ಆಗಸ್ಟ್ 15 ಕೆಂಪುಕೋಟೆಯಿಂದ ಪ್ರಧಾನಿ ಭಾಷಣ ಮಾಡುವುದೇಕೆ? ಮೊಘಲರು ಕಟ್ಟಿಸಿದ ಕೋಟೆಯ ರೋಚಕ ಕಥೆ ಇಲ್ಲಿದೆ

Red Fort: ದೇಶದ ಪ್ರಧಾನಿಯಾದವರು ಪ್ರತಿ ವರ್ಷ ಆಗಸ್ಟ್ 15 ರಂದು ದೆಹಲಿಯ ಕೆಂಪುಕೋಟೆಯ ಮೇಲೆ ನಿಂತು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡ್ತಾರೆ. ಕೆಂಪುಕೋಟೆಗೂ ಸ್ವಾತಂತ್ರ್ಯ ದಿನಾಚರಣೆಗೂ ಇರೋ ಸಂಬಂಧ ಏನು? ಕೆಂಪುಕೋಟೆಯ ಇತಿಹಾಸ ಏನು ಗೊತ್ತಾ? ಕೆಂಪುಕೋಟೆಯನ್ನು ಕಟ್ಟಿ ಆಳಿದವರು ಯಾರಾರು? ಇದೆಲ್ಲದನ್ನು ವಿವರಿಸುವ ಸ್ಪೆಷಲ್ ರಿಪೋರ್ಟ್ ಇಲ್ಲಿದೆ.

ಆಗಸ್ಟ್ 15 ಕೆಂಪುಕೋಟೆಯಿಂದ ಪ್ರಧಾನಿ ಭಾಷಣ ಮಾಡುವುದೇಕೆ? ಮೊಘಲರು ಕಟ್ಟಿಸಿದ ಕೋಟೆಯ ರೋಚಕ ಕಥೆ ಇಲ್ಲಿದೆ
ಕೆಂಪುಕೋಟೆ
Follow us
S Chandramohan
| Updated By: ಆಯೇಷಾ ಬಾನು

Updated on: Aug 16, 2021 | 1:39 PM

ಆಗಸ್ಟ್ 15 , ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ(Independence Day). ಪ್ರತಿ ವರ್ಷ ಆಗಸ್ಟ್ 15 ರಂದು ಭಾರತದ ಪ್ರಧಾನಮಂತ್ರಿಗಳು ದೆಹಲಿಯ ಕೆಂಪುಕೋಟೆಯಿಂದಲೇ(Red Fort)  ದೇಶವನ್ನ ಉದ್ದೇಶಿಸಿ ಭಾಷಣ ಮಾಡ್ತಾರೆ. ಇದು ನಮ್ಮ ದೇಶದಲ್ಲಿ ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ. ಪ್ರಧಾನಮಂತ್ರಿ ಅವರ ಕೆಂಪುಕೋಟೆ ಭಾಷಣವನ್ನು ಇಡೀ ದೇಶವೇ ವಿಶೇಷ ಆಸಕ್ತಿ, ಕುತೂಹಲದಿಂದ ಕೇಳುತ್ತೆ. ದೇಶದ ಪ್ರಧಾನಮಂತ್ರಿಯಾದವರು ದೆಹಲಿಯ ಕೆಂಪುಕೋಟೆಗೂ ಅಧಿಪತಿ. ಕೆಂಪುಕೋಟೆಯಿಂದಲೇ ಪ್ರಧಾನಮಂತ್ರಿಗಳು ದೇಶವನ್ನ ಉದ್ದೇಶಿಸಿ ಭಾಷಣ ಮಾಡುವುದು ಏಕೆ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಕೆಂಪುಕೋಟೆಯ ಇತಿಹಾಸದಲ್ಲಿ ಉತ್ತರ ಇದೆ.

ಮೊಘಲರ ಕಾಲದಲ್ಲಿ ಕೆಂಪುಕೋಟೆಯನ್ನು ನಿರ್ಮಿಸಲಾಗಿದೆ. ಮೊಘಲರ ರಾಜ ಷಹಜಹಾನ್ ಆಗ್ರಾವನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ ನಡೆಸುತ್ತಿದ್ದ. ಆದರೇ, ಷಹಜಹಾನ್, ತನ್ನ ರಾಜಧಾನಿಯನ್ನು ಆಗ್ರಾದಿಂದ ದೆಹಲಿಗೆ ವರ್ಗಾಯಿಸಲು ನಿರ್ಧರಿಸಿದ. ದೆಹಲಿಯಲ್ಲಿ ಷಹಜಹಾನ್ ಗೆ ಅರಮನೆ, ಕೋಟೆ ಬೇಕಾಗಿತ್ತು. ಆಗಲೇ ಷಹಜಹಾನ್, ದೆಹಲಿಯ ಷಹಜಾನಾಬಾದ್ ಪ್ರದೇಶದಲ್ಲಿ ಅರಮನೆ, ಕೋಟೆ ಕಟ್ಟಲು ನಿರ್ಧರಿಸಿದ. ದೆಹಲಿಯಲ್ಲಿ ಆಗ ಇದ್ದ ಏಳು ಸಿಟಿಗಳಲ್ಲಿ ಷಹಜನಾಬಾದ್ ಕೂಡ ಒಂದು. ಇದನ್ನೇ ಈಗ ಓಲ್ಡ್ ದೆಹಲಿ ಎಂದು ಕರೆಯುತ್ತೇವೆ. ಷಹಜಹಾನ್, 1638ರ ಪವಿತ್ರ ಮೊಹರಂ ತಿಂಗಳಲ್ಲಿ ಕೆಂಪುಕೋಟೆಯನ್ನು ಕಟ್ಟಲು ಆರಂಭಿಸಿದರು. 1638ರ ಮೇ, 13ರಂದು ಕೆಂಪುಕೋಟೆಯ ನಿರ್ಮಾಣ ಆರಂಭವಾಯಿತು. ಉಸ್ತಾದ್ ಅಹಮದ್ ಲಾಹೋರಿ ಎನ್ನುವವರು ಇದರ ಶಿಲ್ಪಿ. ಖುದ್ದು ಷಹಜಹಾನ್, ಕೆಂಪುಕೋಟೆ ನಿರ್ಮಾಣದ ಮೇಲ್ವಿಚಾರಣೆ ನಡೆಸಿದ್ದರು. ಯಮುನಾ ನದಿಯ ನೀರುನ್ನು ಕೆಂಪುಕೋಟೆ ನಿರ್ಮಾಣಕ್ಕೆ ಬಳಸಲಾಯಿತು. ಅಂತಿಮವಾಗಿ ಹತ್ತು ವರ್ಷಗಳ ಬಳಿಕ 1648ರಲ್ಲಿ ಕೆಂಪುಕೋಟೆಯ ನಿರ್ಮಾಣ ಕಾರ್ಯ ಮುಕ್ತಾಯವಾಯಿತು. ಕೆಂಪುಕೋಟೆಯನ್ನು ಹಿಂದಿಯಲ್ಲಿ ಲಾಲ್ ಕಿಲಾ ಅಂತ ಕರೆಯುತ್ತಾರೆ. ಕೆಂಪುಕೋಟೆಯನ್ನು ಕಿಲ್ಲಾ ಐ ಮುಬಾರಕ್ ಅಂತಾನೂ ಕರೆಯುತ್ತಿದ್ದರು. ಅಂದರೇ, ಆಶೀರ್ವಾದದ ಕೋಟೆ ಎಂದು ಅರ್ಥ. ಕೋಟೆಗೆ ಕೆಂಪುಬಣ್ಣದ ಕಲ್ಲುನ್ನು ಬಳಸಿ ನಿರ್ಮಿಸಿರುವುದರಿಂದ ಇದನ್ನು ಕೆಂಪುಕೋಟೆ ಎಂದು ಕರೆಯಲಾಗುತ್ತೆ. ಕೆಂಪುಕೋಟೆಯು 254 ಎಕರೆ ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದೆ. ಕೆಂಪುಕೋಟೆಗೆ 2.4 ಕಿಲೋಮೀಟರ್ ಉದ್ದದ ಗೋಡೆಯನ್ನು ನಿರ್ಮಿಸಲಾಗಿದೆ. ಗೋಡೆಯು ಸಾಕಷ್ಟು ಎತ್ತರವಾಗಿದೆ. ಯಮುನಾ ನದಿಯ ದಂಡೆಯ ಭಾಗದಲ್ಲಿ 58ಅಡಿ ಎತ್ತರದ ಗೋಡೆ ಇದ್ದರೆ, ಸಿಟಿಯ ಭಾಗದಲ್ಲಿ ನೂರ ಎಂಟು ಅಡಿ ಎತ್ತರ ಇದೆ.

ಲಾಹೋರಿ ಗೇಟ್ ನಲ್ಲಿ ಪಿಎಂ ಧ್ವಜಾರೋಹಣ ರೆಡ್ ಪೋರ್ಟ್ ಗೆ ಮೂರು ಗೇಟ್ ಗಳಿವೆ. ಅವುಗಳೇಂದರೇ, ಲಾಹೋರಿ ಗೇಟ್, ದಿಲ್ಲಿ ಗೇಟ್, ವಾಟರ್ ಗೇಟ್. ಲಾಹೋರ್ ನಗರದ ದಿಕ್ಕಿಗೆ ಇರೋ ಗೇಟ್ ಗೆ ಲಾಹೋರಿ ಗೇಟ್ ಅಂತ ಕರೆಯುತ್ತಾರೆ. ದೆಹಲಿ ದಿಕ್ಕಿನ ಕಡೆಗೆ ಇರುವ ಗೇಟ್ ಗೆ ದಿಲ್ಲಿ ಗೇಟ್ ಎಂದು ಕರೆಯಲಾಗುತ್ತೆ. ಯಮುನಾ ನದಿಯ ದಿಕ್ಕಿನ ಕಡೆಗೆ ಇರೋ ಗೇಟ್ ಗೆ ವಾಟರ್ ಗೇಟ್ ಎಂದು ಕರೆಯಲಾಗುತ್ತೆ. ಆದರೆ, ಈಗ ಯಮುನಾ ನದಿಯು ತನ್ನ ದಿಕ್ಕುನ್ನು ಸ್ಪಲ್ಪ ಬದಲಾಯಿಸಿದೆ. ಆದರೂ, ಇದನ್ನು ವಾಟರ್ ಗೇಟ್ ಅಂತ ಕರೆಯಲಾಗುತ್ತೆ. ಲಾಹೋರಿ ಗೇಟ್ ನಲ್ಲೇ ನಮ್ಮ ದೇಶದ ಪ್ರಧಾನಮಂತ್ರಿಗಳು ಆಗಸ್ಟ್ 15ರಂದು ಧ್ವಜಾರೋಹಣ ಮಾಡಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡ್ತಾರೆ. ಲಾಹೋರಿ ಗೇಟ್ ಎದುರು ಸಹಸ್ರಾರು ಸಂಖ್ಯೆಯಲ್ಲಿ ಜನರು ಪ್ರಧಾನಿ ಭಾಷಣ ಕೇಳಲು ಸೇರುತ್ತಾರೆ. ಲಾಹೋರಿ ಗೇಟ್, ರೆಡ್ ಪೋರ್ಟ್ ಗೆ ಪ್ರಧಾನವಾದ ಗೇಟ್. ರೆಡ್ ಪೋರ್ಟ್, ಮೊಘಲರ ಕ್ರಿಯೇಟಿವಿಟಿಗೆ ಹಿಡಿದ ಕನ್ನಡಿ. ಆದರೂ ರೆಡ್ ಪೋರ್ಟ್ ಒಳಗಿನ ಅರಮನೆಗಳು ಇಸ್ಲಾಮಿಕ್ ಶೈಲಿಯಲ್ಲಿ ಇವೆ. ಜೊತೆಗೆ ಪರ್ಶಿಯನ್ ಮತ್ತು ಹಿಂದೂ ಸಂಪ್ರದಾಯವನ್ನು ಬಿಂಬಿಸುತ್ತಿವೆ. ದೆಹಲಿಯ ಕೆಂಪುಕೋಟೆಯು ಭಾರತದ ಐಕಾನಿಕ್ ಸಿಂಬಲ್ ಆಗಿದೆ.

ಕೆಂಪುಕೋಟೆಯ ಒಳಗೆ ಏನೇನಿದೆ ಗೊತ್ತಾ? ಲಾಹೋರಿ ಗೇಟ್ ಮೂಲಕ ಕೆಂಪುಕೋಟೆಯ ಒಳಗೆ ಪ್ರವೇಶಿಸುತ್ತಿದ್ದಂತೆ, ಚಟ್ಟಾ ಚೌಕ್ ಬಜಾರ್ ಸಿಗುತ್ತೆ. ಈ ಬಜಾರ್ ನಲ್ಲಿ ಸಿಲ್ಕ್, ಜ್ಯೂವೆಲ್ಲರಿ ಮತ್ತಿತರ ಸಾಮಗ್ರಿಗಳನ್ನು ಮೊಘಲರ ಕಾಲದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಇಂದಿಗೂ ಬಜಾರ್ ಮುಂದುವರಿದುಕೊಂಡು ಬಂದಿದೆ. ಕೆಂಪುಕೋಟೆಯೊಳಗಡೆ ನೌಬತ್ ಖಾನಾ ಎನ್ನುವ ಸ್ಥಳದಲ್ಲಿ ಮ್ಯೂಸಿಕ್ ಡ್ರಮ್ ಬಾರಿಸಲಾಗುತ್ತಿತ್ತು. ಆದರೆ, ಇದು ಬ್ರಿಟಿಷರ ಕಾಲದಲ್ಲಿ ನಾಶವಾಗಿದೆ. ಕೆಂಪುಕೋಟೆಯೊಳಗೆ ದಿವಾನ್ ಐ ಆಮ್ ಎನ್ನುವ ಹಾಲ್ ಇದೆ. ಇಲ್ಲಿ ಜನರು ಮೊಘಲರ ಕಾಲದಲ್ಲಿ ದೊರೆಗಳನ್ನು ಭೇಟಿಯಾಗಿ ದೂರು, ದುಮ್ಮಾನಗಳನ್ನು ಹೇಳಿಕೊಳ್ಳುತ್ತಿದ್ದರು. ಇನ್ನೂ ಮುಮ್ತಾಜ್ ಮಹಲ್ ಮತ್ತು ರಂಗ ಮಹಲ್ ರಾಣಿಯರ ಕ್ವಾರ್ಟಸ್ ಆಗಿತ್ತು. ಆದರೆ, ಮುಮ್ತಾಜ್ ಮಹಲ್ ಈಗ ಆರ್ಕಿಯಾಲಜಿಕಲ್ ಮ್ಯೂಸಿಯಂ ಆಗಿದೆ. ಕೆಂಪುಕೋಟೆಯಲ್ಲಿ ರಾಣಿಯರ ಸ್ನಾನ ಗೃಹಗಳನ್ನು ನಿರ್ಮಿಸಲಾಗಿತ್ತು. ಮೋತಿ ಮಸೀದಿ, ಹೀರಾ ಮಹಲ್, ಷಹೀ ಬುರ್ಜ್ ಕೂಡ ಇವೆ. ಷಹಜಹಾನ್ ನಂತರ ಅವನ ಪುತ್ರ ಔರಂಗಜೇಬ್ ಮೊಘಲ್ ಸಾಮ್ರಾಜ್ಯದ ಅಧಿಪತಿಯಾಗುತ್ತಾನೆ. ಔರಂಗಜೇಬ್, ಕೋಟೆಯ ಎರಡು ಗೇಟ್ ಗಳನ್ನು ಮತ್ತಷ್ಟು ಆಕರ್ಷಕವನ್ನಾಗಿ ಮಾಡುತ್ತಾನೆ. ಜೊತೆಗೆ ರಾಜರಿಗಾಗಿ ಕೆಂಪುಕೋಟೆಯ ಒಳಗೆ ಮಸೀದಿಯನ್ನು ನಿರ್ಮಿಸುತ್ತಾನೆ.

ಕೆಂಪುಕೋಟೆಯಿಂದಲೇ ದೇಶ ಆಳುತ್ತಿದ್ದ ಮೊಘಲರು ಕೆಂಪುಕೋಟೆಯಿಂದಲೇ ಮೊಘಲರು ದೇಶವನ್ನು ಆಳುತ್ತಿದ್ದರು. ಕೆಂಪುಕೋಟೆಯು ಕೇವಲ ಕೋಟೆ ಮಾತ್ರ ಆಗಿರಲಿಲ್ಲ. ಮೊಘಲರ ಅರಮನೆಯೂ ಆಗಿತ್ತು. ಕೆಂಪುಕೋಟೆಯಲ್ಲಿ ಮೊಘಲರ ಸಿಂಹಾಸನವೂ ಇತ್ತು. ಆದರೇ, ಔರಂಗಜೇಬ್ ನಂತರ ಅಧಿಕಾರಕ್ಕೆ ಬಂದ ಮೊಘಲ್ ರಾಜರುಗಳು ದುರ್ಬಲರಾಗಿದ್ದರು. 1712ರಲ್ಲಿ ಜಲಂಧರ್ ಷಾ ರಾಜನಾಗಿ ಅಧಿಕಾರ ವಹಿಸಿಕೊಳ್ಳುತ್ತಾನೆ. ಆದರೆ, ಅಧಿಕಾರಕ್ಕೆ ಬಂದ ವರ್ಷದಲ್ಲೇ ಕೊಲೆಯಾಗುತ್ತಾನೆ. ಬಳಿಕ ಫರುಕಿಷಿಯಾರ್ ರಾಜನಾಗುತ್ತಾನೆ. 1752 ರಲ್ಲಿ ಮರಾಠರು ದೆಹಲಿಯ ರಕ್ಷಣೆಗೆ ಮುಂದಾಗುತ್ತಾರೆ. 1761 ರಲ್ಲಿ ಮೂರನೇ ಪಾಣಿಪತ್ ಯುದ್ದದಲ್ಲಿ ಮರಾಠರು ಸೋಲು ಅನುಭವಿಸುತ್ತಾರೆ. ಹತ್ತು ವರ್ಷಗಳ ಬಳಿಕ ಷಾ ಆಲಂ ಮರಾಠರ ಬೆಂಬಲದೊಂದಿಗೆ ದೆಹಲಿಯ ಸಿಂಹಾಸನ ಏರುತ್ತಾನೆ. ಆದರೆ, ಅಷ್ಟರಲ್ಲಿ ಬ್ರಿಟಿಷರು ಭಾರತಕ್ಕೆ ಎಂಟ್ರಿ ಕೊಟ್ಟಿರುತ್ತಾರೆ. 1803 ರಲ್ಲಿ ಎರಡನೇ ಆಂಗ್ಲೋ-ಮರಾಠ ಯುದ್ದದಲ್ಲಿ ಮರಾಠರು ಸೋಲು ಅನುಭವಿಸುತ್ತಾರೆ. ಇದರಿಂದ ಮರಾಠರು ಕೂಡ ದೆಹಲಿಯ ಮೇಲೆ ಮತ್ತು ಕೆಂಪುಕೋಟೆಯ ಮೇಲೆ ತಮ್ಮ ನಿಯಂತ್ರಣ ಕಳೆದುಕೊಳ್ಳುತ್ತಾರೆ.

ಬ್ರಿಟಿಷರು ಕೆಂಪುಕೋಟೆಯ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತಾರೆ. ಮೊಘಲ್ ಸಾಮ್ರಾಜ್ಯದ ಆಳ್ವಿಕೆಯನ್ನು ನೋಡಿಕೊಳ್ಳಲು ಬ್ರಿಟಿಷರು ಕೆಂಪುಕೋಟೆಗೆ ಓರ್ವ ಅಧಿಕಾರಿಯನ್ನು ನೇಮಿಸುತ್ತಾರೆ. ಕೊನೆ ಮೊಘಲ್ ರಾಜನೆಂದರೇ, ಎರಡನೇ ಬಹಾದ್ದೂರ್ ಜಾಫರ್ ಷಾ. 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರಿಗೂ-ಭಾರತೀಯರಿಗೂ ಘೋರ ಯುದ್ದ ನಡೆಯಿತು. ಯುದ್ಧದಲ್ಲಿ ಭಾರತೀಯರು ಸೋತಿದ್ದರಿಂದ ಬಹಾದ್ದೂರ್ ಜಾಫರ್ ಷಾ, ಕೆಂಪುಕೋಟೆಯನ್ನು ಬಿಟ್ಟು ಹೊರಟು ಹೋಗಿದ್ದ. ಆದರೆ ಬ್ರಿಟಿಷರ ಕೈಗೆ ಸಿಕ್ಕಿ ಬಿದ್ದಿದ್ದ. ಮತ್ತೆ ಕೆಂಪುಕೋಟೆಗೆ ಓರ್ವ ಖೈದಿಯಾಗಿ ಬಹಾದ್ದೂರ್ ಷಾ ಬಂದಿದ್ದ. ಈತನನ್ನು ಬ್ರಿಟಿಷರು ಬರ್ಮಾಗೆ ಗಡೀಪಾರು ಮಾಡಿದ್ದರು. ಇದರಿಂದಾಗಿ ದೇಶದಲ್ಲಿ ಮೊಘಲ್ ಆಳ್ವಿಕೆ ಅಂತ್ಯವಾಗಿ ಬ್ರಿಟಿಷ್ ಆಳ್ವಿಕೆಯು ಆರಂಭವಾಯಿತು.

ಕೆಂಪುಕೋಟೆಯಿಂದಲೇ ದೇಶ ಆಳಿದ್ದ ಬ್ರಿಟಿಷರು 1857ರ ನಂತರ ಭಾರತದಲ್ಲಿ ತಮ್ಮ ಆಳ್ವಿಕೆಯನ್ನು ಆರಂಭಿಸಿದ್ದ ಬ್ರಿಟಿಷರು ಇದೇ ಕೆಂಪುಕೋಟೆಯಿಂದಲೇ ದೇಶವನ್ನು ಆಳಿದ್ದರು. ಆದರೇ, 1911ರವರೆಗೂ ಕೋಲ್ಕತ್ತಾ ಬ್ರಿಟಿಷ್ ಇಂಡಿಯಾದ ರಾಜಧಾನಿ ಆಗಿತ್ತು. 1911 ರಲ್ಲಿ ರಾಜಧಾನಿಯನ್ನು ಕೋಲ್ಕತ್ತಾದಿಂದ ದೆಹಲಿಗೆ ವರ್ಗಾಯಿಸಲಾಗುತ್ತೆ. 1911 ರಲ್ಲಿ ಬ್ರಿಟಿಷ್ ರಾಜ, ರಾಣಿ ದೆಹಲಿಗೆ ಭೇಟಿ ನೀಡಿದ್ದರು. ದೆಹಲಿಯ ಈ ಕೆಂಪುಕೋಟೆಯಲ್ಲೇ ಬ್ರಿಟಿಷ್ ರಾಜ, ರಾಣಿ ತಮ್ಮ ದರ್ಬಾರ್ ನಡೆಸಿದ್ದರು.

ಕೆಂಪುಕೋಟೆಯನ್ನು ಮಿಲಿಟರಿ ಕಂಟೋನ್ ಮೆಂಟ್ ಮಾಡಿದ್ದ ಬ್ರಿಟಿಷರು ಕೆಂಪುಕೋಟೆಯನ್ನು 1857ರಿಂದಲೇ ತಮ್ಮ ಅಧೀನಕ್ಕೆ ತೆಗೆದುಕೊಂಡಿದ್ದ ಬ್ರಿಟಿಷರು ಇದನ್ನು ಮಿಲಿಟರಿ ಕಂಟೋನ್ ಮೆಂಟ್ ಆಗಿ ಮಾಡಿದ್ದರು. ಸ್ವಾತಂತ್ರ್ಯ ನಂತರವೂ ಇದು ಮಿಲಿಟರಿ ಕಂಟೋನ್ ಮೆಂಟ್ ಆಗಿ ಮುಂದುವರಿದಿತ್ತು. 2003ರವರೆಗೂ ಭಾರತೀಯ ಸೈನಿಕರು ದೆಹಲಿಗೆ ಬಂದಾಗ ಇಲ್ಲೇ ತಂಗುತ್ತಿದ್ದರು. 2003 ರಲ್ಲಿ ಇದನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಯಿತು. 1948ರಲ್ಲಿ ಮಹಾತ್ಮಾ ಗಾಂಧೀಜಿ ಹತ್ಯೆಯ ವಿಚಾರಣೆಯನ್ನು ಇದೇ ಕೆಂಪುಕೋಟೆಯಲ್ಲಿ ವಿಶೇಷ ನ್ಯಾಯಾಲಯ ಸ್ಥಾಪಿಸಿ ನಡೆಸಲಾಯಿತು. 2000 ರಲ್ಲಿ ಈ ರೆಡ್ ಪೋರ್ಟ್ ಮೇಲೆ ಲಷ್ಕರ್ ಇ ತೋಯ್ಬಾದ ಭಯೋತ್ಪಾದಕರು ದಾಳಿ ನಡೆಸಿದ್ದರು. ಇಬ್ಬರು ಭಾರತೀಯ ಭದ್ರತಾ ಸಿಬ್ಬಂದಿ, ಓರ್ವ ನಾಗರಿಕ ಸಾವನ್ನಪ್ಪಿದ್ದರು.

narendra modi

ಪ್ರಧಾನಮಂತ್ರಿ ನರೇಂದ್ರ ಮೋದಿ

ಕೆಂಪುಕೋಟೆಯ ಅಧಿಪತಿ, ದೇಶದ ಅಧಿಪತಿ ಇದ್ದಂತೆ ಕೆಂಪುಕೋಟೆ, ದೇಶದ ಅಧಿಕಾರದ ಗದ್ದುಗೆಯ ಸಂಕೇತ. ಈಗ ಮಾತ್ರವಲ್ಲ, ಶತಮಾನಗಳಿಂದ ದೇಶದಲ್ಲಿ ಅಧಿಕಾರದ ಗದ್ದುಗೆಯ ಸಂಕೇತವಾಗಿದೆ. ಮೊಘಲರ ಕಾಲದಿಂದ ಹಿಡಿದು ಬ್ರಿಟಿಷರು ಮತ್ತು ಸ್ವಾತಂತ್ರ್ಯ ನಂತರವೂ ಅಧಿಕಾರದ ಗದ್ದುಗೆಯ ಸಂಕೇತವಾಗಿ ಮುಂದುವರಿದುಕೊಂಡು ಬಂದಿದೆ. ಕೆಂಪುಕೋಟೆಯ ಅಧಿಪತಿಯಾದವರು ದೇಶದ ಅಧಿಪತಿಯಾದಂತೆ. ಹಾಗಾಗಿ 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಆಗಿನ ಪ್ರಧಾನಿ ಜವಾಹರ್ ಲಾಲ್ ನೆಹರು ಇದೇ ಕೆಂಪುಕೋಟೆಯಿಂದಲೇ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. 1947ರ ಆಗಸ್ಟ್ 14ರ ಮಧ್ಯರಾತ್ರಿ ಸಂಸತ್ ನ ಸೆಂಟ್ರಲ್ ಹಾಲ್ ನಲ್ಲಿ ಗಣ್ಯರನ್ನು ಉದ್ದೇಶಿಸಿ ನೆಹರು ಭಾಷಣ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ನಮ್ಮ ದೇಶದಲ್ಲಿ ಪ್ರಧಾನಮಂತ್ರಿಗಳು ಸ್ವಾತಂತ್ರ್ಯ ದಿನಾಚರಣೆಯ ದಿನ ಕೆಂಪುಕೋಟೆಯ ಲಾಹೋರಿ ಗೇಟ್ ಮೇಲೆ ನಿಂತು ಧ್ವಜಾರೋಹಣ ಮಾಡಿ ದೇಶ ಉದ್ದೇಶಿಸಿ ಭಾಷಣ ಮಾಡ್ತಾರೆ.

ಈಗ ನರೇಂದ್ರ ಮೋದಿ ದೇಶದ ಪ್ರಧಾನಿ. ಮೋದಿಯೇ ಈಗ ದೇಶದ ಅಧಿಪತಿ. ಹೀಗಾಗಿ ಆಗಸ್ಟ್ 15 ರಂದು ಮೋದಿ ಕೆಂಪುಕೋಟೆಯ ಮೇಲೆ ಭಾಷಣ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. 2014ರಿಂದ 2021ರ ಆಗಸ್ಟ್ 15ರವರೆಗೆ ಮೋದಿ ಕೆಂಪುಕೋಟೆಯ ಮೇಲೆ ನಿಂತು 8 ಬಾರಿ ಧ್ವಜಾರೋಹಣ ನೆರವೇರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಮನಮೋಹನ್ ಸಿಂಗ್ 10 ವರ್ಷ ಪ್ರಧಾನಿಯಾಗಿ ಅಧಿಕಾರದಲ್ಲಿದುದ್ದುರಿಂದ 10 ಬಾರಿ ಕೆಂಪುಕೋಟೆಯ ಮೇಲೆ ನಿಂತು ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದರು. ಕನ್ನಡಿಗ ಎಚ್‌.ಡಿ.ದೇವೇಗೌಡ ದೆಹಲಿಯ ಕೆಂಪುಕೋಟೆಯ ಮೇಲೆ 1996ರಲ್ಲಿ ಒಮ್ಮೆ ಮಾತ್ರ ಧ್ವಜಾರೋಹಣ ನೆರವೇರಿಸಿ, ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.

ಸಂವಿಧಾನಕ್ಕೆ ರಾಷ್ಟ್ರಪತಿ ಮುಖ್ಯಸ್ಥರು, ವಾಸ್ತವವಾಗಿ ದೇಶಕ್ಕೆ ಪ್ರಧಾನಿ ಮುಖ್ಯಸ್ಥರು ಜನವರಿ 26 ರಂದು ಗಣರಾಜ್ಯೋತ್ಸವವನ್ನು ದೆಹಲಿಯ ರಾಜಪಥ್ ನಲ್ಲಿ ನಡೆಸಲಾಗುತ್ತೆ. ಅಂದು ರಾಷ್ಟ್ರಪತಿಗಳು ಧ್ವಜಾರೋಹಣ ಮಾಡ್ತಾರೆ. ಗಣರಾಜ್ಯೋತ್ಸವದ ಹಿಂದಿನ ದಿನವೇ ರಾಷ್ಟ್ರಪತಿಗಳು ದೇಶವನ್ನು ಉದ್ದೇಶಿಸಿ ಭಾಷಣ ಮಾಡ್ತಾರೆ. ಆಗಸ್ಟ್ 15ಕ್ಕೆ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ. ಆಗಸ್ಟ್ 15ರಂದು ಪ್ರಧಾನಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡ್ತಾರೆ. ಸಂವಿಧಾನಕ್ಕೆ ರಾಷ್ಟ್ರಪತಿಗಳು ಮುಖ್ಯಸ್ಥರು. ಹಾಗಾಗಿ ಸಂವಿಧಾನ ಜಾರಿಯಾದ ಜನವರಿ 26ರಂದು ರಾಷ್ಟ್ರಪತಿಗಳಿಂದ ಧ್ವಜಾರೋಹಣ ನಡೆದರೇ, ಆಗಸ್ಟ್ 15ರಂದು ಪ್ರಧಾನಿಯಿಂದ ಧ್ವಜಾರೋಹಣ ನಡೆಸಲಾಗುತ್ತೆ. ವಾಸ್ತವ ಕಾರ್ಯಾಂಗದ ಮುಖ್ಯಸ್ಥರು ಪ್ರಧಾನಮಂತ್ರಿ.

ಮೊದಲ ಕೆಂಪುಕೋಟೆ ಭಾಷಣದಲ್ಲಿ ನೆಹರು ಹೇಳಿದ್ದೇನು ಗೊತ್ತಾ? 1947ರ ಆಗಸ್ಟ್ 16ರಂದು ಜವಾಹರ್ ಲಾಲ್ ನೆಹರು, ಇದೇ ರೆಡ್ ಪೋರ್ಟ್ ನಿಂದ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಮೊದಲ ಸ್ವಾತಂತ್ರ್ಯ ಭಾಷಣದಲ್ಲಿ ನೆಹರು, ಸ್ವಾತಂತ್ರ್ಯ ಹೋರಾಟದ ಸಂಕಷ್ಟ, ತ್ಯಾಗ, ಬಲಿದಾನಗಳನ್ನು ನೆನೆಪಿಸಿಕೊಂಡಿದ್ದರು. ಅಷ್ಟೇ ಅಲ್ಲ, ದೇಶವನ್ನು ಅಭಿವೃದ್ದಿಯ ಪಥದಲ್ಲಿ ಮುನ್ನಡೆಸುವ ವಾಗ್ದಾನ ಮಾಡಿದ್ದರು. ದೇಶದಲ್ಲಿ ಬಡತನ ನಿರ್ಮೂಲನೆಗೆ ಕರೆ ನೀಡಿದ್ದರು. ಇಷ್ಟು ವರ್ಷಗಳ ಕಾಲ ನಾವು ಬ್ರಿಟಿಷರ ಗುಲಾಮಗಿರಿಗೆ ಒಳಪಟ್ಟಿದ್ದೆವು. ಈಗ ನಾವು ಬೇರೆಯವರನ್ನು ಗುಲಾಮಗಿರಿಗೆ ಒಳಪಡಿಸಲ್ಲ ಎಂದು ಹೇಳಿದ್ದರು. ಗಾಂಧೀಜಿ ಹಾಕಿಕೊಟ್ಟಿರುವ ಶಾಂತಿ, ಅಹಿಂಸೆಯ ಮಾರ್ಗದಲ್ಲಿ ನಡೆಯುತ್ತೇವೆ ಎಂದು ನೆಹರು ಹೇಳಿದ್ದರು. ವಿಪರ್ಯಾಸ ಅಂದರೇ, ನೆಹರು ಕೆಂಪುಕೋಟೆಯಲ್ಲಿ ನಿಂತು ಭಾಷಣ ಮಾಡುವಾಗ, ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅಲ್ಲಿರಲಿಲ್ಲ. ಗಾಂಧೀಜಿ ಪಶ್ಚಿಮ ಬಂಗಾಳದ ನೌಕುಲಿ ಎನ್ನುವ ಸ್ಥಳದಲ್ಲಿ ಹಿಂದೂ-ಮುಸ್ಲಿಂ ಕೋಮುಘರ್ಷಣೆಯನ್ನು ತಡೆಯಲು ಯತ್ನಿಸುತ್ತಿದ್ದರು.

ಇದನ್ನೂ ಓದಿ: ಕೆಂಪುಕೋಟೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮ; ಇಲ್ಲಿವೆ ಸುಂದರ ಕ್ಷಣದ ಫೋಟೋಗಳು

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ