ಆಜಾದಿ ಕಾ ಅಮೃತ್ ಮಹೋತ್ಸವ್: ಇಡೀ ಭಾರತವನ್ನು ಬ್ರಿಟಿಷರು ಆಳುತ್ತಿದ್ದರೂ ಖಾನ್ ಬಹದ್ದೂರ್ ಖಾನ್​ರ ಬರೇಲಿ ಮಾತ್ರ ಸ್ವತಂತ್ರವಾಗಿತ್ತು!

ಇತಿಹಾಸಕಾರರ ಪ್ರಕಾರ, ಮಾರ್ಚ್ 24, 1860 ರಂದು, ನೇಣಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಖಾನ್ ಬಹದ್ದೂರ್ ಖಾನ್ ಗಟ್ಟಿಯಾದ ಧ್ವನಿಯಲ್ಲಿ ‘ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸಿ, ಅವರು ಕೊಲ್ಲುತ್ತಿರುವುದು ನನ್ನನ್ನು ಮಾತ್ರ. ಆದರೆ, ನಾನು ಅನೇಕ ಬ್ರಿಟಿಷರನ್ನು ಕೊಂದಿದ್ದೇನೆ, ಇದು ನನ್ನ ಗೆಲುವು,' ಹೇಳಿದರು.

ಆಜಾದಿ ಕಾ ಅಮೃತ್ ಮಹೋತ್ಸವ್: ಇಡೀ ಭಾರತವನ್ನು ಬ್ರಿಟಿಷರು ಆಳುತ್ತಿದ್ದರೂ ಖಾನ್ ಬಹದ್ದೂರ್ ಖಾನ್​ರ ಬರೇಲಿ ಮಾತ್ರ ಸ್ವತಂತ್ರವಾಗಿತ್ತು!
ಸ್ಬಾತಂತ್ರ್ಯ ಹೋರಾಟಗಾರ ಖಾನ್ ಬಹಾದೂರ್ ಖಾನ್
Follow us
TV9 Web
| Updated By: Digi Tech Desk

Updated on: Aug 04, 2022 | 1:53 PM

Azadi Ka Amrit Mahotsav | ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ (first war independence) ನಡೆದಾಗ, ದೇಶದ ಹಲವಾರು ಪ್ರಾಂತ್ಯಗಳಿಗೆ ಸ್ವಾತಂತ್ರ್ಯ ಸಿಕ್ಕಿದ್ದು ನಿಜವಾದರೂ, ಆ ಸ್ವಾತಂತ್ರ್ಯವನ್ನು ಕೆಲ ಪ್ರಾಂತ್ಯಗಳು 5 ರಿಂದ 7 ದಿನ ಅನುಭವಿಸಿದರೆ ಉಳಿದ ಭಾಗಗಳಲ್ಲಿ 10 ರಿಂದ 30 ದಿನಗಳವರೆಗೆ ಅದನ್ನು ಸಂಭ್ರಮಿಸಲಾಗಿತ್ತು. ಅದಾದ ಬಳಿಕ ಬ್ರಿಟಿಷರು (British) ಅ ಎಲ್ಲ ಪ್ರಾಂತ್ಯಗಳನ್ನು ತಮ್ಮ ವಶಕ್ಕೆ ವಾಪಸ್ಸು ಪಡೆದರು. ಆದರೆ ಬರೇಲಿಯನ್ನು (Bareilly) ಮಾತ್ರ ಬ್ರಿಟಿಷರು ಒಂದು ವರ್ಷದವರೆಗೆ ಪುನಃ ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಸಲಿಗೆ, ಮೇ 10, 1857 ರಂದು ಮೀರತ್‌ನಲ್ಲಿ ಹೊಗೆಯಾಡುತ್ತಿದ್ದ ಕ್ರಾಂತಿಯ ಕಿಡಿ ಸ್ವಾತಂತ್ರ್ಯ ಪ್ರೇಮಿಗಳನ್ನು ಒಗ್ಗೂಡಿಸಿತ್ತು.

ಬ್ರಿಟಿಷರಿಗೆ ಬರೇಲಿ ತಲುಪಲು 4 ದಿನ ಬೇಕಾಯಿತು ಆದರೆ ಅಷ್ಟರಲ್ಲಿ ಹೊತ್ತಿದ್ದ ಕಿಡಿ ದೊಡ್ಡ ಜ್ವಾಲೆಯಾಗಿಬಿಟ್ಟಿತ್ತು. ಕ್ರಾಂತಿಕಾರಿಗಳು ಬಹಿರಂಗವಾಗಿ ಪ್ರತಿಭಟಿಸುವ ಬದಲು, ಬ್ರಿಟಿಷರ ಮೇಲಿನ ದಾಳಿ ಪೂರ್ಣ ಬಲದಿಂದ ನಡೆಯುವಂತಾಗಲು ಒಳಗಿದ್ದುಕೊಂಡು ಸಾಕಷ್ಟು ಪ್ರಮಾಣದಲ್ಲಿ ಆಹಾರ ತಯಾರಿಸುವುದೇ ಉತ್ತಮ ಎಂದು ಭಾವಿಸಿದರು. ಅದರ ಪರಿಣಾಮ ಸಹ ಬೇಗ ಪ್ರಕಟಗೊಂಡಿತು. ಮೇ 31 ರಂದು ದಂಗೆ ಪ್ರಾರಂಭವಾದ ಬಳಿಕ, ಕ್ರಾಂತಿಕಾರಿಗಳ ಆಕ್ರಮಣದ ಎದುರು ಬ್ರಿಟಿಷರು ಕಂಗೆಟ್ಟು ಹಿಮ್ಮೆಟ್ಟಿದರು. ಅನೇಕ ಬ್ರಿಟಿಷ್ ಅಧಿಕಾರಿಗಳನ್ನು ಸಂಹರಿಸಲಾಯಿತು.

ಕ್ರಾಂತಿಕಾರಿಗಳನ್ನು ಮುನ್ನಡೆಸುತ್ತಿದ್ದ ಖಾನ್ ಬಹದ್ದೂರ್ ಖಾನ್ ಅವರನ್ನು ಬರೇಲಿಯ ನವಾಬ್ ಎಂದು ಘೋಷಿಸಲಾಯಿತು. ಆಜಾದಿ ಕಾ ಅಮೃತ್ ಮಹೋತ್ಸವದ ವಿಶೇಷ ಸರಣಿಯಲ್ಲಿ, ಬರೇಲಿಯ ಕ್ರಾಂತಿವೀರರು ಬ್ರಿಟಿಷರು ಬರೇಲಿ ಪಲಾಯನಗೈಯುವ ಅನಿವಾರ್ಯತೆಯನ್ನು ಹೇಗೆ ಸೃಷ್ಟಿಸಿದರು ಎನ್ನುವುದನ್ನು ಇಲ್ಲಿ ವಿವರಿಸಲಾಗಿದೆ.

ಖಾನ್ ಬಹದ್ದೂರ್ ಖಾನ್ ರುಹೇಲಾ ಸರ್ದಾರ್ ವಂಶಸ್ಥರಾಗಿದ್ದರು

ಬರೇಲಿಯಲ್ಲಿ ಕ್ರಾಂತಿಯ ಕಹಳೆ ಮೊಳಗಿಸಿದ ಖಾನ್ ಬಹದ್ದೂರ್ ಖಾನ್ ರುಹೇಲಾ ಅವರು ಸರ್ದಾರ್ ಹಫೀಜ್ ರಹಮತ್ ಖಾನ್ ಅವರ ಮೊಮ್ಮಗ. 1791 ರಲ್ಲಿ ಜನಿಸಿದ, ಬಹದ್ದೂರ್ ಖಾನ್ ತಂದೆ ಜುಲ್ಫಿಕರ್ ಅಲಿ ಖಾನ್ ಅವರ ಮರಣ ನಂತರ, ಬರೇಲಿಯ ಭೋಡ್ ಪ್ರದೇಶದಲ್ಲಿ ನೆಲೆಸಿದ್ದರು. ಬ್ರಿಟಿಷ್ ಸರ್ಕಾರದಲ್ಲಿ ಸದರ್ ನ್ಯಾಯಾಧೀಶರೂ ಆಗಿದ್ದ ಅವರು ಮೊದಲಿಗೆ ಕೆನ್ ಪ್ರದೇಶದಲ್ಲಿ ವಾಸವಾಗಿದ್ದರು.

ಕ್ರಾಂತಿಗೆ ಮೊದಲು ಬ್ರಿಟಿಷರನ್ನು ಎಚ್ಚರಿಸಿದರು!

14 ಮೇ 1857 ರಂದು, ಬರೇಲಿಯಲ್ಲಿ ಕ್ರಾಂತಿಯ ಸಿದ್ಧತೆಗಳನ್ನು ಆರಂಭಿಸಲಾಗಿತ್ತು. ಖಾನ್ ಬಹದ್ದೂರ್ ಖಾನ್ ಅವರ ಮನೆಯಲ್ಲಿ ಕ್ರಾಂತಿಕಾರಿ ನಾಯಕರ ಸಭೆಗಳು ನಡೆಯುತ್ತಿದ್ದವು, ಬಂಡಾಯದ ರೂಪುರೇಷೆಗಳನ್ನು ಅಲ್ಲೇ ಹೆಣೆಯಲಾಗುತ್ತಿತ್ತು. ಖಾನ್ ಬಹದ್ದೂರ್ ಖಾನ್ ಅವರು ಸದರ್ ನ್ಯಾಯಾಧೀಶರಾಗಿದ್ದರು, ಆದ್ದರಿಂದ ಅವರೇ ಕಮಿಷನರ್ ಅವರನ್ನು ಹಲವಾರು ಬಾರಿ ಭೇಟಿಯಾಗಿ ದಂಗೆಯ ಸಂಭವನೀಯ ಅಂಶಗಳ ಬಗ್ಗೆ ಸುಳಿವು ನೀಡುತ್ತಿದ್ದರು. ತಮ್ಮ ಮಾತುಗಳನ್ನು ಕೇಳಿ ಬ್ರಿಟಿಷರು ಬರೇಲಿ ಬಿಟ್ಟು ಹೋಗುತ್ತಾರೆ ಅನ್ನೋದು ಅವರ ಗ್ರಹಿಕೆಯಾಗಿತ್ತು. ಇಲ್ಲಿಂದ ಬೇರೆ ಸ್ಥಳಕ್ಕೆ ಹೋಗಿ ನಿಮ್ಮ ಜೀವ ಉಳಿಸಿಕೊಳ್ಳುವುದನ್ನು ನೋಡಿ ಅಂತ ಅವರಿಗೆ ಖಾನ್ ಹೇಳುತ್ತಿದ್ದರು.

ಅನೇಕ ಬ್ರಿಟಿಷ್ ಅಧಿಕಾರಿಗಳನ್ನು ಸಂಹರಿಸಲಾಯಿತು

ಆಗ ಬರೇಲಿಯ ಕಮಿಷನರ್ ಅಗಿದ್ದವನು ಖಾನ್ ಬಹದ್ದೂರ್ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅಂತಿಮವಾಗಿ, ಮೇ 31 ರಂದು, ಬರೇಲಿಯಲ್ಲಿ ಜಂಗ್-ಎ-ಆಜಾದಿಯ ಕಹಳೆ ಮೊಳಗಿಸಲಾಯಿತು. ಆ ಸಮಯದಲ್ಲಿ ಅನೇಕ ಬ್ರಿಟಿಷ್ ಅಧಿಕಾರಿಗಳ ಹತ್ಯೆಯಾಯಿತು. ಇದರಿಂದಾಗಿ ಬ್ರಿಟಿಷರ ಪಾದಗಳು ಅದುರತೊಡಗಿದವು. ಕ್ರಾಂತಿಕಾರಿ ಸೇನೆಯ ಎದುರು ಅವರು ಅಸಹಾಯಕರಾಗಿ ಜೀವ ಉಳಿಯಬೇಕಾದರೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಬರೇಲಿಯನ್ನು ತೊರೆಯುವುದೇ ಸೂಕ್ತವೆಂದು ಭಾವಿಸಿದರು.

ಬರೇಲಿ ಮೊದಲ ಬಾರಿಗೆ ಸ್ವಾತಂತ್ರ್ಯದ ಖುಷಿ ಅನುಭವಿಸಿತು!

ಲೇಖಕ ಸುಧೀರ್ ವಿದ್ಯಾರ್ಥಿ ತಮ್ಮ ‘ಬರೇಲಿ ಏಕ್ ಕೊಲಾಜ್’ ಪುಸ್ತಕದಲ್ಲಿ ದಾಖಲಿಸಿರುವ ಪ್ರಕಾರ, ಕ್ರಾಂತಿಕಾರಿಗಳು ಮೇ 31 ರಂದು ಬರೇಲಿಯನ್ನು ಆಕ್ರಮಿಸಿಕೊಂಡರು. ಸ್ವತಂತ್ರ ಬರೇಲಿಯ ಜನ ನೆಮ್ಮದಿಯಿಂದ ಉಸಿರಾಡಿದರು. ಜೂನ್ 1, 1857 ರಂದು, ಕ್ರಾಂತಿಕಾರಿಗಳು ವಿಜಯದ ಮೆರವಣಿಗೆಯನ್ನು ಸಹ ನಡೆಸಿದರು. ಮೆರವಣಿಗೆಯ ಕೊನೆಯಲ್ಲಿ ನವಾಬ್ ಬಹದ್ದೂರ್ ಖಾನ್ ಅವರನ್ನು ಬರೇಲಿಯ ನವಾಬ್ ಎಂದು ಘೋಷಿಸಿ ಪಟ್ಟಾಭಿಷೇಕ ಮಾಡಲಾಯಿತು.

ಶೋಭಾರಾಮ್ ಅವರನ್ನು ದಿವಾನರನ್ನಾಗಿ ಮಾಡಲಾಯಿತು

ಬರೇಲಿಯ ನವಾಬರಾಗಿ ಸಿಂಹಾಸನವೇರಿದ ನಂತರ ಖಾನ್ ಬಹದ್ದೂರ್ ಖಾನ್ ಬೇರೆ ಬೇರೆ ಸರ್ಕಾರಿ ಹುದ್ದೆಗಳಿಗೆ ಜನರನ್ನು ನೇಮಿಸಿಕೊಂಡರು ಮತ್ತು ಬರೇಲಿ ಅರಸೊತ್ತಿಗೆಯ ಅಧಿಕಾರ ತಮ್ಮ ಕೈಗೆತ್ತಿಕೊಂಡರು. ಶೋಭಾರಾಮರನ್ನು ಅವರು ದಿವಾನರನ್ನಾಗಿ ಮಾಡಿಕೊಂಡರು. ಕ್ರಮೇಣವಾಗಿ ನವಾಬ್ ಬಹಾದ್ದೂರ್ ಖಾನ್ ಬದೌನ್, ಪಿಲಿಭಿತ್ ಮತ್ತು ಷಹಜಹಾನ್‌ಪುರ ಮೊದಲಾದ ಪ್ರದೇಶಗಳಿಂದಲೂ ಬ್ರಿಟಿಷರನ್ನು ಓಡಿಸಿದರು.

ಬ್ರಿಟಿಷರಿಗೆ ಬರೇಲಿ ವಶಪಡಿಸಿಕೊಳ್ಳುವುದು ಒಂದು ವರ್ಷದವರೆಗೆ ಸಾಧ್ಯವಾಗಲಿಲ್ಲ!

ಅಧಿಕಾರಿಗಳ ಹತ್ಯೆ ಮತ್ತು ಬರೇಲಿಯಿಂದ ಪಲಾಯನಗೈಯುವಂಥ ಸ್ಥಿತಿ ಎದುರಾಗಿದ್ದನ್ನು ಈಸ್ಟ್ ಇಂಡಿಯಾ ಕಂಪನಿ ವಿವರಿಸಿದಾಗ ಬ್ರಿಟಿಷರಿಗೆ ಅದನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಅವರ ಪ್ರಾಬಲ್ಯಕ್ಕೆ ಬಲವಾದ ಹೊಡೆತ ಬಿದ್ದಿತ್ತು. ಹೇಗಾದರೂ ಮಾಡಿ ಬರೇಲಿಯನ್ನು ತಮ್ಮ ವಶಕ್ಕೆ ತೆಗದುಕೊಳ್ಳಬೇಕೆಂಬ ತುಡಿತ ಅವರಲ್ಲಿತ್ತು. ಆದರೆ ಸುಮಾರು ಒಂದು ವರ್ಷದವರೆಗೆ ಅದು ಸಾಧ್ಯವಾಗಲಿಲ್ಲ.

ಬರೇಲಿಯ ಸೇನೆ ಮತ್ತು ಬ್ರಿಟಿಷರ ನಡುವೆ ಯುದ್ಧಗಳು ಮುಂದುವರೆದವು. ಆದರೆ ಬಹದ್ದೂರ್ ಖಾನ್ ಸೈನ್ಯವು ಪ್ರತಿ ಬಾರಿಯೂ ಬ್ರಿಟಿಷರನ್ನು ಸೋಲಿಸಿತು. ಆದರೆ 7 ಮೇ, 1858 ರಂದು, ಬ್ರಿಟಿಷರು ತೀವ್ರವಾದ ದಾಳಿಯನ್ನು ನಡೆಸಿ ಬರೇಲಿಯನ್ನು ಪುನಃ ಪುನಃ ವಶಕ್ಕೆ ತೆಗೆದುಕೊಂಡರು.

ಖಾನ್ ಬಹದ್ದೂರ್ ನೇಪಾಳದಲ್ಲಿ ಸೆರೆಸಿಕ್ಕರು!

ನವಾಬ್ ಖಾನ್ ಬಹದ್ದೂರ್ ಅವರನ್ನು ಬರೇಲಿಯಲ್ಲಿ ಬ್ರಿಟಿಷರು ಸೋಲಿಸಿದರು. ಆದರೆ ಸೋಲಿನಿಂದ ಕಂಗೆಡದ ಅವರು ಸೈನ್ಯವನ್ನು ಪುನಃ ಸಂಘಟಿಸಲು ಬರೇಲಿಯನ್ನು ತೊರೆದು ನೇಪಾಳಕ್ಕೆ ಹೋದರು. ಆದರೆ ಅಲ್ಲಿನ ದೊರೆ ಜಂಗ್ ಬಹದ್ದೂರ್ ಸಹಾಯ ಖಾನ್ ಬಹದ್ದೂರ್ ಅವರಿಗೆ ಸಹಾಯ ಮಾಡಲಿಲ್ಲ. ಬದಲಿಗೆ ಅವರನ್ನು ಬಂಧಿಸಿ ಬ್ರಿಟಿಷರಿಗೆ ಒಪ್ಪಿಸಿಬಿಟ್ಟರು.

ಗಲ್ಲಿಗೇರಿಸುವ ಮುನ್ನ ಖಾನ್ ಬಹದ್ದೂರ್ ಹೇಳಿದ್ದು, ‘ಇದು ನನ್ನ ಗೆಲುವು…’

ಖಾನ್ ಬಹದ್ದೂರ್ ಖಾನ್ ಅವರನ್ನು ಬಂಧಸಿದ ನಂತರ, ಬ್ರಿಟಿಷರು ಅವರನ್ನು ವಿಧವಿಧವಾಗಿ ಚಿತ್ರಹಿಂಸೆಗೆ ಗುರಿಮಾಡಿದರು. ಅವರನ್ನು ವಿಚಾರಣೆಗೆ ಒಳಪಡಿಸಿದ ಬಳಿಕ 22 ಫೆಬ್ರವರಿ 1860 ರಂದು ಅಪರಾಧಿ ಎಂದು ಘೋಷಿಸಿ ಮರಣದಂಡನೆ ವಿಧಿಸಲಾಯಿತು. ಇತಿಹಾಸಕಾರರ ಪ್ರಕಾರ, ಮಾರ್ಚ್ 24, 1860 ರಂದು, ನೇಣಿನ ಕುಣಿಕೆಗೆ ಕೊರಳೊಡ್ಡುವ ಮುನ್ನ ಅವರು ಗಟ್ಟಿಯಾದ ಧ್ವನಿಯಲ್ಲಿ ‘ಬ್ರಿಟಿಷರ ವಿರುದ್ಧ ಹೋರಾಟವನ್ನು ಮುಂದುವರಿಸಿ, ಅವರು ಕೊಲ್ಲುತ್ತಿರುವುದು ನನ್ನನ್ನು ಮಾತ್ರ. ಆದರೆ, ನಾನು ಅನೇಕ ಬ್ರಿಟಿಷರನ್ನು ಕೊಂದಿದ್ದೇನೆ, ಇದು ನನ್ನ ಗೆಲುವು,’ ಹೇಳಿದರು.

ನವಾಬನಾದ ಸ್ಥಳದಲ್ಲೇ ಖಾನ್ ಬಹದ್ದೂರ್ ಖಾನ್ ರನ್ನು ಗಲ್ಲಿಗೇರಿಸಲಾಯಿತು

ಕ್ರಾಂತಿಯ ಪ್ರಯತ್ನಗಳು ಮತ್ತೊಮ್ಮೆ ನಡೆಯದಂತೆ ನಿಗ್ರಹಿಸುವುದನ್ನು ಬ್ರಿಟಿಷರು ಬಯಸಿದ್ದರು. ಆದ್ದರಿಂದ ಅವರು ಖಾನ್ ಬಹದ್ದೂರ್ ಖಾನ್ ರನ್ನು ಗಲ್ಲಿಗೇರಿಸಲು ಅವರು ಬ್ರಿಟಿಷರನ್ನು ಸೋಲಿಸಿ ಪಟ್ಟಾಭಿಷೇಕ ನಡೆದ ಸ್ಥಳವನ್ನೇ ಆರಿಸಿಕೊಂಡು ಸಾರ್ವಜನಿಕವಾಗಿ ಗಲ್ಲಿಗೇರಿಸಿದರು. ಜನರ ಮನಸ್ಸಿನಲ್ಲಿ ಭೀತಿ ಮೂಡಿಸುವುದು ಅವರ ಉದ್ದೇಶವಾಗಿತ್ತು. ಆದರೆ ಅವರ ಯೋಜನೆಯೇನೂ ಸಫಲಗೊಳ್ಳಲಿಲ್ಲ. ಯಾಕೆಂದರೆ ಖಾನ್ ಬಹದ್ದೂರ್ ಖಾನ್ ಗಲ್ಲಿಗೇರಿದ ಬಳಿಕ ಕ್ರಾಂತಿಕಾರಿಗಳ ಚಟುವಟಿಕೆಗಳು ತೀವ್ರಗೊಂಡವು.