ಕೊಚ್ಚಿಹೋಗುತ್ತಿದ್ದ ಬೈಕ್ ಸವಾರನಿಗೆ ದುಪಟ್ಟಾವೇ ಜೀವಸೆಲೆ: ನವವಿವಾಹಿತೆಯ ಸಮಯಪ್ರಜ್ಞೆಗೆ ನೆಟ್ಟಿಗರ ಸಲಾಂ
ಹಿಮಾಚಲ ಪ್ರದೇಶದ ಚಂಬಾದಲ್ಲಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗುತ್ತಿದ್ದ ಬೈಕ್ ಸವಾರನೊಬ್ಬನನ್ನು ನವವಿವಾಹಿತೆಯೊಬ್ಬರು ತನ್ನ ದುಪಟ್ಟಾ ಬಳಸಿ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ವೈರಲ್ ಆಗಿದೆ. ಕಣ್ಣುರೆಪ್ಪೆ ಮುಚ್ಚಿ ತೆರೆಯುವುದರೊಳಗೆ ಪ್ರಾಣ ಕಳೆದುಕೊಳ್ಳಬೇಕಿದ್ದ ಸವಾರನಿಗೆ ಈ ಮಹಿಳೆ ಮರುಜನ್ಮ ನೀಡಿದ್ದಾರೆ. ಈ ರೋಚಕ ರಕ್ಷಣಾ ಕಾರ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ. ಮಹಿಳೆಯ ಧೈರ್ಯ ಮತ್ತು ಉಪಸ್ಥಿತ ಬುದ್ಧಿಗೆ ನೆಟ್ಟಿಗರು ಸಲಾಂ ಹೇಳಿದ್ದಾರೆ.

ಶಿಮ್ಲಾ, ಸೆಪ್ಟೆಂಬರ್ 06: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ-ತೊರೆಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹದಲ್ಲಿ ಕೊಚ್ಚಿಹೋಗುತ್ತಿದ್ದ ಬೈಕ್ ಸವಾರನೊಬ್ಬನನ್ನು ನವವಿವಾಹಿತೆಯೊಬ್ಬರು ತನ್ನ ದುಪಟ್ಟಾ ಎಸೆದು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ. ಕಣ್ಣುರೆಪ್ಪೆ ಮುಚ್ಚಿ ತೆರೆಯುವುದರೊಳಗೆ ನೀರಿನ ರಭಸಕ್ಕೆ ಪ್ರಾಣ ಕಳೆದುಕೊಳ್ಳಬೇಕಿದ್ದ ಸವಾರನಿಗೆ ಈ ಮಹಿಳೆಯ ಸಮಯಪ್ರಜ್ಞೆ ಮರುಜನ್ಮ ನೀಡಿದ್ದು, ಈ ರೋಚಕ ರಕ್ಷಣಾ ಕಾರ್ಯಾಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಚಂಬಾ ಭಾಗದಲ್ಲಿ ಸುರಿದ ಹಠಾತ್ ಮಳೆಗೆ ಬೆಟ್ಟದ ಮೇಲಿಂದ ಬಂದ ಪ್ರವಾಹದ ನೀರು ರಸ್ತೆಗೆ ನುಗ್ಗಿತ್ತು. ಈ ರಭಸದ ನೀರಿನಲ್ಲಿ ಮುಂದೆ ಸಾಗಲಾಗದೆ ಬೈಕ್ ಸವಾರರೊಬ್ಬರು ಸಮತೋಲನ ಕಳೆದುಕೊಂಡು ಬೈಕ್ ಸಮೇತ ಕೊಚ್ಚಿಹೋಗುವ ಹಂತದಲ್ಲಿದ್ದರು.
ನೆರವಿಗೆ ನಿಂತ ಕಾರು ಪ್ರಯಾಣಿಕರು: ಅದೇ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದ ಕುಟುಂಬವೊಂದು ಬೈಕ್ ಸವಾರನ ಆಕ್ರಂದನ ಕಂಡು ತಕ್ಷಣ ಕಾರು ನಿಲ್ಲಿಸಿತು. ಕಾರಿನಲ್ಲಿದ್ದ ಯುವಕನೊಬ್ಬ ಪ್ರವಾಹಕ್ಕೆ ಧುಮುಕಿ ಬೈಕ್ ಸವಾರನನ್ನು ಹಿಡಿಯಲು ಯತ್ನಿಸಿದನಾದರೂ, ನೀರಿನ ಭಾರೀ ಸೆಳೆತದಿಂದಾಗಿ ಆತನ ಸಮೀಪಕ್ಕೆ ಹೋಗಲು ಸಾಧ್ಯವಾಗಲಿಲ್ಲ.
ಮತ್ತಷ್ಟು ಓದಿ
ನೇಪಾಳ ಪ್ರವಾಹ ಸಂತ್ರಸ್ತರಿಗೆ ಸೋನು ಸೂದ್ ನೆರವು ನೀಡಿದ್ದು ಪ್ರಚಾರಕ್ಕಾಗಿ? ತಿರುಗೇಟು ಕೊಟ್ಟ ನಟ
ನವವಿವಾಹಿತೆಯ ಸಮಯಪ್ರಜ್ಞೆ ಹಾಗೂ ಜೀವ ಉಳಿಸಿದ ದುಪಟ್ಟಾ
ಕ್ಷಣಾರ್ಧದಲ್ಲಿ ಹೊಳೆದ ಉಪಾಯ: ನೀರಿನ ವೇಗ ಹೆಚ್ಚುತ್ತಿದ್ದಂತೆ ಸವಾರ ಮುಳುಗುವ ಅಪಾಯದಲ್ಲಿದ್ದ. ಇದನ್ನು ಕಂಡ ಕಾರಿನಲ್ಲಿದ್ದ ನವವಿವಾಹಿತೆ ಒಂದು ಕ್ಷಣವೂ ತಡಮಾಡದೆ, ತಾನು ಧರಿಸಿದ್ದ ಉದ್ದನೆಯ ದುಪಟ್ಟಾವನ್ನ ಬಿಚ್ಚಿ ಬೈಕ್ ಸವಾರನ ಕಡೆಗೆ ಬಲವಾಗಿ ಎಸೆದಿದ್ದಾರೆ.
ನೀರಿನ ಸೆಳೆತದಲ್ಲಿ ಸಿಲುಕಿದ್ದ ಸವಾರ ಆ ದುಪಟ್ಟಾವನ್ನು ಭದ್ರವಾಗಿ ಹಿಡಿದುಕೊಂಡಿದ್ದಾರೆ. ಇತ್ತ ರಸ್ತೆಯಲ್ಲಿದ್ದ ಮಹಿಳೆ ಹಾಗೂ ನೀರಿನಲ್ಲಿದ್ದ ಯುವಕ ಇಬ್ಬರೂ ಸೇರಿ ದುಪಟ್ಟಾವನ್ನು ಎಳೆದು ಆತನನ್ನು ಪ್ರವಾಹದ ಸೆಳೆತದಿಂದ ಹೊರತಂದು ಸುರಕ್ಷಿತ ಜಾಗಕ್ಕೆ ತಲುಪಿಸಿದರು.
ವಿಡಿಯೋ
📍 Chamba — A family travelling in their vehicle noticed a biker struggling for his life, stuck at the edge of the road with his bike, and immediately stepped in to help.
The video is reportedly from the Banikhet side.
The monsoon in the hills can turn dangerous within moments.… pic.twitter.com/Gp1JomReko
— The Modern Himachal (@themodernhp) August 31, 2026
ಕೋಡ್ಲಾ-ಉರೈ ರಸ್ತೆ ಬಂದ್: ಜಿಲ್ಲೆಯ ಕೋಡ್ಲಾ-ಉರೈ ಮಾರ್ಗದಲ್ಲಿ ಬೆಟ್ಟದ ಬೃಹತ್ ಬಂಡೆಗಳು ಮತ್ತು ಮಣ್ಣಿನ ರಾಶಿ ರಸ್ತೆಗೆ ಉರುಳಿಬಿದ್ದಿದ್ದು, ಸಂಪೂರ್ಣ ವಾಹನ ಸಂಚಾರ ಸ್ಥಗಿತಗೊಂಡಿದೆ.
ದುರ್ಬಲ ಪ್ರದೇಶಗಳಲ್ಲಿ ಎಚ್ಚರಿಕೆ: ನಿರಂತರ ಮಳೆಯಿಂದಾಗಿ ಬೆಟ್ಟದ ಇಳಿಜಾರುಗಳು ಕುಸಿಯುತ್ತಿದ್ದು, ಸಾರ್ವಜನಿಕರು ಪ್ರವಾಹದ ನೀರು ಹರಿಯುವ ರಸ್ತೆಗಳಲ್ಲಿ ವಾಹನ ಚಲಾಯಿಸದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ಆನ್‌ಲೈನ್‌ನಲ್ಲಿ ಪ್ರಶಂಸೆಯ ಮಹಾಪೂರ: ಮಹಿಳೆಯ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಕೇವಲ ಪ್ರೇಕ್ಷಕರಾಗಿ ವಿಡಿಯೋ ಮಾಡದೆ, ಪ್ರಾಣಾಪಾಯದಲ್ಲಿದ್ದ ಅಪರಿಚಿತ ವ್ಯಕ್ತಿಯನ್ನು ರಕ್ಷಿಸಲು ಮುಂದಾದ ಕುಟುಂಬದ ಕಾರ್ಯಕ್ಕೆ ನೆಟ್ಟಿಗರು ರಿಯಲ್ ಹೀರೋಗಳು ಎಂದು ಶ್ಲಾಘಿಸಿದ್ದಾರೆ.
ಹಿಮಾಚಲದಲ್ಲಿ ಮುಂಗಾರು ಅನಾಹುತ: ಹಿಮಾಚಲ ಪ್ರದೇಶದಲ್ಲಿ ಹಠಾತ್ ಪ್ರವಾಹ ಮತ್ತು ಮೇಘಸ್ಫೋಟಗಳಿಂದಾಗಿ ನೂರಾರು ರಸ್ತೆಗಳು ಬಂದ್ ಆಗಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಬೆಟ್ಟದ ಕಣಿವೆಗಳಲ್ಲಿ ಪ್ರಯಾಣಿಸುವಾಗ ತೀವ್ರ ಕಟ್ಟೆಚ್ಚರ ವಹಿಸುವಂತೆ ವಿಪತ್ತು ನಿರ್ವಹಣಾ ಪಡೆ ಸೂಚಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




