಮಾಡುತ್ತದೆ. ನವಣೆಯ ಸೇವನೆಯಿಂದ ಕೂದಲು, ಚರ್ಮ ಹಾಗೂ ಕ್ಯಾನ್ಸರ್ ಜೀವಕೋಶಗಳ ಉತ್ಪಾದನೆಯಂತಹ ಸಮಸ್ಯೆಗಳಿಂದ ದೂರವಿಡುತ್ತದೆ.
ಆಮ್ಲಾ: ಮಹಿಳೆಯರಲ್ಲಿ ಕಾಡುವ ಮಾಸಿಕ ದಿನಗಳಅ ಧಿಕ ರಕ್ತಸ್ರಾವವನ್ನು ಆಮ್ಲಾ ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ, ಕಬ್ಬಿಣಾಂಶ ಮತ್ತು ಕೆಲವು ಅವಶ್ಯಕ ವಿಟಮಿನ್ಗಳ ಕೊರತೆಯನ್ನು ನೀಗಿಸುತ್ತದೆ.
ವಾಲ್ನಟ್: ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸರಿಪಡಿಸಲು ವಾಲ್ನಟ್ ಸಹಾಯಕವಾಗಿದೆ. ಜತೆಗೆ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಹೆಚ್ಚು ಪ್ರೋಟೀನ್ ಅಂಶಗಳಿರುವ ವಾಲ್ನಟ್ ಸೇವನೆ ದೇಹಕ್ಕೆ ಶಕ್ತಿಯನ್ನೂ ನೀಡುತ್ತದೆ.
ದ್ವಿದಳ ಧಾನ್ಯಗಳು: ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಂಶಗಳನ್ನು ಹೊಂದಿರುವ ಬೀನ್ಸ್ ಮತ್ತು ದ್ವಿದಳ ಧಾನ್ಯಗಳ ಸೇವನೆ ಮಹಿಳೆಯರ ಆರೋಗ್ಯವನ್ನು ಉತ್ತಮವಾಗಿಸುತ್ತದೆ. ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಿ ಆರೋಗ್ಯಯುತವಾಗಿಡುವಂತೆ ಮಾಡುತ್ತದೆ.
ಇದನ್ನೂ ಓದಿ:
Health Tips: ಹುರುಪು ಹೆಚ್ಚಿಸುವ ಲ್ಯಾವೆಂಡರ್ ಮಿಲ್ಕ್ ಟೀ ಮಹತ್ವ ತಿಳಿಯಿರಿ
Published On - 11:22 am, Tue, 8 March 22