ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ; ಭ್ರಷ್ಟಾಚಾರ ಆರೋಪ ಕೇಳಿಬಂದ ಬೆನ್ನಲ್ಲೇ ಫ್ರಾನ್ಸ್ನಲ್ಲೊಂದು ಮಹತ್ವದ ಬೆಳವಣಿಗೆ
Rafale Deal: ರಫೇಲ್ ಒಪ್ಪಂದ 2016ರಲ್ಲಿ ನಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ. 7.8 ಬಿಲಿಯನ್ ಯುರೋ ಮೊತ್ತದ ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಕೂಡ ಆರೋಪ ಮಾಡುತ್ತಲೇ ಇದೆ.
ದೆಹಲಿ: 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ನಡೆದಿರುವ ರಫೇಲ್ ಒಪ್ಪಂದದಲ್ಲಿ ಭ್ರಷ್ಟಾಚಾರ ಮತ್ತು ಪಕ್ಷಪಾತ ನಡೆದಿದೆ ಎಂಬ ಆರೋಪ ಪದೇಪದೆ ಕೇಳಿಬರುತ್ತಿರುವ ಬೆನ್ನಲ್ಲೇ, ಈಗೊಂದು ಹೊಸ ಬೆಳವಣಿಗೆ ನಡೆದಿದೆ. ರಫೇಲ್ ಒಪ್ಪಂದದ ಬಗ್ಗೆ ಭ್ರಷ್ಟಾಚಾರ ಆರೋಪದ ಸಂಬಂಧ ತನಿಖೆ ನಡೆಸಲು ಫ್ರಾನ್ಸ್ನ ರಾಷ್ಟ್ರೀಯ ಫೈನಾನ್ಸಿಯಲ್ ಪ್ರಾಸಿಕ್ಯೂಟರ್ ಕಚೇರಿ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿದೆ. ರಫೇಲ್ ಒಪ್ಪಂದ 2016ರಲ್ಲಿ ನಡೆದಾಗಿನಿಂದಲೂ ಒಂದಲ್ಲ ಒಂದು ವಿವಾದ ಏಳುತ್ತಲೇ ಇದೆ. 7.8 ಬಿಲಿಯನ್ ಯುರೋ ಮೊತ್ತದ ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಕಾಂಗ್ರೆಸ್ ಕೂಡ ಆರೋಪ ಮಾಡುತ್ತಲೇ ಇದೆ.
ಇದೀಗ ತನಿಖೆ ನಡೆಸಲು ನ್ಯಾಯಾಧೀಶರೊಬ್ಬರು ನೇಮಕವಾದ ಬಗ್ಗೆ ಫ್ರೆಂಚ್ನ ತನಿಖಾ ವೆಬ್ಸೈಟ್ ಆದ ಮೀಡಿಯಾಪಾರ್ಟ್ ವರದಿ ಮಾಡಿದೆ. ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಜೆಟ್ಗಳ ಖರೀದಿ ಒಪ್ಪಂದದ ಸಮಯದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಶಯ ನಿವಾರಣೆ ಆಗುವುದು ಅಗತ್ಯವಾಗಿದೆ. ಹೀಗಾಗಿ ನ್ಯಾಯಾಂಗ ತನಿಖೆ ನಡೆಸಲು ಫ್ರಾನ್ಸ್ ಸರ್ಕಾರ ನಿರ್ಧರಿಸಿದೆ. ತನ್ನಿಮಿತ್ತ ನ್ಯಾಯಾಧೀಶರೊಬ್ಬರನ್ನು ನೇಮಕ ಮಾಡಿ, ತನಿಖೆಯ ಸಂಪೂರ್ಣ ಜವಾಬ್ದಾರಿಯನ್ನು ಅವರಿಗೆ ನೀಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.
ರಫೇಲ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂಬುದಕ್ಕೆ ಸಂಬಂಧಪಟ್ಟಂತೆ ಮೀಡಿಯಾ ಪಾರ್ಟ್ ಇತ್ತೀಚೆಗೆ ಹಲವು ವರದಿಗಳನ್ನು ಪ್ರಕಟಿಸುತ್ತಲೇ ಇದೆ. ರಫೇಲ್ ಯುದ್ಧ ವಿಮಾನ ತಯಾರಿಸಿದ ಡಸಾಲ್ಟ್ ಏವಿಯೇಶನ್ ಕಂಪನಿ ಅದರ ಖರೀದಿಗಾಗಿ ಭಾರತದ ಮಧ್ಯವರ್ತಿಯೊಬ್ಬರಿಗೆ 1 ಮಿಲಿಯನ್ ಯುರೋ ಲಂಚ ನೀಡಿದೆ. ಈ ಮಧ್ಯವರ್ತಿಗೂ ಹಗರಣದ ಹಿನ್ನೆಲೆ ಇದೆ. 2019ರಲ್ಲಿ ಭಾರತದಲ್ಲಿ ನಡೆದ ವಿವಿಐಪಿ ಚಾಪರ್ ಹಗರಣದಲ್ಲಿ ಈ ಮಧ್ಯವರ್ತಿಯ ಹೆಸರೂ ಕೇಳಿಬಂದಿತ್ತು ಎಂದು ಇತ್ತೀಚೆಗಷ್ಟೇ ಮೀಡಿಯಾಪಾರ್ಟ್ ವರದಿ ಮಾಡಿತ್ತು. ಅದನ್ನು ಡಸಾಲ್ಟ್ ಏವಿಯೇಶನ್ ನಿರಾಕರಿಸಿತ್ತು. ಆದರೆ ಇದೀಗ ಫ್ರಾನ್ಸ್ ನ್ಯಾಯಾಧೀಶರು ತನಿಖೆಯ ಜವಾಬ್ದಾರಿ ಹೊತ್ತಿದ್ದು, ಜೂ.14ರಿಂದಲೇ ತನಿಖೆಯೂ ಶುರುವಾಗಿದೆ ಎಂದು ಮತ್ತೊಮ್ಮೆ ಮೀಡಿಯಾಪಾರ್ಟ್ ವರದಿ ಮಾಡಿದ್ದು, ಕುತೂಹಲಕ್ಕೆ ಕಾರಣವಾಗಿದೆ.
59,000 ಕೋಟಿ ರೂಪಾಯಿ ಮೊತ್ತದ ರಫೇಲ್ ಜೆಟ್ ಒಪ್ಪಂದದಲ್ಲಿ ಅವ್ಯವಹಾರ ನಡೆದಿದೆ ಎಂದು ಹಿಂದೆ ಕಾಂಗ್ರೆಸ್ ಆರೋಪ ಮಾಡಿತ್ತು. ಇದು ದೇಶದ ಬಹುದೊಡ್ಡ ರಕ್ಷಣಾ ಹಗರಣ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಅಲ್ಲದೆ ಒಪ್ಪಂದದಲ್ಲಿ ಸಾರ್ವಜನಿಕ ವಲಯದ ಹಿಂದೂಸ್ತಾನ್ ಎರೋನಾಟಿಕ್ಸ್ ಲಿಮಿಟೆಡ್ನ್ನು ಒಳಗೊಳ್ಳುವ ಬದಲು, ಖಾಸಗಿ ಸಂಸ್ಥೆಯನ್ನೇಕೆ ಬಳಸಿಕೊಳ್ಳಲಾಗಿದೆ ಎಂದೂ ಪ್ರಶ್ನೆ ಎತ್ತಿತ್ತು. ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣದಲ್ಲಿ ಅಂತಿಮವಾಗಿ ಕೇಂದ್ರ ಸರ್ಕಾರಕ್ಕೆ ಜಯ ಸಿಕ್ಕಿತ್ತು. ಒಪ್ಪಂದದಡಿ ಈಗಾಗಲೇ ಆರು ಬ್ಯಾಚ್ಗಳಲ್ಲಿ ರಫೇಲ್ ಜೆಟ್ಗಳು ಭಾರತಕ್ಕೆ ತಲುಪಿದ್ದು, 36ರಲ್ಲಿ ಎಷ್ಟು ಬಂದಿವೆ ಎಂಬ ಬಗ್ಗೆ ಖಚಿತ ಮಾಹಿತಿ ಇಲ್ಲ.
A Judge appointed to probe alleged corruption In Rafale Deal reported By mediapart Website