Theatre: ಅಂಕಪರದೆ : ಕಾರ್ನಾಡರ ‘ತುಘಲಕ್’ ಮೇ 28ರಂದು ಮೈಸೂರಿನಲ್ಲಿ ‘ರಂಗವಲ್ಲಿ’ಯಿಂದ
Tughlaq Play : ‘ಕೇವಲ ಕಾಮಾತುರನಾಗಿ ಒಬ್ಬ ಹೆಣ್ಣನ್ನು ಎಳೆದಾಡಿದರೆ ಏನು ಪ್ರಯೋಜನ? ಇಲ್ಲ.. ಇಲ್ಲ.. ಮೊದಲು ಅಧಿಕಾರ ಪಡೆಯಬೇಕು. ಆಗ ಪೀಡೆ, ಕ್ರೀಡೆ ಎಲ್ಲದಕ್ಕೂ ಅರ್ಥ ಬಂದುಬಿಡುತ್ತದೆ..‘
ಅಂಕಪರದೆ | Ankaparade : ಮೊಹಮ್ಮದ್ ಬಿನ್ ತುಘಲಕ್ ಎಂಬ ಅತ್ಯಂತ ಮಹತ್ವಾಕಾಂಕ್ಷಿ ದೆಹಲಿಯ ಸುಲ್ತಾನನ ಕತೆಯನ್ನು ಈ ನಾಟಕದಲ್ಲಿ ರಂಗದ ಮೇಲೆ ಕಾಣಬಹುದು. ‘ಯಥಾ ರಾಜ ತಥಾ ಪ್ರಜಾ’ ಎಂಬ ಗಾದೆಯ ಮಾತಿದೆ. ತನ್ನ ಸಮಾನತೆ, ಸಹಬಾಳ್ವೆ ಮತ್ತು ಶಾಂತಿಯ ಆಕಾಂಕ್ಷೆಯನ್ನು ಪ್ರತಿಪಾದಿಸುತ್ತಾ, ರಾಜಕಾರಣದ ನೆಪದಲ್ಲಿ ನಿರಂಕುಶಾಧಿಕಾರಿಯಾಗಿ ಮೆರೆಯುವ ರಾಜ ಒಂದೆಡೆಯಾದರೆ, ಆ ರಾಜನ ಪ್ರಭುತ್ವದ ಬಗ್ಗೆ ಬಹಿರಂಗವಾಗಿ ಮಾತನಾಡುವ ಧೈರ್ಯವಿಲ್ಲದೆ ಗುಟ್ಟಾಗಿ ಅಸಮಾಧಾನದ ಮಾತುಗಳನ್ನಾಡುತ್ತ ಖೋಟಾ ನಾಣ್ಯಗಳನ್ನು ಟಂಕಿಸುವುದರ ಮೂಲಕ ತಮ್ಮ ಅಪ್ರಾಮಾಣಿಕತೆಯನ್ನು ಮೆರೆಯುವ ಪ್ರಜೆಗಳು ಇನ್ನೊಂದೆಡೆ. ಮನುಷ್ಯನ ದಾಹಕ್ಕೆ ಕನ್ನಡಿ ಹಿಡಿಯುತ್ತಾ, ಅದು ಅಧಿಕಾರವಿರಬಹುದು; ಹಣವಿರಬಹುದು; ಕಾಮವಿರಬಹುದು; ಏನಾದರಿರಬಹುದು, ಕೊನೆಯಲ್ಲಿ ನಾವು ಮಾಡಿದ ಪಾಪಗಳೆಲ್ಲವೂ ಅನಿವಾರ್ಯವೆಂದು ಸಾಧಿಸುವ ಮೂಲ ಗುಣವನ್ನು ತೋರಿಸುತ್ತವೆ.
“ಕೇವಲ ಕಾಮಾತುರನಾಗಿ ಒಬ್ಬ ಹೆಣ್ಣನ್ನು ಎಳೆದಾಡಿದರೆ ಏನು ಪ್ರಯೋಜನ? ಇಲ್ಲ.. ಇಲ್ಲ.. ಮೊದಲು ಅಧಿಕಾರ ಪಡೆಯಬೇಕು. ಆಗ ಪೀಡೆ, ಕ್ರೀಡೆ ಎಲ್ಲದಕ್ಕೂ ಅರ್ಥ ಬಂದುಬಿಡುತ್ತದೆ..”
“ಧರ್ಮಕ್ಕೂ ರಾಜಕಾರಣಕ್ಕೂ ಏನು ಸಂಬಂಧ? ಜೀವನದಲ್ಲಿ ಒಮ್ಮೊಮ್ಮೆ ಹೆಡೆಯೆತ್ತುವ ಶೂನ್ಯತೆಗೆ ಭಕ್ತಿಯ ಹೊರತು ಬೇರೆ ಯಾವ ಸಂಗೀತ ಬಗ್ಗಿಸೀತು? ಅಲ್ಲಿ ಧರ್ಮವೊಂದೇ ಬೆಳಕು. ಆದರೆ ನನ್ನ ರಾಜ್ಯದಲ್ಲಿ ಲಕ್ಷಾವಧಿ ಜನರಿದ್ದಾರೆ. ಅಲ್ಲಿಯೂ ಕೊಳೆ ಇದೆ, ನಿಜ. ಆದರೆ ಮನುಷ್ಯರು ಮಾಡಿಟ್ಟ ಕೊಳೆಯನ್ನು ತೊಳೆಯಲಿಕ್ಕೆ ನಾನು ದೇವರನ್ನು ಏಕೆ ಕರೆಯಬೇಕು?”
“ಮೊಣಕಾಲ ಮೇಲೆ ಬಹಳ ದೂರ ತಲುಪುವುದು ಯಾರಿಗೂ ಸಾಧ್ಯವಿಲ್ಲ, ಶೇಖಸಾಹೇಬ. ನನಗೆ ಬೇಕಾದದ್ದು ಅಂಬೆಗಾಲಿಕ್ಕುವುದಲ್ಲ, ನಾಗಾಲೋಟ.”
ಇದನ್ನೂ ಓದಿ : Girish Karnad Birth Anniversary : ‘ಕಾರ್ನಾಡರ ‘ಒಡಕಲು ಬಿಂಬ’ದಿಂದಲೇ ಇಡೀ ಭಾರತವನ್ನು ನೋಡಿದೆ’ ಗಾಯತ್ರಿ ಕೃಷ್ಣ
ಕ್ರಿ.ಶ. 1327ರಲ್ಲಿ ದಿಲ್ಲಿಯಲ್ಲಿ ನಡೆಯುವ ಘಟನೆಗಳನ್ನು ಆಧರಿಸಿ ಮನುಷ್ಯನ ಸಾರ್ವಕಾಲಿಕ ಅನುಭವಕ್ಕೆ ರೂಪಕವಾಗಿ ಕಾರ್ನಾಡರು ಕಟ್ಟಿಕೊಟ್ಟಿರುವ ‘ತುಘಲಕ್’ ನಾಟಕದಲ್ಲಿನ ಪಾತ್ರಗಳು ಆಡುವ ಮಾತುಗಳಿವು. ಈ ಮಾತುಗಳು ಐತಿಹಾಸಿಕ ಸಂದರ್ಭದಲ್ಲಿ ಮೂಡಿಬಂದಿದ್ದರೂ ಸಮಕಾಲೀನ ರಾಜಕೀಯದ ಸಂದರ್ಭಕ್ಕೆ ಕೆಲವೊಮ್ಮೆ ಹೊಂದಿಬಿಡುವ ಆಕಸ್ಮಿಕವೇ ಸಾಹಿತ್ಯದ ಸಾರ್ವಕಾಲಿಕ ಶಕ್ತಿಯಾಗಿದೆ. ತುಘಲಕ್ ನಾಟಕದ ಗೆಲುವೆಂದರೆ, ಮನಸ್ಸು ಹಾಗೂ ಬುದ್ಧಿಯ ನಡುವಿನ ಆಲೋಚನಾ ದ್ವಂದ್ವದಾಟದ ಸುಲ್ತಾನನ ಆಳ್ವಿಕೆಯನ್ನು ಅತ್ಯಂತ ಮಾರ್ಮಿಕವಾಗಿ ಬಿಂಬಿಸುತ್ತಲೇ, ಅವನ ನಡೆವಳಿಕೆಯನ್ನು ವಿಮರ್ಷೆಗೆ ಹಚ್ಚಿ, ನಿರ್ಣಯವನ್ನು ಪ್ರೇಕ್ಷಕರಿಗೆ ಬಿಡುತ್ತದೆ.
ರಂಗದ ಮೇಲೆ : ಮಂಜುನಾಥ ಶಾಸ್ತ್ರೀ, ರಾಘವೇಂದ್ರ ಬೂದನೂರು, ಹರಿಪ್ರಸಾದ್ ಕಶ್ಯಪ್, ರಶ್ಮಿ ನಾರಾಯಣ್, ಮುರಳಿ ಗುಂಡಣ್ಣ, ರವಿಪ್ರಸಾದ್, ಭಾರ್ಗವಿ ಹೊರಂಟೂರು, ವಿಜಯ್, ಪ್ರಣವ್ ಸ್ವರೂಪ್, ನವೀನ್, ಆದರ್ಶ, ಪ್ರಜ್ವಲ್, ಧನುಷ್, ರಕ್ಷಿತ್, ಗೌತಮ್ ಮತ್ತಿತರರು.
ನೇಪಥ್ಯದಲ್ಲಿ : ಬೆಳಕು – ಕೃಷ್ಣಕುಮಾರ್ ನಾರ್ಣಕಜೆ, ವಸ್ತ್ರವಿನ್ಯಾಸ – ಬಿ.ಎಂ. ರಾಮಚಂದ್ರ, ಸಂಗೀತ – ಉದಿತ್ ಹರಿತಸ್, ರಂಗಸಜ್ಜಿಕೆ ಮತ್ತು ಪರಿಕರ – ಮಂಜು ಕಾಚಕ್ಕಿ, ಸಹ ನಿರ್ದೇಶನ – ಹರಿಪ್ರಸಾದ್ ಕಶ್ಯಪ್, ನಿರ್ವಹಣೆ – ಮಂಜುನಾಥಶಾಸ್ತ್ರೀ.
ರಂಗವಲ್ಲಿ ಪ್ರಸ್ತುತಿ ಗಿರೀಶ ಕಾರ್ನಾಡರ ತುಘಲಕ್ ನಿರ್ದೇಶನ: ಮಾಯಸಂದ್ರ ಕೃಷ್ಣಪ್ರಸಾದ್ ಮೇ.28 ಮತ್ತು 29 ಶನಿವಾರ ಮತ್ತು ಭಾನುವಾರ ಸಂಜೆ 6.30ಕ್ಕೆ ಸ್ಥಳ: ಕಿರುರಂಗಮಂದಿರ, ಕಲಾಮಂದಿರ ಆವರಣ ಮೈಸೂರು.
ನಾಟಕ : ತುಘಲಕ್
ರಚನೆ : ಗಿರೀಶ ಕಾರ್ನಾಡ
ತಂಡ : ರಂಗವಲ್ಲಿ, ಮೈಸೂರು
ನಿರ್ದೇಶನ : ಮಾಯಸಂದ್ರ ಕೃಷ್ಣಪ್ರಸಾದ್
ದಿನಾಂಕ : ಮೇ 28 ಮತ್ತು 29
ಸಮಯ : ಸಂಜೆ 6.30ಕ್ಕೆ
ಸ್ಥಳ : ಕಿರುರಂಗಮಂದಿರ, ಕಲಾಮಂದಿರ ಆವರಣ ಮೈಸೂರು.
*
ಇದನ್ನೂ ಓದಿ : Play: ಅಂಕಪರದೆ; ಎಂಎಸ್ಕೆ ಪ್ರಭು ಅವರ ‘ಬೆತ್ತಲೆ ಅರಸನ ರಾಜರಹಸ್ಯ’ ತಿಳಿಯಲು ಇಂದು ಮೈಸೂರಿನ ‘ನಟನ’ಕ್ಕೆ ಬನ್ನಿ
ಗಮನಿಸಿ : ‘ಅಂಕಪರದೆ’ಯ ಮೂಲಕ ಕಲಾಸಕ್ತರನ್ನು ನೀವು ತಲುಪಲು ಬಯಸಿದಲ್ಲಿ ಪ್ರದರ್ಶನಕ್ಕೆ ಒಂದು ವಾರವಿರುವಾಗ ನಮಗೆ ತಿಳಿಸಿ. ಹಾಗೆಯೇ ಕಲಾಸಕ್ತರು, ಕಲಾತಜ್ಞರು, ಪ್ರದರ್ಶನ ಕಲೆಗಳಿಗೆ ಸಂಬಂಧಿಸಿದ ಯಾವುದೇ ವಿಷಯ, ವಿಚಾರ, ಒಳನೋಟಗಳನ್ನು ಹಂಚಿಕೊಳ್ಳಲು ನಮ್ಮನ್ನು ಸಂಪರ್ಕಿಸಿ :tv9kannadadigital@gmail.com
Published On - 3:19 pm, Tue, 24 May 22