World Rivers Day 2024: ಭಾರತದಲ್ಲಿರುವ ವಿಶ್ವದ ಅತ್ಯಂತ ಸ್ವಚ್ಛವಾದ ಹಾಗೂ ಸ್ಪಟಿಕ ಸ್ಪಷ್ಟ ನೀರಿನ ನದಿಯಿದು…
ನದಿಗಳು ಮಾನವನ ಜೀವನಕ್ಕೆ ಅಗತ್ಯವಾದ ಸಿಹಿ ನೀರನ್ನು ಒದಗಿಸುವ ಜಲಮೂಲವಾಗಿದೆ. ಆದರೆ ಇಂದು ಕೈಗಾರೀಕರಣ, ನಗರೀಕರಣದಂತಹ ಅಭಿವೃದ್ಧಿಯ ಕಾರಣದಿಂದ ಅನೇಕ ನದಿಗಳು ಕಲುಷಿತಗೊಂಡಿವೆ. ಜಲಚರಗಳಿಗೂ ಹಾನಿಯಾಗುತ್ತಿವೆ. ಹಾಗಾಗಿ ಪ್ರತಿಯೊಂದು ಜೀವಿಗೂ ಜೀವನಾಧಾರವಾಗಿರುವ ನದಿಗಳನ್ನು ಸಂರಕ್ಷಣೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ.
ಮನುಷ್ಯ ಸೇರಿದಂತೆ ಪ್ರತಿಯೊಂದು ಜೀವಿಗೂ ನೀರು ಅತ್ಯಗತ್ಯ. ಈಜಿಪ್ಟಿನಿಂದ ಸಿಂಧೂ ನಾಗರಿಕತೆವರೆಗೆ ಬಹುತೇಕ ಎಲ್ಲಾ ನಾಗರಿಕತೆಗಳು ಹುಟ್ಟಿದ್ದು ನದಿ ಪಾತ್ರದಲ್ಲೇ. ನದಿಗಳಿಲ್ಲದೆ ನಾಗರಿಕತೆ ಇಲ್ಲ ಎಂಬುದು ಎಲ್ಲರಿಗೂ ತಿಳಿದಿದ್ದರೂ ನಾಗರಿಕತೆ, ಆಧುನಿಕತೆ ಬೆಳೆದಂತೆ ನದಿಗಳು ನಾಶವಾಗುತ್ತಿದೆ. ಜನರ ಜೀವನಾಡಿಯಾಗಿರುವ ಅದೆಷ್ಟೋ ನದಿಗಳು ಇಂದು ಮಾನವನ ಸ್ವಾರ್ಥಕ್ಕೆ ಬಲಿಯಾಗಿ ಕಲುಷಿತಗೊಂಡಿವೆ ಮತ್ತು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿವೆ. ಅಷ್ಟೇ ಏಕೆ ನದಿಗಳಿಗೆ ಎಸೆಯುವ ಕಸ ಹಾಗೂ ವಿಷಪೂರಿತ ಕೈಗಾರಿಕಾ ತ್ಯಾಜ್ಯಗಳಿಂದ ನದಿಗಳ ನೀರು ಕಲುಷಿತಗೊಳ್ಳುವುದರ ಜೊತೆಗೆ ಜಲಚರಗಳಿಗೂ ಹಾನಿಯಾಗುತ್ತಿವೆ. ಈ ನಿಟ್ಟಿನಲ್ಲಿ ನದಿಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವುಗಳ ಸಂರಕ್ಷಣೆಗಾಗಿ ಸಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತದೆ.
ವಿಶ್ವ ನದಿಗಳ ದಿನದ ಇತಿಹಾಸ:
ಜಲ ಮಾಲಿನ್ಯ, ನದಿ ಮಾಲಿನ್ಯ ಪ್ರಪಂಚದ ಒಂದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುತ್ತಿದ್ದು, ಇದನ್ನು ಮನಗಂಡು ಪ್ರತಿಯೊಂದು ಜೀವಿಗೂ ಜೀವನಾಧಾರವಾಗಿರುವ ನದಿ ನೀರನ್ನು ಸಂರಕ್ಷಣೆ ಮಾಡಬೇಕೆನ್ನುವ ನಿಟ್ಟಿನಲ್ಲಿ ಖ್ಯಾತ ಜಲ ಸಂರಕ್ಷಣಾ ಹೋರಾಟಗಾರ ಮಾರ್ಕ್ ಏಂಜೆಲೊ ಅವರು 1980 ರಲ್ಲಿ ಪಶ್ಚಿಮ ಕೆನಡಾದಲ್ಲಿ ಜಾಗತಿಕ ಮಟ್ಟದಲ್ಲಿ ನದಿಗಳ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮುಂದಿಟ್ಟರು. ಬಳಿಕ ನೀರಿನ ಮಹತ್ವವನ್ನು ಅರಿತ ವಿಶ್ವಸಂಸ್ಥೆ ಪ್ರತಿಯೊಂದು ಜೀವಿಗೂ ಜೀವನಾಧಾರವಾಗಿರುವ ಜಲಮೂಲವನ್ನು ಸಂರಕ್ಷಿಸುವ ಉದ್ದೇಶದಿಂದ 2005 ರಲ್ಲಿ “ವಾಟರ್ ಫಾರ್ ಲೈಫ್” ಎನ್ನುವ ಸಂದೇಶದೊಂದಿಗೆ ನದಿಗಳ ದಿನವನ್ನು ಆಚರಿಸಲು ಪ್ರಾರಂಭಿಸಿತು. ನಂತರ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ನಾಲ್ಕನೇ ಭಾನುವಾರದಂದು ಈ ವಿಸೇಷ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ವಿಶ್ವ ನದಿಗಳ ದಿನದ ಮಹತ್ವ ಮತ್ತು ಆಚರಣೆ:
ಈ ವರ್ಷ “ಸುಸ್ಥಿತ ಭವಿಷ್ಯಕ್ಕಾಗಿ ಜಲ ಮಾರ್ಗಗಳು” ಎಂಬ ಥೀಮ್‌ನೊಂದಿಗೆ ವಿಶ್ವ ನದಿಗಳ ದಿನವನ್ನು ಆಚರಿಸಲಾಗುತ್ತಿದೆ. ನದಿಗಳು ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯ ಜೀವನಧಾರವಾಗಿದೆ ಜೊತೆಗೆ ನದಿಗಳು ಪರಿಸರದ ಅವಿಭಾಜ್ಯ ಅಂಗ ಕೂಡಾ ಹೌದು. ಆದರೆ ಇಂದು ಕೈಗಾರೀಕರಣ, ನಗರೀಕರಣ ಇತ್ಯಾದಿ ಕಾರಣಗಳಿಂದಾಗಿ ನದಿ ನೀರು ಕಲುಷಿತಗೊಳ್ಳುತ್ತಿವೆ. ಹೀಗಾಗಿ ನದಿಗಳ ಮಹತ್ವದ ಬಗ್ಗೆ ಜನರಿಗೆ ತಿಳಿಸಲು ವಿವಿಧ ಸಂಘ ಸಂಸ್ಥೆಗಳು ಸರ್ಕಾರಗಳು ಜೊತೆಯಾಗಿ ವಿಶ್ವ ನದಿಗಳ ದಿನವನ್ನು ಆಚರಿಸುತ್ತವೆ. ಹಾಗೂ ನದಿ ಮೂಲಗಳನ್ನು ಸ್ವಚ್ಛಗೊಳಿಸುವ ಮೂಲಕ ನದಿಗಳ ದಿನವನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಇದನ್ನೂ ಓದಿ: ರಾಷ್ಟ್ರೀಯ ಪುತ್ರಿಯರ ದಿನ; ಮಗಳೆಂದರೆ ಮಹಾಲಕ್ಷೀ… ಹೆಣ್ಣು ಮಗುವಿನ ಬಗ್ಗೆ ತಾತ್ಸಾರ ಬೇಡ
ಭಾರತದಲ್ಲಿರುವ ವಿಶ್ವದ ಅತ್ಯಂತ ಸ್ವಚ್ಛವಾದ ಹಾಗೂ ಸ್ಪಟಿಕ ಸ್ಪಷ್ಟ ನೀರಿನ ನದಿಯಿದು:
ಭಾರತದಲ್ಲಿ ಹಾಗೂ ಹಿಂದೂ ಧರ್ಮದಲ್ಲಿ ನದಿಗಳನ್ನು ಪೂಜಿಸಲಾಗುತ್ತದೆ. ಆದರೆ ಇಂದು ಮಾನವರು ಅದೇ ನದಿಗಳನ್ನು ಕಲುಷಿತಗೊಳಿಸುತ್ತಿದ್ದಾರೆ. ಹೌದು ಮನುಷ್ಯನ ಸ್ವಾರ್ಥಕ್ಕೆ ಅದೆಷ್ಟೋ ಪವಿತ್ರ ನದಿಗಳು ಕಲುಷಿತಗೊಂಡಿವೆ. ಗಂಗಾನದಿ, ಯಮುನಾ, ಬ್ರಹ್ಮಪುತ್ರ, ದಾಮೋದರ್, ಬಾಗಮತಿ ಈ ಪವಿತ್ರ ನದಿಗಳು ಕಲುಷಿತಗೊಂಡಿವೆ. ಇವುಗಳ ಜೊತೆ ಜೊತೆಗೆ ನಮ್ಮ ಭಾರತದಲ್ಲಿ ವಿಶ್ವದ ಅತ್ಯಂತ ಸ್ವಚ್ಛವಾದ ಹಾಗೂ ಸ್ಪಟಿಕ ಸ್ಪಷ್ಟ ನೀರಿನ ನದಿಯೂ ಕೂಡಾ ಇದೆ. ಅದುವೇ ಡಾವ್ಕಿ ನದಿ. ಮೇಘಾಲಯದಲ್ಲಿ ಪ್ರಶಾಂತವಾಗಿ ಹರಿಯುವ ಡಾವ್ಕಿ ನದಿಯನ್ನು ಉಮ್ಗೋಟ್ ನದಿ ಎಂದು ಕೂಡಾ ಕರೆಯುತ್ತಾರೆ. 2021 ರಲ್ಲಿ ಈ ನದಿ ವಿಶ್ವದ ಅತ್ಯಂತ ಸ್ವಚ್ಛವಾದ ನದಿ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಈ ನದಿಯ ನೀರು ಎಷ್ಟು ಸ್ಪಷ್ಟವಾಗಿದೆ ಎಂದರೆ ನದಿ ತಳ ಭಾಗದಲ್ಲಿರುವ ಕಲ್ಲುಗಳು ಸಹ ಸ್ಪಷ್ಟವಾಗಿ ಗೋಚರಿಸುತ್ತವೆ. ಮೇಘಾಲಯದ ಜನರು ಈ ನದಿಯ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸುತ್ತಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ