Book Release: ಅಚ್ಚಿಗೂ ಮೊದಲು; ಬೇಲೂರು ರಘುನಂದನರ ‘ರೂಬಿಕ್ಸ್ ಕ್ಯೂಬ್’ ಇದೇ 6ರಂದು ನಿಮ್ಮ ಕೈಯ್ಯೊಳಗಿರುತ್ತದೆ
Rubik‘s Cube Play : ದೇವರನ್ನು ಮಾಡುವ ಹುಚ್ಚು ನಿನ್ನನ್ನೂ ಬಿಡಲಿಲ್ಲವೇ? ನಾನು ನಿನ್ನೊಳಗೆ, ನೀನು ನನ್ನೊಳಗೆ. ಇದು ಕೂಡ ಪರಮ ಭಕ್ತಿ ಮತ್ತು ನಿಷ್ಠೆ. ಅದಿರಲಿ, ಯಾಕೆ ದಾಸ್ ಪಾರ್ಟಿ ಮುಗಿದರೂ, ಮನೆ ಕಡೆ ಹೋಗುವ ಮನಸಿಲ್ಲವೇ. ಪ್ರತಿ ನಿತ್ಯ ಸ್ವೈಪ್ ಮಾಡೋಕೆ ಇನ್ನೂ ಅರ್ಧ ಗಂಟೆ ಇರೋವಾಗಲೇ ಮನೆ ಮನೆ ಅಂತ ಚಡಪಡಿಸ್ತಾ ಇರ್ತೀಯಾ?
Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
*
ಕೃತಿ: ರೂಬಿಕ್ ಕ್ಯೂಬ್ಸ್,ಕ್ಲೀನ್ ಅಂಡ್ ಕ್ಲಿಯರ್ ಪಾಯಖಾನೆ ಮತ್ತು ಆಯಾಮ (ನಾಟಕಗಳು) ಲೇಖಕರು: ಡಾ. ರಘುನಂದನ ಬೇಲೂರು ಪುಟ:213 ಬೆಲೆ:ರೂ. 220 ಮುಖಪುಟ ವಿನ್ಯಾಸ: ಮಂಜುನಾಥ ವಿ ಎಂ. ಪ್ರಕಾಶನ: ಕಾಜಾಣ
*
ಪ್ರಸ್ತುತ ಕೃತಿಯಲ್ಲಿ ಮೂರು ನಾಟಕಗಳಿವೆ. ಮೊದಲನೆಯದು ‘ರೂಬಿಕ್ ಕ್ಯೂಬ್’. ದಾಸ್ ಮತ್ತು ದುರ್ಗಾ ಗಂಡ, ಹೆಂಡತಿಯರು. ಆತ ಕವಿ ಹೃದಯದ ಭಾವಜೀವಿ. ಆಕೆ ವಾಸ್ತವವಾದಿ. ಶಿವಾಂಗಿಯು ರಾಮ್ ಜೊತೆ ಲಿವ್ ಇನ್ ರಿಲೇಷನ್‌ನಲ್ಲಿ ಇರುವ ದಿಟ್ಟ ಹೆಣ್ಣು. ಆದರೆ ಅನೇಕ ಕಾರಣಗಳಿಂದಾಗಿ ಸ್ವಮರುಕ ಹೊಂದಿ ನರಳುತ್ತಿರುವವಳು. ದುರ್ಗಾಳ ಮಗ ಶಾಲೆಯಲ್ಲಿ ಓದುತ್ತಿರುವ ಪುಟ್ಟ ಬಾಲಕ. ಆತ ತನ್ನ ತಾಯಿಯ ಬಳಿ, ಪ್ರಧಾನಮಂತ್ರಿ ತನಗೆ ಇಷ್ಟ ಎಂದು ಹೇಳಲಿಲ್ಲ ಎಂಬ ಕಾರಣಕ್ಕೆ ಸಹಪಾಠಿಗಳಿಂದ ಶಾಲಾ ಬಸ್‌ನಲ್ಲಿ ಹಲ್ಲೆಗೆ ಒಳಗಾದೆ ಎಂದು ಹೇಳುತ್ತಾನೆ. ಈ ಪ್ರಸಂಗದ ಮೂಲಕ ತಮ್ಮ ಇಂದಿನ ರಾಜಕೀಯ ನಿಲುವನ್ನು ಸ್ಪಷ್ಟಗೊಳಿಸುತ್ತಾರೆ ನಾಟಕಕಾರ. ಈ ಹಿನ್ನೆಲೆಯಲ್ಲಿ ನಾಟಕವನ್ನು ನೋಡಬಹುದಾದ ಅನೇಕ ಆಯಾಮಗಳ ಪೈಕಿ ಒಂದನ್ನು ಸ್ಪಷ್ಟವಾಗಿ ಗುರುತಿಸುವುದು ಇಲ್ಲಿನ ಮಾತು, ‘ಕುಟುಂಬ ಅನ್ನೋದು ಒಂದು ಹುಡುಕಾಟದ ಕೇಂದ್ರ, ಕೆಲವು ಸಿಕ್ಕುತ್ತವೆ, ಹಲವು ಸಿಕ್ಕಲ್ಲ.’ ಕೌಟುಂಬಿಕ ಭದ್ರತೆಯ ಕಲ್ಪನೆ ಮತ್ತು ವೈವಾಹಿಕ ನೈತಿಕ ಮೌಲ್ಯಗಳನ್ನು ಪುನರಾವಲೋಕಿಸಬೇಕೆಂಬ ಸೂಚನೆ ಸಹಾ ಇಲ್ಲಿ ಸಿಗುತ್ತದೆ. ಸಂಕ್ರಮಣ ಸ್ಥಿತಿಯಲ್ಲಿರುವ ಭಾರತೀಯ ಮಧ್ಯಮ ವರ್ಗದ ಕುಟುಂಬದೊಳಗಿನ ನೈತಿಕತೆ, ಹೊಂದಾಣಿಕೆ, ಸಾಂಪ್ರದಾಯಕ ಯಜಮಾನಿಕೆ ಇತ್ಯಾದಿಗಳ ಸಂಘರ್ಷಗಳನ್ನು ನವಿರಾಗಿ ಬಿಚ್ಚಿ ತೋರಿಸುವ ನಾಟಕವಿದು.
ಬಿ. ಎಸ್. ವಿದ್ಯಾರಣ್ಯ, ಲೇಖಕ
‘ರೂಬಿಕ್ಸ್ ಕ್ಯೂಬ್’ ಐಟಿ ಜಗತ್ತು ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ಸಮಕಾಲೀನ ಸಂದರ್ಭದಲ್ಲಿ ಬಹುಮುಖಿಯಾಗಿ ವಿವರಿಸುವ ನಾಟಕ. ಸೃಜನಶೀಲತೆ, ಕಾವ್ಯ, ಸಮಾಜ, ಕುಟುಂಬ, ರಾಜಕಾರಣ, ಹೆಣ್ಣು ಮುಂತಾದವುಗಳನ್ನು ಮಾನವೀಯ ಹಂಬಲದ ಅಪೇಕ್ಷೆ ಹಾಗೂ ನಿರಪೇಕ್ಷೆಗಳೆಂಬಂತೆ ಸ್ವಯಂ ಸಂಶೋಧನೆಗೆ ಪರಿಕರಗಳಾದಂತೆ ನಾಟಕ ರಚನೆಯೇ ಹಾದಿ ತೋರಿತು. ಈ ನಾಟಕದ ವಸ್ತು ವಿನ್ಯಾಸ ಮತ್ತು ಪಾತ್ರಚಿತ್ರಣ ಬಹುಕಾಲದಿಂದ ಕಾಡುತ್ತಿತ್ತು.
ಡಾ. ಬೇಲೂರು ರಘುನಂದನ, ಕವಿ, ನಾಟಕಕಾರ
(ದೃಶ್ಯ 1-ಆಯ್ದ ಭಾಗ)
(ರಂಗದ ಒಂದು ಬದಿಯಲ್ಲಿ ತೊಟ್ಟಿಲು ತೂಗುತ್ತಿರುತ್ತದೆ. ಮಗು ಅಳುವ ಸದ್ದು ಕೇಳುತ್ತದೆ. ತೊಟ್ಟಿಲನ್ನು ಕೆಂದ್ರೀಕರಿಸಿದ ಬೆಳಕು ಮಂದವಾಗುತ್ತಿದ್ದಂತೆ ಮತ್ತೊಂದು ಬದಿಯಲ್ಲಿ ಪಾನಮತ್ತರಾದವರ ಸಂತೋಷ ಕೂಟ ಆರಂಭವಾಗುತ್ತದೆ)
ದಾಸ್ : ಅತಿಯಾದ ದುಃಖ ಮತ್ತು ಸಂತೋಷವೆಂಬ ಭಾವಲೋಕವನ್ನು ತಿಳಿಗೊಳಿಸಿಕೊಳ್ಳಲು ಹಗುರಾಗಲೇ ಬೇಕು. ಇಲ್ಲವೇ ಈ ಸುಖದುಃಖಗಳ ಒತ್ತಡ ತುಂಬಾ ಮೊನಾಟನಸ್ ಆಗಿಬಿಡುತ್ತವೆ. ಅದಕ್ಕಾಗಿ ನಂಬಿಕೆ ಅನ್ನುವ ಭರವಸೆಯ ಹಾಡು ಈ ಹಳದಿ ದ್ರವದದಲ್ಲಿ ಸೇರಿಹೋಗಿದೆ.
ವಾರದ ನೋವು ಆರದ ನೋವು ತೀರದು ಎಂದು ಮದಿರೆಯ ಒಲವು ಸ್ನೇಹದ ಅಮಲಿಗೆ ಅನಂದವಿಂದು (ಹಾಡುವನು)
ರಾಮನಾಥ್ : ಹಳದಿ ದ್ರವ! ಪೊಯೆಟಿಕ್ ಇಮೇಜ್. ನೇರವಾಗಿ ಡ್ರಿಂಕ್ಸ್ ಎಂದು ಹೇಳಬಹುದಲ್ಲ ದಾಸ್.
ದಾಸ್ : ಯಾವುದೂ ನೇರವಾಗಿ ಹೇಳಬಾರದು ರಾಮನಾಥ್ . ಸಕ್ಕರೆ ಆಗುವ ಮೊದಲಿನ ಸ್ಥಿತಿ, ಸಕ್ಕರೆ ತಯಾರಾದ ಮೇಲೆ ಅದು ಪಡೆಯುವ ರೂಪಗಳು, ಅದು ಕೊಡುವ ರುಚಿ, ಹೆಚ್ಚಾದಾಗ ಖಾಯಿಲೆ ಇವೆಲ್ಲವನ್ನೂ ಮರೆತಂತೆ ಈ ನೇರ ಅನ್ನೋದು. ಈಗ ಹೇಳು ನೇರ ಅನ್ನೋದು ಕಲ್ಪನೆಯನ್ನು ನುಂಗಿದ ಜಡ ಅಲ್ವೇ ಗೆಳೆಯ?
ರಾಮನಾಥ್ : ಏನೋ, ಕವಿಗಳ ಭಾಷೆ ಅರ್ಥವಾಗಲ್ಲ ನನಗೆ. (ಗೊತ್ತಿದ್ದೂ ಗೊತ್ತಿಲ್ಲದವನ ಹಾಗೆ)
ದಾಸ್ : ನಿನಗೆ ಅರ್ಥವಾಗದ್ದು ಏನಿದೆ? ನೀನು, ಅರ್ಥ ಭಂಡಾರ. ಹೆಕ್ಕಿದಷ್ಟೂ ಅರ್ಥ, ಹೊಳಪು, ಮೆರುಗು. ಅದಕ್ಕೆ ನೀ ನನ್ನ ಜೊತೆ ಸದಾ ಜೀವಿಸುವ ದಿವ್ಯ ಸ್ನೇಹ ಸಂಗಾತ. ನನ್ನೊಳಗೆ ನಿನ್ನ ಅನುಪಸ್ಥಿತಿ ಅನ್ನೋದೇ ಇಲ್ಲ ಮಿತ್ರ. ಇದು ಕಾಲದ ಹಂಗು ಕಳಚಿದ ಭಾವಕ್ಕೆ ದೈವ ಅಂತ ಕರೀತಾರೆ. ಹಾಗೆ ನೀನು.
ರಾಮನಾಥ್ : ದೇವರನ್ನು ಮಾಡುವ ಹುಚ್ಚು ನಿನ್ನನ್ನೂ ಬಿಡಲಿಲ್ಲವೇ? ನಾನು ನಿನ್ನೊಳಗೆ, ನೀನು ನನ್ನೊಳಗೆ. ಇದು ಕೂಡ ಪರಮ ಭಕ್ತಿ ಮತ್ತು ನಿಷ್ಠೆ. ಅದಿರಲಿ, ಯಾಕೆ ದಾಸ್ ಪಾರ್ಟಿ ಮುಗಿದರೂ, ಮನೆ ಕಡೆ ಹೋಗುವ ಮನಸಿಲ್ಲವೇ. ಪ್ರತಿ ನಿತ್ಯ ಸ್ವೈಪ್ ಮಾಡೋಕೆ ಇನ್ನೂ ಅರ್ಧ ಗಂಟೆ ಇರೋವಾಗಲೇ ಮನೆ ಮನೆ ಅಂತ ಚಡಪಡಿಸ್ತಾ ಇರ್ತೀಯಾ?
ದಾಸ್ : ಇವತ್ತು ಯಾಕೋ ಈ ಗಾಜಿನ ಲೋಟದ ಸೆಳೆತ ನನ್ನನ್ನು ಬಿಡುತ್ತಿಲ್ಲ. ಅಂದ್ರೆ, ಈ ರಾತ್ರಿಗೆ ಇರುವ ಪ್ರಯಾಣ ಇನ್ನೂ ಮುಗಿದಿಲ್ಲ ಅಂತ ಕಾಣತ್ತೆ. ಅಂದಹಾಗೆ ಈ ಕಾವ್ಯ ಮತ್ತು ಮದಿರೆ ಎರಡೂ ಹದವಾಗಿ ಬೆರೆತರೆ ನಾನು ಮಗುವಾಗುತ್ತೇನೆ. ಆಗ, ಜಗತ್ತಿನ ಜೋಗುಳವನ್ನು ಕಿವಿಗೊಟ್ಟು ಆಲಿಸುತ್ತೇನೆ. ಆ ಹೊತ್ತು ಅಮ್ಮನ ಮಡಿಲಿನಲ್ಲಿ ಇದ್ದಷ್ಟೇ ಸೇಫ್ ಅನ್ನಿಸುತ್ತದೆ ರಾಮನಾಥ್.
ರಾಮನಾಥ್ : ಕಾವ್ಯ, ಮದಿರೆ, ಅಮ್ಮನ ಮಡಿಲು ಮತ್ತು ಸೇಫ್ಟಿ ಅರ್ಥದ ಹಂಗು ಮೀರಿ ಮತ್ತೆ ವಿಸ್ತಾರವಾಗಿ ಬೆಳೆದ ಅರ್ಥ. ಈ ಪ್ರಯಾಣಗಳ ಹುಚ್ಚು ಹೆಚ್ಚಾಗಿದ್ದಕ್ಕೆ ಸದಾ ಚಲನೆ. ನಾವಿಬ್ಬರೂ ಭೇಟಿಯಾಗಿ ಇನ್ನೂ ವಾರ ಕಳೆದಿಲ್ಲ ಮತ್ತೆ ಸೇರಿದ್ದೇವೆ. ಇದೆಲ್ಲಾ ಈ ಪ್ರಯಾಣದಿಂದಲೇ. ಎಲ್ಲಾ ಹಳದಿ ಮಹಾತ್ಮೆ.
ದಾಸ್ : ನೀನೊಬ್ಬ ಕಾಡುವ ಕ್ಯಾರೆಕ್ಟರ್ ನನಗೆ. ಎಲ್ಲಿ ಹೋದರೂ ಈ ನನ್ನ ಲೈಟರ್ ನ ಹಾಗೆ ಜೊತೆ ಇದ್ದು ಬಿಡುತ್ತೀಯ. ಲಿಕ್ವಿಡ್ ಖಾಲಿಯಾದರೂ ಮತ್ತೆ ಮತ್ತೆ ತುಂಬಿಕೊಳ್ಳುತ್ತೇವಲ್ಲ ಹಾಗೆ.
ರಾಮನಾಥ್ : ಜೊತೆ ಅನ್ನೋ ಭಾವ ಇರೋದೇ ಜೊತೆಯಾಗಲಿಕ್ಕೆ ಅಲ್ಲವೇ ?
ದಾಸ್ : ನಿಜ ನಿಜ. ಈ ಲೈಟರ್ ನನಗೆ ಒಂದು ರೀತಿಯ ದಿವ್ಯಜ್ಞಾನಿ ರಾಮನಾಥ್. ಅದು ಹತ್ತಿಸುತ್ತದೆ, ಸುಡುತ್ತದೆ, ಬೂದಿಮಾಡುತ್ತದೆ, ತಣ್ಣಗಾಗಿಸುತ್ತದೆ. ಜೊತೆ ಅನ್ನೋದರ ಡೆಫಿನೆಶನ್ ಕಂಡುಕೊಳ್ಳೋಕೆ ಇದೊಂದು ಪುಟ್ಟ ಉದಾಹರಣೆ ಅಷ್ಟೇ ಫ್ರೆಂಡ್.
ರಾಮನಾಥ್ : ಇವತ್ತು ನೀ ತುಂಬಾ ಫಿಲಾಸೋಫಿಕಲ್ ಆಗಿ ಮಾತಾಡ್ತಾ ಇದ್ದೀಯ, ಏನಾಯ್ತು? ಏನಾದ್ರೂ ಸಮಸ್ಯೆ?
ದಾಸ್ : ಅಯ್ಯೋ, ಫಿಲಾಸಫಿ ಅನ್ನೋದು ಸುಡು ಸುಡು ಕೆಂಡ, ಇಲ್ಲವೇ ಕೊರೆವ ಮಂಜುಗಡ್ಡೆ. ಇನ್ನು ಈ ಸಮಸ್ಯೆಗಳಿಗೆ ದಿನ, ಗಂಟೆ, ಕ್ಷಣಗಳ ಹಂಗಿಲ್ಲ ಮಿತ್ರ. ಸಮಸ್ಯೆ ಅನ್ನೋದು ಒಂದು ರೀತಿ ಆ ದೇವರಿದ್ದ ಹಾಗೆ ಸರ್ವಂತಾರ್ಯಾಮಿ. ಕಣ್ಣಿಗೆ ಕಾಣಲ್ಲ, ಕಂಡ್ರೂ ಹಿಡಿಯೋಕೆ ಆಗಲ್ಲ. ರಾಮನಾಥ್ : ಸಮಸ್ಯೆ ಮತ್ತು ದೇವರು ಅಥವಾ ದೇವರೇ ಸಮಸ್ಯೆ. (ಮಧ್ಯದ ಸೀಸೆಯನ್ನು ಕೈಯಲ್ಲಿ ಹಿಡಿದು, ಅದನ್ನೇ ನೋಡುತ್ತಾ)
ದಾಸ್ : ಯೆಸ್ ಟ್ರೂ. ಎಂತಹ ಹೊಳಹು ಸಮಸ್ಯೆಯೇ ದೇವರು, ದೇವರೇ ಸಮಸ್ಯೆ. (ಚಕಿತನಾಗಿ)
ರಾಮನಾಥ್ : ಮತ್ತೊಂದು ಥರ್ಟಿ ಬೆರೆಸಲೇ ?
ದಾಸ್ : ಆಶ್ ಟ್ರೇ ನಲ್ಲಿ ಅರೆ ಬರೆ ಸುಟ್ಟ ಸಿಗರೇಟು, ಬೂದಿ, ಖಾಲಿ ಸೀಸೆಗಳು ಮತ್ತು ತಟ್ಟೆಯಲ್ಲಿ ಅನ್ನವಿದ್ದೂ ತಿನ್ನಲು ಬಿಡದ ಅಮಲು ಇವೆಲ್ಲಾ ನನಗೆ ಸಾವಿರ ಸಾವಿರ ಅರ್ಥಗಳನ್ನು ಕೊಡುತ್ತಿವೆ. ದೇವಾಲಯದ ಮುಂದೆ ಸಾಲು ಗಟ್ಟಿ ಕುಳಿತವರ ಮುಖ ಎಂದಿಗೂ ನನಗೆ ನೆನಪಿನಲ್ಲಿ ಉಳಿಯುವುದೇ ಇಲ್ಲ. ಆದರೆ ಅವರ ಖಾಲಿ ತಟ್ಟೆಗಳೆ ಸದಾ ಕಾಡುತ್ತವೆ. ಒಳಗೆ ದೇವರು ಸದಾ ನಗುತ್ತಿರುತ್ತಾನೆ, ಹೊರಗೆ ಕಣ್ಣೀರು ಹರಿಯುತ್ತಿರುತ್ತದೆ. ಸುಮ್ಮನಿದ್ದವನಿಗೆ ಸೇವೆ ಮಾಡಲು ಸಾಲುಗಟ್ಟಿ ನಿಲ್ಲುತ್ತಾರೆ. (ದುಃಖಿಸುವನು)
ರಾಮನಾಥ್ : ಅದಕ್ಕೆ ದೇವರನ್ನು ಒಳಗಿಂದ ಹೊರಗೆ ಕರೆತರಬೇಕು. ದೇವರಂತು ಬರ್ತಾನೋ ಇಲ್ವೋ? ಬರೋಕೆ ಅವನಿಗೆ ಆಸೆ ಇದ್ರೂ ಅವನನ್ನು ಬಿಡ್ತಾರೋ ಇಲ್ವೋ. ನಾನಂತೂ ನಿನ್ನ ಜೊತೆ ಆರಾಮಾಗಿ ಇದ್ದೀನಿ.
ಈ ಕೃತಿಯ ಖರೀದಿಗೆ ಸಂಪರ್ಕಿಸಿ : 9880339669
*
ಇದನ್ನೂ ಓದಿ : New Book : ಅಚ್ಚಿಗೂ ಮೊದಲು ; ಡಾ. ಜ್ಯೋತ್ಸ್ನಾ ಕಾಮತರ ‘ಕಲಕತ್ತಾ ದಿನಗಳು’ ಇದೇ ಭಾನುವಾರ ಬಿಡುಗಡೆ