ಪ್ರತಿದಿನ 31 ಮಕ್ಕಳ ಆತ್ಮಹತ್ಯೆ: ಮಕ್ಕಳ ಮೇಲೇಕೆ ಇಷ್ಟು ಮಾನಸಿಕ ಒತ್ತಡ? ಎನ್​ಸಿಆರ್​ಬಿ ವರದಿಯ ವಿಶ್ಲೇಷಣೆ ಇಲ್ಲಿದೆ

ಕಳೆದ ಮೂರು ವರ್ಷದ ದತ್ತಾಂಶಗಳನ್ನು ವಿಶ್ಲೇಷಿಸಿದರೆ ಮಕ್ಕಳಲ್ಲಿ ಆತ್ಮಹತ್ಯೆ ಪ್ರಮಾಣದ ಸರಾಸರಿ ಶೇ 21ರಷ್ಟು ಹೆಚ್ಚಾಗಿರುವುದು ಅರಿವಾಗುತ್ತದೆ.

ಪ್ರತಿದಿನ 31 ಮಕ್ಕಳ ಆತ್ಮಹತ್ಯೆ: ಮಕ್ಕಳ ಮೇಲೇಕೆ ಇಷ್ಟು ಮಾನಸಿಕ ಒತ್ತಡ? ಎನ್​ಸಿಆರ್​ಬಿ ವರದಿಯ ವಿಶ್ಲೇಷಣೆ ಇಲ್ಲಿದೆ
ಸಾಂಕೇತಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Oct 31, 2021 | 7:20 PM

ದೆಹಲಿ: ಭಾರತದಲ್ಲಿ ಪ್ರತಿದಿನ ಸರಾಸರಿ 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಸರ್ಕಾರದ ದತ್ತಾಂಶಗಳು ಈ ಅಂಶವನ್ನು ಪುಷ್ಟೀಕರಿಸಿವೆ. ಕೊರೊನಾ ಪಿಡುಗು ಮಕ್ಕಳ ಮಾನಸಿಕ ಸಮಸ್ಯೆಗಳನ್ನು ಹೆಚ್ಚಿಸಿರಬಹುದು ಎಂದು ಮನಃಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (National Crime Records Bureau – NCRB) ಪ್ರಕಾರ 2020ರಲ್ಲಿ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019ರಲ್ಲಿ ಒಟ್ಟು 9,614 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿವೆ. 2018ರಲ್ಲಿ 9,413 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಕಳೆದ ಮೂರು ವರ್ಷದ ದತ್ತಾಂಶಗಳನ್ನು ವಿಶ್ಲೇಷಿಸಿದರೆ ಆತ್ಮಹತ್ಯೆ ಪ್ರಮಾಣದ ಸರಾಸರಿ ಶೇ 21ರಷ್ಟು ಹೆಚ್ಚಾಗಿರುವುದು ಅರಿವಾಗುತ್ತದೆ.

ಕೌಟುಂಬಿಕ ಸಮಸ್ಯೆಗಳು (4006), ಪ್ರೇಮಕ್ಕೆ ಸಂಬಂಧಿಸಿದ ವಿಚಾರ (1337) ಮತ್ತು ರೋಗ (1327) 18 ವರ್ಷದೊಳಗಿನ ಮಕ್ಕಳ ಆತ್ಮಹತ್ಯೆಗೆ ಮುಖ್ಯ ಕಾರಣ. ಇದರ ಜೊತೆಗೆ ಸೈದ್ಧಾಂತಿಕ ವಿಚಾರಗಳು ಅಥವಾ ನಾಯಕನ ಆರಾಧನೆ, ನಿರುದ್ಯೋಗ, ದಿವಾಳಿ, ಸಂತಾನ ಸಮಸ್ಯೆಗಳು ಮತ್ತು ಮಾದಕ ವ್ಯಸನ ಮಕ್ಕಳ ಆತ್ಮಹತ್ಯೆಗೆ ಕಾರಣವಾಗಿರುವ ಇತರ ಅಂಶಗಳಾಗಿವೆ.

‘ಕೊರೊನಾ ಪಿಡುಗಿನಿಂದ ಶಾಲೆಗಳು ಬಾಗಿಲು ಮುಚ್ಚಿದ್ದು, ಮಕ್ಕಳಿಗೆ ಸಾಮಾಜಿಕವಾಗಿ ಬೆರೆಯಲು ಅವಕಾಶ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮನೆಯಲ್ಲಿ ಹಿರಿಯರು ಹೆಚ್ಚು ಉದ್ವಿಗ್ನರಾಗಿ ವರ್ತಿಸಿದ್ದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿತು. ಮಕ್ಕಳ ಮಾನಸಿಕ ಆರೋಗ್ಯದ ವಿಚಾರವು ಈಗ ಮುನ್ನೆಲೆಗೆ ಬರಲು ಸಹ ಇದು ಮುಖ್ಯ ಕಾರಣ ಎಂದು ಮಕ್ಕಳ ರಕ್ಷಣೆ ವಿಭಾಗದ ಉಪನಿರ್ದೇಶಕ ಪ್ರಭಾತ್ ಕುಮಾರ್ ಹೇಳಿದರು.

ಒಂದು ಸಮಾಜವಾಗಿ ನಾವು ಶಿಕ್ಷಣ ಮತ್ತು ದೈಹಿಕ ಆರೋಗ್ಯವನ್ನು ರಾಷ್ಟ್ರ ನಿರ್ಮಾಣದ ಭಾಗವಾಗಿ ಗ್ರಹಿಸಿ, ಗಮನಿಸುತ್ತಿದ್ದೇವೆ. ಆದರೆ ಭಾವನೆಗಳನ್ನು ಸಂಭಾಳಿಸುವುದು ಅಥವಾ ಮಾನಸಿಕ-ಸಾಮಾಜಿಕ ಬೆಂಬಲದ ವಿಚಾರ ಹಲವು ಬಾರಿ ಹಿನ್ನೆಲೆಗೆ ಸರಿಯುತ್ತದೆ. ಮಕ್ಕಳ ಆತ್ಮಹತ್ಯೆಯು ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿರುವುದು ವ್ಯವಸ್ಥೆಯ ವೈಫಲ್ಯವನ್ನು ಬಿಂಬಿಸುತ್ತದೆ. ಪೋಷಕರು, ಕುಟುಂಬಗಳು, ಸಮಾಜ ಮತ್ತು ಸರ್ಕಾರಗಳು ಮಕ್ಕಳ ಬೆಂಬಲಕ್ಕೆ ನಿಲ್ಲಬೇಕಿದೆ. ಮಕ್ಕಳಿಗೆ ತಮ್ಮ ಸಾಮರ್ಥ್ಯ ಅರ್ಥೈಸಿಕೊಳ್ಳಲು ಹಾಗೂ ಅವರ ಕನಸುಗಳು ಸಾಕಾರಗೊಳ್ಳುವಂಥ ವಾತಾವರಣ ಸಮಾಜದಲ್ಲಿ ರೂಪುಗೊಳ್ಳಬೇಕಿದೆ ಎಂದು ಅವರು ತಿಳಿಸಿದರು.

ಎನ್​ಸಿಆರ್​ಬಿ ದತ್ತಾಂಶಗಳ ಪ್ರಕಾರ 2020ರಲ್ಲಿ ಆತ್ಮಹತ್ಯೆ ಮಾಡಿಕೊಂಡ 11,396 ಮಕ್ಕಳ ಪೈಕಿ 5,392 ಬಾಲಕರು ಹಾಗೂ 6,004 ಬಾಲಕಿಯರು. ದಿನದ ಸರಾಸರಿಯಲ್ಲಿ ಇದು 31 ಆಗುತ್ತದೆ. ಗಂಟೆಯ ಲೆಕ್ಕದಲ್ಲಿ ವಿಶ್ಲೇಷಿಸಿದರೆ ಸರಾಸರಿ ಪ್ರತಿಗಂಟೆಗೂ ಒಂದು ಮಗು ಆತ್ಮಹತ್ಯೆ ಮಾಡಿಕೊಂಡಿದೆ. ಗೆಳೆಯರು, ಶಿಕ್ಷಕರ ಅಥವಾ ನಂಬುಗೆಯ ಯಾವುದೇ ವ್ಯಕ್ತಿಯೊಡನೆ ಮಾತನಾಡಲು ಆಗದ ವಾತಾವರಣದಲ್ಲಿ ಮಕ್ಕಳ ಮನಸ್ಸು ಮುದುಡಿ ಹೋಗಿತ್ತು. ಶಾಲೆಗಳು ಬಾಗಿಲು ಹಾಕಿದ್ದವು, ಸಾಮಾಜಿಕ ಸಂವಹನಕ್ಕೂ ನಿರ್ಬಂಧಗಳಿದ್ದವು. ಹೀಗಾಗಿ ಮಕ್ಕಳ ಮೇಲೆ ಭಾವನಾತ್ಮಕ ಒತ್ತಡ ಹೆಚ್ಚಾಗಿತ್ತು ಎಂದು ಮಕ್ಕಳ ಹಕ್ಕು ಸಂಸ್ಥೆಯ (CRY) ನೀತಿ ಸಂಶೋಧನಾ ವಿಭಾಗದ ನಿರ್ದೇಶಕಿ ಪ್ರೀತಿ ಮಹರಾ ಪ್ರತಿಕ್ರಿಯಿಸಿದರು.

ಹಲವು ಮಕ್ಕಳ ಮನೆಯ ವಾತಾವರಣ ಅಷ್ಟು ಚೆನ್ನಾಗಿರಲಿಲ್ಲ. ಹಲವರು ತಮ್ಮ ಆಪ್ತರು ದೂರವಾಗಿದ್ದಕ್ಕೆ ಸಾಕ್ಷಿಯಾಗಿದ್ದರು. ಭಯ ಮತ್ತು ಆರ್ಥಿಕ ದುಸ್ಥಿತಿ ಅನುಭವಿಸಿದ್ದರು. ಪಠ್ಯಕ್ರಮ ಪೂರ್ಣಗೊಂಡಿರಲಿಲ್ಲ, ಪರೀಕ್ಷೆಗಳು ಮತ್ತು ಫಲಿತಾಂಶದ ಒತ್ತಡವೂ ಮಕ್ಕಳನ್ನು ಹೈರಾಣಾಗಿಸಿತ್ತು ಎಂದು ಅವರು ಹೇಳಿದರು.

ಇದನ್ನೂ ಓದಿ: 2020 ರಲ್ಲಿ ಒಟ್ಟು ಆತ್ಮಹತ್ಯೆಗಳ ಪೈಕಿ ದಿನಕೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಮಾಣ ಶೇ 24.6: ಎನ್​​ಸಿಆರ್​ಬಿ ಇದನ್ನೂ ಓದಿ: ಚಾಮರಾಜನಗರ: ಸಾಮಾಜಿಕ ಬಹಿಷ್ಕಾರ ಬೆದರಿಕೆಗೆ ಮನನೊಂದ ವ್ಯಕ್ತಿ ಆತ್ಮಹತ್ಯೆಗೆ ಶರಣು

Published On - 7:20 pm, Sun, 31 October 21