ರಾಜಕಾರಣಿಗಳೊಂದಿಗೆ ಮಲಗಲು ಒತ್ತಾಯಿಸುತ್ತಿದ್ದ; ಡಿಎಂಕೆ ಕಾರ್ಯಕರ್ತನ ಹೆಂಡತಿಯಿಂದ ಸ್ಫೋಟಕ ಹೇಳಿಕೆ
ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಯುವ ಘಟಕದ ಪದಾಧಿಕಾರಿ ದೇವಸೇಯಲ್ ಅವರ ಪತ್ನಿ ತನ್ನ ಗಂಡನ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದು, 20 ವರ್ಷದ ಮಹಿಳೆಯರನ್ನು ರಾಜಕಾರಣಿಗಳೊಂದಿಗೆ ಮಲಗುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ತನ್ನ ಪತಿ ತನ್ನನ್ನು ಹಿಂಸಿಸುತ್ತಾನೆ. ಈ ಬಗ್ಗೆ ಪೊಲೀಸರಿಗೆ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಆ ಯುವತಿ ಆರೋಪಿಸಿದ್ದಾರೆ. ಈ ಕುರಿತು ಎಐಎಡಿಎಂಕೆ ತನಿಖೆಗೆ ಒತ್ತಾಯಿಸಿದೆ.

ಚೆನ್ನೈ, ಮೇ 20: ತಮಿಳುನಾಡಿನ ರಾಣಿಪೇಟೆ ಜಿಲ್ಲೆಯ ಅರಕ್ಕೋಣಂನ ಡಿಎಂಕೆ ಕಾರ್ಯಕರ್ತನಾಗಿರುವ ತನ್ನ ಪತಿಯ ವಿರುದ್ಧ ಚಿತ್ರಹಿಂಸೆ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ ಆತನ ಪತ್ನಿ ತಮಿಳುನಾಡಿನಲ್ಲಿ ಭಾರಿ ರಾಜಕೀಯ ವಿವಾದವನ್ನು ಹುಟ್ಟುಹಾಕಿದ್ದಾರೆ. “ಡಿಎಂಕೆ ಕಾರ್ಯಕರ್ತನಾಗಿರುವ ನನ್ನ ಗಂಡ ಮಹಿಳೆಯರ ಮೇಲೆ ದೌರ್ಜನ್ಯ ಎಸಗುತ್ತಾನೆ. 20 ವರ್ಷದ ಹುಡುಗಿಯರನ್ನು ರಾಜಕಾರಣಿಗಳೊಂದಿಗೆ ಮಲಗುವಂತೆ ಚಿತ್ರಹಿಂಸೆ ನೀಡುವುದೇ ಅವನ ಕೆಲಸ. ಅವನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ನಾನು ದೂರು ನೀಡಿದಾಗ ಅವನು ನನ್ನನ್ನು ತುಂಡು ತುಂಡು ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅವನು ನನಗೆ ಕಾರಿನಲ್ಲಿ ಚಿತ್ರಹಿಂಸೆ ನೀಡಿ ಅವನು ತೋರಿಸಿದ ಪುರುಷರೊಂದಿಗೆ ಮಲಗಲು ಹೇಳಿದನು. ನಾನು ನನ್ನ ಮನೆಯಿಂದ ಹೊರಬರಲು ಸಹ ಸಾಧ್ಯವಿಲ್ಲ. ನಾನು ಪರೀಕ್ಷೆ ಬರೆಯಲು ಕೂಡ ಸಾಧ್ಯವಾಗಲಿಲ್ಲ. ಅನೇಕ ಯುವತಿಯರನ್ನು ರಾಜಕಾರಣಿಗಳ ಜೊತೆ ಮಲಗಲು ಆತ ಒತ್ತಾಯಿಸುತ್ತಿದ್ದಾನೆ” ಎಂದು ಆಕೆ ಹೇಳಿದ್ದಾರೆ. ಇದು ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ನನ್ನ ಪತಿ 20 ವರ್ಷದ ಇತರ ಹುಡುಗಿಯರನ್ನು “ರಾಜಕಾರಣಿಗಳೊಂದಿಗೆ ಮಲಗಲು” ಒತ್ತಾಯಿಸಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ. ನನ್ನ ಗಂಡ ನನಗೂ ಹಲವು ಪುರುಷರೊಂದಿಗೆ ಮಲಗಲು ಒತ್ತಾಯಿಸಿದ್ದಾನೆ. ಆತನ ದೌರ್ಜನ್ಯ ತಡೆಯಲಾಗದೆ ನಾನು ಆತ್ಮಹತ್ಯೆಗೆ ಪ್ರಯತ್ನಿಸಿದ್ದೆ ಎಂದು ಅವರು ಆರೋಪಿಸಿದ್ದಾರೆ. “ನಾನು ಕಾಲೇಜಿಗೆ ಹೋಗುವ ದಾರಿಯಲ್ಲಿ ಅವನು ನನ್ನ ಮೇಲೆ ಹಲ್ಲೆ ಮಾಡಿದನು. ನನ್ನನ್ನು ಗಾಯಗೊಳಿಸಿದನು ಮತ್ತು ನನ್ನ ಮೊಬೈಲನ್ನು ತುಂಡು ಮಾಡಿದನು. ನಿನಗೆ ಗೊತ್ತಿರುವ ವಿಚಾರವನ್ನು ನೀನು ಯಾರಿಗಾದರೂ ಹೇಳಿದರೆ ಏನೂ ಪ್ರಯೋಜನವಿಲ್ಲ. ನೀನು ದೂರು ನೀಡಿದರೆ ಏನೂ ಆಗುವುದಿಲ್ಲ. ಏಕೆಂದರೆ ಪೊಲೀಸರು ನನ್ನನ್ನು ಬೆಂಬಲಕ್ಕೆ ಇದ್ದಾರೆ’ ಎಂದು ಅವನು ಹೇಳುತ್ತಿದ್ದ. ಅವನ ಕಾರಣದಿಂದಾಗಿ ನಾನು ವಿಷ ಸೇವಿಸಲು ಪ್ರಯತ್ನಿಸಿದೆ” ಎಂದು ಆಕೆ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮಿಳುನಾಡಿನ ಪ್ರಮುಖ ವಿರೋಧ ಪಕ್ಷವಾದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಈ ಪ್ರಕರಣದ ಬಗ್ಗೆ ತುರ್ತು ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.
ಇದನ್ನೂ ಓದಿ: ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ; ವಕ್ಫ್ ಕಾಯ್ದೆ ಕುರಿತು ಸಿಜೆಐ ಮಹತ್ವದ ಹೇಳಿಕೆ
ಅರಕ್ಕೋಣಂ ಜಿಲ್ಲೆಯ 20 ವರ್ಷದ ಕಾಲೇಜು ವಿದ್ಯಾರ್ಥಿನಿಯಾಗಿರುವ ಯುವತಿ ಡಿಎಂಕೆಯ ಯುವ ವಿಭಾಗದ ಉಪ ಕಾರ್ಯದರ್ಶಿಯಾದ 40 ವರ್ಷದ ದೇವಸೇಯಲ್ ಎಂಬ ತನ್ನ ಪತಿ ಪೊಲೀಸರನ್ನು ಸಂಪರ್ಕಿಸಿದರೆ ತನ್ನ ಕುಟುಂಬದ ಸದಸ್ಯರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ, ಮನೆಯವರಿಗೆ ಗುಂಡು ಹಾರಿಸುವುದಾಗಿಯೂ ಹೆದರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆ ಮಾಡಿದ ಆರೋಪಗಳನ್ನು ಅನುಸರಿಸಿ ಎಐಎಡಿಎಂಕೆ ಡಿಎಂಕೆ ಆರೋಪಿ ದೇವಸೇಯಲ್ನನ್ನು ರಕ್ಷಿಸುತ್ತಿದೆ ಎಂದು ಆರೋಪಿಸಿದೆ. ಪೊಲೀಸರು ಆರಂಭದಲ್ಲಿ ಎಫ್‌ಐಆರ್ ದಾಖಲಿಸಲು ವಿಳಂಬ ಏಕೆ ಮಾಡಿದರು? ಅವರು ಆಡಳಿತ ಪಕ್ಷದ ಹಿರಿಯ ನಾಯಕರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದೇ ಇದಕ್ಕೆ ಕಾರಣ ಎಂದು ಎಐಎಡಿಎಂಕೆ ಆರೋಪಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








