Yoga: ಬದುಕಿಗಾಗಿ ಯೋಗ: ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ?

ನಾವು, ನಮ್ಮ ಜೀವನದಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದನ್ನು ಕಲಿಯಬೇಕಾಗಿದೆ. ದೇಹಕ್ಕೆ ಬರುವ ವ್ಯಾಧಿ ಅಥವಾ ರೋಗವನ್ನು ಶೀಘ್ರವಾಗಿ ಗುಣಪಡಿಸಬಹುದು.

Yoga: ಬದುಕಿಗಾಗಿ ಯೋಗ: ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ?
ಯೋಗಾಯೋಗ
Follow us
| Updated By: guruganesh bhat

Updated on: Aug 01, 2021 | 9:35 AM

ಗಲ್ಲಿಗಲ್ಲಿಗಳಿಂದ ಹಿಡಿದು ದೇಶ ವಿದೇಶಗಳವರೆಗೂ ಈಗ ಯೋಗದ್ದೇ ಹವಾ.ಯೋಗ ಈಗ ಜನಸಾಮಾನ್ಯರ ಜೀವನದಲ್ಲಿಯೂ ಹಾಸುಹೊಕ್ಕಾದ ಅತ್ಯಂತ ಒಳ್ಳೆಯ ಆಚರಣೆ. ಯೋಗ ಭಾರತೀಯ ಮೂಲದ್ದು ಎಂಬುದು  ಪ್ರಚುರವಾದ ಸಂಗತಿ.   ದೂರದ ವಿಯೆಟ್ನಾಂ ದೇಶದಲ್ಲಿ ಯೋಗ ಶಿಕ್ಷಕರಾಗಿರುವ ಉತ್ತರ ಕನ್ನಡದ ಸಿದ್ದಾಪುರದ ನಾಗೇಂದ್ರ ಗದ್ದೆಮನೆ ಅವರು ಬರೆಯುವ ‘ಬದುಕಿಗಾಗಿ ಯೋಗ’ ಸರಣಿಯನ್ನು ಟಿವಿ9 ಕನ್ನಡ ಡಿಜಿಟಲ್ ಪ್ರಸ್ತುತಪಡಿಸುತ್ತಿದೆ. ದಿನನಿತ್ಯದ ಆಚರಣೆಗಳಲ್ಲಿ ಕಾಡುವ ಪ್ರಶ್ನೆಗಳಿಗೆ ಅತ್ಯಂತ ಸರಳವಾಗಿ ಅವರು ಉತ್ತರಗಳನ್ನು ತಿಳಿಸಿಕೊಡಲಿದ್ದಾರೆ. ಮುಂದೆ ಓದುವ ‘ಸುಂದರ ಯೋಗ’ ನಿಮ್ಮದು. ನಮಗೆಲ್ಲರಿಗೂ ಒಂದಿಲ್ಲೊಂದು ಘಳಿಗೆಯಲ್ಲಿ ಈ ಪ್ರಶ್ನೆ ಕಾಡದೇ ಇರದು, ಜೀವನವು ಹೇಗಿರಬೇಕು? ನಮ್ಮ ಜೀವನವು ಇನ್ನೊಬ್ಬರು ನಮ್ಮನ್ನು ನೋಡಿ ಪಾಲಿಸುವಂತೆ ಇರಬೇಕು. ಮನಸ್ಸು, ನಾವು ಆಡುವ ಮಾತು ಮತ್ತು ಕ್ರಿಯೆ ಇವುಗಳು ಒಂದೇ ರೀತಿಯಲ್ಲಿ ಇರಬೇಕು. ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ: “ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಾಮ್| ಮನಸ್ಯನ್ಯತ್ ವಚಸ್ಯನ್ಯತ್ ಕರ್ಮಣ್ಯನ್ಯತ್ ದುರಾತ್ಮನಾಮ್||” ಇದರರ್ಥ, ಮನಸ್ಸಿನಲ್ಲಿ ಒಳ್ಳೆಯದನ್ನು ಯೋಚಿಸಿ, ಅದನ್ನೇ ಮಾತನಾಡಿ, ಅದನ್ನೇ ಕಾರ್ಯರೂಪಕ್ಕೆ ತರುವವರು ಮಹಾತ್ಮರು ಅಥವಾ ಒಳ್ಳೆಯ ಜನರು. ಮನಸ್ಸಿನ ಯೋಚನೆ, ಆಡುವ ಮಾತು ಮತ್ತು ಕ್ರಿಯೆ ಎಲ್ಲವೂ ಬೇರೆಯಾಗಿದ್ದರೆ ಅವರು ದುರಾತ್ಮರು ಅಥವಾ ಕೆಟ್ಟ ವ್ಯಕ್ತಿಗಳು.

ಮಹಾತ್ಮರು ಯಾರು? ಮಹಾತ್ಮರೇ ಯೋಗಿಗಳು, ಅದುವೇ ಯೋಗವು ಪ್ರತಿಯೊಬ್ಬರ ಜೀವನದಲ್ಲಿಯೂ ಸುಖ-ದುಃಖ, ತೊಂದರೆ-ತಾಪತ್ರಯಗಳು ಎಲ್ಲವೂ ಸಾಮಾನ್ಯ. ಹಾಗೂ ಎಲ್ಲರೂ ಇವುಗಳನ್ನು ಅನುಭವಿಸಲೇಬೇಕು. ಆದರೆ, ಇವೆಲ್ಲವುಗಳನ್ನು ಸ್ವೀಕರಿಸುವಲ್ಲಿ ನಾವೆಲ್ಲರೂ ಎಡವುತ್ತೇವೆ. ಜೀವನದಲ್ಲಿ ಸುಖವು ಆವರಿಸಿದಾಗ ಅತಿಯಾಗಿ ಸಂತೋಷದಿಂದಿರುವುದು, ಚಿಕ್ಕ-ಚಿಕ್ಕ ಸಮಸ್ಯೆ,ದುಃಖಕ್ಕೂ ತಮ್ಮ ಇಡೀ ಜೀವನವನ್ನೇ ಇದು ಆವರಿಸಿದೆಯೇನೋ ಎಂಬಂತೆ ಸದಾ ಅದರ ಬಗೆಗೆ ಚಿಂತಿಸಿ- ಚಿಂತಿಸಿ ಮನಸ್ಸನ್ನು ಹಾಳುಮಾಡಿಕೊಳ್ಳುವುದು. ಇದರಿಂದಾಗಿ ಹಲವಾರು ಮನಸ್ಸಿನ ಕಾಯಿಲೆಗಳು, ಅದರಿಂದಾಗಿ ದೇಹದ ಕಾಯಿಲೆಗಳಿಗೆ ಬಾಗಿಲು ತೆರೆದು ಆಹ್ವಾನ ನೀಡುವುದು. ಹೀಗೆ ನಾವು ನಮ್ಮ ಸುಂದರ ಜೀವನವನ್ನು ಹಾಳುಮಾಡಿಕೊಳ್ಳುತ್ತೇವೆ.

ನಾವು, ನಮ್ಮ ಜೀವನದಲ್ಲಿ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದನ್ನು ಕಲಿಯಬೇಕಾಗಿದೆ. ದೇಹಕ್ಕೆ ಬರುವ ವ್ಯಾಧಿ ಅಥವಾ ರೋಗವನ್ನು ಶೀಘ್ರವಾಗಿ ಗುಣಪಡಿಸಬಹುದು. ಆದರೆ ಮನಸ್ಸಿಗೆ ಬರುವ ರೋಗವು ಒಂದು ರೀತಿಯಲ್ಲಿ ಸರಪಳಿಯ ಹಾಗೆ, ಅದು ಒಂದರಿಂದ ಇನ್ನೊಂದಕ್ಕೆ ಕೂಡಿಕೊಂಡಿರುತ್ತದೆ. ಮನಸ್ಸಿನ ರೋಗವು ಹಲವಾರು ದೇಹದ ರೋಗಗಳಿಗೆ ಕಾರಣವಾಗುತ್ತದೆ.

ಹಾಗಾದರೆ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸುವುದು ಹೇಗೆ? ಅದಕ್ಕೇನಾದರೂ ಮಾರ್ಗವಿದೆಯೇ? ಹೌದು, ಇದೆ. ಹಾಗಾದರೆ ಏನದು!? ಅದುವೇ ಯೋಗಜೀವನ. ಶ್ರೀ ಪತಂಜಲಿ ಮಹರ್ಷಿಗಳು ಯೋಗಸೂತ್ರದಲ್ಲಿ ಸುಖ ಹಾಗೂ ಸಮತ್ವದ ಜೀವನಕ್ಕೆ ಅಷ್ಟಾಂಗ(ಎಂಟು ಅಂಗ)ಗಳನ್ನು ತಿಳಿಸಿಕೊಟ್ಟಿದ್ದಾರೆ. ಅವುಗಳನ್ನು ಸಂಕ್ಷಿಪ್ತ ಹಾಗೂ ಸುಲಭವಾದ ರೀತಿಯಲ್ಲಿ ಅರ್ಥೈಸುವ ಪ್ರಯತ್ನವೇ ಈ ಲೇಖನ.

ಆ ಎಂಟು ಅಂಗಗಳಲ್ಲಿ ಮೊದಲನೆಯದು ‘ಯಮ’. ಯಮ ಎಂದರೆ ಬಾಹ್ಯ ಅನುಶಾಸನ. ಬಾಹ್ಯ ಅನುಶಾಸನ ವೆಂದರೆ ಜೀವನದಲ್ಲಿ ಪಾಲಿಸಬೇಕಾದ ಒಂದಿಷ್ಟು ಪಾಲನೆಗಳು.

ಅವುಗಳಲ್ಲಿ ಮೊದಲನೆಯದು ‘ಅಹಿಂಸೆ’. ಇತರರಿಗೆ ಅಥವಾ ಜೀವ-ಜಂತುಗಳನ್ನು ಹಿಂಸಿಸದಿರುವುದು. ಪರರನ್ನು ಹಿಂಸಿಸಿ, ನಾವು ಸುಖವಾಗಿರಲು ಸಾಧ್ಯವಿಲ್ಲ, ಹಾಗಾಗಿ ಅಹಿಂಸೆ ಮೊದಲ ಯಮ.

ಎರಡನೆಯದು ‘ಸತ್ಯವಚನ’. ಸತ್ಯವನ್ನೇ ಮಾತನಾಡುವುದು. ಹೇಳುವ ಒಂದು ಸುಳ್ಳು ಮುಂದಿನ ಹಲವಾರು ಸುಳ್ಳುಗಳಿಗೆ ದಾರಿಯಾಗುತ್ತದೆ. ಯಾವಾಗ ನಾವು ಒಂದು ಸುಳ್ಳನ್ನು ಹೇಳುತ್ತೇವೆಯೋ, ಆಗ ಅದನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಒಂದು ಸುಳ್ಳನ್ನು ಮುಚ್ಚಲು ಇನ್ನೊಂದು ಸುಳ್ಳನ್ನು ಹೇಳಬೇಕಾಗುತ್ತದೆ. ಇದು ಮುಂದೆ ದು:ಖಕ್ಕೆ ಕಾರಣವಾಗುತ್ತದೆ. ಹಾಗಾಗಿ ಸತ್ಯವನ್ನಾಡಿದಾಗ ಮನಸ್ಸು ಪ್ರಶಾಂತವಾಗಿರುತ್ತದೆ.

ಮೂರನೆಯದು ‘ಅಸ್ತೇಯ’. ಅಸ್ತೇಯವೆಂದರೆ ಇತರರ ವಸ್ತುಗಳನ್ನು ಕದಿಯದಿರುವುದು. ಕದ್ದ ವಸ್ತುಗಳನ್ನಿಟ್ಟುಕೊಂಡು ಹೆಚ್ಚು ದಿನಗಳ ಕಾಲ ಸುಖವಾಗಿರಲು ಸಾಧ್ಯವೇ ಇಲ್ಲ. ಪ್ರತಿ ಕ್ಷಣವೂ ಮನಸ್ಸಿನಲ್ಲೊಂದು ಭಯವಿದ್ದೇ ಇರುತ್ತದೆ. ಹಾಗಾಗಿ ಅಸ್ತೇಯ ಪಾಲನೆ ಮುಖ್ಯ.

ನಾಲ್ಕನೆಯ ಯಮ ‘ಬ್ರಹ್ಮಚರ್ಯ’. ಬ್ರಹ್ಮಚರ್ಯ ಪಾಲನೆ ಮಾಡುವುದು. ಈಗಿನ ಕಾಲಕ್ಕೆ ಹೇಳುವುದಾದರೆ, ಪಾಪಗಳನ್ನು ಮಾಡದಿರುವುದು, ನಿಮ್ಮ ಪತಿ/ಪತ್ನಿಗೆ ವಂಚಿಸದಿರುವುದು.

ಕೊನೆಯ ಯಮ ಅಥವಾ ಬಾಹ್ಯ ಅನುಶಾಸನ ‘ಅಪರಿಗ್ರಹ’. ತಮ್ಮದಲ್ಲದ ಅಥವಾ ಮತ್ತೊಬ್ಬರ ಸಂಪತ್ತು – ಆಸ್ತಿಯನ್ನು ತಮ್ಮದಾಗಿಸಿಕೊಳ್ಳದಿರುವುದು. ಇವುಗಳು ಬಾಹ್ಯ ಅನುಶಾಸನಗಳು.

ಅಷ್ಟಾಂಗಗಳಲ್ಲಿ ಎರಡನೆಯದು ‘ನಿಯಮ’. ನಿಯಮವೆಂದರೆ ಅಂತ:ಶಿಸ್ತು ಅಥವಾ ಅನುಶಾಸನ. ನಿಯಮಗಳು ಕೂಡ ಐದು ವಿಧ.

‘ಶೌಚ’ – ಶೌಚವೆಂದರೆ ಲೇಖನದ ಆರಂಭದಲ್ಲಿ ಹೇಳಿದಂತೆ ಮನಸ್ಸು, ಮಾತು, ದೇಹಗಳಲ್ಲಿ ಶುಚಿತ್ವ.

Nagendra Gaddemane Yoga

ನಾಗೇಂದ್ರ ಗದ್ದೆಮನೆ

ಎರಡನೆಯ ನಿಯಮ ‘ಸಂತೋಷ’. ಸಂತಸ,ನೆಮ್ಮದಿ ಯಾವಾಗ ಸಿಗುವುದು ಜೀವನದಲ್ಲಿ!? ಇತರರ ಏಳಿಗೆಯ ಬಗ್ಗೆ ಅಸೂಯೆ, ತನಗೆ ಏನನ್ನೂ ಸಾಧಿಸಲಾಗಲಿಲ್ಲ ಎಂದು ಮರುಗುವುದು, ಇಂತವುಗಳಿಂದ ಹೊರ ಬಂದರೆ ಮಾತ್ರ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು. ಜೀವನದಲ್ಲಿ ಬರುವ ಪ್ರತಿಯೊಂದು ಸಮಸ್ಯೆಯೂ ಹೊಸತನ್ನೇನೋ ಕಲಿಸುತ್ತದೆ ಎಂಬ ಧನಾತ್ಮಕ ಚಿಂತನೆ, ಆಶಾವಾದವಿದ್ದಲ್ಲಿ, ಸಂತಸ-ನೆಮ್ಮದಿಗಳೆಲ್ಲವೂ ಇರುತ್ತವೆ. ಜೀವನದಲ್ಲಿ ನೆಮ್ಮದಿಯ ಬರುವಿಕೆಗಾಗಿ ಕಾಯುವುದಲ್ಲ, ನಾವಿರುವ ಸ್ಥಿತಿಯಲ್ಲಿಯೇ ನೆಮ್ಮದಿಯನ್ನು ಕಂಡುಕೊಳ್ಳಬೇಕು ನಾವು.

ಮೂರನೆಯ ನಿಯಮ ‘ತಪಸ್ಸು’. ತಪಸ್ಸು ಎಂದರೆ ಗಾಢತೆ,ತೀವ್ರತೆ. ವಹಿಸಿಕೊಂಡಿರುವ ಕಾರ್ಯದೆಡೆಗೆ, ಸಾಧಿಸಬೇಕಿರುವ ಗುರಿಯೆಡೆಗೆ, ಶಿಸ್ತಿನ ಜೀವನದೆಡೆಗೆ, ದೀರ್ಘಕಾಲದವರೆಗೆ, ನಿರಂತರವಾಗಿ ಆ ತೀವ್ರತೆಯನ್ನು ಕಾಪಾಡಿಕೊಂಡು ಗುರಿ ಸೇರುವುದೇ ತಪಸ್ಸು.

ನಾಲ್ಕನೆಯ ನಿಯಮ ‘ಸ್ವಾಧ್ಯಾಯ’. ವಿದ್ಯಾರ್ಥಿ ಜೀವನವೆಂಬುದು ಮುಗಿದರೂ, ಜೀವನಾಂತ್ಯದವರೆಗೂ ನಾವು ವಿದ್ಯಾರ್ಥಿಗಳೇ. ಸ್ವ-ಅಧ್ಯಯನ ಬಹಳ ಮುಖ್ಯ. ಕಲಿಯುವಿಕೆಗೆ ಅಂತ್ಯವಿಲ್ಲ. ಈ ಜಗತ್ತೇ ವಿಶ್ವವಿದ್ಯಾಲಯ, ಪ್ರತಿಯೊಂದು ವಸ್ತು-ಜೀವಿಯೂ ಏನಾದರೊಂದನ್ನು ಕಲಿಸುತ್ತವೆ. ಹಾಗಾಗಿ ಎಲ್ಲವೂ,ಎಲ್ಲರೂ ನನಗೆ ಶಿಕ್ಷಕರು. ಮತ್ತು ನಾನು ವಿದ್ಯಾರ್ಥಿ. ಈ ಮನೋಭಾವವು ನಮ್ಮನ್ನು ಉನ್ನತ ಸ್ಥಿತಿಗೆ ಒಯ್ಯುವುದು. ನಮ್ಮ ನಮ್ಮ ಧರ್ಮಗಳ ಉತ್ಕೃಷ್ಟ ಗ್ರಂಥಗಳ ಅಧ್ಯಯನ, ಆತ್ಮಾವಲೋಕನ ಇವೆಲ್ಲವೂ ಬಹಳ ಮುಖ್ಯ ಸಂಪೂರ್ಣ ಜೀವನಕ್ಕೆ. ಹಾಗಾಗಿ ಸ್ವಾಧ್ಯಾಯವೆಂಬುದು ಮುಖ್ಯ.

ಕೊನೆಯ ನಿಯಮ ‘ಈಶ್ವರ ಪ್ರಣಿಧಾನ’. ಈಶ್ವರ ಪ್ರಣಿಧಾನವೆಂದರೆ, ಧರ್ಮದ ಉತ್ಕೃಷ್ಟ ಗ್ರಂಥಗಳ ಅಧ್ಯಯನ, ಅವುಗಳ ಬಗೆಗೆ ಚಿಂತನೆ, ಈಶ್ವರನಲ್ಲಿ ಸರ್ವಸ್ವಾರ್ಪಣ ಬುದ್ಧಿಯನ್ನಿಡುವುದು. ಇಲ್ಲಿ ಈಶ್ವರನೆಂದರೆ ವಿಭೂತಿಧಾರಿ ಈಶ್ವರನಲ್ಲ. ಈಶ್ವರನೆಂದರೆ ಸರ್ವಶಕ್ತನು. ಸಮಾಧಿಯೆಂಬ ಸ್ಥಿತಿಯನ್ನು ತಲುಪಲು ಈಶ್ವರ ಪ್ರಣಿಧಾನವು ಒಂದು ಮಾರ್ಗ. ಇವಿಷ್ಟು ಯಮ-ನಿಯಮಗಳ ವಿಶ್ಲೇಷಣೆ.

ಅಷ್ಟಾಂಗಗಳಲ್ಲಿ ಮೂರನೆಯ ಅಂಗವು ‘ಆಸನ’. ಈ ಎಂಟು ಅಂಗಗಳಲ್ಲಿ ಮೊದಲ ಏಳೂ ಅಂಗಗಳು ಮುಂದಿನ ಅಂಗಕ್ಕೆ ಅಡಿಪಾಯದಂತಿರುತ್ತವೆ. ಆಸನವೆಂದರೆ ‘ಸ್ಥಿರಂ ಸುಖಮ್ ಆಸನಮ್’. ಸ್ಥಿರವೆಂದರೆ ಒಂದೇ ಸ್ಥಳದಲ್ಲಿ, ಬಹಳ ಸಮಯಗಳ ಕಾಲ, ಸುಖವಾಗಿ ಕುಳಿತುಕೊಳ್ಳುವುದು. ಅಥವಾ ಬೇರೆ ಬೇರೆ ಆಯಾಮಗಳಲ್ಲಿ ಸ್ಥಿರವಾಗಿರುವುದು. ಇದು ಸುಲಭಸಾಧ್ಯವಲ್ಲ. ಹಲವಾರು ಯೋಗಾಸನಗಳು, ಅವುಗಳ ದೀರ್ಘಕಾಲ,ನಿರಂತರ ಅಭ್ಯಾಸ ಇವುಗಳಿಂದ ಮಾತ್ರ ಸಾಧ್ಯ.

ಆಸನಗಳು ಯೋಗ ಜೀವನದ ಒಂದು ಭಾಗವೇ ಹೊರತು, ಆಸನವೇ ಯೋಗವಲ್ಲ. ದಿನದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿ, ದೇಹ ದಂಡಿಸಿ, ನಂತರ ಸಮಯವಲ್ಲದ ಸಮಯದಲ್ಲಿ, ಅನವಶ್ಯಕ ಆಹಾರ ಸೇವನೆ, ಅತಿಯಾದ ಸೇವನೆ, ರಾತ್ರಿ ತಡವಾಗಿ ಮಲಗುವುದು, ಬೆಳಿಗ್ಗೆ ತಡವಾಗಿ ಏಳುವುದು ಇವುಗಳೆಲ್ಲ ಯೋಗವಲ್ಲ. ಆಸನಗಳು ದೇಹವನ್ನು ಸುದೃಢ ಹಾಗೂ ಆರೋಗ್ಯವಾಗಿಟ್ಟುಕೊಳ್ಳಲು ಮತ್ತು ಧ್ಯಾನಕ್ಕೆ ಸಹಾಯಕವಾಗುತ್ತವೆ. ನಾವು ತಿನ್ನುವ ಆಹಾರ ಮನಸ್ಸಿನ ಮೇಲೆ ಪ್ರಭಾವ ಬೀರುವುದು. ಅಷ್ಟಾಂಗದಲ್ಲಿ ಮುಂದಿನ ಅಂಗಗಳಾದ ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ,ಧ್ಯಾನಗಳಿಗೆ ಆಸನವು ಮೊದಲ ಹಂತ. ದೀರ್ಘಕಾಲದವರೆಗೆ ಒಂದೆಡೆ ಕುಳಿತುಕೊಳ್ಳಲು ಶಕ್ಯರಾದರೆ, ಮುಂದೆ ಮನಸ್ಸನ್ನು ನಿಗ್ರಹಿಸಲು ಸಹಾಯಕವಾಗುತ್ತದೆ.

ನಂತರದ ಅಂಗ ‘ಪ್ರಾಣಾಯಾಮ’. ಸುಲಭವಾದ ರೀತಿಯಲ್ಲಿ ಪ್ರಾಣಾಯಾಮವನ್ನು ವಿಶ್ಲೇಷಿಸಬೇಕೆಂದರೆ ‘ಉಸಿರಾಟದ ಮೇಲೆ ಹಿಡಿತ ಸಾಧಿಸುವುದು’ ಎಂದರ್ಥ. ನಾವೆಷ್ಟು ನಿಧಾನವಾಗಿ, ದೀರ್ಘವಾಗಿ ಉಸಿರಾಡುತ್ತೇವೆಯೋ ಅಷ್ಟು ದೀರ್ಘಕಾಲ ಜೀವಿಸಬಹುದು. ಬೆಕ್ಕು-ನಾಯಿಗಳ ಉಸಿರಾಟ ಕ್ರಿಯೆಯು ಬಹಳ ಶೀಘ್ರವಾಗಿರುತ್ತದೆ. ಹಾಗಾಗಿಯೇ ಅವು ಕೆಲವೇ ವರ್ಷಗಳ ಕಾಲ ಜೀವಿಸಬಲ್ಲವು. ಆದರೆ ಆಮೆಯು ಸರಾಸರಿ ನಿಮಿಷಕ್ಕೆ ಮೂರರಿಂದ ನಾಲ್ಕು ಬಾರಿ ಮಾತ್ರ ಉಸಿರಾಟ ನಡೆಸುತ್ತದೆ. ಹಾಗಾಗಿ ಆಮೆಯ ಆಯಸ್ಸು ನೂರಾರು ವರ್ಷಗಳು. ನಮ್ಮ ಋಷಿ-ಮುನಿಗಳು ಹಿತವಾದ ಆಹಾರವನ್ನು ಮಿತವಾಗಿ ಸೇವಿಸಿ, ಆಸನ-ಪ್ರಾಣಾಯಾಮಾದಿಗಳನ್ನು ಪಾಲಿಸಿ ದೀರ್ಘಕಾಲ, ಸುಖವಾಗಿ ಜೀವಿಸುತ್ತಿದ್ದರು. ಹಾಗಾಗಿ ಪ್ರಾಣಾಯಾಮವೆಂಬುದು ಬಹಳ ಮುಖ್ಯ ಅಂಗ.

Nagendra Gaddemane Yoga

                                                                                                  ವಿಯೆಟ್ನಾಂನಲ್ಲಿ ಯೋಗ

ದೇಹ ಮತ್ತು ಪ್ರಾಣಗಳ ಮೇಲೆ ಹಿಡಿತ ಸಾಧಿಸಿದ ನಂತರ ಮುಂದಿನ ಅಂಗ ‘ಪ್ರತ್ಯಾಹಾರ’. ಮನಸ್ಸನ್ನು ನಿಗ್ರಹಿಸುವುದು ಪ್ರತ್ಯಾಹಾರ. ಮನಸ್ಸೆಂಬುದು ಮರ್ಕಟದಂತೆ,ಕಪಿಯಂತೆ. ಅರ್ಜುನನು ಶ್ರೀಕೃಷ್ಣನನ್ನು ಕೇಳಿದಂತೆ- “ಚಂಚಲಂ ಹಿ ಮನಃ ಕೃಷ್ಣ ಪ್ರಮಾಥಿ ಬಲವದ್ದೃಢಮ್ । ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್” ||

ಮನಸ್ಸೆಂಬುದು ಗಾಳಿಯಂತೆ ಬಲಶಾಲಿ, ಗಾಳಿಯನ್ನು ಹಿಡಿಯುವುದು ಹೇಗೆ ದುಷ್ಕರವೋ, ಹಾಗೆಯೇ ಮನಸ್ಸು. ಆಗ ಶ್ರೀ ಕೃಷ್ಣನು ಅರ್ಜುನನಿಗೆ ತಿಳಿ ಹೇಳುತ್ತಾನೆ-

“ಅಸಂಶಯಂ ಮಹಾಬಾಹೋ ಮನೋ ದುರ್ನಿಗ್ರಹಂ ಚಲಮ್ । ಅಭ್ಯಾಸೇನ ತು ಕೌಂತೇಯ ವೈರಾಗ್ಯೇಣ ಚ ಗೃಹ್ಯತೇ “|| ಹೌದು, ಕಷ್ಟವೇ. ಆದರೆ ಯಾವುದೂ ಅಸಾಧ್ಯವಲ್ಲ. ಅಭ್ಯಾಸವೊಂದೇ ಮಾರ್ಗ ಮನಸ್ಸನ್ನು ನಿಗ್ರಹಿಸಲು. ” ಮನ: ಷಷ್ಟಾನೀಂದ್ರಿಯಾಣಿ” ಮನಸ್ಸು ಆರನೆಯ ಇಂದ್ರಿಯ ಮತ್ತು ಪಂಚೇಂದ್ರಿಯಗಳ ನಾಯಕ ಮನಸ್ಸು. ಮನಸ್ಸನ್ನು ನಿಗ್ರಹಿಸುವ ಮೂಲಕ ಪಂಚೇಂದ್ರಿಯಗಳ ನಿಗ್ರಹ ಸುಲಭವಾಗುತ್ತದೆ.

ನಂತರದ ಅಂಗ ‘ಧಾರಣ’. ಯಾವಾಗ ಮನಸ್ಸನ್ನು ನಿಗ್ರಹಿಸಬಲ್ಲೆವೋ ಆಗ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸುವ ಪ್ರಯತ್ನವೇ ಧಾರಣ. ಒಂದು ವಿಷಯದ ಮೇಲೆ ಅಥವಾ ಉಸಿರಾಟದ ಮೇಲೆ ಹೀಗೆ ಮನಸ್ಸನ್ನು ಒಂದೆಡೆ ಕೇಂದ್ರೀಕಿಸುವುದು ಧಾರಣ. ಒಟ್ಟಿನಲ್ಲಿ ಮನಸ್ಸು ಆ ವಿಷಯವನ್ನು ಬಿಟ್ಟು ಬೇರೆಡೆ ಜಾರದಂತೆ ಹಿಡಿಯುವುದು ಧಾರಣ.

ಯಾವ ವಿಷಯದ ಮೇಲೆ ಮನಸ್ಸನ್ನು ಕೇಂದ್ರೀಕರಿಸುತ್ತೇವೆಯೋ ಅದರ ಬಗೆಗೆ ದೀರ್ಘ ಚಿಂತನೆಯೇ ಮುಂದಿನ ಅಂಗವಾದ ‘ಧ್ಯಾನ’. ಮನಸ್ಸನ್ನು ಕೇಂದ್ರೀಕರಿಸಿರುವ ವಿಷಯದ ಬಗ್ಗೆ ಎಲ್ಲಾ ಮುಖಗಳಿಂದ ಆಲೋಚಿಸಿ ಜ್ಞಾನ ಸಂಪಾದಿಸುವುದು ಧ್ಯಾನ.

ಮುಂದಿನ ಹಾಗೂ ಅಂತಿಮವಾದ ಅಂಗ ‘ಸಮಾಧಿ’. ಸಮಾಧಿ ಸ್ಥಿತಿಯೆಂದರೆ ಧ್ಯಾನಿಸಿದ ವಿಷಯದೊಡನೆ ಐಕ್ಯವಾಗುವುದು. ಅಧ್ಯಾತ್ಮದೆಡೆಗೆ ಜಾರುವುದು. ವ್ಯಕ್ತಿ,ಧ್ಯಾನ, ಧ್ಯಾನದ ವಿಷಯಗಳ ನಡುವೇ ಐಕ್ಯತೆಯೇ ಸಮಾಧಿ. ಈ ಸ್ಥಿತಿಗೆ ಬರಲು ಮೊದಲಿನ ಏಳು ಅಂಗಗಳನ್ನು ಪಾಲಿಸಬೇಕು.

ಲೇಖಕರ ಪರಿಚಯ ಮೂಲತಃ ಉತ್ತರ ಕನ್ನಡದ ಸಿದ್ದಾಪುರದವರಾದ ನಾಗೇಂದ್ರ ಗದ್ದೇಮನೆ ಅವರು ವಿಯೆಟ್ನಾಂನಲ್ಲಿ ವೃತ್ತಿಪರ ಯೋಗ ಶಿಕ್ಷಕರು. ಯೋಗದಲ್ಲಿ ಆಳವಾದ ನಿಪುಣತೆ ಪಡೆದ ಅವರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ, ಯಜುರ್ವೇದ ಸಂಹಿತಾಂತ ಅಧ್ಯಯನವನ್ನೂ ಮಾಡಿದ್ದಾರೆ. ಪುರಾತನ ಯೋಗವನ್ನು ಹೊಸ ತಲೆಮಾರಿಗೆ, ಅದರಲ್ಲೂ ವಿದೇಶದಲ್ಲಿ ಪ್ರಚುರಪಡಿಸುತ್ತಿರುವ ಹೆಮ್ಮೆ ನಾಗೇಂದ್ರ ಅವರದು. ಜತೆಗೆ ಎಲೆಕ್ಟ್ರಾನಿಕ್ ಗಾಡ್ಜೆಟ್​, ಆಟೋಮೊಬೈಲ್ ಕ್ಷೇತ್ರದಲ್ಲೂ ಅಪಾರ ಆಶಕ್ತಿ ಹೊಂದಿದ್ದಾರೆ. ತಮ್ಮ ಪ್ರವಾಸದ ಅನುಭವಗಳನ್ನು ಯೂಟ್ಯೂಬ್​ನಲ್ಲಿ NAGENDRA GADDEMANE ಎಂಬ ಹೆಸರಿನ ವ್ಲೋಗ್​ನ್ನು ಸಹ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಯೆಟ್ನಾಂ ಯೋಗ: ಬುದ್ಧನ ನಾಡಲ್ಲಿ ಯೋಗ ಕಲಿಸುವ ಕರ್ನಾಟಕದ ಯೋಗ ಶಿಕ್ಷಕರು ಬರೆಯುತ್ತಾರೆ..

(Yoga How to be happy in life here is the tips by expert)

ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ