ದೆಹಲಿಯಲ್ಲಿ ಮುಂದುವರೆದ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಪ್ರತಿಭಟನೆ
ದೆಹಲಿಯಲ್ಲಿ ಕಾಕ್ರೋಚ್ ಜನತಾ ಪಾರ್ಟಿ (CJP) ಪ್ರತಿಭಟನೆ ತೀವ್ರಗೊಂಡಿದ್ದು, ಪೊಲೀಸರೊಂದಿಗೆ ಘರ್ಷಣೆ, ಬಂಧನಗಳಿಗೆ ಕಾರಣವಾಗಿದೆ. ನೀಟ್ ಪೇಪರ್ ಸೋರಿಕೆ ಹೊಣೆ ಹೊತ್ತು ಸಚಿವರ ರಾಜೀನಾಮೆ ಹಾಗೂ ಸೋನಮ್ ವಾಂಗ್ಚುಕ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನಾಕಾರರು ತಮ್ಮ ಹೋರಾಟ ಮುಂದುವರಿಸಿದ್ದಾರೆ. ಘಟನೆಗಳ ನಂತರ ಕೇಂದ್ರ ಸರ್ಕಾರ ಮಾತುಕತೆ ಆರಂಭಿಸಿದೆ. ಸಿಜೆಪಿ ಲಿಖಿತ ಭರವಸೆಗಾಗಿ ಕಾಯುತ್ತಿದೆ.

ನವದೆಹಲಿ, ಜುಲೈ 21: ಕಾಕ್ರೋಚ್ ಜನತಾ ಪಾರ್ಟಿ(Cockroach Janta Party)ಯ ಪ್ರತಿಭಟನೆ ಮಂಗಳವಾರ ಕೂಡಾ ಮುಂದುವರೆದಿದೆ. ಜುಲೈ 20ರಂದು ನಡೆದ ಭಾರಿ ನೂಕಾಟ, ತಳ್ಳಾಟ, ಲಾರ್ಟಿಚಾರ್ಜ್ ಬಳಿಕವೂ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಪೊಲೀಸರು ನಿನ್ನೆ ಜಂತರ್ ಮಂತರ್‌ನಲ್ಲಿದ್ದ ಟೆಂಟ್ ಹಾಗೂ ವೇದಿಕೆಗಳನ್ನು ತೆರವುಗೊಳಿಸಿದ್ದರಾದರೂ, ಪ್ರತಿಭಟನಾಕಾರರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಮರಳಿ ತಮ್ಮ ಪ್ರತಿಭಟನೆಯನ್ನು ಮುಂದುವರರೆಸಿದ್ದಾರೆ.
ಸಾಧ್ಯವಿರುವ ಎಲ್ಲೆಡೆ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ (RAF) ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸ್ ಪಡೆ ತೀವ್ರ ಕಟ್ಟೆಚ್ಚರ ವಹಿಸಿದೆ. ಸಂಸತ್ತಿನ ಸಮೀಪಕ್ಕೆ ಬಂದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿಪ್ರಹಾರ ಹಾಗೂ ಅಶ್ರುವಾಯು ಪ್ರಯೋಗಿಸಿದರು. ಈ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಪೊಲೀಸರು ಹಾಗೂ 60 ಕ್ಕೂ ಹೆಚ್ಚು ಪ್ರತಿಭಟನಾಕಾರರು ಗಾಯಗೊಂಡಿದ್ದಾರೆ.
ಪೊಲೀಸರ ಮೇಲೆ ದಾಳಿ ಮತ್ತು ಆಸ್ತಿ ಪಾಸ್ತಿ ಹಾನಿ ಆರೋಪದ ಮೇಲೆ ದೆಹಲಿ ಪೊಲೀಸರು 70 ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದು, ಅಪರಿಚಿತರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಉದ್ವಿಗ್ನತೆ ಹೆಚ್ಚುತ್ತಿದ್ದಂತೆ ಕೇಂದ್ರ ಸರ್ಕಾರ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಮುಂದಾಗಿದೆ. ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಸಿಜೆಪಿ ವಕ್ತಾರರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ತಮ್ಮ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದಾರೆ.
ಮತ್ತಷ್ಟು ಓದಿ: ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು
ಬೇಡಿಕೆಗಳೇನು?
-ಸೋನಮ್ ವಾಗ್ಚುಕ್ ಅವರನ್ನು ಯಾವುದೇ ನಿರ್ಬಂಧವಿಲ್ಲದೆ ತಕ್ಷಣ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು.
-ನೀಟ್ ಪೇಪರ್ ಸೋರಿಕೆ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು.
-ನೀಟ್ (NEET) ಪೇಪರ್ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಅಭ್ಯರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು.
ಸಭೆಯ ನಂತರ ಮಾತನಾಡಿದ ಸಿಜೆಪಿ ವಕ್ತಾರರು, ಸಚಿವರು ಬೇಡಿಕೆಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಆದರೆ ಲಿಖಿತ ಭರವಸೆ ಸಿಗುವವರೆಗೆ ನಮ್ಮ ಶಾಂತಿಯುತ ಪ್ರತಿಭಟನೆ ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಮುಂದುವರಿಕೆ ಇನ್ನೊಂದೆಡೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಘೋಷಿಸಿದ್ದಾರೆ.
ಅವರ ಪತ್ನಿ ಗೀತಾಂಜಲಿ ಆಂಗ್ಮೋ ಸೋನಮ್ ಅವರ ಕೈಬರಹದ ಸಂದೇಶವನ್ನು ಹಂಚಿಕೊಂಡಿದ್ದು, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ಯುವಕರ ಮೇಲಿನ ಪೋಲಿಸ್ ಕ್ರೌರ್ಯವನ್ನು ನೋಡಿ ಮನನೊಂದಿದ್ದೇನೆ. ಯುವ ನಾಯಕರಿಗೆ ಸಂಸದರನ್ನು ಸಂಸತ್ತಿನಲ್ಲಿ ಅಥವಾ ಆಸ್ಪತ್ರೆಯಲ್ಲಿ ಭೇಟಿಯಾಗಲು ಅವಕಾಶ ನೀಡುವವರೆಗೆ ನನ್ನ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇನೆ ಎಂದು ವಾಂಗ್ಚುಕ್ ಹೇಳಿರುವುದಾಗಿ ಆ ಸಂದೇಶದಲ್ಲಿ ಬರೆಯಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




