ಚಂದ್ರನ ಮೇಲೆ ಆಮ್ಲಜನಕ ಮತ್ತು ಇತರ ಮೂಲಧಾತು ಪತ್ತೆ; ಹೈಡ್ರೋಜನ್​​ಗಾಗಿ ನಡೆಯುತ್ತಿದೆ ಹುಡುಕಾಟ: ಇಸ್ರೋ

ಪ್ರಾಥಮಿಕ ವಿಶ್ಲೇಷಣೆಗಳನ್ನು ಗ್ರಾಫ್ ಮೂಲಕ ನಿರೂಪಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ಅನಾವರಣಗೊಳಿಸಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಚಂದ್ರನ ಮೇಲೆ ಆಮ್ಲಜನಕ ಮತ್ತು ಇತರ ಮೂಲಧಾತು ಪತ್ತೆ; ಹೈಡ್ರೋಜನ್​​ಗಾಗಿ ನಡೆಯುತ್ತಿದೆ ಹುಡುಕಾಟ: ಇಸ್ರೋ
ಪ್ರಗ್ಯಾನ್ ರೋವರ್
Follow us
ರಶ್ಮಿ ಕಲ್ಲಕಟ್ಟ
|

Updated on: Aug 29, 2023 | 8:55 PM

ದೆಹಲಿ ಆಗಸ್ಟ್29: ಪ್ರಗ್ಯಾನ್ ರೋವರ್‌ನ(Pragyan rover) ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪ್ ದಕ್ಷಿಣ ಧ್ರುವದ ಬಳಿ ಚಂದ್ರನ ಮೇಲ್ಮೈಯಲ್ಲಿ ಗಂಧಕದ (sulphur) ಉಪಸ್ಥಿತಿಯನ್ನು ಮೊದಲ ಬಾರಿಗೆ  ಮಾಪನಗಳ ಮೂಲಕ ದೃಢಪಡಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮಂಗಳವಾರ ಹೇಳಿದೆ. ರೋವರ್‌ನ ಸ್ಪೆಕ್ಟ್ರೋಸ್ಕೋಪ್ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಫೆರಸ್ (ಕಬ್ಬಿಣ), ಕ್ರೋಮಿಯಂ, ಟೈಟಾನಿಯಂ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಆಮ್ಲಜನಕವನ್ನು ನಿರೀಕ್ಷಿಸಿದಂತೆ ಪತ್ತೆ ಮಾಡಿದೆ ಎಂದು ಇಸ್ರೋ ಹೇಳಿದೆ. ಇದೀಗ ಹೈಡ್ರೋಜನ್​​ಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರಾಥಮಿಕ ವಿಶ್ಲೇಷಣೆಗಳನ್ನು ಗ್ರಾಫ್ ಮೂಲಕ ನಿರೂಪಿಸಲಾಗಿದೆ. ಚಂದ್ರನ ಮೇಲ್ಮೈಯಲ್ಲಿ ಅಲ್ಯೂಮಿನಿಯಂ (Al), ಸಲ್ಫರ್ (S), ಕ್ಯಾಲ್ಸಿಯಂ (Ca), ಕಬ್ಬಿಣ (Fe), ಕ್ರೋಮಿಯಂ (Cr), ಮತ್ತು ಟೈಟಾನಿಯಂ (Ti) ಇರುವಿಕೆಯನ್ನು ಅನಾವರಣಗೊಳಿಸಿದೆ. ಹೆಚ್ಚಿನ ಮಾಪನಗಳು ಮ್ಯಾಂಗನೀಸ್ (Mn), ಸಿಲಿಕಾನ್ (Si), ಮತ್ತು ಆಮ್ಲಜನಕ (O) ಇರುವಿಕೆಯನ್ನು ಬಹಿರಂಗಪಡಿಸಿವೆ. ಹೈಡ್ರೋಜನ್ ಇರುವಿಕೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

LIBS ಉಪಕರಣವನ್ನು ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ (LEOS)/ISRO, ಬೆಂಗಳೂರು ಪ್ರಯೋಗಾಲಯದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಪ್ರಗ್ಯಾನ್ ರೋವರ್ ಚಂದ್ರನ “ಹೆಚ್ಚು ರಹಸ್ಯಗಳನ್ನು ಬಹಿರಂಗಪಡಿಸುವ ಹಾದಿಯಲ್ಲಿದೆ” ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಹೇಳಿದ ನಂತರ ಈ ಅಪ್ಡೇಟ್ ಬಂದಿದೆ. ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ಗಂಟೆಗಳ ನಂತರ ರೋವರ್ ಅನ್ನು ‘ವಿಕ್ರಮ್’ ಲ್ಯಾಂಡರ್‌’ ಹೊರೆಗೆ ಹಾಕಿತ್ತು.

ಆಗಸ್ಟ್ 26 ರಂದು, ಚಂದ್ರಯಾನ 3 ರ ಲ್ಯಾಂಡಿಂಗ್ ಪಾಯಿಂಟ್ ‘ಶಿವಶಕ್ತಿ’ ಪಾಯಿಂಟ್‌ನ ಸುತ್ತಲೂ ರೋವರ್ ತಿರುಗುತ್ತಿರುವ ವಿಡಿಯೊವನ್ನು ಇಸ್ರೋ ಬಿಡುಗಡೆ ಮಾಡಿತ್ತು. “”ಚಂದ್ರಯಾನ-3 ಮಿಷನ್: 🔍ಇಲ್ಲಿ ಹೊಸತೇನಿದೆ? ಪ್ರಗ್ಯಾನ್ ರೋವರ್ ದಕ್ಷಿಣ ಧ್ರುವದಲ್ಲಿ ಚಂದ್ರನ ರಹಸ್ಯಗಳ ಅನ್ವೇಷಣೆಯಲ್ಲಿ ಶಿವಶಕ್ತಿ ಪಾಯಿಂಟ್‌ನ ಸುತ್ತಲೂ ತಿರುಗುತ್ತದೆ” ಎಂದು ಇಸ್ರೋ ಎಕ್ಸ್ ನಲ್ಲಿ ಪೋಸ್ಟ್ ಮಾಡಿತ್ತು.

ನಿನ್ನೆ, ಪ್ರಗ್ಯಾನ್ ರೋವರ್ ಚಂದ್ರನ ಮೇಲ್ಮೈಯಲ್ಲಿ ಅದರ ಸ್ಥಳಕ್ಕಿಂತ 3 ಮೀಟರ್ ಮುಂದೆ ನಾಲ್ಕು ಮೀಟರ್ ವ್ಯಾಸದ ಕುಳಿಯನ್ನು ಕಂಡಿದೆ ಎಂದು ಬಾಹ್ಯಾಕಾಶ ಸಂಸ್ಥೆ ಹೇಳಿದೆ.

ಇದನ್ನೂ ಓದಿ: ಚಂದ್ರನ ರಹಸ್ಯಗಳನ್ನು ಬಹಿರಂಗಪಡಿಸಲು ಸಿದ್ಧವಾಗಿದೆ ಪ್ರಗ್ಯಾನ್ ರೋವರ್: ಇಸ್ರೋ

ಗಸ್ಟ್ 27, 2023 ರಂದು, ರೋವರ್ ತನ್ನ ಸ್ಥಳಕ್ಕಿಂತ 3 ಮೀಟರ್ ಮುಂದಿರುವ 4 ಮೀಟರ್ ವ್ಯಾಸದ ಕುಳಿಯನ್ನು ಕಂಡಿತು. ರೋವರ್‌ಗೆ ಮಾರ್ಗವನ್ನು ಬದಲಿಸಲು ಆದೇಶಿಸಲಾಯಿತು. ಇದೀಗ ಸುರಕ್ಷಿತವಾಗಿ ಹೊಸ ಹಾದಿಯಲ್ಲಿ ಸಾಗುತ್ತಿದೆ’ ಎಂದು ಇಸ್ರೋ ಹೇಳಿದೆ.

ಭಾರತವು ಆಗಸ್ಟ್ 23 ರಂದು ಚಂದ್ರನ ದಕ್ಷಿಣ ಧ್ರುವವನ್ನು ಸ್ಪರ್ಶಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ