ಆಜಾದಿ ಕಾ ಅಮೃತ್ ಮಹೋತ್ಸವ್: ದವಡೆ ಹಲ್ಲು ಮುರಿದು ಕೈಬೆರಳುಗಳ ಉಗುರುಗಳನ್ನು ಬ್ರಿಟಿಷರು ಕಿತ್ತಿದರೂ ಸುರ್ಯಸೇನ್ ಬಾಯಿಂದ ವಂದೇ ಮಾತರಂ ಘೋಷಣೆ ನಿಲ್ಲುತ್ತಿರಲಿಲ್ಲ

ಬಂಧನದ ನಂತರವೂ, ಸೂರ್ಯಸೇನ್ ಜೈಲಿನಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತಲೇ ಇದ್ದರು, ಅದನ್ನು ತಡೆಯಲು, ಬ್ರಿಟಿಷರು ಅವನ ಮೇಲೆ ಅನೇಕ ದೌರ್ಜನ್ಯಗಳನ್ನು ಎಸಗಿದರು. ಅವರ ದವಡೆ ಹಲ್ಲು ಮುರಿದರು ಮತ್ತು ಕೈಬೆರಳುಗಳ ಉಗುರುಗಳನ್ನು ಕಿತ್ತಿದರು!

ಆಜಾದಿ ಕಾ ಅಮೃತ್ ಮಹೋತ್ಸವ್: ದವಡೆ ಹಲ್ಲು ಮುರಿದು ಕೈಬೆರಳುಗಳ ಉಗುರುಗಳನ್ನು ಬ್ರಿಟಿಷರು ಕಿತ್ತಿದರೂ ಸುರ್ಯಸೇನ್ ಬಾಯಿಂದ ವಂದೇ ಮಾತರಂ ಘೋಷಣೆ ನಿಲ್ಲುತ್ತಿರಲಿಲ್ಲ
ಸೂರ್ಯಸೇನ್, ಮಾಸ್ಟರ್ ಡಾ
TV9kannada Web Team

| Edited By: Arun Belly

Aug 04, 2022 | 7:26 PM

ಭಾರತದಲ್ಲಿ ತೀವ್ರಗೊಳ್ಳುತ್ತಿದ್ದ ದಂಗೆಯನ್ನು ಹತ್ತಿಕ್ಕಲು, ಬ್ರಿಟಿಷರು (British) ಭಾರತೀಯರ ಮೇಲೆ ಕೇವಲ ಅನ್ಯಾಯ ಮತ್ತು ದೌರ್ಜನ್ಯಗಳನ್ನು ಮಾತ್ರ ಮಾಡಲಿಲ್ಲ, ನಿರ್ದಯತೆಯ ಎಲ್ಲಾ ಮಿತಿಗಳನ್ನು ಅವರು ಮೀರಿದರು. ಚಿತ್ತಗಾಂಗ್ (Chittagong) ದಂಗೆಯ ರೂವಾri ಕ್ರಾಂತಿಕಾರಿ ಸೂರ್ಯಸೇನ್‌ (Surya Sen) ಮೇಲೆ ಬ್ರಿಟಿಷರು ಅದೇ ತೆರನಾದ ಕ್ರೌರ್ಯವನ್ನು ಪ್ರದರ್ಶಿಸಿದ್ದರು. ಅವರಿಗೆ ವಂದೇ ಮಾತರಂ ಹೇಳದ ಹಾಗೆ ಅವರ ದವಡೆ ಹಲಲ್ಲುಗಳನ್ನು ಮುರಿದರು, ಅವರ ಕೈಗಳ ಉಗುರುಗಳನ್ನು ಕಿತ್ತಿದರು! ಭಾರತಮಾತೆಯ ಆ ವೀರಪುತ್ರ ಎಲ್ಲಾ ಹಿಂಸೆಯನ್ನು ಸಹಿಸಿಕೊಂಡರೆ ಹೊರತು ಬ್ರಿಟಿಷರ ಜೊತೆ ಯಾವ ಕಾರಣಕ್ಕೂ ರಾಜಿ ಮಾಡಿಕೊಳ್ಳಲಿಲ್ಲ.

ಮರಣದಂಡನೆಗೆ ಒಂದು ದಿನ ಮೊದಲು ತನ್ನ ಸ್ನೇಹಿತರಿಗೆ ಬರೆದ ಪತ್ರದಲ್ಲಿ ಅವರು, ಸ್ವಾತಂತ್ರ್ಯ ಚಳವಳಿಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಮನವಿ ಮಾಡಿದ್ದರು. ಸ್ವಾತಂತ್ರ್ಯದ ಕನಸನ್ನು ಬಿಟ್ಟು ಹೋಗುತ್ತಿದ್ದೇನೆ ಅದನ್ನು ಸಾಕಾರಗೊಳಿಸಿ ಎಂದು ಪತ್ರದಲ್ಲಿ ಬರೆದಿದ್ದರು.

ಸುರ್ಜ್ಯ ಮತ್ತು ಕಲು ಎಂಬ ಉಪನಾಮಗಳನ್ನು ಹೊಂದಿದ್ದರು

ಮಹಾನ್ ಕ್ರಾಂತಿಕಾರಿ ಸೂರ್ಯ ಕುಮಾರ್ ಸೇನ್ ಅವರು ಆಗಿನ ಅವಿಭಜಿತ ಬಂಗಾಳದ ಚಿತ್ತಗಾಂಗ್ ಜಿಲ್ಲೆಯ ನೋಪಾರಾ ಗ್ರಾಮದಲ್ಲಿ 22 ಮಾರ್ಚ್, 1894 ರಂದು ಜನಿಸಿದರು (ಚಿತ್ತಗಾಂಗ್ ಈಗ ಬಾಂಗ್ಲಾದೇಶದಲ್ಲಿದೆ). ಅವರ ತಂದೆ ರಾಜಮೋನಿ ಸೇನ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದರು. ಅವರ ತಾಯಿಯ ಹೆಸರು ಶೀಲಾ ಬಾಲಾ ದೇವಿ. ಸೂರ್ಯಸೇನ್ ಅವರಿಗೆ ಸುರ್ಜ್ಯ ಎಂಬ ಉಪನಾಮವೂ ಇತ್ತು ಮತ್ತು ಮನೆಯವರು ಪ್ರೀತಿಯಿಂದ ಕಲು ಎಂದು ಕರೆಯುತ್ತಿದ್ದರು. ನೋಪಾರಾದಿಂದ ಉನ್ನತ ಇಂಗ್ಲಿಷ್ ಶಾಲೆಯಲ್ಲಿ ಅಧ್ಯಯನ ಪೂರ್ತಿಮಾಡಿದ ನಂತರ, ಸೇನ್ ಬಿಎ ಪದವಿ ಪಡೆದರು.

ಮಾಸ್ಟರ್ ಡಾ ಎಂದು ಪ್ರಸಿದ್ಧರಾಗಿದ್ದರು

ಸೂರ್ಯಸೇನ್ ಚಿಕ್ಕವಯಸ್ಸಿನವರಾಗಿದ್ದಾಗಲೇ, ಅವರ ತಾಯಿ ಮತ್ತು ತಂದೆ ನಿಧನರಾದರು. ಅವರನ್ನು ಬೆಳೆಸಿದ್ದು ಚಿಕ್ಕಪ್ಪ. ಅವರು ಬಿಎ ಪಾಸು ಮಾಡಿದ ಬಳಿಕ, ಒಬ್ಬ ಶಿಕ್ಷಕರು ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸುವಂತೆ ಅವರನ್ನು ಪ್ರೇರೇಪಿಸಿದರು. ಸೂರ್ಯಸೇನ್ ಅವರ ಸಲಹೆಯನ್ನು ಗಂಭೀರವಾಗಿ ತೆಗೆದುಕೊಂಡರು. 1918 ರಲ್ಲಿ ಅವರು ಚಿತ್ತಗಾಂಗ್‌ನ ನಂದನ್ ಕಾನನ್ ಪ್ರದೇಶದ ಶಾಲೆಯೊಂದರಲ್ಲಿ ಗಣಿತ ಕಲಿಸಲು ಪ್ರಾರಂಭಿಸಿದರು. ಇಲ್ಲಿ ಅವರಿಗೆ ಮಾಸ್ಟರ್ ಡಾ ಎಂಬ ಹೆಸರು ಕೂಡ ಬಂದಿತ್ತು. ನಂತರ ತಮ್ಮನ್ನು ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕೆಲಸವನ್ನು ತೊರೆದರು.

ಯುಗಾಂತರ ಗುಂಪಿನ ಸದಸ್ಯರಾದರು

ಸೂರ್ಯಸೇನ್ ತಾವು ಪದವಿ ಓದುತ್ತಿದ್ದ ಸಮಯದಲ್ಲಿ ಆ ಕಾಲದ ಅತಿದೊಡ್ಡ ಕ್ರಾಂತಿಕಾರಿ ಸಂಘಟನೆಯಾದ ಯುಗಾಂತರ್ ಗುಂಪನ್ನು ಸೇರಿಕೊಂಡರು. 1918 ರಲ್ಲಿ ಇನ್ನೂ ಶಿಕ್ಷಕರಾಗಿದ್ದಾಗ ಸ್ಥಳೀಯ ಯುವಕರನ್ನು ಸಂಘಟಿಸಿದರು. ಕೆಲಸವನ್ನು ತೊರೆದ ನಂತರ, ಕ್ರಾಂತಿಕಾರಿ ಚಟುವಟಿಕೆಗಳಲ್ಲಿ ತಮ್ಮನ್ನು ಹೆಚ್ಚೆಚ್ಚು ತೊಡಗಿಸಿಕೊಂಡರು. ಬ್ರಿಟಿಷರೊಂದಿಗೆ ಯುದ್ಧ ನಡೆಸಲು ಶಸ್ತ್ರಾಸ್ತ್ರಗಳ ಅಗತ್ಯವಿತ್ತು. ಹಾಗಾಗಿ ಅವರು ಬ್ರಿಟಿಷರೊಂದಿಗೆ ಗೆರಿಲ್ಲಾ ಯುದ್ಧ ಪ್ರಾರಂಭಿಸಿದರು. 23 ಡಿಸೆಂಬರ್ 1923 ರಂದು, ಅವರು ಅಸ್ಸಾಂ-ಬಂಗಾಳ ಖಜಾನೆ ಕಚೇರಿಯನ್ನು ದರೋಡೆ ಮಾಡಿ ಬ್ರಿಟಿಷರಿಗೆ ಬಹಿರಂಗ ಸವಾಲು ಒಡ್ಡಿದರು. ಅದಾದ ನಂತರ ಬ್ರಿಟಿಷರು ಸೂರ್ಯಸೇನ್‌ಗಾಗಿ ಹುಡುಕಲಾರಂಭಿಸಿದರೂ ಅವರು ತಪ್ಪಿಸಿಕೊಳ್ಳುತ್ತಲೇ ಇದ್ದರು.

ಐ ಅರ್ ಎ ಸ್ಥಾಪನೆ, ಚಿತ್ತಗಾಂಗ್ ದಂಗೆ

ಕ್ರಾಂತಿಕಾರಿಗಳು ಬ್ರಿಟಿಷರ ವಿರುದ್ಧ ಬಂಡಾಯ ಸಾರಿದ್ದರು. ದೇಶಾದ್ಯಂತ ಸ್ವಾತಂತ್ರ್ಯಕ್ಕಾಗಿ ಹೋರಾಟ ಹೆಚ್ಚತೊಡಗಿತ್ತು. ಭಾರತದ ಇತಿಹಾಸ ಪುಸ್ತಕ ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್ ಪ್ರಕಾರ, ಸೂರ್ಯಸೇನ್ ತನ್ನ ಸಹಚರರೊಂದಿಗೆ 1930 ರಲ್ಲಿ ಇಂಡಿಯನ್ ರಿಪಬ್ಲಿಕನ್ ಆರ್ಮಿ (ಐಆರ್‌ಎ) ಸ್ಥಾಪಿಸಿದರು.

ಕ್ರಾಂತಿಕಾರಿಗಳೊಂದಿಗೆ, ಅವರು ಬ್ರಿಟಿಷ್ ಪೋಲೀಸ್ ಶಸ್ತ್ರಾಸ್ತ್ರಗಳ ಮಳಿಗೆ ಮೇಲೆ ದಾಳಿ ನಡೆಸಿದರು. ಇತಿಹಾಸದ ಪುಟಗಳಲ್ಲಿ ಇದನ್ನು ಚಿತ್ತಗಾಂಗ್ ದಂಗೆ ಎಂದು ಕರೆಯಲಾಗುತ್ತದೆ. ನಂತರ ಕ್ರಾಂತಿಕಾರಿಗಳು ದೂರವಾಣಿ ವಿನಿಮಯ ಕೇಂದ್ರದ ಮೇಲೆ ದಾಳಿ ಮಾಡಿ ಬ್ರಿಟಿಷರಿಗೆ ಸಾಕಷ್ಟು ಹಾನಿಯನ್ನುಂಟುಮಾಡಿದ್ದರು. ಶಸ್ತ್ರಾಗಾರದಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದರು ಆದರೆ ಮದ್ದುಗುಂಡುಗಳನ್ನು ವಶಕ್ಕೆ ತೆಗೆದುಕೊಳ್ಳಲು ವಿಫಲರಾದರು.

ಸ್ನೇಹಿತ ದ್ರೋಹವೆಸಗಿದ

ಚಿತ್ತಗಾಂಗ್ ಶಸ್ತ್ರಾಗಾರವನ್ನು ವಶಪಡಿಸಿಕೊಂಡ ನಂತರ, ಕ್ರಾಂತಿಕಾರಿಗಳು ಅಲ್ಲಿ ಸ್ವರಾಜ್ಯದ ಧ್ವಜವನ್ನು ಹಾರಿಸುವಲ್ಲಿ ಯಶಸ್ವಿಯಾದರು. ಈ ಘಟನೆಯಲ್ಲಾದ ಹಿನ್ನಡೆಯನ್ನು ಬ್ರಿಟಿಷರಿಗೆ ಸಹಿಸಿಕೊಳ್ಳಲಾಗಲಿಲ್ಲ. ಕ್ರಾಂತಿಕಾರಿಗಳ ವಿರುದ್ಧ ಅವರು ಬೆಂಕಿಯುಗುಳತೊಡಗಿದರು. ಸೂರ್ಯಸೇನ್ ಮತ್ತು ಅವರು ಸಹಚರರನ್ನು ಹಿಡಿದುಕೊಟ್ಟವರಿಗೆ ಬಹುಮಾನ ಘೋಷಿಸಿದರು. ಸೂರ್ಯ ಸೇನ್ ಹಲವಾರು ದಿನಗಳವರೆಗೆ ತಪ್ಪಿಸಿಕೊಳ್ಳುತ್ತಲೇ ಇದ್ದರು. ಆದರೆ ಅದೊಂದು ದಿನ ಅವನ ಜೊತೆಗಾರ ನೇತ್ರಾ ಸೇನ್ ದ್ರೋಹವೆಸಗಿಬಿಟ್ಟ. ಬ್ರಿಟಿಷರಿಗೆ ಅವನು ಸೂರ್ಯಸೇನರ ವಿಳಾಸ ತಿಳಿಸಿದ್ದರಿಂದ 16 ಫೆಬ್ರವರಿ, 1933 ರಂದು ಪೊಲೀಸರು ಅವರನ್ನು ಬಂಧಿಸಿದರು.

ಬ್ರಿಟಿಷರು ದವಡೆ ಮುರಿದರು, ಕೈಗಳ ಉಗುರುಗಳನ್ನು ಕೀಳಿದರು

ಬಂಧನದ ನಂತರವೂ, ಸೂರ್ಯಸೇನ್ ಜೈಲಿನಲ್ಲಿ ವಂದೇ ಮಾತರಂ ಘೋಷಣೆ ಕೂಗುತ್ತಲೇ ಇದ್ದರು, ಅದನ್ನು ತಡೆಯಲು, ಬ್ರಿಟಿಷರು ಅವನ ಮೇಲೆ ಅನೇಕ ದೌರ್ಜನ್ಯಗಳನ್ನು ಎಸಗಿದರು. ಅವರ ದವಡೆ ಹಲ್ಲು ಮುರಿದರು ಮತ್ತು ಕೈಬೆರಳುಗಳ ಉಗುರುಗಳನ್ನು ಕಿತ್ತಿದರು! ವಿಚಾರಣೆ ನಡೆದು ಅವರಿಗೆ ಮರಣದಂಡನೆ ವಿಧಿಸಲಾಯಿತು. 1934ರ ಜನವರಿ 12 ರಂದು, ಅವರನ್ನು ಗಲ್ಲಿಗೇರಿಸಲಾಯಿತು

ಚಿತ್ತಗಾಂಗ್ ಸೆಂಟ್ರಲ್ ಜೈಲಿನಲ್ಲಿ ಸೂರ್ಯಸೇನ್ ಸ್ಮಾರಕ

ಸೂರ್ಯಸೇನ್ ಅವರನ್ನು ಚಿತ್ತಗಾಂಗ್ ಸೆಂಟ್ರಲ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಅದೇ ಸ್ಥಳದಲ್ಲಿ ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ. 1978 ರಲ್ಲಿ ಭಾರತ ಮತ್ತು ಬಾಂಗ್ಲಾದೇಶ ಸರ್ಕಾರಗಳಿ ಅವರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದವು. ಕೋಲ್ಕತ್ತಾದ ಮೆಟ್ರೋ ನಿಲ್ದಾಣವೊಂದಕ್ಕೆ ಅವರ ಹೆಸರಿಡಲಾಗಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada