ಮುರಸು ಚಂಡಮಾರುತದ ಪರಿಹಾರ ಕಾರ್ಯಾಚರಣೆಗೆ ನೆರವು; ಕರ್ನಾಟಕ ಸರ್ಕಾರಕ್ಕೆ ಆಂಧ್ರ ಸಿಎಂ ನಾಯ್ಡು ಧನ್ಯವಾದ

ತೀವ್ರ ಸ್ವರೂಪದ 'ಮುರಸು' ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿರುವ ಆಂಧ್ರಪ್ರದೇಶದ ಕರಾವಳಿ ಪ್ರದೇಶಗಳಲ್ಲಿ ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಗೆ ಸಮಯಕ್ಕೆ ಸರಿಯಾಗಿ ನೆರವು ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಕರ್ನಾಟಕ ಸರ್ಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸಂತ್ರಸ್ತ ಪ್ರದೇಶಗಳಿಗೆ ನೆರವಿನ ಹಸ್ತ ಚಾಚುವ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣವಾದ ಎಕ್ಸ್​ನಲ್ಲಿ ಮಾಡಿದ ಪೋಸ್ಟ್‌ಗೆ ಪ್ರತಿಯಾಗಿ ಚಂದ್ರಬಾಬು ನಾಯ್ಡು ಈ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

ಮುರಸು ಚಂಡಮಾರುತದ ಪರಿಹಾರ ಕಾರ್ಯಾಚರಣೆಗೆ ನೆರವು; ಕರ್ನಾಟಕ ಸರ್ಕಾರಕ್ಕೆ ಆಂಧ್ರ ಸಿಎಂ ನಾಯ್ಡು ಧನ್ಯವಾದ
Dk Shivakumar And Chandrababu Naidu

Updated on: Nov 03, 2026 | 5:51 PM

ಅಮರಾವತಿ, ನವೆಂಬರ್ 3: ಮುರಸು ಚಂಡಮಾರುತದಿಂದ ತತ್ತರಿಸಿರುವ ಆಂಧ್ರಪ್ರದೇಶದಲ್ಲಿ ಪರಿಹಾರ ಮತ್ತು ಪುನರ್ ನಿರ್ಮಾಣ ಕಾರ್ಯಗಳಿಗೆ ಬೆಂಬಲ ನೀಡಿದ್ದಕ್ಕಾಗಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು (ನವೆಂಬರ್ 3) ಕರ್ನಾಟಕದ ಮುಖ್ಯಮಂತ್ರಿ ಹಾಗೂ ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಚಂಡಮಾರುತ ಪೀಡಿತ ಪ್ರದೇಶಗಳಿಗೆ ಕರ್ನಾಟಕದಿಂದ ಪರಿಹಾರ ಪಡೆಗಳನ್ನು ರವಾನಿಸುತ್ತಿರುವ ಕುರಿತು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ಹಂಚಿಕೊಂಡಿದ್ದ ಪೋಸ್ಟ್‌ಗೆ ಚಂದ್ರಬಾಬು ನಾಯ್ಡು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಎಕ್ಸ್​​ ಖಾತೆಯಲ್ಲಿ, “ಚಂಡಮಾರುತದಿಂದ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ನಿರ್ಮಾಣ ಕಾರ್ಯಗಳಿಗೆ ಬೆಂಬಲ ನೀಡಲು ನಮ್ಮ ರಾಜ್ಯದ ತಂಡಗಳು ಆಂಧ್ರಪ್ರದೇಶಕ್ಕೆ ತೆರಳುತ್ತಿವೆ” ಎಂದು ಪೋಸ್ಟ್ ಮಾಡಿದ್ದರು.


ಇದನ್ನೂ ಓದಿ: ಚಂಡಮಾರುತ ಪೀಡಿತ ಆಂಧ್ರ ಪ್ರದೇಶಕ್ಕೆ ಡಿಕೆಶಿ ಸರ್ಕಾರ ನೆರವಿನ ಹಸ್ತ, ವಿದ್ಯುತ್ ಪೂರೈಕೆ ಮೂಲಸೌಕರ್ಯ ಮರುಸ್ಥಾಪನೆಗೆ ಸಹಾಯ

ಇದಕ್ಕೆ ಕೃತಜ್ಞತೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ ಆಂಧ್ರಪ್ರದೇಶ ಸಿಎಂ ಎನ್. ಚಂದ್ರಬಾಬು ನಾಯ್ಡು, “ಮುರಸು ಚಂಡಮಾರುತದ ಸಂಕಷ್ಟದ ಸಮಯದಲ್ಲಿ ಆಂಧ್ರಪ್ರದೇಶದ ಪರವಾಗಿ ನಿಂತ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿಕುಮಾರ್ ಹಾಗೂ ಕರ್ನಾಟಕದ ಜನತೆಗೆ ನನ್ನ ಕೃತಜ್ಞತೆಗಳು. ಅತ್ಯಂತ ಅಗತ್ಯವಿದ್ದ ಈ ಸಂದರ್ಭದಲ್ಲಿ ನೀವು ನೀಡಿದ ಸಮಯೋಚಿತ ಬೆಂಬಲವನ್ನು ನಾವು ಎಂದಿಗೂ ಮರೆಯುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.


ಚಂಡಮಾರುತ ಮುಂತಾದ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಸಾರ್ವಜನಿಕ ಸೇವೆಗಳು ಮತ್ತು ವಿದ್ಯುತ್ ಸಂಪರ್ಕವನ್ನು ಶೀಘ್ರವಾಗಿ ಮರುಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರವು ನೆರೆರಾಜ್ಯಗಳ ಸಹಾಯ ಪಡೆಯುತ್ತಾ ಬಂದಿದೆ. ಇತ್ತೀಚೆಗೆ ಅಪ್ಪಳಿಸಿದ್ದ ಅತ್ಯಂತ ತೀವ್ರ ಸ್ವರೂಪದ ‘ಅರ್ನಬ್’ ಚಂಡಮಾರುತದ ಸಮಯದಲ್ಲೂ ನೆರೆರಾಜ್ಯಗಳ ನೆರವು ಪಡೆಯಲಾಗಿತ್ತು. ಇದರ ಭಾಗವಾಗಿ, ಚಂಡಮಾರುತದಿಂದ ಧ್ವಂಸಗೊಂಡಿರುವ ವಿದ್ಯುತ್ ಕಂಬಗಳು ಹಾಗೂ ಮೂಲಸೌಕರ್ಯಗಳನ್ನು ಸಮರೋಪಾದಿಯಲ್ಲಿ ದುರಸ್ತಿಗೊಳಿಸಲು ತೆಲಂಗಾಣ ರಾಜ್ಯದ ಇಂಧನ ಇಲಾಖೆಯ ಸಿಬ್ಬಂದಿ ಹಾಗೂ ತಂತ್ರಜ್ಞರನ್ನು ಕೂಡ ನಿಯೋಜಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Tue, 3 November 26

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us