ಸಿಜೆಪಿ ಪ್ರತಿಭಟನೆ ಹಿನ್ನೆಲೆ ದೆಹಲಿಯಲ್ಲಿ ಬಿಗಿ ಭದ್ರತೆ: 45 ಮೆಟ್ರೋ ನಿಲ್ದಾಣ ಬಂದ್, 75 ರೈಲು ರದ್ದು; ಇಂಟರ್ನೆಟ್‌ಗೂ ನಿರ್ಬಂಧ
ಸಿಜೆಪಿ ಹಾಗೂ ವಿರೋಧ ಪಕ್ಷಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ-ನಿರ್ಗಮನ ಬಂದ್, 75 ರೈಲುಗಳ ರದ್ದು ಹಾಗೂ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ನಿರ್ಬಂಧ ಘೋಷಿಸಲಾಗಿದೆ. ಮಧ್ಯ ದೆಹಲಿಯಲ್ಲಿ BNSS ಸೆಕ್ಷನ್ 163 ಜಾರಿಗೊಳಿಸಲಾಗಿದೆ. ಜನಪಥ್, ಕರ್ತವ್ಯ ಪಥ್ ಕ್ರಾಸಿಂಗ್ ಸುತ್ತಮುತ್ತ ಇಂಟರ್ನೆಟ್ ಬಂದ್ಗೆ ಆದೇಶಿಸಲಾಗಿದೆ.

ಮುಖ್ಯಾಂಶಗಳು
- ದೆಹಲಿಯಲ್ಲಿ 45 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ನಿರ್ಬಂಧ
- 75 ರೈಲುಗಳ ರದ್ದು, ಹತ್ತು ಸಂಚಾರ ಗಂಟೆ ಸ್ಥಗಿತ
- ಜನಪಥ್–ಕರ್ತವ್ಯ ಪಥ್ ಕ್ರಾಸಿಂಗ್ ಸುತ್ತಮುತ್ತ ರಾತ್ರಿವರೆಗೆ ಇಂಟರ್ನೆಟ್ ಬಂದ್
ನವದೆಹಲಿ, ಅಕ್ಟೋಬರ್ 10: ಕಾಕ್ರೋಚ್ ಜನತಾ ಪಾರ್ಟಿ (CJP) ಸೇರಿದಂತೆ ವಿರೋಧ ಪಕ್ಷಗಳು ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಪ್ರತಿಭಟನೆಯ ಪರಿಣಾಮವಾಗಿ ಮೆಟ್ರೋ ಸಂಚಾರ, ರೈಲು ಸೇವೆ, ಇಂಟರ್ನೆಟ್ ಸೇರಿದಂತೆ ಹಲವು ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ. ದೆಹಲಿ ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ಬಂದ್ ಮಾಡುವುದಾಗಿ ಘೋಷಿಸಲಾಗಿದೆ. ರೈಲ್ವೆ ಇಲಾಖೆಯು 75 ರೈಲುಗಳನ್ನು ರದ್ದುಗೊಳಿಸಿದ್ದು, ಕೆಲವು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂಟರ್ನೆಟ್ ಸೇವೆಯನ್ನೂ ಸ್ಥಗಿತಗೊಳಿಸಲಾಗುತ್ತದೆ.
23 ಸಾವಿರ ಭದ್ರತಾ ಸಿಬ್ಬಂದಿ ನಿಯೋಜನೆ
ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದೆ. ಅಕ್ಟೋಬರ್ 8ರಿಂದ 12ರವರೆಗೆ ಸುಮಾರು 23 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವ ನಿರೀಕ್ಷೆಯಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲು ಗೃಹ ಸಚಿವಾಲಯ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ ಜಿಲ್ಲೆಯನ್ನು 20 ವಲಯಗಳಾಗಿ ವಿಂಗಡಿಸಲಾಗಿದ್ದು, ಪ್ರಮುಖ ಸ್ಥಳಗಳಲ್ಲಿ ಬಹುಹಂತದ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಸಿಸಿಟಿವಿ ಮತ್ತು ಮುಖ ಗುರುತಿಸುವ ತಂತ್ರಜ್ಞಾನ ಹೊಂದಿರುವ ಕ್ಯಾಮೆರಾಗಳ ಮೂಲಕ ಜನರ ಸಂಚಾರದ ಮೇಲೆ ನಿಗಾ ಇರಿಸಲಾಗುತ್ತದೆ.
ದೆಹಲಿ-ನೋಯ್ಡಾ ಗಡಿಭಾಗದಲ್ಲೂ ಭದ್ರತೆ ಹೆಚ್ಚಿಸಲಾಗಿದೆ. ಚಿಲ್ಲಾ ಗಡಿಯಲ್ಲಿ ದೆಹಲಿ ಮತ್ತು ನೋಯ್ಡಾ ಪೊಲೀಸರ ಜೊತೆಗೆ ಗಡಿ ಭದ್ರತಾ ಪಡೆ (BSF) ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ. ರೈಲು ನಿಲ್ದಾಣಗಳು, ಬಸ್ ಟರ್ಮಿನಲ್‌ಗಳು ಮತ್ತು ಪ್ರಮುಖ ರಸ್ತೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
45 ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ-ನಿರ್ಗಮನ ಬಂದ್
ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋದ 45 ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನವನ್ನು ನಿರ್ಬಂಧಿಸುವುದಾಗಿ ಘೋಷಿಸಲಾಗಿದೆ. ಯೆಲ್ಲೋ, ರೆಡ್, ಬ್ಲೂ, ಪಿಂಕ್, ವೈಲೆಟ್ ಮತ್ತು ಮೆಜೆಂಟಾ ಮಾರ್ಗಗಳ ನಿಲ್ದಾಣಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಏರ್‌ಪೋರ್ಟ್ ಮಾರ್ಗದ ಶಿವಾಜಿ ಸ್ಟೇಡಿಯಂ ನಿಲ್ದಾಣವನ್ನೂ ಮುಚ್ಚಲಾಗುತ್ತದೆ ಎಂದು ತಿಳಿಸಲಾಗಿದೆ.
ಇದಲ್ಲದೆ, ನಮೋ ಭಾರತ್ ರೈಲು ಸೇವೆಯ ಎರಡು ನಿಲ್ದಾಣಗಳನ್ನು ಮುಚ್ಚಲಾಗುತ್ತದೆ. ದೆಹಲಿಯಲ್ಲಿ ಮೆಟ್ರೋ ಮೂಲಕ ಪ್ರಯಾಣಿಸುವವರು ಹೊರಡುವ ಮುನ್ನ ತಮ್ಮ ಮಾರ್ಗ ಮತ್ತು ನಿಲ್ದಾಣದ ಸ್ಥಿತಿಯನ್ನು ಪರಿಶೀಲಿಸುವುದು ಸೂಕ್ತ.
75 ರೈಲುಗಳು ರದ್ದು; 10 ಗಂಟೆ ರೈಲು ಸಂಚಾರ ಸ್ಥಗಿತ
ಪ್ರಯಾಣಿಕರ ದಟ್ಟಣೆ ಮತ್ತು ಸಂಚಾರ ಅಡಚಣೆ ಉಂಟಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ರೈಲ್ವೆ ಪ್ರಮುಖ ನಿರ್ಧಾರ ಕೈಗೊಂಡಿದೆ. ಶನಿವಾರ ಬೆಳಗ್ಗೆ 4ರಿಂದ ಮಧ್ಯಾಹ್ನ 2ರವರೆಗೆ ಹೊಸ ದೆಹಲಿ ಮತ್ತು ಹಜರತ್ ನಿಜಾಮುದ್ದೀನ್ ರೈಲು ನಿಲ್ದಾಣಗಳಲ್ಲಿ 10 ಗಂಟೆಗಳ ಕಾಲ ರೈಲು ಸೇವೆಯನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಲಾಗಿದೆ.
ಹೊಸ ದೆಹಲಿ, ಹಜರತ್ ನಿಜಾಮುದ್ದೀನ್ ಮತ್ತು ತಿಲಕ್ ಬ್ರಿಡ್ಜ್ ನಿಲ್ದಾಣಗಳಿಗೆ ಸಂಬಂಧಿಸಿದ 75 ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ ಅವಧಿಯಲ್ಲಿ ಸಂಚರಿಸಬೇಕಿದ್ದ ಕೆಲವು ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ಅವುಗಳ ಮೂಲ ನಿಲ್ದಾಣಗಳಿಂದಲೇ ರದ್ದುಗೊಳಿಸಲಾಗಿದೆ. ರೈಲಿನಲ್ಲಿ ಪ್ರಯಾಣಿಸುವವರು ತಮ್ಮ ರೈಲಿನ ವೇಳಾಪಟ್ಟಿ ಮತ್ತು ಸಂಚಾರ ಸ್ಥಿತಿಯನ್ನು ಮುಂಚಿತವಾಗಿ ಪರಿಶೀಲಿಸಬೇಕು.
ಮಧ್ಯ ದೆಹಲಿಯಲ್ಲಿ ಸೆಕ್ಷನ್ 163 ಜಾರಿ
ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಧ್ಯ ದೆಹಲಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNSS) ಸೆಕ್ಷನ್ 163 ಜಾರಿಗೊಳಿಸಲಾಗಿದೆ. ಈ ನಿಯಮದಡಿ ಹಿಂಸಾಚಾರ, ಗಲಭೆ, ಕಾನೂನುಬಾಹಿರ ಗುಂಪುಗೂಡುವಿಕೆ ಮತ್ತು ಸಾರ್ವಜನಿಕ ಶಾಂತಿಗೆ ಧಕ್ಕೆಯಾಗುವ ಸಾಧ್ಯತೆಗಳನ್ನು ತಡೆಯಲು ಅಧಿಕಾರಿಗಳು ತಾತ್ಕಾಲಿಕ ನಿರ್ಬಂಧಗಳನ್ನು ವಿಧಿಸಬಹುದು.
4 ಕಿ.ಮೀ. ವ್ಯಾಪ್ತಿಯಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತಕ್ಕೆ ಆದೇಶ
ಜನಪಥ್–ಕರ್ತವ್ಯ ಪಥ್ ಕ್ರಾಸಿಂಗ್ ಸುತ್ತಮುತ್ತ ಸುಮಾರು ನಾಲ್ಕು ಕಿಲೋಮೀಟರ್ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 10 ಗಂಟೆಯವರೆಗೆ ಇಂಟರ್ನೆಟ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೆ, ಕೆಲವು ಮದ್ಯದಂಗಡಿಗಳು ಮತ್ತು ಭಾಗೀರಥ್ ಪ್ಯಾಲೇಸ್ ಮಾರುಕಟ್ಟೆಯನ್ನೂ ಮುಚ್ಚಲಾಗುತ್ತದೆ ಎಂದು ತಿಳಿಸಲಾಗಿದೆ.
ಮತದಾರರ ಪಟ್ಟಿ ಪರಿಷ್ಕರಣೆ ವಿರುದ್ಧ ಪ್ರತಿಭಟನೆ
ವಿರೋಧ ಪಕ್ಷಗಳು ಅಕ್ಟೋಬರ್ 10ರಂದು ಜಂತರ್ ಮಂತರ್‌ನಲ್ಲಿ ಯುವಜನರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮತ್ತು ಈ ಸಂಬಂಧ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ಆಯೋಜಿಸಲಾಗಿದೆ. ಚುನಾವಣೆಯಲ್ಲಿ ‘ಮತಗಳ್ಳತನ’ ನಡೆದಿದೆ ಎಂಬ ಆರೋಪವನ್ನೂ ಪ್ರತಿಭಟನಾಕಾರರು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಣೆ: ತಡವಾಗಿ ಮಾಹಿತಿ ನೀಡಿದ್ದೇ ಕಾರಣ ಎಂದ ಪೊಲೀಸರು
ಮುಖ್ಯವಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಕರೆ ನೀಡಿದೆ. ವಿಶೇಷವೆಂದರೆ ಈ ಪ್ರತಿಭಟನೆಗೆ ಆಡಳಿತದಿಂದ ಅನುಮತಿ ದೊರೆತಿಲ್ಲ. ಆದಾಗ್ಯೂ ಪ್ರತಿಭಟನೆ ನಡೆಸಲು ಸಿಜೆಪಿ ಪಟ್ಟು ಹಿಡಿದಿದ್ದು, ಮುಂದಿನ ನಡೆ ಕುತೂಹಲ ಮೂಡಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




