AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

ದೆಹಲಿಯಲ್ಲಿ ಇಂದು ಮುಂಜಾನೆಯಿಂದ ಸಿಜೆಪಿ (ಕಾರ್ಕೋಚ್ ಜನತಾ ಪಾರ್ಟಿ) ನಡೆಸುತ್ತಿರುವ ಚಲೋ ಸಂಸದ್ ಪ್ರತಿಭಟನೆ ನಿರೀಕ್ಷೆಗೂ ಮೀರಿದ ಬೆಂಬಲ ಪಡೆದಿದೆ. 12 ಸಾವಿರಕ್ಕೂ ಅಧಿಕ ಜನರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರನ್ನು ನಿಯತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದಾರೆ. ಇಂದು ಸಂಜೆ ಕೊನೆಗೂ ಸಿಜೆಪಿ ನಾಯಕರು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರನ್ನು ಭೇಟಿಯಾಗಿದ್ದು, 3 ಬೇಡಿಕೆಗಳ ಪತ್ರವನ್ನು ಸಲ್ಲಿಸಿದ್ದಾರೆ. ಆ ಬೇಡಿಕೆಗಳು ಯಾವುವು? ಎಂಬ ಮಾಹಿತಿ ಇಲ್ಲಿದೆ.

ಕೇಂದ್ರ ಸಚಿವ ಜೆ.ಪಿ. ನಡ್ಡಾಗೆ 3 ಬೇಡಿಕೆ ಸಲ್ಲಿಸಿದ ಸಿಜೆಪಿ ನಾಯಕರು; ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು
Cjp Leaders Meets Jp NaddaImage Credit source: PTI
ಸುಷ್ಮಾ ಚಕ್ರೆ
|

Updated on:Jul 20, 2026 | 5:41 PM

Share

ಮುಖ್ಯಾಂಶಗಳು

  • ಸಿಜೆಪಿ ವಕ್ತಾರರಿಂದ ಕೇಂದ್ರ ಸಚಿವ ಜೆಪಿ ನಡ್ಡಾ ಭೇಟಿ
  • ಪ್ರತಿಭಟನಾಕಾರರ ಪರವಾಗಿ 3 ಪ್ರಮುಖ ಬೇಡಿಕೆಗಳ ಸಲ್ಲಿಕೆ
  • ಕೇಂದ್ರ ಸರ್ಕಾರಕ್ಕೆ ನೀಡಿದ ಮನವಿ ಪತ್ರದಲ್ಲೇನಿದೆ?

ನವದೆಹಲಿ, ಜುಲೈ 20: ಸಂಸತ್ ಭವನದಲ್ಲಿ ಇಂದಿನಿಂದ ಮುಂಗಾರು ಅಧಿವೇಶನ (Parliament Monsoon Session) ಶುರುವಾಗಿದೆ. ಇದೇ ದಿನ ದೆಹಲಿಯಲ್ಲಿ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು (NEET UG Paper Leak) ಖಂಡಿಸಿ ಸಿಜೆಪಿ ನೇತೃತ್ವದಲ್ಲಿ ಚಲೋ ಸಂಸದ್ (Chalo Sansad) ಎಂಬ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಸಾವಿರಾರು ಯುವಕ-ಯುವತಿಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ಜಂತರ್​ಮಂತರ್​​ನಲ್ಲಿ ಬೃಹತ್ ರ್ಯಾಲಿ ಆಯೋಜಿಸಲಾಗಿದೆ. ಈ ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ಒಂದೆಡೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಜೊತೆ ಮೂರೂವರೆ ಗಂಟೆಗಳ ಕಾಲ ಮಹತ್ವದ ಸಭೆ ನಡೆಸಿದ್ದಾರೆ. ಇನ್ನೊಂದೆಡೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಅವರನ್ನು ಭೇಟಿಯಾದ ಸಿಜೆಪಿ ನಾಯಕರು ತಮ್ಮ ಬೇಡಿಕೆಗಳ ಪತ್ರವನ್ನು ಸಲ್ಲಿಸಿದ್ದಾರೆ.

ಕೊನೆಗೂ ಪ್ರತಿಭಟನಾಕಾರರ ಜೊತೆ ಮಾತುಕತೆಗೆ ಒಪ್ಪಿರುವ ಕೇಂದ್ರ ಸರ್ಕಾರ ಸಿಜೆಪಿ ವಕ್ತಾರರು ಸಲ್ಲಿಸಿದ ಮನವಿ ಪತ್ರವನ್ನು ಸ್ವೀಕರಿಸಿದೆ. ಮತ್ತೊಂದೆಡೆ, ನೀಟ್ ಪರೀಕ್ಷೆ ಹಗರಣದ ಮಾನಸಿಕ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ ನೀಟ್ ವಿದ್ಯಾರ್ಥಿಯೊಬ್ಬರ ತಂದೆಯ ವಿಶೇಷ ವಿನಂತಿಯ ಮೇರೆಗೆ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಅವರು ತಮ್ಮ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಕೊನೆಗೊಳಿಸಿದ್ದಾರೆ.

ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ನೀಟ್, ರಾಮಮಂದಿರ ಹಗರಣಗಳ ಬಗ್ಗೆ ಚರ್ಚೆಗೆ ವಿಪಕ್ಷಗಳ ಪಟ್ಟು, ಉಭಯ ಸದನಗಳಲ್ಲಿ ತೀವ್ರ ಗದ್ದಲ

ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರನ್ನು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿದ ನಂತರ ಜುಲೈ 18ರಿಂದ ಅಭಿಜೀತ್ ಉಪವಾಸ ಆರಂಭಿಸಿದ್ದರು. ವಾಂಗ್ಚುಕ್ ಅವರ ಮನವಿ ಮತ್ತು ಮೃತ ವಿದ್ಯಾರ್ಥಿಯ ತಂದೆಯ ಮಧ್ಯಸ್ಥಿಕೆಯ ನಂತರ ಅವರು ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ. ಆದರೆ, ಶಿಕ್ಷಣ ವ್ಯವಸ್ಥೆಯ ಸುಧಾರಣೆಗಾಗಿ ತಮ್ಮ ಹೋರಾಟ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಿಜೆಪಿಯ 3 ಬೇಡಿಕೆಗಳೇನು?:

ಸಿಜೆಪಿ (CJP) ವಕ್ತಾರರಾದ ಸೌರವ್ ದಾಸ್ ಮತ್ತು ಮತ್ತೊಬ್ಬ ವಕ್ತಾರರಾದ ಅಶುತೋಷ್ ರಂಕಾ ಅವರು ಸಚಿವ ಜೆ.ಪಿ. ನಡ್ಡಾ ಅವರ ನಿವಾಸದಲ್ಲಿ ಸುಮಾರು 10 ನಿಮಿಷಗಳ ಕಾಲ ಭೇಟಿಯಾಗಿ ಬೇಡಿಕೆಗಳ ಪತ್ರವನ್ನು ಹಸ್ತಾಂತರಿಸಿದ್ದಾರೆ. ಸಿಜೆಪಿಯ 3 ಪ್ರಮುಖ ಬೇಡಿಕೆಗಳೆಂದರೆ,

  • ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
  • ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚುಕ್ ಅವರಿಗೆ ಆಸ್ಪತ್ರೆಯಿಂದ ಜಂತರ್ ಮಂತರ್​ನಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಗೆ ಆಗಮಿಸಲು ಅನುಮತಿ ನೀಡಬೇಕು.
  • ನೀಟ್ ಪರೀಕ್ಷೆ ಹಗರಣ ಹಾಗೂ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ನೀಡಬೇಕು.

ಜೆಪಿ ನಡ್ಡಾ ಹೇಳಿದ್ದೇನು?:

ಪ್ರತಿಭಟನಾಕಾರರು ಮಾತುಕತೆಗೆ ಮುಂದಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಸಿಜೆಪಿ (CJP) ನಾಯಕರ ನಡುವಿನ ಸಭೆಯು ಅತ್ಯಂತ ಸೌಹಾರ್ದಯುತ ವಾತಾವರಣದಲ್ಲಿ ನಡೆದಿದೆ ಎಂದು ಕೇಂದ್ರ ಸಚಿವ ಜೆ.ಪಿ. ನಡ್ಡಾ ತಿಳಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, “ಇಂದು ಬೆಳಿಗ್ಗೆಯಿಂದಲೇ ಆರಂಭವಾದ ಚರ್ಚೆಯು ಸತತ ಹಲವು ಗಂಟೆಗಳ ಕಾಲ ಮುಂದುವರಿದಿತ್ತು. ಪ್ರತಿಭಟನಾಕಾರರ ಕಡೆಯಿಂದಲೇ ಇಂದು ಬೆಳಿಗ್ಗೆ ಮಾತುಕತೆಗಾಗಿ ಮೊದಲ ಪ್ರಸ್ತಾವನೆ ಬಂದಿತ್ತು. ಇಂದು ಬೆಳಿಗ್ಗೆ 11.50ಕ್ಕೆ ಆರಂಭಿಕ ಮೌಖಿಕ ಚರ್ಚೆಯೊಂದಿಗೆ ಮಾತುಕತೆ ಶುರುವಾಯಿತು. ನಂತರ ಪ್ರತಿಭಟನಾಕಾರರ ನಿಯೋಗದೊಂದಿಗೆ ಸುದೀರ್ಘ ಸಭೆ ನಡೆಯಿತು. ಇಂದು ಸಂಜೆ 4 ಗಂಟೆಗೆ ಪ್ರತಿಭಟನಾಕಾರರು ತಮ್ಮ ಬೇಡಿಕೆಗಳನ್ನೊಳಗೊಂಡ ಅಧಿಕೃತ ಲಿಖಿತ ಮನವಿ ಪತ್ರವನ್ನು ನನಗೆ ನೀಡಿದ್ದಾರೆ.” ಎಂದು ನಡ್ಡಾ ಹೇಳಿದ್ದಾರೆ.

ಇದನ್ನೂ ಓದಿ: ಭಾರತವನ್ನು ಅಸ್ಥಿರಗೊಳಿಸುವ ಶಕ್ತಿಗಳ ಬಿ-ಟೀಮ್; ಸಿಜೆಪಿ ವಿರುದ್ಧ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ

ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವಾದ ಇಂದು ಸಾವಿರಾರು ವಿದ್ಯಾರ್ಥಿಗಳು, ಯುವ ಸಂಘಟನೆಗಳು ಮತ್ತು ಬೆಂಬಲಿಗರು ಜಂತರ್ ಮಂತರ್‌ನಲ್ಲಿ ಒಟ್ಟಾಗಿ ಸೇರಿ ಸಂಸತ್ತಿನತ್ತ ‘ಚಲೋ ಸಂಸದ್’ ಮೆರವಣಿಗೆ ನಡೆಸಿದ್ದರಿಂದ ಇಡೀ ದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಏನಿದು ಕಾಕ್ರೋಚ್ ಜನತಾ ಪಾರ್ಟಿ (CJP)?:

ಸಾಮಾಜಿಕ ಜಾಲತಾಣಗಳಲ್ಲಿ ಕೇವಲ ಒಂದು ರಾಜಕೀಯ ವ್ಯಂಗ್ಯಚಿತ್ರ ಅಥವಾ ವಿಡಂಬನೆಯಾಗಿ ಸೃಷ್ಟಿಯಾಗಿದ್ದ ಈ ಗುಂಪನ್ನು ಬೋಸ್ಟನ್ ವಿಶ್ವವಿದ್ಯಾಲಯದ ಪಬ್ಲಿಕ್ ರಿಲೇಶನ್ಸ್ ಪದವೀಧರರಾದ ಅಭಿಜೀತ್ ದಿಪ್ಕೆ ಅವರು ಸ್ಥಾಪಿಸಿದ್ದಾರೆ. ಇವರು ಈ ಹಿಂದೆ ಆಮ್ ಆದ್ಮಿ ಪಾರ್ಟಿಯ (AAP) ಸೋಷಿಯಲ್ ಮೀಡಿಯಾ ತಂಡದಲ್ಲೂ ಕೆಲಸ ಮಾಡಿದ್ದರು ಎಂಬುದು ಗಮನಾರ್ಹ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:31 pm, Mon, 20 July 26

Follow Us