Poetry: ಅವಿತಕವಿತೆ; ಥಟ್ಟನೆ ಇಳಿದು ಬಂದವನು ಅಪ್ಪುತ್ತಾನೆ ನಿಂತವನ
Poem : ಹರಿದ ನೆತ್ತರು ಎಲ್ಲಿಯೋ ಇಂಗಿ ಮಿಡುಕುವ ಜೀವ ದಿಕ್ಕೆಟ್ಟು, ಸಾವಿನ ಸಾಗರದ ಅಲೆ ಬಡಿತ ಎಲ್ಲೆಲ್ಲು
ಅವಿತಕವಿತೆ | AvithaKavithe : ಅಂಗರಂಗದ ಭಾವಗಳಿಗೆ ದನಿ ಕೊಡಲು ಸಂಗೀತಗಾರರಿಗೆ ರಾಗಗಳಿವೆ; ಚಿತ್ರಕಲಾವಿದರಿಗೆ ಗೆರೆ ಬಣ್ಣಗಳಿವೆ; ಬರಹಗಾರರಿಗೆ ಏನಿದೆ? ತಕ್ಷಣ ಕೈಗೆ ಸಿಕ್ಕುವುದು ಗದ್ಯ. ಎಷ್ಟೇ ಉದ್ದುದ್ದ ಬರೆದರೂ ಗದ್ಯ ಸಮಾಧಾನ ಕೊಡದಿರಬಹುದು. ಕತೆ, ನಾಟಕ, ಕವಿತೆ, ಪ್ರಬಂಧ ಇತ್ಯಾದಿ ಪ್ರಕಾರಗಳು? ಅವರವರ ಆಯ್ಕೆಗೆ ಬಿಟ್ಟ ವಿಚಾರ. ನನಗೆ ಕವಿತೆಯೇ ಹತ್ತಿರ ಮತ್ತು ಆಪ್ತ ಎನಿಸುತ್ತದೆ. ಒಡಲಿನ ಏರಿಳಿತಗಳು, ಸುತ್ತಲಿನ ವಿದ್ಯಮಾನಗಳ ಪಲ್ಲಟಗಳು ಹೊತ್ತಿಸುವ ಬೆಂಕಿ, ಧಗೆ, ತಲ್ಲಣಗಳಿಗೆ ಇಂಬಾಗಿ ನಿಲ್ಲುವುದು ಕವಿತೆಯೇ. ತೀವ್ರವಾಗಿ, ತತ್ ಕ್ಷಣದ ಅಭಿವ್ಯಕ್ತಿಯಾಗಿ ಕೈಗೆ ಸಿಕ್ಕುವ ಕವಿತೆ ಒಳದನಿಯಂತೆ ಕೇಳಿಸುತ್ತದೆ, ಅದಕ್ಕೆ ಕಿವಿಗೊಟ್ಟರೆ ಜೋರಿನ ಎದೆಬಡಿತ ಸಮಸ್ಥಿತಿಗೆ ಬಂದಂತೆ ಭಾಸವಾಗುತ್ತದೆ. ಜಿ. ಪಿ. ಬಸವರಾಜು (G.P. Basavaraju)
ಯುಕ್ರೇನ್
1.
ಕತ್ತಲು ಕರಗುವ ಮುನ್ನವೇ ಅರುಣೋದಯದ ರಣರಂಗು ಕಿವುಡಾಗಿಸುವ ಸಿಡಿತದಬ್ಬರ ಮುಗಿಲ ಮುತ್ತಿದ ಹೊಗೆ ಮೋಡ ಕೆನ್ನಾಲಗೆ ಚಾಚಿದಲೆ ಸಿಡಿ ಸಿಡಿದು, ಊರೆಲ್ಲ ಚೂರು ಚೂರು ನಡುಗುವ ನೆಲ, ಗುಡುಗುವ ನಭ ಭುಗಿಲೆದ್ದ ಹಗೆ, ಸುಡುಗಣ್ಣ ಬಿಸಿ, ಕರಗಿ ನೀರಾಗಿ ಜೀವ ಅಲೆವ ಬಿಂಬ ಎತ್ತ ಓಡುವುದು, ಎಲ್ಲಿ ಅಡಗುವುದು? ಬೆನ್ನಟ್ಟಿದ ವೈರಿಯ ಉರಿಯಲ್ಲಿ ಗಳಿಗೆ ನಿಂತರೆ ಉಳಿಯುವುದು ಬೂದಿರಾಶಿ ಹುಚ್ಚೆದ್ದ ಉನ್ಮಾದ, ಎದ್ದೆದ್ದು ಕುಣಿವ ಅಹಂಕಾರ. ಆರ್ಭಟಿಸುವ ಕ್ಷಿಪಣಿಗಳ ಹಗೆತನದ ಹೊಗೆ, ಬೆಳಕಿಲ್ಲದ ಬೆಂಕಿ ಬಂಕರೊ, ಬಿಲವೊ ಕಾಲಿಟ್ಟಲ್ಲಿ ಕುಸಿಯುವುದು ನೆಲ, ಇದ್ದ ಸೂರು ಬಿದ್ದು ಕವಿಯುವುದು ಘನ ಕತ್ತಲೆ ಹರಿದ ನೆತ್ತರು ಎಲ್ಲಿಯೋ ಇಂಗಿ ಮಿಡುಕುವ ಜೀವ ದಿಕ್ಕೆಟ್ಟು, ಸಾವಿನ ಸಾಗರದ ಅಲೆ ಬಡಿತ ಎಲ್ಲೆಲ್ಲು ಬಿಕ್ಕುವ ಬಾಲೆಯ ಕೆನ್ನೆಗಿಳಿದ ಕಣ್ಣೀರ ಬಿಂದುವಿನಲ್ಲಿ ಅಲ್ಲಾಡುವ ನೆಲೆಗೆಟ್ಟ ಬಿಂಬಗಳು ನೂರು ನೂರು ದೇಶವೊ, ಕೋಶವೊ, ಗಡಿಗೆರೆಯೊ ಒಡನಾಡಿಯೊ, ವೈರಿಯೊ, ಜೀವ- ವಿಲ್ಲದ ಕ್ಷಿಪಣಿಗಳು ಕಾರುತ್ತಿವೆ ಬೆಂಕಿ ರಣಹದ್ದು ಹಳೆಯ ರೂಪಕ, ಅದರ ದಾಹಕ್ಕೆ ಮಿತಿಯುಂಟು, ಈಗ ಕ್ಷಿಪಣಿ, ಅಣುಬಾಂಬು-ಹೊಗೆ, ಬೆಂಕಿ ಬೂದಿ 2 ಸಾಲು ಸಾಲು ಟ್ಯಾಂಕು, ಇರುವೆಯಲ್ಲ ಆನೆಯೂ ಅಲ್ಲ, ಕಣ್ಮುಚ್ಚಿ ಸಾಗುತ್ತಿದೆ ಸಿಕ್ಕದ್ದನ್ನೆಲ್ಲ ತುಳಿಯುತ್ತ ತುಳಿಯುತ್ತ ಅಡ್ಡಗಟ್ಟಿ ನಿಂತಿದ್ದಾನೆ ಏಕಾಂಗಿ ಧೀರ ತೋಳ ತೆರೆದು, ಎದೆಗೊಟ್ಟು, ನ್ಯಾಯ- ಕೇಳುತ್ತ ರಣರಂಗದಲಿ ಪಟ್ಟುಹಿಡಿದು ಮೇಲೆಯೂ ಕುಳಿತಿದ್ದಾನೆ ಒಬ್ಬ ನೋಡುತ್ತ ಬೆರಗಾಗಿ, ಅವನ ಎದೆಯೂ ಬಡಿಯುತ್ತಿದೆ ಕರುಳು ಮಿಡಿಯುತ್ತಿದೆ ತನ್ನಂಥದೇ ಜೀವಕ್ಕೆ ಎದುರಾಬದರಾ ಎಷ್ಟು ಹೊತ್ತು, ಏನು ಮಾತು? ದಂಡಿನಲ್ಲಿ ಕೇಳುವುದಿಲ್ಲ, ಕಾಣುವುದಿಲ್ಲ ಏನೂ ರೆಪ್ಪೆ ಬಡಿಯದೆ ನೋಡುತ್ತಾನೆ ಮೇಲಿನವನು ವೈರಿಯೊ ಗೆಳೆಯನೊ ನಿಂತಿದ್ದಾನೆ ಎದೆತೆರೆದು ಯಮನಿಗೆ, ಯಾರ ಅಂಜಿಕೆ ಜೀವ ಮರೆತವನಿಗೆ ಥಟ್ಟನೆ ಇಳಿದು ಬಂದವನು ಅಪ್ಪುತ್ತಾನೆ ನಿಂತವನ
*
ಇದನ್ನೂ ಓದಿ : Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
ಪ್ರತಿಕ್ರಿಯೆಗಾಗಿ : tv9kannadadigital@gmail.com
ಈ ಅಂಕಣದಲ್ಲಿ ಪ್ರಕಟವಾದ ಎಲ್ಲಾ ಕವಿತೆಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ