ನಾಗ್ಪುರದಲ್ಲಿ ಪತಂಜಲಿ ಆಹಾರ ಮತ್ತು ಹರ್ಬಲ್ ಪಾರ್ಕ್ ಉದ್ಘಾಟನೆ: ಸಿಎಂ ದೇವೇಂದ್ರ ಫಡ್ನವಿಸ್ ಭಾಗಿ
ಮಹಾರಾಷ್ಟ್ರದ ನಾಗ್ಪುರದಲ್ಲಿ ಪತಂಜಲಿ ಆಹಾರ ಮತ್ತು ಹರ್ಬಲ್ ಪಾರ್ಕ್ ಅನ್ನು ಭಾನುವಾರ ಉದ್ಘಾಟಿಸಲಾಗಿದೆ. ಈ ವೇಳೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದು ಪೂರ್ಣಗೊಳ್ಳಲು ಒಂಬತ್ತು ವರ್ಷಗಳು ಬೇಕಾಯಿತು ಎಂದು ಫಡ್ನವಿಸ್ ಹೇಳಿದ್ದಾರೆ.

ನಾಗ್ಪುರ, ಮಾರ್ಚ್ 09: ಮಹಾರಾಷ್ಟ್ರದ ನಾಗ್ಪುರದಲ್ಲಿ ಪತಂಜಲಿ (Patanjali) ಆಹಾರ ಮತ್ತು ಹರ್ಬಲ್ ಪಾರ್ಕ್ನ್ನು ಭಾನುವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (Devendra Fadnavis) ಉದ್ಘಾಟಿಸಿದರು. ಈ ವೇಳೆ ಯೋಗ ಗುರು ರಾಮ್‌ದೇವ್ ಮತ್ತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 1,500 ಕೋಟಿ ರೂ. ಹೂಡಿಕೆಯಲ್ಲಿ ನಿರ್ಮಿಸಲಾಗಿದ್ದು, 800 ಟನ್ ಸಾಮರ್ಥ್ಯದ ಹಣ್ಣು ಮತ್ತು ತರಕಾರಿ ಸಂಸ್ಕರಣಾ ಘಟಕಗಳನ್ನು ಹೊಂದಿದೆ.
ಉದ್ಘಾಟನೆ ಬಳಿಕ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಾತನಾಡಿ, ಈ ಪತಂಜಲಿ ಆಹಾರ ಮತ್ತು ಹರ್ಬಲ್ ಪಾರ್ಕ್ನ್ನು ಸಂಪೂರ್ಣಗೊಳಿಸಲು ಒಂಬತ್ತು ವರ್ಷಗಳು ಬೇಕಾಯಿತು. ಅನೇಕ ಸಮಸ್ಯೆಗಳು ಎದುರಾದವು. ನಾನು ರಾಮದೇವ್ ಮತ್ತು ಆಚಾರ್ಯ ಅವರೊಂದಿಗೆ ಮಾತನಾಡಿದಾಗಲೆಲ್ಲಾ, ಅವರು ನಾನು ನಾಗ್ಪುರದ ಬಗ್ಗೆ ಚಿಂತಿಸಬಾರದು, ನಾವು ಅಲ್ಲಿಯೇ ಕೆಲಸವನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳುತ್ತಿದ್ದರು ಮತ್ತು ಅವರು ಅದನ್ನು ಪೂರ್ಣಗೊಳಿಸುವ ಮೂಲಕ ಸಾಬೀತುಪಡಿಸಿದ್ದಾರೆ ಎಂದರು.
ಇದನ್ನೂ ಓದಿ: ನಾಗ್ಪುರದಲ್ಲಿ ಪತಂಜಲಿ ಮೆಗಾ ಫುಡ್ ಪಾರ್ಕ್, ಮಾರ್ಚ್ 9ರಿಂದ ಕಾರ್ಯಾರಂಭ
ರಾಮ್‌ದೇವ್ ಬಾಬಾ ಅವರನ್ನು ನಾಗ್ಪುರಕ್ಕೆ ಆಹ್ವಾನಿಸಿದಾಗ, ಅನೇಕ ರಾಜ್ಯ ಸರ್ಕಾರಗಳು ಯೋಜನೆಗಳಿಗಾಗಿ ಉಚಿತ ಭೂಮಿಯನ್ನು ನೀಡುತ್ತಿದ್ದ ಬಗ್ಗೆ ಸಿಎಂ ಫಡ್ನವೀಸ್ ಹೇಳಿದರು. ಆದಾಗ್ಯೂ, ನಾನು ಮತ್ತು ಗಡ್ಕರಿ ಜೀ ಬಾಬಾ ರಾಮದೇವ್ ಅವರನ್ನು ಕೇಳಿಕೊಂಡಾಗ, ಅವರು ನಾಗ್ಪುರಕ್ಕೆ ಮಾತ್ರ ಬರುವುದಾಗಿ ಹೇಳಿದರು. ಬಾಬಾ ಜಿ ಅವರಿಗೆ ಉಚಿತ ಭೂಮಿ ನೀಡಲಾಗಿಲ್ಲ ಅಥವಾ ಅದರ ಟೆಂಡರ್ ನೀಡಲಾಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲೂ ಬ್ಯಾನ್ ಆಗುತ್ತಾ ಪತಂಜಲಿ ಉತ್ಪನ್ನಗಳು? ಪರೀಕ್ಷೆ ನಡೆಸುವಂತೆ ಆರೋಗ್ಯ ಸಚಿವ ಸೂಚನೆ
ನಾವು ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕಾಗಿತ್ತು, ಆದ್ದರಿಂದ ಭೂಮಿಗೆ ಹೆಚ್ಚಿನ ಬೆಲೆ ನೀಡುವವರಿಗೆ ಮಾತ್ರ ಭೂಮಿ ನೀಡಲಾಗುವುದು ಎಂದು ನಾವು ಹೇಳಿದೆವು. ಹೆಚ್ಚಿನ ಬೆಲೆ ನೀಡಿ ಭೂಮಿ ನಿಮಗೆ ಸಿಗಬೇಕೆಂಬುದು ನಮ್ಮ ಆಶಯ. ಬಾಬಾ ರಾಮದೇವ್ ಕೂಡ ಈ ಸವಾಲನ್ನು ಸ್ವೀಕರಿಸಿದರು. ನಾವು ಇದಕ್ಕಾಗಿ ಮೂರು ಬಾರಿ ಟೆಂಡರ್ ಕರೆಲಾಯಿತು. ಮೂರು ಬಾರಿಯೂ ಪತಂಜಲಿ ಹೊರತುಪಡಿಸಿ ಯಾರೂ ಅದನ್ನು ತೆಗೆದುಕೊಳ್ಳಲು ಮುಂದೆ ಬರಲಿಲ್ಲ ಎಂದಿದ್ದಾರೆ.
ಕಿತ್ತಳೆ ಹಣ್ಣುಗಳ ಕೊಯ್ಲು
ಈ ಉದ್ಯಾನವನದಲ್ಲಿ ಕಿತ್ತಳೆ ಹಣ್ಣಿನ ಕೊಯ್ಲು ಮಾಡುವುದರಿಂದ ಹಿಡಿದು ಸಂಸ್ಕರಣೆ ಮತ್ತು ಪ್ಯಾಕೇಜಿಂಗ್‌ವರೆಗಿನ ಸಂಪೂರ್ಣ ಪ್ರಕ್ರಿಯೆಯು ಒಂದೇ ಸ್ಥಳದಲ್ಲಿ ನಡೆಯಲಿದೆ. ಇದು ಕಿತ್ತಳೆ ಹಣ್ಣುಗಳು ನಾಶವಾಗುವುದನ್ನು ಕಡಿಮೆ ಮಾಡುತ್ತದೆ ಮತ್ತು ರೈತರಿಗೆ ಹೆಚ್ಚಿನ ಲಾಭ ಗಳಿಸಲು ಸಹಕಾರಿಯಾಗಲಿದೆ. ಪತಂಜಲಿ ಕಂಪನಿಯು ಗಾತ್ರ ಅಥವಾ ಗುಣಮಟ್ಟವನ್ನು ಲೆಕ್ಕಿಸದೆ ಎಲ್ಲಾ ರೀತಿಯ ಕಿತ್ತಳೆಗಳನ್ನು ಬಳಸುತ್ತದೆ. ಇದಲ್ಲದೆ, ಸಿಪ್ಪೆ ಮತ್ತು ಕಾಳುಗಳನ್ನು ಸಹ ಬಳಸುವುದರಿಂದ, ವ್ಯರ್ಥವಾಗುವುದನ್ನು ತಡೆಯಲಾಗುತ್ತದೆ. ಆ ಮೂಲಕ ಗರಿಷ್ಠ ಉತ್ಪಾದನೆಯನ್ನು ಸಾಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:19 pm, Sun, 9 March 25