AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾ ವಿದೇಶಾಂಗ ಸಚಿವರ ನಕಲಿ ವಿಡಿಯೋ ಹಂಚಿಕೊಂಡ ಪ್ರಕರಣ; ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಕೇಸ್ ದಾಖಲು

ರಷ್ಯಾದ ವಿದೇಶಾಂಗ ಸಚಿವರ ಭಾರತ ವಿರೋಧಿ ಮಾತುಗಳನ್ನು ಒಳಗೊಂಡಿದೆ ಎನ್ನಲಾದ ಎಡಿಟ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಾಮಾಜಿಕ ಶಾಂತಿ ಭಂಗಗೊಳಿಸುವ, ದಾರಿ ತಪ್ಪಿಸುವ ಮತ್ತು ಪ್ರಚೋದನಾತ್ಮಕ ವದಂತಿಗಳನ್ನು ಹರಡುವ ಉದ್ದೇಶದಿಂದ ಈ ವಿಡಿಯೋ ಹಂಚಿಕೊಳ್ಳಲಾಗಿದೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.

ರಷ್ಯಾ ವಿದೇಶಾಂಗ ಸಚಿವರ ನಕಲಿ ವಿಡಿಯೋ ಹಂಚಿಕೊಂಡ ಪ್ರಕರಣ; ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಕೇಸ್ ದಾಖಲು
ಪ್ರಶಾಂತ್ ಭೂಷಣ್Image Credit source: PTI
ಸುಷ್ಮಾ ಚಕ್ರೆ
|

Updated on: Nov 04, 2026 | 5:11 PM

Share

ನವದೆಹಲಿ, ನವೆಂಬರ್ 4: ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಭಾರತದ ಸಲಹೆಗಳನ್ನು ಟೀಕಿಸಿದ್ದಾರೆ ಎಂದು ಬಿಂಬಿಸುವ ನಕಲಿ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ನವದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸೈಬರ್ ಗಸ್ತು ನಡೆಸುತ್ತಿದ್ದ ವೇಳೆ ದೆಹಲಿ ಪೊಲೀಸ್ ಅಧಿಕಾರಿಗಳ ಗಮನಕ್ಕೆ ಈ ವಿಷಯ ಬಂದಿದ್ದು, ಅವರ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿದೆ. ಪ್ರಶಾಂತ್ ಭೂಷಣ್ ಹಂಚಿಕೊಂಡಿದ್ದ ಈ ವಿಡಿಯೋ ಸಂಪೂರ್ಣವಾಗಿ ನಕಲಿ ಮತ್ತು ಎಡಿಟ್ ಮಾಡಲಾದ ವಿಡಿಯೋ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪರಿಶೀಲನೆ ನಡೆಸಿ ಸ್ಪಷ್ಟಪಡಿಸಿತ್ತು.

ದೆಹಲಿ ಪೊಲೀಸರ ಸೈಬರ್ ಸೆಲ್ ನಡೆಸುತ್ತಿದ್ದ ನಿಯಮಿತ ಸಾಮಾಜಿಕ ಜಾಲತಾಣ ಪರಿಶೀಲನೆ ವೇಳೆ, ಎಕ್ಸ್ ಖಾತೆಯೊಂದರಲ್ಲಿ ಈ ವಿಡಿಯೋವನ್ನು ಪ್ರಶಾಂತ್ ಭೂಷಣ್ ತಮ್ಮ ಖಾತೆಯಿಂದ ಹಂಚಿಕೊಂಡಿದ್ದಾರೆ ಎಂಬ ಮಾಹಿತಿ ಕಂಡುಬಂದಿದೆ. ಹಂಚಿಕೊಳ್ಳಲಾದ ವಿಡಿಯೋದಲ್ಲಿ ಭಾರತದ ರಾಜತಾಂತ್ರಿಕ ಸಂಬಂಧಗಳಿಗೆ ಧಕ್ಕೆ ತರುವಂತಹ, ದೇಶದ ಸಾರ್ವಜನಿಕರಲ್ಲಿ ಗೊಂದಲ ಹಾಗೂ ಆಕ್ರೋಶ ಮೂಡಿಸುವಂತಹ ನಿಂದನಾತ್ಮಕ ಮತ್ತು ಸುಳ್ಳು ಮಾಹಿತಿಗಳು ಇರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ: ರಷ್ಯಾದ ತೈಲ ಸಂಸ್ಕರಣಾಗಾದ ಮೇಲೆ ಉಕ್ರೇನ್​ನ ಡ್ರೋನ್ ದಾಳಿ; ಭಾರಿ ಅಗ್ನಿ ಅವಘಡ, ಎಲ್ಲೆಲ್ಲೂ ಕಪ್ಪು ಹೊಗೆ

ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಹಾಗೂ ಸುಳ್ಳು ವದಂತಿಗಳನ್ನು ಹರಡಿದ ಆರೋಪದಡಿ ಹೊಸ ದೆಹಲಿ ವಲಯದ ಸ್ಪೆಷಲ್ ಸೆಲ್‌ನಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ (ಬಿಎನ್​ಎಸ್​) ಸೂಕ್ತ ವಿಭಾಗಗಳಡಿ ದೂರು ದಾಖಲಿಸಿಕೊಳ್ಳಲಾಗಿದೆ.

ಪ್ರಕರಣದ ಹಿನ್ನೆಲೆಯೇನು?:

ಅಕ್ಟೋಬರ್ 31ರಂದು ಅಟ್ಲಾಂಟಾದಲ್ಲಿ ನಡೆದ ಜಿ-20 ವಿದೇಶಾಂಗ ಸಚಿವರ ಸಭೆಯ ವೇಳೆ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಅವರನ್ನು ಭೇಟಿಯಾಗಿ ಉಕ್ರೇನ್ ಸಂಘರ್ಷ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದ್ದರು. ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಷ್ಯಾ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಅವರ ಭೇಟಿಯ ಬೆನ್ನಲ್ಲೇ ಈ ನಕಲಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಷ್ಯಾ ವಿದೇಶಾಂಗ ಸಚಿವರು ಭಾರತದ ವಿದೇಶಾಂಗ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ ಎಂದು ಸೃಷ್ಟಿಸಲಾಗಿದ್ದ ಈ ವಿಡಿಯೋ ಸಂಪೂರ್ಣ ನಕಲಿ ಹಾಗೂ ಎಡಿಟ್ ಮಾಡಲಾದ ವಿಡಿಯೋ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ಈಗಾಗಲೇ ಸ್ಪಷ್ಟನೆ ನೀಡಿದ್ದು, ಪ್ರಸ್ತುತ ಪೊಲೀಸರು ವಿಡಿಯೋ ಸೃಷ್ಟಿಕರ್ತರು ಹಾಗೂ ಅದನ್ನು ಪ್ರಚೋದನಾತ್ಮಕವಾಗಿ ಹಂಚಿಕೊಂಡವರ ವಿರುದ್ಧ ತನಿಖೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್ ಮೇಲೆ ರಷ್ಯಾದಿಂದ ಭೀಕರ ದಾಳಿ; ಶಾಲಾ ಕಟ್ಟಡ ಧ್ವಂಸವಾಗಿ 29 ಜನ ಸಾವು

ನಕಲಿ ವಿಡಿಯೋದಲ್ಲಿ ಏನಿತ್ತು?:

ಎಡಿಟ್ ಮಾಡಲಾದ ಆ ವಿಡಿಯೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೋವ್ ಮಾತನಾಡುತ್ತಾ, “ಭಾರತವು ರಷ್ಯಾಕ್ಕೆ ಕೇವಲ ಒಂದು ವ್ಯಾಪಾರಿ ಪಾಲುದಾರ ಅಷ್ಟೇ. ಈ ವ್ಯಾಪಾರದ ಸಂಬಂಧವು ರಷ್ಯಾದ ವಿದೇಶಾಂಗ ನೀತಿಯಲ್ಲಿ ಹಸ್ತಕ್ಷೇಪ ಮಾಡಲು ಅಥವಾ ಉಕ್ರೇನ್ ಹಾಗೂ ಅಮೆರಿಕ ವಿಷಯದಲ್ಲಿ ನಮಗೆ ಸಲಹೆ ನೀಡಲು ಭಾರತಕ್ಕೆ ಯಾವುದೇ ಹಕ್ಕನ್ನು ನೀಡುವುದಿಲ್ಲ. ಭಾರತವು ನಮಗೆ ಮಿತ್ರರಾಷ್ಟ್ರವೂ ಅಲ್ಲ, ಇತ್ತ ಅಮೆರಿಕದಂತೆ ಸೂಪರ್ ಪವರ್ ಕೂಡ ಅಲ್ಲ” ಎಂದು ಹೇಳುತ್ತಿರುವಂತೆ ಬಿಂಬಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More