ನಿಮ್ಮ ಟೈಮ್ಲೈನ್ : ‘ಅದರ ಮ್ಯಾಲೆ ನೌವಾರೀ ಉಡಂಗಿಲ್ಲ ಹುಚ್ಚಗೋಳ್ರ್ಯಾ’
Jayashree Deshpande : ಪರಕಾರ ಮೇಲೆ ಆ ಒಂಬತ್ತು ಮೀಟರ್ ಜರೀ ಸೀರೆ ಸುತ್ತಿ ನಟ್ಟನಡು ಮಧ್ಯೆ ಒಂದು ನೆರಿಗೆ ಎತ್ತಿ ಹಿಂದೆ ಸಿಗಿಸಿಕೊಂಡು ಥೇಟ್ ಗ್ಯಾಸ್ ಸಿಲಿಂಡರಿನಾಕಾರಗಳಾಗಿ ಇಬ್ಬರೂ ನಿಂತಿದ್ದೆವು! ನಾಚಿಕೆ ಉಕ್ಕುಕ್ಕಿ ಬಂತು, ಆದರೆ ಇನ್ನೊಂದು ದಾರಿ ಇಲ್ಲ.
ನಿಮ್ಮ ಟೈಮ್ಲೈನ್ | Nimma Timeline : ಆ ಕಚ್ಚಿ ಸೀರೆ ಉಟ್ಕೋಳ್ಳುದಂದ್ರೆ ನನಗೆ ಮೊದಲೇ ಜೀವಕ್ಕೆ ಬಂದಿತ್ತು. ಆದರೆ ಮಾಯಿ ಆ ಮಂಗಳವಾರದ ದಿನ ಬೆಳಗಾಗೆದ್ದು, “ಇದು ಮನೀಪದ್ಧತಿ, ನಾವೆಲ್ಲಾ ನೌವಾರೀ ಬನಾರಸೀ ಶಾಲೂ (ಅರ್ಥಾತ್ ಒಂಬತ್ತು ಗಜದ ಪಟ್ಟೆ ಸೀರೆ) ಉಟ್ಗೊಂಡೇ ಮಂಗಳಾಗೌರಿ ಪೂಜಾ ಮಾಡಿದ್ದು. ನೀವೂ ಇಬ್ರೂ ಉಟುಗೊಳ್ರಿ ಇಕಾ, ಇವೆರಡೂ ಶಾಲೂ ತೊಗೊಂಡು ನಿಮಗ ಯಾವ ಬಣ್ಣ ಬೇಕೋ ಅದನ್ನ ಆರಿಸಿಗೊಂಡು ಕಚ್ಚಿ ಹಾಕಿ ಉಟ್ಗೊಂಡು ಬರ್ರಿ, ನನಗ ಭಾಳ ಕೆಲಸ ಬಿದ್ದದ. ತಯಾರಿ ಮಾಡಬೇಕು” ಒಂದೇ ಮಾತಿನೊಳಗೆ ಇಷ್ಟು ಹೇಳಿ ಮುಗಿಸಿ ತಮ್ಮ ಇಳಕಲ್ ಸೀರೆಯ ಕಚ್ಚೆ ತೀಡಿಕೊಳ್ತ ನಮಗಿಬ್ಬರಿಗೂ ಒಂದರ್ಥದಲ್ಲಿ-‘ಹೇಳಿದ್ದು ಮಾಡ್ರಿ’ – ಅನ್ನುವ ಸೂಕ್ಷ್ಮ ಆದೇಶ ಕೊಟ್ಟು ಮಾಯಿ ಒಳಗೆ ಹೋದರು. ಶ್ರಾವಣ ಬಂದಿತ್ತು, ಮದುವೆ ಆದ ಹೊಸತು… ಹೊಸ ವಧುಗಳು ಮಾಡುವ ನಾಲ್ಕು ಮಂಗಳವಾರದ ಗೌರೀಪೂಜೆ ಒಂದು ರೀತಿಯಲ್ಲಿ ಕಟ್ಟಾ ಶಾಸ್ತ್ರದ ಪ್ರಕಾರ ನಡೀಬೇಕಿದ್ದ ಪದ್ಧತಿ. ಆವತ್ತುಮಂಗಳಾಗೌರಿ ಪೂಜೆ ಮಾಡಬೇಕಿದ್ದವರು ನಾನು ಮತ್ತು ನನ್ನ ಓರಗಿತ್ತಿ ಅಂದರೆ ಭಾವನ ಹೆಂಡತಿ- ನನಗಿಂತ ದೊಡ್ಡವಳು, ಆದರೂ ಅಣ್ಣ ತಮ್ಮ ಇಬ್ಬರದೂ ಮದುವೆ ಎರಡೇ ದಿನಗಳ ಅಂತರದಲ್ಲಿ ನಡೆದಿತ್ತು. ಜಯಶ್ರೀ ದೇಶಪಾಂಡೆ, ಲೇಖಕಿ (Jayashree Deshpande)
ನಮ್ಮೆದುರು ಕನಿಷ್ಟಪಕ್ಷ ಮೂರು ಕೆಜಿ ತಲಾ ತೂಕದ್ದಿರಬಹುದಾದ ಎರಡು ಬನಾರಸೀ ಶಾಲೂ ಕೂತಿದ್ದುವು. ನಮಗೂ ಮದುವೆಯಲ್ಲಿ ಅಪ್ಪ ಕೊಟ್ಟ ನಮ್ಮವೇ ಹೊಸ ನಮೂನೆಯ (ಅಂದರೆ ಆರು ಮೀಟರ್ದು) ಬನಾರಸಿ ಶಾಲೂಗಳು ಇದ್ದುವು ಖರೆ, ಆದರೆ ಅವತ್ತು ಅತ್ತೆ ಮನೆಯದೇ ಸಡಗರ ಎದ್ದು ಜಿಗೀತಿತ್ತು, ಅದಕ್ಕೇ ಅಂದು ಮಾಯಿ ಖಾಸ್ ತಮ್ಮ ಅಲಮಾರಿಯಿಂದ ಘಮಘಮಿಸೂ ಎರಡು ಶಾಲೂ ತಂದಿದ್ದರು. ಸೀರೆ ಉಡೂದೇನು ಹೊಸತಿರಲಿಲ್ಲ ನಮಗೆ, ಕಾಲೇಜಿಗೂ ಕೆಲವೊಮ್ಮೆ ಉಡುತ್ತಿದ್ದೆ. ಆದರೆ ಒಂಬತ್ತು ಗಜದ್ದು… ಅಯ್ಯಪ್ಪಾ. ಅವರ ಹಿಂದೆ ಬಂದು ನಿಂತಿದ್ದ ಅಂಕತ್ಯಾ- ಎಂಬ ಸೋದರತ್ತೆ- ಅತ್ಯಾ ಮಾತಾಡದಿದ್ದರೂ ಕಚ್ಚೆ ಸೀರೆಯ ಫರಮಾಯಿಷ್ ಅವರದೂ, ಅಥವಾ ಅದು ಅವರದೇ ಆಗಿದ್ದು ಅದು ಚಾಲ್ತಿಗೆ ಬಂದದ್ದು ಮಾಯಿ ಕಡೆಯಿಂದ ಎಂಬ ನಮ್ಮ ಅನುಮಾನ ಒಂದ್ರೀತಿ ಖರೆ ಇತ್ತು.
ಹೀಗೆ ಆ ಮಣಭಾರ ತಂದಿಟ್ಟು ಇಬ್ಬರೂ ಸೊಸೆಯಂದಿರನ್ನು ಅವುಗಳೊಳಗೆ ಸಿಗಿಸಿ ಖುಶಿ ಪಡುವವರಿದ್ದರೇನೋ ಅನಿಸಿ ನಾವಿಬ್ಬರೂ ಮುಖ ಮುಖ ನೋಡಿಕೊಂಡು ನಕ್ಕೆವು. ಆದರೆ ಅವೆರಡೂ ಎಷ್ಟು ಚಂದ ಇದ್ದುವೆಂದರೆ ಬೇಡ ಅನ್ನುವ ಮನಸ್ಸು, ಇಲ್ಲ ಅನ್ನುವ ಧೈರ್ಯ ಎರಡೂ ಇರಲಿಲ್ಲ. ಅವುಗಳ ಬಣ್ಣ, ಅಂಚು ಸೆರಗಿನ ಜರಿ, ಸೀರೆಯ ತುಂಬ ಒಂದೊಂದು ಇಂಚಿಗೂ ಅರಳಿಕೊಂಡಿದ್ದ ಪುಟ್ಟ ಪುಟ್ಟ ಕಮಲದ ಬುಟ್ಟಾ ಎಲ್ಲಾ ಮರಳು ಮಾಡುವಷ್ಟು ಗಾಢ…
ನಾನೇನೋ ಸ್ವಲ್ಪ ಹೈಟು (ಪರವಾಗಿಲ್ಲ ಅನ್ನುವಷ್ಟು ದಪ್ಪ ಸಹ) ಇದ್ದವಳು. ನನ್ನ ನೆಗೆಣ್ಣಿ ಅಥವಾ ವಾರಗಿತ್ತಿ ಐದಡಿಗೆ ಎರಡಿಂಚು ಕಡಿಮೆ. ಕುಳ್ಳಿ ಎಂದು ಖಂಡಿತ ಹೇಳಬಹುದು. ಅವಳದೇ ಫಜೀತಿ, ಮಾಯಿ ಎತ್ತರದವರು, ಅದರಲ್ಲೂ ಬನಾರಸೀ ಶಾಲೂಗಳನ್ನು ಹೆಚ್ಚಾಗಿ ಉದ್ದುದ್ದಕ್ಕೆ ಇರುವ ಉತ್ತರದವರಿಗಾಗಿಯೂ ಮಾಡಿರುತ್ತಾರಾದ್ದರಿಂದ ಅವಕ್ಕೆ ಉದ್ದ ಅಗಲಗಳೂ ಭರಪೂರ. ಮಾಯಿಗೆ ಮತ್ತು ಅಂಥವರಿಗೇ ಸರಿ ಆಗುವ ಸೀರೆಗಳವು.
ಈಗ ನಮ್ಮ ಕುಳ್ಳಕ್ಕ ಸೀರೆ ಎತ್ತಿ ಹಿಡಿದು ಅವಳ ತಲೆ ಮೇಲಿಂದಲೂ ಎತ್ತರಕ್ಕೆ ಏರಿ ನಿಂತಿದ್ದ ಅದರಲ್ಲಿ ಕುತ್ತಿಗೆವರೆಗೂ ಮುಳುಗಿ, ಅಂತರ್ಪಟದ ಹಿಂದೆ ನಿಂತ ವಧುವಿನ ಥರ ಮಾಯವಾಗಿದ್ದು ಒಂಥರಾ ಮಜಾ ತರಿಸಿ ಇನ್ನಷ್ಟು ಕಿಸಿ ಕಿಸಿ ನಕ್ಕೆವು.
ಹಿಂದಿನ ದಿನ ಆರಿಸಿ ಇಟ್ಟುಕೊಂಡಿದ್ದ ಬ್ಲೌಸುಗಳಲ್ಲಿ ಯಾವುದು ಅದಕ್ಕೆ ಮ್ಯಾಚ್ ಆದೀತು ಎಂದು ತಡಕಾಡಿ ಜೋಡಿ ಮಾಡಿ ಸೀರೆ ಎತ್ತಿಕೊಂಡೆವು. ಈಗ ಬರುವಂತೆ ಆಯಾ ಸೀರೆಗೆ ಅದರದೇ ಅಟ್ಯಾಚ್ಡ್ ಬ್ಲೌಸ್ ಪೀಸು ಆಗೆಲ್ಲ ಬರ್ತಿರಲಿಲ್ಲ. ಹಾಗಾಗಿ ರೇಶ್ಮೆ ಕಸೂತಿ ಬಿಡಿಸಿದ ಬಣ್ಣ ಬಣ್ಣದ ಬ್ಲೌಸ್ ಇರ್ತಿದ್ದವು. ಅದರಲ್ಲೇ ಒಂದು ಮಲ್ಟಿಕಲರ್ ಇದ್ದರೆ ಸಾಕೇ ಸಾಕು… ಇನ್ನೀಗ ಉಡಬೇಕಲ್ಲ? ಮಾಯಿ ತುಂಬಾ ಬಿಜಿ ಇದ್ದರು. ಇನ್ನೊಂದೆರಡು ಗಂಟೆ ಕಳೆದರೆ ಮನೆಗೆ ಪೂಜೆಯ, ಊಟದ ಅತಿಥಿಗಳು ಬರಲಿಕ್ಕೆ ಶುರುವಾಗಲಿತ್ತು.
ಇದನ್ನೂ ಓದಿ : ನಿಮ್ಮ ಟೈಮ್ಲೈನ್: ಯಾರಿಗೆ ಬೇಕು ರಾಮರಾಜ್ಯ? ಓ ಕಲ್ಕಿಯೇ ಬೇಗ ಬಾ, ಹೆಣ್ಣುಗಳೆಲ್ಲರ ಅಂಕೆ ತಪ್ಪಿಸು ಬಾ
ನಮ್ಮ ಬಳಗವೇ ತಲೆತುಂಬ ಅನ್ನುವಷ್ಟು ಇದ್ದರಲ್ಲ. ಅವರೆಲ್ಲ ಊಟಕ್ಕೆ, ಪ್ಲಸ್ ವಿಜಾಪುರದ ಹಲವೆಂಟು ಮನೆತನದ ಆಪ್ತೇಷ್ಟರು. ತಾಯಿ ಇಲ್ಲದ ನನಗೆ ತವರು ಮನೆಯಿಂದ ಅಂದರೆ ಅಣ್ಣ, ಅಪ್ಪ, ಸೋದರತ್ತೆ, ಹೀಗೆ ಕೆಲವರೇ. ವಾರಗಿತ್ತಿಯ ತವರುಮನೆ ಬಳಗವೂ ಬರುವುದಿತ್ತು. ಹಾಲ್ ತುಂಬ ಹಾಸಿದ ಜಮಖಾನಗಳು, ಒಂದು ಬದಿಯಲ್ಲಿ ಮಂಗಳಾಗೌರಿ ನಾನಾ ಬಗೆಯ ಆರಾಸ/ಮಂಟಪ ದೀಪಗೀಪ ತಯಾರು ಮಾಡಿಸಿಕೊಂಡು ಪೂಜೆಗೆ ಬಂದು ಕೂತಿದ್ದಳು. ಅಡುಗೆಯ ಕೃಷ್ಟಪ್ಪನ ಜಬರ್ದಸ್ತ್ ಮೃಷ್ಟಾನ್ನ ಹಿತ್ತಲಿನಲ್ಲಿ ಹಾಕಿದ ಚಪ್ಪರದೊಳಗೆ ತಯಾರು ಆಗ್ತಿತ್ತು.
ಕಚ್ಚಿ ಸೀರೆ ಉಡುವ ಘನಘೋರ ಪ್ರಯಾಸದಲ್ಲಿ ನಾವಿಬ್ಬರೂ ಮುಳುಮುಳುಗಿ ಎದ್ದು ಹೇಗೋ ಒಂದು ಕಚ್ಚೆಯ ರೂಪ ತರಿಸಲು ಹೆಣಗಾಡಿದೆವು. ಸೀರೆ ಎತ್ತಲೇ ಒದ್ದಾಡಿದ ನೆನಪು ಈಗಲೂ ನಗು ಮೂಡಿಸುತ್ತದೆ. ಅವಳಿಗೆ ನಾನು ನನಗವಳು ಕಚ್ಚೆ ಪ್ರಾಜೆಕ್ಟ್ ಮುಗಿಸಲು ಕೈಹಚ್ಚಿ ಒಟ್ಟಿನಲ್ಲಿ ಆ ಒಂಬತ್ತೂವರೆ ಗಜಗಳನ್ನು ನಮ್ಮ ನಮ್ಮ ಶರೀರಕ್ಕೆ ಸುತ್ತಿಕೊಂಡು ನಿಂತೆವು.
ಆಗ ಬಂದರು ಗಂಗಕ್ಕ. ನನ್ನ ಮಾವನವರ ಸೋದರತ್ತೆಯ ಮಗಳು. ಗಂಗಾಭಾಗೀರ್ತಿ, ತೀರ್ಥರೂಪಿಣಿ- ಸಾಕ್ಷಾತ್ ಎಂಕೆ ಇಂದಿರಾರ ಫಣಿಯಮ್ಮ ಸ್ವರೂಪಿ. ಅವರ ಹೈಟು ಅಚ್ಚರಿಪಡಿಸಿಬಿಡುತ್ತಿತ್ತು, ಐದಡಿ ಎಂಟಿಂಚು? ಇರಬಹುದು. ಒಂದೇ ಕಡ್ಡಿಯಂಚಿನ ತೆಳ್ಳನೆಯ ನೌವಾರಿ ಉಟ್ಟು ಆ ದಿನಗಳ ಪದ್ದತಿಯನ್ನು ಪಾಲಿಸುತ್ತ ತಲೆ ತುಂಬಾ ಸೆರಗು, ಮೊಳಕೈ ವರೆಗಿನ ಅಜ್ಜಿ ಬ್ಲೌಸ್ ಹಾಕಿ ಫಟಾಫಟ್ ವೇಗದ ನಡಿಗೆ ಇಟ್ಟು ಬರುವವರು ಗಂಗಕ್ಕ. ಮಾತು ಜೋರು ಆದರೆ ಮನಸ್ಸು ಹೂವಿನ ಹಾಗೆ. ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ…
“ಏನು ನಡಿಸೀರೇ ಇಬ್ರೂ?” ಅವರ ಕಂಚಿನ ಕಂಠಕ್ಕೆ ಮೊದಲೇ ಬೆದರಿ ಕೂತಿದ್ದ ನಮ್ಮ ಕಚ್ಚೆಯ ನೆರಿಗೆಗಳೇ ಸಡಿಲ ಆದಂಗನಿಸಿ ನಿಂತಲ್ಲೇ ಹಿಂದೆ ಮುಂದೆ ಸರಿದಾಡಿದೆವು. ಆಗಿನ ಸೊಸೆಯಂದಿರು ನಾವು. ಅತ್ತೆಮನೆಯ ಎಮ್ಮೆಗೂ ‘ಯಮುನಕ್ಕಾ ಅವರೇ’ ಅಂತ ಕರೆದು ತಿಳಿದವರು. ಗಂಗಕ್ಕ ಒಳಗೆ ಕಾಲಿಟ್ಟವರೇ ಫಕಫಕ ಫಕ ನಗಲು ಶುರು ಮಾಡಿದರು.
ಇದನ್ನೂ ಓದಿ : ನಿಮ್ಮ ಟೈಮ್ಲೈನ್: ನಿರ್ಲಕ್ಷ್ಯಕ್ಕೊಳಗಾಗಿರುವ ಏಷಿಯಾದ ಪ್ರಥಮ ಜಲವಿದ್ಯುತ್ ಕೇಂದ್ರ ಶಿವನಸಮುದ್ರ
ಯಾಕೆ? ತಿಳಿಯುವ ಬುದ್ಧಿ, ವಯಸ್ಸು ಇದ್ದರೆ ತಾನೇ ನನಗೆ? “ಏ ಹುಡಗೀರ್ಯಾ… ಏನು ಉಟ್ಟಿರೇ ಶಾಲೂ ಹೌದಿಲ್ ಇವು… ಮತ್ತಿದಕ್ಕ ಕಚ್ಚಿ ಅಂತಾರೇನು? ಹ್ಹೆಹ್ಹೆಹ್ಹೆಹ್ಹೆ.. ಯಾರು ಕಲಿಶಿದರಪ್ಪಾ.. ಅಳ್ಳಳ್ಳೀ ಬಾವಾ ಕಾವೀ ಸುತಗೊಂಡಂಗ” ಅಂತ ಉರುಳುರುಳಿ ನಕ್ಕರೂ ಮತ್ತೆ ಮುಂದೆ ಹರಿದು ನಮ್ಮಿಬ್ಬರನ್ನೂ ತೋಳು ಹಿಡಿದು ಜಗ್ಗಿ ತಮ್ಮ ಕಡೆ ಮುಖ ಮಾಡಿ ನಿಲ್ಲಿಸಿಕೊಂಡು ‘ಬರ್ರಿಲ್ಲೆ, ತತಾ ನಾ ಉಡಸ್ತೀನಿ’ ಅಂದು ‘ಮದಲ ಆ ಪರಕಾರ ಬಿಚ್ರಿ ಅದರ ಮ್ಯಾಲೆ ನೌವಾರೀ ಉಡಂಗಿಲ್ಲ ಹುಚ್ಚಗೋಳ್ರಾ..’ ಅಂದವರೇ ನಮ್ಮ ಪೆಟಿಕೋಟ್ಸ್ ಬಿಚ್ಚಿಸಿದರು!
ಪರಕಾರ ಅರ್ಥಾತ್ ಲಂಗದ ಮೇಲೆ ಆ ಒಂಬತ್ತು ಮೀಟರ್ ಜರೀ ಸೀರೆ ಸುತ್ತಿ ನಟ್ಟ ನಡು ಮಧ್ಯೆ ಒಂದು ನೆರಿಗೆ ಎತ್ತಿ ಹಿಂದೆ ಸಿಗಿಸಿಕೊಂಡು ಥೇಟ್ ಗ್ಯಾಸ್ ಸಿಲಿಂಡರಿನಾಕಾರಗಳಾಗಿ ಇಬ್ಬರೂ ನಿಂತಿದ್ದೆವು! ನಾಚಿಕೆ ಉಕ್ಕುಕ್ಕಿ ಬಂತು, ಆದರೆ ಇನ್ನೊಂದು ದಾರಿ ಇಲ್ಲ. ಪೆಟಿಕೋಟ್ ಇಲ್ಲದೆ ಗಂಗಕ್ಕನೆದುರು ಸೆಮಿ ಕ್ಲಾಡ್ ಆಗಿ ನಿಂತೆವು. ಅವರ ಮಾತು ಜೊತೆಯಲ್ಲಿ ಎರಡೂ ಕೈ ಸರಸರ ಕೆಲಸಕ್ಕಿಳಿದುವು. ಗಂಗಕ್ಕ ನಮ್ಮ ಸೆಮಿ ಸ್ಟ್ರಿಪ್ ಟೀಸ್ ಮಾಡಿಸುವವರಾಗಿ ಕಂಡರು!
ರಾಶಿಯಾಗಿ ಕೆಳಗೆ ಬಿಚ್ಚಿ ಬಿದ್ದಿದ್ದ ಸೀರೆಯನ್ನೇ ಎತ್ತಿ ಬಿಡಿಸಿ ಸೊಂಟಕ್ಕೆ ಗಂಟುಬಿಗಿದು ಸೆರಗು ಒಪ್ಪ ಮಾಡುತ್ತ ಹತ್ತೆಂಟು ನೆರಿಗೆ ಹಿಡಿದರು. ನಡುವೆಯೇ ‘ಇಕಾ, ಇನ್ನ ಕಾಲೆತ್ತು..’ ಅಂದರು, ನಾ ಕಕ್ಕಾಬಿಕ್ಕಿಯಾದೆ, ಕಾಲು ಎತ್ತಿ ಎಲ್ಲಿಡಬೇಕು? ಎಷ್ಟು ಎತ್ತರಕ್ಕೆ? ಅಕ್ಕಪಕ್ಕದಲ್ಲಿ ಕಾಲಿಡಲು ಸ್ಟೂಲ್ ಏನಾದರೂ ಇದೆಯೋ ಅಂತ ಹೊರಳಿ ನೋಡಿದರೆ ಅಂಥದ್ದೇನೂ ಅಲ್ಲಿರಲಿಲ್ಲ.
ಹೆಚ್ಚು ಮಾತಿನವರಲ್ಲ ಗಂಗಕ್ಕ, ನನ್ನ ಸೊಂಟ ಹಿಡಿದವರೇ ಕಾಲು ಅತ್ತಿತ್ತ ದೂಡಿ ಸೀರೆಯ ಎಂಟು ನೆರಿಗೆಗಳ ಕರೆಕ್ಟ್ ಮಧ್ಯಭಾಗಕ್ಕೆ ವಿಭಜಿಸಿ ಹಿಂದಕ್ಕೆತ್ತಿ ಚನ್ನಾಗಿ ಬಿಗಿ ಕೂರುವಂತೆ ದಬಾಯಿಸಿ ಒತ್ತಿ ಹಿಂದೆ ಸಿಗಿಸಿದರು. ಅಷ್ಟೇ… ಹಿಂದೆ ಶಾಲೂದ ಗೇಣಂಚಿನ ಬಾರ್ಡರ್ ಚೊಕ್ಕವಾಗಿ ಹಿಂಗಾಲಿನ ತುದಿಯವರೆಗೆ ನಿಂತಿತು. ತೊಡೆಯ ಎಡಬಲಕ್ಕೆ ಕೊಂಚ ಸಡಿಲವಾಗಿದ್ದನ್ನು ಬಿಗಿ ಮಾಡುತ್ತ ಮುಂದೆ ಬಂದು ಇನ್ನೊಂದು ನೆರಿಗೆ ಎಳೆದುಕೊಂಡು ಸೊಂಟದ ಎಡಕ್ಕೆ ಸಿಕ್ಕಿಸಿ ಬಲಗೈಯಿಂದ ಅದರ ಪೌಚ್ ಅನ್ನು ನೇರಗೊಳಿಸಿ ಸೆರಗೆತ್ತಿ ಹಿಡಿದು ನನ್ನ ಬಲಭುಜ ಇಡೀ ಮುಚ್ಚುವ ಹಾಗೆ ಹೊಚ್ಚಿ, “ಈಗ ನೋಡೂ… ಹೆಂಗ್ ಝಕಾಸ್ ಕಾಣಸ್ತೀದಿ” ಅಂತ ನಕ್ಕರು. ‘ಶಾಲೂದ ಸೌಂದರ್ಯಕ್ಕ, ಅದರ ಕಚ್ಚಿಗೂ ಒಂದು ಗಮ್ಮತ್ತಿರತ್ತದ ತಿಳೀತೇನು? ಈಗಿನ ಕಾಲದ ಹುಡಿಗ‍್ಯಾರು…’ ಅವರ ಮಾತಿನಲ್ಲಿ ವ್ಯಂಗ್ಯ ಇರಲಿಲ್ಲ. ಆದರೆ ಅವನ್ನು ಆಡಿದ ಸಮಯ ಎಪ್ಪತ್ತರ ದಶಕದ್ದು. ಅಂದಿನ ತರುಣಿಯರು ಅವರಿಗೆ ಹಾಗನಿಸಿದ್ದರೆ ಈಗ ಇನ್ನೇನು ಅಂತಿದ್ದರೋ? ನಗು ಬಂತಾದರೂ ನಗುವ ಧೈರ್ಯವಿರಲಿಲ್ಲ. ಅಷ್ಟು ಹಿರಿಯರೆದುರು ನಗೋದೇ?!
ನಮ್ಮ ಕುಳ್ಳಕ್ಕನಿಗೆ ಶಾಲೂ ಉಡಿಸಲು ಒಂಚೂರು ಒದ್ದಾಡಿದರೂ ಕಡೆಗೂ ಮಿಶನ್ ಕಚ್ಚೆಸೀರೆಯನ್ನು ಪೂರೈಸದೇ ಬಿಡಲಿಲ್ಲ ಗಂಗಕ್ಕ. “ಇಕಾ, ನನ್ನ ಕೆಲಸಾತು ಇನ್ನ ಉಳದ ವಸ್ತಾ ವಡವೀ ಹಾಕೋರಿ, ತಲಿತುಂಬ ಮಾಲಿ ಕಟಿಗೋರಿ, ಅತ್ತರ್ ಅದ ಇಲ್ಲೋ… ಏ ಮಾಯೀ ನೋಡಬರ್ರಿಲ್ಲೆ ನಿಮ್ಮ ಸೊಸೆಂದರನ್ನ” ಗಂಗಕ್ಕನ ಕಂಚಿನ ಕಂಠ ಅವರ ಜೊತೆಯಲ್ಲೇ ಮನೆಯ ಒಳಭಾಗಕ್ಕೆ ಹೊರಟಿತು. ಅವರ ಅಂತಃಕರಣ ಅವರ ಕೈಚಳಕವಾಗಿ ಆ ಶಾಲೂದ ನೆರಿಗೆಗಳಲ್ಲಿ ಅಡಗಿಕೊಂಡು ನಮ್ಮನ್ನು ಸುತ್ತುವರಿದಿತ್ತು. ಅಷ್ಟರೊಳಗೆ ಅವೊತ್ತು ನಮ್ಮ ಜೊತೆಗೇ ಮಂಗಳಾಗೌರಿ ಪೂಜೆ ಮಾಡಲಿಕ್ಕೆಂದು ಆಮಂತ್ರಿಸಿದ್ದ ಇನ್ನೂ ಆರೆಂಟು ನವವಿವಾಹಿತೆ ಸ್ನೇಹ- ಸಂಬಂಧಗಳ ಮನೆಯ ಹುಡುಗಿಯರು ಕೆಲವರು ತಾಯಿಮನೆಗೆ ಬಂದಿದ್ದ ಮೊದಲಗಿತ್ತಿಯರು, ಕೆಲವರು ನಮ್ಮ ಹಾಗೆ ಅತ್ತೆಮನೆಯಿಂದ… ಹೊರಗೆ ಪೂಜೆ ಮಾಡಿಸಿ ಮಂಗಳಾಗೌರಿಯ ಕತೆ ಹೇಳಲು ಪುರೋಹಿತರು ಆಗಲೇ ಒಳಗೆ ಬಂದು ಬಾಳೆಯೆಲೆ ತುಂಬ ಹಚ್ಚಿದವಲಕ್ಕಿ ಮೊಸರು ತಿಂದು ಹಾಲು ಕುಡಿದು ಮಡಿ ಉಟ್ಟು ತಯಾರಾಗಿ ಕೂತಿದ್ದರು.
ಪೂಜೆಗೀಜೆ ಅಂದರ ರಜಾ ನಮಗೆ ಹೆಣ್ಮಕ್ಕಳಿಗೆ. ಕೋರ್ಟಿಗೆಲ್ಲಿಯ ರಜ? ಬಿಳಿ ಪ್ಯಾಂಟು ಕಪ್ಪು ಕೋಟು ಹಾಕಿ ಕೋರ್ಟಿಗೆ ಹೋಗಲು ರೆಡಿಯಾಗಿ, ನನ್ನ ಪತಿ ಮಹಡಿಯ ಮೆಟ್ಟಲಿಳಿದು ಬಂದವರು ನನ್ನ ಅವತಾರ ನೋಡಿ ಮುಗುಳ್ನಕ್ಕರು. ಅದರೂ ಆ ನಗು ನನಗೆ ಹೇಳಬೇಕಾದ್ದನ್ನು ಹೇಳಿತ್ತು!
ಮಧ್ಯಾಹ್ನದ ಊಟ ಬಂದವರನ್ನೆಲ್ಲ ಎಷ್ಟು ಮೆಚ್ಚಿಸಿತ್ತೆಂದರೆ ಅದರಲ್ಲೂ ಕೃಷ್ಟಪ್ಪನ ಕಟ್ಟಿನ ಸಾರಿನ ಪರಿಮಳಕ್ಕೆ, ರುಚಿಗೆ ಸೋಲದಿದ್ದವರೇ ಇರಲಿಲ್ಲ. ಇಷ್ಟಲ್ಲದರ ನಡುವೆ ನಾನೂ ನನ್ನ ಓರಗಿತ್ತಿಯೂ ಊಟ ಮಾಡುವಾಗ ಒಬ್ಬರಿಗೊಬ್ಬರು ಕೈ ತಾಕಿಸಿಕೊಂಡು ನನ್ನ ಶಾಲೂದ ಮೇಲೆ ಒಂದು ಚಮಚ ಸಾರು, ಅವಳದರ ಮೇಲೆ ಜಿಲೇಬಿಯ ತುಂಡಿನ ಎಣ್ಣೆ ಬೀಳಿಸಿಕೊಂಡಿದ್ದೆವು.
ಆದರೂ ಆ ಶಾಲೂಗಳ ಮೇಲಿನ ಪುಟ್ಟ ಕಲೆ ಕಾಣಬರದಂತೆ ನಾವಿಬ್ಬರೂ ಆ ಭಾಗವನ್ನು ಸ್ಚಚ್ಛವಾಗಿ ತೊಳೆದು ಒಣಗಿಸಿ ನೀಟಾಗಿ ಮಡಿಸಿ ಕೊಟ್ಟ ಗುಟ್ಟು ಮಾಯಿಗೆ ತಿಳಿದಿರಲೇ ಇಲ್ಲ ಅಂದುಕೊಂಡಿದ್ದೆವು. ಅಬೋಧ ತಾರುಣ್ಯ ಅದು!
ಪ್ರತಿಕ್ರಿಯೆಗಾಗಿ : tv9kannadadigital@gmail.com
ಗಮನಿಸಿ: ‘ನಿಮ್ಮ ಟೈಮ್ಲೈನ್’ ಈ ಅಂಕಣದಲ್ಲಿ ನಿಮ್ಮ ಫೇಸ್ಬುಕ್ ಬರಹಗಳು ಪ್ರಕಟವಾಗುತ್ತವೆ; ಯಾವುದೇ ವಿಚಾರ, ವಿಷಯ, ಆಶಯ, ಅಭಿಪ್ರಾಯ, ಪ್ರಸಂಗ, ಘಟನೆ, ಮಾಹಿತಿ, ನೆನಪು ಹೀಗೆ ಯಾವುದೂ, ಏನೂ. ನಿಮ್ಮ ಹೆಸರು, ವೃತ್ತಿ, ಊರು, ಮೊಬೈಲ್ ನಂಬರ್, ನಿಮ್ಮ ಫೋಟೋ ಸಮೇತ ಮೇಲ್ ಮಾಡಿ. ಜೊತೆಗೆ ‘ನಿಮ್ಮ ಟೈಮ್ಲೈನ್’ ಅಂಕಣಕ್ಕೆ ಎನ್ನುವುದನ್ನು ಬರೆಯಲು ಮರೆಯದಿರಿ. ಆಯ್ಕೆಯಾದ ಬರಹಗಳನ್ನು ಪ್ರಕಟಿಸಲಾಗುವುದು. tv9kannadadigital@gmail.com
ಇದನ್ನೂ ಓದಿ : Woman Scientist: ನಿಮ್ಮ ಟೈಮ್ಲೈನ್; ‘ಕೋಪ, ರೋಷ ನನ್ನನ್ನು ಬಡಿದೆಬ್ಬಿಸಿತು’ ಮೂಷಕ ತಜ್ಞೆ ಡಾ. ಶಕುಂತಲಾ ಶ್ರೀಧರ