‘ಸುಳ್ಳು ಹೇಳಿ ನಂಬಿಸಬೇಡಿ, ವಿದೇಶಿ ನೆರವಿನಿಂದಲೇ ನೀವು ಪ್ರಧಾನಿಯಾಗಿದ್ದು’; ಮೋದಿ ಕುರಿತು ರಾಹುಲ್ ಗಾಂಧಿ ಆರೋಪ

ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ನೀವು ವಿದೇಶಿ ನೆರವಿನಿಂದಲೇ ಪ್ರಧಾನಿಯಾಗಿದ್ದು. ಅದೇ ವಿದೇಶಿ ಬೆಂಬಲದಿಂದಲೇ ಅಧಿಕಾರದಲ್ಲಿ ಮುಂದುವರಿದಿದ್ದೀರಿ" ಎಂದು ಆರೋಪಿಸಿದ್ದಾರೆ. ಅಲ್ಲದೆ, ಈ ವಿಚಾರವಾಗಿ ಬಹಿರಂಗ ಚರ್ಚೆಗೆ ಬರುವಂತೆ ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದಾರೆ. "ನಿಮ್ಮ ಇಡೀ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿಯರ ನಿಯಂತ್ರಣದಲ್ಲಿದೆ ಮತ್ತು ಅವರಿಂದಲೇ ಬೆಂಬಲಿತವಾಗಿದೆ. ವಿದೇಶಿ ಸೋಶಿಯಲ್ ಮೀಡಿಯಾ ಸಂಸ್ಥೆಗಳು ಸಂಪೂರ್ಣವಾಗಿ ನಿಮ್ಮ ಬೆನ್ನಿಗೆ ನಿಂತಿವೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಸುಳ್ಳು ಹೇಳಿ ನಂಬಿಸಬೇಡಿ, ವಿದೇಶಿ ನೆರವಿನಿಂದಲೇ ನೀವು ಪ್ರಧಾನಿಯಾಗಿದ್ದು; ಮೋದಿ ಕುರಿತು ರಾಹುಲ್ ಗಾಂಧಿ ಆರೋಪ
ರಾಹುಲ್ ಗಾಂಧಿ - ಪ್ರಧಾನಿ ಮೋದಿ
Image Credit source: PTI

Updated on: Nov 02, 2026 | 7:16 PM

ನವದೆಹಲಿ, ನವೆಂಬರ್ 2: ಚುನಾವಣಾ ಆಯೋಗದ ಎಸ್​ಐಆರ್ ಪ್ರಕ್ರಿಯೆಯನ್ನು ವಿರೋಧಿಸಿ ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡಿರುವ ಬೆನ್ನಲ್ಲೇ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ನೀವು ವಿದೇಶಿ ನೆರವಿನಿಂದಲೇ ಪ್ರಧಾನಿಯಾಗಿದ್ದು ಹಾಗೂ ವಿದೇಶಿ ಬೆಂಬಲದಿಂದಲೇ ಅಧಿಕಾರದಲ್ಲಿ ಮುಂದುವರಿದಿದ್ದೀರಿ” ಎಂದು ಆರೋಪಿಸಿರುವ ರಾಹುಲ್ ಗಾಂಧಿ, “ಪ್ರಧಾನಿ ಮೋದಿಯ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿಯರ ನಿಯಂತ್ರಣದಲ್ಲಿದೆ” ಎಂದು ಆರೋಪಿಸಿದ್ದಾರೆ.

ಇಂದು ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರಿಗೆ ಬಹಿರಂಗ ಚರ್ಚೆಗೆ ನೇರ ಸವಾಲು ಹಾಕಿದ್ದಾರೆ. “ಮೋದಿ ಅವರೇ, ಈ ದೇಶಕ್ಕೆ ಸುಳ್ಳು ಹೇಳುವುದನ್ನು ಮೊದಲು ನಿಲ್ಲಿಸಿ. ನೀವು ಪ್ರಧಾನಿಯಾಗಿದ್ದು ವಿದೇಶಿ ನೆರವಿನಿಂದ. ನೀವು ಪ್ರಧಾನಿ ಹುದ್ದೆಯಲ್ಲಿ ಮುಂದುವರಿದಿರುವುದೂ ಅದೇ ವಿದೇಶಿ ಸಹಾಯದಿಂದ. ನಿಮ್ಮ ಆರ್ಥಿಕ ವ್ಯವಸ್ಥೆಯು ಸಂಪೂರ್ಣವಾಗಿ ವಿದೇಶಿಯರಿಂದ ನಿಯಂತ್ರಿಸಲ್ಪಡುತ್ತಿದೆ. ವಿದೇಶಿ ಸೋಶಿಯಲ್ ಮೀಡಿಯಾ ಸಂಸ್ಥೆಗಳು ಸಂಪೂರ್ಣವಾಗಿ ನಿಮ್ಮ ಬೆನ್ನಿಗೆ ನಿಂತಿವೆ” ಎಂದು ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ‘ನೀವೆಂದೂ ಪ್ರಧಾನಿಯಾಗಲ್ಲ’; ಹೈದರಾಬಾದ್‌ನಲ್ಲಿ ರಾಹುಲ್ ಗಾಂಧಿಗೆ ಅಮಿತ್ ಶಾ ತಿರುಗೇಟು

“ಈ ವಿಷಯದ ಕುರಿತು ನಾನು ನಿಮಗೆ ಬಹಿರಂಗ ಚರ್ಚೆಗೆ ಸವಾಲು ಹಾಕುತ್ತಿದ್ದೇನೆ. ಯಾವುದೇ ವೇದಿಕೆ, ಯಾವುದೇ ಸಮಯದಲ್ಲಿ ಬೇಕಾದರೂ ನಾನು ಚರ್ಚೆಗೆ ಸಿದ್ಧವಿದ್ದೇನೆ. ನಿಮಗೆ ಧೈರ್ಯವಿದ್ದರೆ ಬನ್ನಿ. ಆದರೆ ನೀವು ಆ ಧೈರ್ಯ ಮಾಡುವುದಿಲ್ಲ, ಏಕೆಂದರೆ ನಿಮ್ಮ ಬಗ್ಗೆ ನನಗೆ ಸತ್ಯ ತಿಳಿದಿದೆ ಎಂದು ನಿಮಗೆ ಬಹಳ ಭಯವಿದೆ” ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದ್ದಾರೆ.


ಶನಿವಾರ ಗುಜರಾತ್‌ನ ಏಕ್ತಾ ನಗರದಲ್ಲಿ ನಡೆದ ‘ರಾಷ್ಟ್ರೀಯ ಏಕತಾ ದಿವಸ್’ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ವಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ರಾಹುಲ್ ಗಾಂಧಿ ಈ ಪೋಸ್ಟ್ ಮಾಡಿದ್ದಾರೆ. ಶನಿವಾರ ಏಕತಾ ನಗರದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, “ಪ್ರಜಾಪ್ರಭುತ್ವದಲ್ಲಿ ಸರ್ಕಾರದ ನೀತಿಗಳನ್ನು ವಿರೋಧಿಸುವುದು ವಿರೋಧ ಪಕ್ಷಗಳ ಕರ್ತವ್ಯ. ಆದರೆ ವಿಪಕ್ಷಗಳು ಕೇವಲ ತಡೆಗೋಡೆಯಾಗಿ ಮಾರ್ಪಟ್ಟಿರುವುದು ನಮ್ಮ ದುರದೃಷ್ಟ. ಹತಾಶೆ ಮತ್ತು ನಿರಾಸೆಯಿಂದಾಗಿ ಅವರು ದೇಶದ ಅಭಿವೃದ್ಧಿಯ ಹಾದಿಯಲ್ಲಿ ಅಡೆತಡೆಗಳನ್ನು ಸೃಷ್ಟಿಸುತ್ತಿದ್ದಾರೆ. ಇದು ವಿರೋಧವಲ್ಲ, ಕೇವಲ ತಡೆಯೊಡ್ಡುವಿಕೆ. ಇದನ್ನು ಅವರು ತಮ್ಮ ರಾಜಕೀಯ ಕಾರ್ಯಸೂಚಿಯನ್ನಾಗಿ ಮಾಡಿಕೊಂಡಿದ್ದಾರೆ” ಎಂದು ಟೀಕಿಸಿದ್ದರು.

ಇದನ್ನೂ ಓದಿ: ‘ರಾಹುಲ್ ಗಾಂಧಿ ನೇತೃತ್ವದಲ್ಲಿ ಸೋಲಿನ ಶತಕ ಬಾರಿಸಲು ಕಾಂಗ್ರೆಸ್​​ ಸಜ್ಜಾಗಿದೆ’: ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ವ್ಯಂಗ್ಯ

“ಕೆಲವು ಶಕ್ತಿಗಳು ದೇಶವನ್ನು ವಿಭಜಿಸಲು ಗೂಢಾಚಾರಿಕೆಯಲ್ಲಿ ತೊಡಗಿವೆ. ವಿದೇಶಗಳಲ್ಲಿ ಯಾರು ರಹಸ್ಯವಾಗಿ ಯಾರನ್ನು ಭೇಟಿಯಾಗುತ್ತಿದ್ದಾರೆ? ಭಾರತ ವಿರೋಧಿ ಶಕ್ತಿಗಳು ಯಾರನ್ನು ಬೆಂಬಲಿಸುತ್ತಿವೆ? ದೇಶದ ಶತ್ರುಗಳ ಭಾಷೆಯನ್ನು ಯಾರು ಮಾತನಾಡುತ್ತಿದ್ದಾರೆ? ಎಂಬುದು ಗೊತ್ತಿದೆ” ಎಂದು ರಾಹುಲ್ ಗಾಂಧಿಯವರ ವಿದೇಶ ಪ್ರವಾಸಗಳನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ಮೋದಿ ಟೀಕಿಸಿದ್ದರು.

ಮೋದಿ ಅವರ ಈ ಹೇಳಿಕೆಗೆ ತಿರುಗೇಟು ನೀಡಿರುವ ರಾಹುಲ್ ಗಾಂಧಿ, ವಿದೇಶಿ ನೆರವಿನಿಂದಲೇ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟ ನಡೆಸಿದ ಬೃಹತ್ ಸಮಾವೇಶದ ಮರುದಿನವೇ ರಾಹುಲ್ ಗಾಂಧಿ ಈ ಸವಾಲೆಸೆದಿದ್ದಾರೆ. ಆ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಚುನಾವಣಾ ಆಯೋಗದ ಎಸ್​ಐಆರ್​ ಪ್ರಕ್ರಿಯೆಯಲ್ಲಿನ ಅಕ್ರಮಗಳ ಮೂಲಕ ಕೋಟ್ಯಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ಆರೋಪಿಸಿದ್ದರು. ಅಲ್ಲದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಭವಿಷ್ಯದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us