Online Art Exhibition: ವರ್ಣಕಥಾ; ‘ಕಲಾಕೃತಿಗಳ ರಚನೆ, ಮಾರಾಟ ಒಮ್ಮೊಮ್ಮೆ ನಿಗೂಢವೇ ಅನ್ನಿಸುತ್ತದೆ’ ಡಿಎಸ್ ಚೌಗಲೆ
Cultural Politics : ‘ಸಾಮಾಜಿಕ ಜಾಲತಾಣಗಳಿಂದಾಗಿ ದೃಶ್ಯಕಲೆಗಳ ತಲುಪುವಿಕೆಗೆ ಒಂದು ವಿಸ್ತರಣೆ ಲಭಿಸಿತು. ಬಹುಸ್ಥಳೀಯವೆನಿಸಿದ ಕಲಾವಿದರು ಸಹ ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚತೊಡಗಿದರು. ಮೊನೊಪೊಲಿ, ಸಾಂಸ್ಕೃತಿಕ ರಾಜಕಾರಣದ ಕುತಂತ್ರಗಳಿಂದ ಹಿನ್ನಡೆಗೆ ಸರಿದ ಅನೇಕ ಪ್ರತಿಭೆಗಳು ಮುಂಚೂಣಿಗೆ ಬಂದವು.’ ಡಾ. ಡಿ. ಎಸ್. ಚೌಗಲೆ
International Online Art Exhibition: ಈಗಂತೂ ಡಿಜಿಟಲ್ ಮಾಧ್ಯಮದಿಂದಾಗಿ ಅನೇಕ ಕಲಾವಿದರಿಗೆ ಅನೇಕ ರೀತಿಯ ಸಾಧ್ಯತೆ ಅವಕಾಶಗಳು ತೆರೆದುಕೊಂಡಿವೆ. ಆದರೆ, ದೊಡ್ಡ ಪ್ರಮಾಣದ ಕಲಾ ಪ್ರದರ್ಶನಗಳು ನಡೆಯುವುದು ಮುಂಬೈ, ದಿಲ್ಲಿ, ಅಹಮದಾಬಾದ್ ನಗರಗಳಲ್ಲಿ. ಇಲ್ಲಿ ಪ್ರದರ್ಶನ ಆಯೋಜಕರ ಹಣ ಮಾಡುವ ಹುನ್ನಾರ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಯಾವುದೋ ಮೂಲೆಯ ಒಬ್ಬ ಕಲಾವಿದನಿಗೆ ಅವಕಾಶವೂ ದೊರೆಯುತ್ತದೆಂಬುದೂ ಸುಳ್ಳಲ್ಲ. ಆದರೆ ಕೊಂಚ ಜಾಗರೂಕರಾಗಿರಬೇಕು ಅಷ್ಟೇ. ಮುಂಬೈನಲ್ಲಿ ನಡೆದ ಒಂದು ದೊಡ್ಡ ಪ್ರದರ್ಶನದಲ್ಲಿ ನಿರ್ದಿಷ್ಟ ಕಲಾವಿದನನ್ನು ಬೆಳೆಸಲು ಟಾರ್ಗೆಟ್ ಮಾಡಿ ಅವನ ಬಳಿ ಮಾತ್ರ ಖರೀದಿದಾರ ಮಹಾಶಯರನ್ನು ಕರೆದು ಒಯ್ದು ಅವನ ಕೃತಿಗಳನ್ನು ಸೇಲ್ ಮಾಡಿದ ಪ್ರಸಂಗವನ್ನೂ ನಾನು ನೋಡಿದ್ದೇನೆ. ಉಳಿದ ಕಲಾವಿದರ ಕಣ್ಣೆದುರೇ ಇದೆಲ್ಲ ನಡೆಯುತ್ತಿದ್ದರೂ ಅವರು ಅಸಹಾಯಕ ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು. ಆಗ ನಾನು ಮಾತ್ರ ಸಂಘಟಕನಿಗೆ ತರಾಟೆಗೆ ತಗೊಂಡಿದ್ದೆ.
ಡಾ. ಡಿ. ಎಸ್. ಚೌಗಲೆ, ಲೇಖಕ, ಕಲಾವಿದ, ಬೆಳಗಾವಿ (Dr. D. S. Chougale)
*
ಮಣಿಕರ್ಣಿಕಾ ಆರ್ಟ್ ಗ್ಯಾಲರಿಯವರು (Manikarnika Art Gallery) 7ನೆಯ ಅಂತಾರಾಷ್ಟ್ರೀಯ ಆನ್ಲೈನ್ ಕಲಾಪ್ರದರ್ಶನ ಏರ್ಪಡಿಸಿದ್ದಾರೆ. ಇದು ಇದೇ 25 ರಿಂದ ಮಾರ್ಚ್ 5ರ ತನಕ ನಡೆಯಲಿದೆ. ಈ ಪ್ರದರ್ಶನಕ್ಕೆ ಡಿ. ಎಸ್. ಚೌಗಲೆಯವರ ಎರಡು ಕಲಾಕೃತಿಗಳು ಆಯ್ಕೆಯಾಗಿದ್ದು, ಈ ಸಂದರ್ಭದಲ್ಲಿ ಆನ್ಲೈನ್/ಆಫ್ಲೈನ್ ಕಲಾಪ್ರದರ್ಶನಗಳ ಸುತ್ತ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
*
ಸಾಮಾಜಿಕ ಜಾಲತಾಣಗಳು ವೃದ್ಧಿಗೊಂಡ ನಂತರ ದೃಶ್ಯಕಲೆಗಳ ಜನರ ತಲುಪುವಿಕೆಗೆ ಒಂದು ವಿಸ್ತರಣೆ ಲಭಿಸಿತು. ಬಹುಸ್ಥಳೀಯವೆನಿಸಿದ ಕಲಾವಿದರು ಸಹ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚತೊಡಗಿದರು. ಅವರಿಗೊಂದು ಅವಕಾಶ ಸಿಕ್ಕಿತು. ಮೊನೊಪೊಲಿ ಮತ್ತು ಸಾಂಸ್ಕೃತಿಕ ರಾಜಕಾರಣದ ಕುತಂತ್ರಗಳಿಂದ ಅನೇಕ ಪ್ರತಿಭೆಗಳೇನು ಹಿನ್ನಡೆಗೆ ಸರಿದಿದ್ದವೋ ಅವು ಮುಂಚೂಣಿಗೆ ಬಂದವು. ಅಂಥ ಅವಕಾಶ ವಂಚಿತರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಹತ್ತಿದರು. ಪ್ರತಿಷ್ಠಿತ ಕಲಾಶಾಲೆಯಲ್ಲಿ ಕಲಾಶಿಕ್ಷಣ ಪಡೆದವರು ಮಾತ್ರ ಸರ್ವತ್ರ ತಮ್ಮ ಅಧಿಪತ್ಯವನ್ನು ತೋರಿ ಬೇರೆಯವರನ್ನು ಅವಕಾಶವಂಚಿತರನ್ನಾಗಿ ಮಾಡುತ್ತಿದ್ದರು. ಈಗಲೂ ಮಾಡುತ್ತಿರಬಹುದು. ಗ್ಯಾಲರಿಗಳು ಅಂಥ ವ್ಯಕ್ತಿಗಳಿಗೆ ಮಾತ್ರ ಮಣೆ ಹಾಕುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಕಲಾವಿದರು ಆನ್‌ಲೈನ್‌ನಲ್ಲಿ ತಮ್ಮದೇ ಕಲಾಕೃತಿಗಳ ವೆಬ್‌ಸೈಟ್ ಮೂಲಕ ಅಥವಾ ಆನ್ಲೈನ್ ಗ್ಯಾಲರಿಗಳ ಮೂಲಕ ಕಲಾಕೃತಿಗಳನ್ನು ಪ್ರದರ್ಶನ ಮಾಡತೊಡಗಿದರು.
ಇವತ್ತು ಇಂಡಿಯಾ ಸೇರಿದಂತೆ ಪ್ರಪಂಚದಾದ್ಯಂತ ಆನ್ಲೈನ್ ಗ್ಯಾಲರಿಗಳು ಬಹುಸಂಖ್ಯೆಯಲ್ಲಿವೆ. ಪ್ರತಿ ಗ್ಯಾಲರಿಯು ಪೇಂಟಿಂಗ್ ಡಿಸ್‌ಪ್ಲೇಗಾಗಿ ತನ್ನದೇ ಆದ ನಿಯಮಗಳನ್ನು ಎದುರಿಡುತ್ತದೆ. ಕೆಲವರು ಲಿಖಿತ ಒಪ್ಪಂದ ಮಾಡಿಕೊಳ್ಳುತ್ತಾರೆ. ಕಲಾಕೃತಿ ಮಾರಾಟವಾದರೆ ಅವರದ್ದೇ ಪ್ರತಿಶತ ಇಂತಿಷ್ಟು ಹಣದ ಪಾಲು ಪಡೆದು ಕಲಾಕೃತಿಗಳನ್ನು ಮಾರಾಟ ಮಾಡುತ್ತಿರುತ್ತಾರೆ. ಆದರೆ, ಕೊಳ್ಳುವವರು ಜಗತ್ತಿನಾದ್ಯಂತ ಪಸರಿಸಿದ್ದಾರೆ. ಅವರಿಗೆ ಇಂದು ಆಯ್ಕೆಗಳು ಹೇರಳ. ಹಾಗೆಯೇ ಪ್ರತಿಭಾವಂತ ಕಲಾವಿದರಿಗೂ ಅವಕಾಶದ ಬಾಗಿಲುಗಳು ನೂರಾರು. ಅಂತಾರಾಷ್ಟ್ರೀಯ ಆನ್‌ಲೈನ್‌ನಲ್ಲಿ ಕಲಾಕೃತಿಗಳ ಹರಾಜು ಸಹ ದೊಡ್ಡಮಟ್ಟದಲ್ಲಿಯೇ ನಡೆಯುತ್ತಿವೆ. ಹೀಗಾಗಿ ಪ್ರತಿಭಾವಂತರಿಗೆ ಅವಕಾಶಗಳ ಬಾಗಿಲುಗಳು ನೂರಾರು.
ಈಗ ನನ್ನ ಕಲಾಕೃತಿಗಳೂ ಅನೇಕ ಆನ್ಲೈನ್ ಗ್ಯಾಲರಿಗಳಲ್ಲಿವೆ. ಕೊರೊನಾ ಕಾಲದಲ್ಲಿ ಡಿಜಿಟಲ್ ಮಾಧ್ಯಮ ಸಾಕಷ್ಟು ಪ್ರಯೋಜನಕ್ಕೆ ಬಂತು. ವಿಭಿನ್ನರೂಪದ ಪ್ರತಿಭೆಗಳು ಇದರ ಲಾಭಾರ್ಥಿಗಳಾದರು. ಅದರಲ್ಲಿ ಒಂದಷ್ಟು ಚಿತ್ರಕಲಾವಿದರಿಗೆ ಇದು ವರದಾನವಾಗಿತ್ತು ಎಂದು ಹೇಳಲಾಗುತ್ತದೆ. ಕಲಾಕೃತಿಯ ರಚನೆ ಎಷ್ಟು ಮುಖ್ಯವೋ ಅಷ್ಟೇ ಅದನ್ನು ನೀವು ಮಾರಾಟಗೊಳಿಸುವ, ಜನರಿಗೆ ತಲುಪಿಸುವುದರಲ್ಲೂ ಒಂದು ‘ಟ್ಯಾಲೆಂಟ್’ ನಿಮಗಿರಬೇಕಾಗುತ್ತದೆ. ಆದರೆ ಬಹುತೇಕರಿಗೆ ಇದು ಸಾಧ್ಯವಾಗುವುದಿಲ್ಲ. ಆದರೆ ಅನೇಕ ಪ್ರತಿಭಾವಂತರಿಗೆ ಕಲೆಯ ಅಭಿರುಚಿಯುಳ್ಳ ಖರೀದಿದಾರರು ದೊರೆತಿರುವುದಿಲ್ಲ. ‘ವ್ಯಾನ್ ಗೋ’ ತರಹ ತಮ್ಮ ಕಲಾಕೃತಿಗಳ ಮಾರಾಟವಾಗದ ಹತಾಶ ಭಾವ ಹೊತ್ತವರೂ ಇದ್ದಾರೆ.
ದೊಡ್ಡ ಪ್ರಮಾಣದ ಕಲಾ ಪ್ರದರ್ಶನಗಳು ನಡೆಯುವುದು ಮುಂಬೈ, ದಿಲ್ಲಿ, ಅಹಮದಾಬಾದ್ ನಗರಗಳಲ್ಲಿ. ಇಲ್ಲಿ ಪ್ರದರ್ಶನ ಆಯೋಜಕರ ಹಣ ಮಾಡುವ ಹುನ್ನಾರವೂ ಇರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದರೆ ಯಾವುದೋ ಮೂಲೆಯ ಒಬ್ಬ ಕಲಾವಿದನಿಗೆ ಅವಕಾಶವೂ ದೊರೆಯುತ್ತದೆಂಬುದೂ ಸುಳ್ಳಲ್ಲ. ಆದರೆ ಕೊಂಚ ಜಾಗರೂಕರಾಗಿರಬೇಕು ಅಷ್ಟೇ. ಮುಂಬೈನಲ್ಲಿ ನಡೆದ ಒಂದು ದೊಡ್ಡ ಪ್ರದರ್ಶನದಲ್ಲಿ ನಿರ್ದಿಷ್ಟ ಕಲಾವಿದನನ್ನು ಬೆಳೆಸಲು ಟಾರ್ಗೆಟ್ ಮಾಡಿ ಅವನ ಬಳಿ ಮಾತ್ರ ಖರೀದಿದಾರ ಮಹಾಶಯರನ್ನು ಕರೆದು ಒಯ್ದು ಅವನ ಕೃತಿಗಳನ್ನು ಸೇಲ್ ಮಾಡಿದ ಪ್ರಸಂಗವನ್ನೂ ನಾನು ನೋಡಿದ್ದೇನೆ. ಉಳಿದ ಕಲಾವಿದರ ಕಣ್ಣೆದುರೇ ಇದೆಲ್ಲ ನಡೆಯುತ್ತಿದ್ದರೂ ಅವರು ಅಸಹಾಯಕ ಮೂಕ ಪ್ರೇಕ್ಷಕರಾಗಿ ನೋಡುತ್ತ ನಿಂತಿದ್ದರು. ಆಗ ನಾನು ಮಾತ್ರ ಸಂಘಟಕನಿಗೆ ತರಾಟೆಗೆ ತಗೊಂಡಿದ್ದೆ.
ಇದೆಲ್ಲಕ್ಕೂ ಮಿಗಿಲಾಗಿ ದೇಶದ ಪ್ರತಿಷ್ಠಿತ ಗ್ಯಾಲರಿಗಳಲ್ಲಿ ತನ್ನ ಚಿತ್ರಕಲಾ ಪ್ರದರ್ಶನವಾಗಬೇಕೆಂದು ಅನೇಕರು ಬಯಸಿರುತ್ತಾರೆ. ಇದು ಹೆಣ್ಣು ಒಂದು ಬಗೆಯಲ್ಲಿ ತಾಯಾಗಲು ಹಪಾಹಪಿಸಿದಂತೆ. ವರ್ಚ್ಯುವಲ್‌ಗಿಂತ ಇದರ ಮಜವೇ ಬೇರೆ. ಒಮ್ಮೆ 2009 ಇರಬಹುದು. ಬೆಂಗಳೂರಿನ ಎಮ್. ಜಿ. ರಸ್ತೆಯ ಪ್ರತಿಮಾ ಆರ್ಟ್ ಗ್ಯಾಲರಿಯಲ್ಲಿ ನನ್ನ ಪ್ರದರ್ಶನ ಏರ್ಪಡಿಸಿದ್ದೆ. ಮಿತ್ರರಾದ ದಿಲಾವರ ರಾಮದುರ್ಗ, ಎಸ್.ವಿಷ್ಣುಕುಮಾರ್ ನೆರವಿಗೆ ನಿಂತಿದ್ದರು. ಗ್ಯಾಲರಿ ಮಾಲಿಕಳಾದ ಪ್ರತಿಮಾ ತುಂಬಾ ಹುರುಪಿನ ಹೆಣ್ಣುಮಗಳು. ನಮಗೆಲ್ಲ ಅವರ ಸಹಕಾರವಿತ್ತು. ಅಂದು ಉದ್ಘಾಟನೆಗೆ ಮಾಜಿ ಸಚಿವ ದಿನೇಶ ಗುಂಡುರಾವ ಆಗಮಿಸಿದ್ದರು. ಉದ್ಘಾಟನೆ ಬಳಿಕ ವೈನ್ ಚೀಜ್ ಕಾಕ್ಟೇಲ್ ಪಾರ್ಟಿಯಿತ್ತು. ಕಾರ್ಪೋರೇಟ್ ಜಗತ್ತಿನ ಚೆಲುವ ಚೆಲುವೆಯರ ಆಗಮನವಿತ್ತು. ಭರ್ಜರಿ ಉದ್ಘಾಟನೆ. ಮರುದಿನ ಇಂಗ್ಲಿಷ್ ಪತ್ರಿಕೆಯಲ್ಲಿ ‘ಆನ್ ಇನ್ನರ್ ಜರ್ನಿ’ ಎಂದು ಅರ್ಧಪುಟದ ಚಿತ್ರ ಸಹಿತ ಬರಹ ಬಂತು. ಆಗ ಜಾಗತಿಕ ಆರ್ಥಿಕ ಮಂದಿಯ ಕಾಲ. ನಮ್ಮ ಅಂದಿನ ಪ್ರಧಾನಿ ಮನಮೋಹನ ಸಿಂಗರು ಅದರ ಯಾವ ಬಿಸಿ ಭಾರತೀಯನಿಗೆ ತಟ್ಟದಂತೆ ನೋಡಿಕೊಂಡಿದ್ದರು.
ಆ ಸಚಿತ್ರ ಲೇಖನ ಓದಿದ ಆಫ್ರಿಕನ್ ಟೂರಿಸ್ಟ್ ದಂಪತಿಗಳು ಗ್ಯಾಲರಿಗೆ ಆಗಮಿಸಿದರು. ಅದು ಅಮೂರ್ತ ಚಿತ್ರಗಳ ಪ್ರದರ್ಶನ. ಆಕೆ ಒಂದೆಡೆ ಕುಳಿತರು. ಆತ ಕಲಾಕೃತಿಗಳೆದರು ಹಿಂದೆ ಮುಂದೆ ನಿಂತು ವೀಕ್ಷಿಸುತ್ತಿದ್ದ. ಕೊನೆಗೆ ಐದು ಕಲಾಕೃತಿಗಳನ್ನು ಆಯ್ಕೆ ಮಾಡಿದ. ಹಾಗೇ ಆತ ಏಳು ಕೃತಿಗಳನ್ನು ಆಯ್ಕೆ ಮಾಡಿದ್ದ. ಆದರೆ ಆತನ ಹೆಂಡತಿ ಎರಡಕ್ಕೆ ಕತ್ತರಿ ಹಾಕಿದಳು. ಮನದಲ್ಲೇ ಆಕೆಯನ್ನು ಶಪಿಸಿದ್ದೆ. ಆ ದಂಪತಿಗಳು ಆಯ್ದ ಐದು ಕೃತಿಗಳ ಹಣವನ್ನು ಡಿಜಿಟಲಿ ಟ್ರಾನ್ಸಫರ್ ಮಾಡಿದರು. ಮತ್ತು ವಿಳಾಸವೊಂದನ್ನು ನೀಡಿ ‘ಈ ವಿಳಾಸಕ್ಕೆ ಕಾರ್ಗೊ ಕುರಿಯರ್ನಲ್ಲಿ ಕಳಿಸಿರಿ’ ಎಂದು ಹೇಳಿದರು. ನಾನು ಸೇಫ್ ಆಗಿ ಅವುಗಳನ್ನು ಆಫ್ರಿಕಾಗೆ ತಲುಪಿಸಿದೆ. ಈ ಸಂದರ್ಭದಲ್ಲಿ ಇದು ನೆನಪಾಯಿತು. ಚಿತ್ರರಚನೆ ಮತ್ತು ಮಾರಾಟ, ಇವೆರಡೂ ಒಮ್ಮೊಮ್ಮೆ ನಿಗೂಢವೇ ಅನ್ನಿಸುತ್ತವೆ.
*
ಗಮನಿಸಿ : ಚಿತ್ರಕಲಾವಿದರು, ದೃಶ್ಯಕಲಾವಿದರು, ಆಯೋಜಕರು, ಕಲಾರಸಿಕರು ‘ವರ್ಣಕಥಾ’ ಅಂಕಣದಲ್ಲಿ ತಮ್ಮ ಅನುಭವಾಧಾರಿತ ವಿಚಾರಗಳನ್ನು ಹಂಚಿಕೊಳ್ಳಬಹುದು. ಒಂದು ವಾರ ಮೊದಲೇ ಪ್ರದರ್ಶನದ ಆಹ್ವಾನಪತ್ರಿಕೆ ಕಳಿಸಿದಲ್ಲಿ ಸಂಪರ್ಕಿಸಲಾಗುವುದು: tv9kannadadigital@gmail.com
*
ಚೌಗಲೆಯವರು ಅನುವಾದಿಸಿದ ಈ ನಾಟಕದ ಬಗ್ಗೆಯೂ ಓದಿ : Theatre : ಗಂಡುಹೆಣ್ಣುಗಳ ನಡುವಿನ ಅಭೀಪ್ಸೆಯ ತೊಳಲಾಟದ ‘ಚದುರಂಗ ಮತ್ತು ಕತ್ತೆ’ ನಾಳೆ ರಂಗಶಂಕರದಲ್ಲಿ
Published On - 1:51 pm, Thu, 3 February 22